ಮನೆಯೊಳಗೆ ಗಿಡ ಬಳ್ಳಿ ಬೆಳೆಸುವ, ಹೇರಳ ಸೂರ್ಯನ ಬೆಳಕು ಬೀಳುವಂತೆ ಮಾಡುವ, ನೈಸರ್ಗಿಕ ಪರಿಸರದಂತಹ ವಾತಾವರಣದಲ್ಲಿ ಜೀವಿಸುವ ಬಯೋಫಿಲಿಕ್‌ ಲಿವಿಂಗ್‌ ಪರಿಕಲ್ಪನೆ ಈಗ ಟ್ರೆಂಡ್‌ ಆಗಿದೆ. ಈ ಕುರಿತ ಬರಹ.

- ಡಾ. ಸುಮಲತಾ ಜೋಶಿ

ಬೆಂಗಳೂರಿನ ಒಂದು ಮಹಾನಗರದ 22ನೇ ಮಹಡಿಯ ಐಷಾರಾಮಿ ಫ್ಲಾಟ್‌ನಲ್ಲಿ ಸುರಭಿ ವಾಸವಾಗಿದ್ದಳು. ಆ ಮನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿತ್ತು, ಬೆಲೆಬಾಳುವ ಇಟಾಲಿಯನ್ ಪೀಠೋಪಕರಣಗಳಿದ್ದವು. ಆದರೆ, ಸುರಭಿಗೆ ಪ್ರತಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ. ಎಷ್ಟೇ ಅನುಕೂಲಗಳಿದ್ದರೂ ಏನೋ ಒಂದು ಅತೃಪ್ತಿ, ಅಸ್ಪಷ್ಟ ಆತಂಕ ಮತ್ತು ನಿರಂತರ ಆಯಾಸ ಅವಳನ್ನು ಕಾಡುತ್ತಿತ್ತು.

ಬಹಳ ದಿನಗಳ ಒದ್ದಾಟದ ಬಳಿಕ ಅವಳು ಒಂದು ವಾರಾಂತ್ಯದಲ್ಲಿ ಮಲೆನಾಡಿನ ತನ್ನ ಮನೆಗೆ ಹೋದಳು. ಕಾಡಿನ ಪಕ್ಕದಲ್ಲಿದ್ದ ಮನೆ. ಎದುರಿಗೆ ಗದ್ದೆ ಬಯಲು. ಮನೆ ಹಿಂದೆ ಕಾಡು. ಕಾಡಿನ ಮಧ್ಯದಲ್ಲೆಲ್ಲೋ ಸಣ್ಣ ತೊರೆ. ಕಿಟಕಿ ಹೊರಗೆ ನೋಡಿದರೆ ಹಸಿರು ಹಸಿರು.

ಮುಂಜಾನೆ ಹಕ್ಕಿಗಳ ಕಲರವ ಕೇಳಿತು. ಮಣ್ಣಿನ ಸುವಾಸನೆ ಮೂಗಿಗಡರಿತು. ಅಲ್ಲಿ ಕಳೆದ ಕೇವಲ ಎರಡು ದಿನಗಳಲ್ಲಿ ಸುರಭಿಯ ಆಯಾಸ ಮಾಯವಾಯಿತು. ಅಲ್ಲಿ ಅಂಥಾ ಐಷಾರಾಮಿತನ, ಅನುಕೂಲಗಳಿಲ್ಲದಿದ್ದರೂ ಅವಳಿಗೆ ಬಹಳ ಒಳ್ಳೆಯ ನಿದ್ದೆ ಬಂದಿತು. ಅವಳು ಮತ್ತೆ ಬೆಂಗಳೂರಿಗೆ ಮರಳಿದಾಗ ಅವಳಿಗೆ ಒಂದು ಸತ್ಯ ಹೊಳೆಯಿತು: ‘ಮನುಷ್ಯ ಎಷ್ಟೇ ಐಷಾರಾಮಿ ಗೋಡೆಗಳನ್ನು ಕಟ್ಟಿಕೊಂಡರೂ, ಅವನ ನೆಮ್ಮದಿ ಇರುವುದು ಪ್ರಕೃತಿಯ ಒಡನಾಟದಲ್ಲಿಯೇ.’

ಸುರಭಿಯ ನಿದ್ರೆ ಮತ್ತು ನೆಮ್ಮದಿ ಬದಲಾವಣೆಯಲ್ಲಿ ಇರುವುದು ಭಾವನಾತ್ಮಕ ಕಾರಣಗಳು ಎಂದು ಬಹುತೇಕರು ಅಂದುಕೊಳ್ಳಬಹುದು. ಆದರೆ ಇದರ ಹಿಂದೆ ದೊಡ್ಡ ವಿಜ್ಞಾನವೇ ಅಡಗಿದೆ ಎನ್ನುತ್ತಾರೆ ತಜ್ಞರು. ಆ ವಿಜ್ಞಾನದ ಹಿಂದೆ ಇರುವ ಹೊಸ ಟ್ರೆಂಡ್‌ನ ಹೆಸರು ಬಯೋಫಿಲಿಕ್ ಲಿವಿಂಗ್‌.

ಬಯೋಫಿಲಿಕ್‌ ಲಿವಿಂಗ್‌

‘ಬಯೋಫಿಲಿಯಾ’ ಎಂದರೆ ಗ್ರೀಕ್ ಭಾಷೆಯಲ್ಲಿ ‘ಜೀವಂತ ವಸ್ತುಗಳ ಮೇಲಿನ ಸಹಜ ಪ್ರೀತಿ’ ಎಂದರ್ಥ. ಅಂದರೆ ನಮಗೆ ಗಿಡ, ಮರ ಹಸಿರನ್ನು ನೋಡಿದಾಗ ತನ್ನಿಂತಾನೇ ಉಲ್ಲಾಸ ಉಂಟಾಗುತ್ತದೆ. ನೈಸರ್ಗಿಕ ತೊರೆ ನೀರು ನೋಡಿದರೆ ಸಂತೋಷವಾಗುತ್ತದೆ. ಹಾಗೆ ನೈಸರ್ಗಿಕ ಬೆಳಕು, ಗಾಳಿ, ನೀರು, ಸಸ್ಯ ಸಂಪತ್ತು ಮುಂತಾದುವನ್ನು ಆಧುನಿಕ ವಾಸ್ತುಶಿಲ್ಪದ ಜೊತೆ ಸೇರಿಸಿ ವಾಸಸ್ಥಳವನ್ನು ಆದಷ್ಟು ನೈಸರ್ಗಿಕ ರೀತಿಯಲ್ಲಿ ರೂಪಿಸಿ ಜೀವಿಸುವುದನ್ನೇ ಬಯೋಫಿಲಿಕ್ ಲಿವಿಂಗ್ ಎಂದು ಕರೆಯಲಾಗುತ್ತದೆ.

ಅದರ ಭಾಗವೇ ಮನೆಯೊಳಗೆ ಒಳಾಂಗಣ ಗಿಡಗಳು ಬಂದಿರುವುದು. ಮನೆಯ ಗೋಡೆಗಳಲ್ಲಿ ಬಳ್ಳಿ ಹಬ್ಬಿರುವುದು. ಆ ಮೂಲಕ ಸುರಭಿಯಂತಹ ಮಂದಿ ಮಹಾನಗರದಲ್ಲಿನ ಮನೆಯೊಳಗೆ ಒಂದು ಪುಟ್ಟ ಮಲೆನಾಡನ್ನು ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಆ ಮೂಲಕ ಹಸಿರ ಮಧ್ಯೆ ಬದುಕುವ ಆಸೆಯನ್ನು ನನಸು ಮಾಡುತ್ತಿದ್ದಾರೆ. ಅದಕ್ಕೆ ಬಯೋಫಿಲಿಕ್‌ ಲಿವಿಂಗ್‌ ಎಂಬ ಹೆಸರು ಕೊಟ್ಟಿದ್ದಾರೆ. ಅದರಿಂದ ಅವರು ನೆಮ್ಮದಿಯಿಂದ ಬದುಕುವುದು ಸಾಧ್ಯವಾಗುತ್ತಿದೆ.

ಮೆದುಳಿನ ಮೇಲೆ ಪ್ರಭಾವ

ನರವಿಜ್ಞಾನದ ಪ್ರಕಾರ, ಮನುಷ್ಯನ ಮೆದುಳು ಲಕ್ಷಾಂತರ ವರ್ಷಗಳಿಂದ ಪ್ರಕೃತಿಯ ಮಡಿಲಲ್ಲೇ ವಿಕಾಸಗೊಳ್ಳುತ್ತಾ ಬಂದಿದೆ. ಹಾಗಾಗಿ ಮೆದುಳಿಗೆ ಪ್ರಕೃತಿಯ ಮಡಿಲು ಇಷ್ಟ. ನಾವು ಕಾಂಕ್ರೀಟ್ ಗೋಡೆಗಳ ಮಧ್ಯೆ ಇರುವಾಗ ನಮ್ಮ ಮೆದುಳು ‘ಹೈ ಅಲರ್ಟ್’ ಸ್ಥಿತಿಯಲ್ಲಿರುತ್ತದೆ. ಅಂಥಾ ಸ್ಥಿತಿ ಒತ್ತಡಕ್ಕೆ ಕಾರಣವಾಗುತ್ತದೆ. ಆ ಒತ್ತಡವನ್ನು ದೂರ ಮಾಡಿ, ನಿಮ್ಮ ಮೆದುಳನ್ನು ರೀವೈರಿಂಗ್‌ ಮಾಡಬೇಕಾದರೆ ಬಯೋಫಿಲಿಕ್ ಡಿಸೈನ್ ಅನ್ನು ಮನೆಯಲ್ಲಿ ಬಳಸಬೇಕು. ಅದರಿಂದ ಬಹಳ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ.

1. ಒತ್ತಡದ ಹಾರ್ಮೋನ್ ಇಳಿಕೆ: ಪ್ರಕೃತಿಯ ದೃಶ್ಯಗಳನ್ನು ಅಥವಾ ಹಸಿರು ಬಣ್ಣವನ್ನು ನೋಡಿದಾಗ ಮೆದುಳಿನ ‘ಅಮಿಗ್ಡಾಲಾ’ ಭಾಗ ಶಾಂತವಾಗುತ್ತದೆ. ಅದರಿಂದ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟ ಕಡಿಮೆಯಾಗಿ, ಮನಸ್ಸು ಪ್ರಶಾಂತಗೊಳ್ಳುತ್ತದೆ.

2. ಏಕಾಗ್ರತೆ: ಕಂಪ್ಯೂಟರ್ ಸ್ಕ್ರೀನ್‌ಗಳು ನಮ್ಮ ಮೆದುಳಿನ ಶಕ್ತಿಯನ್ನು ಮಂದಗೊಳಿಸುತ್ತವೆ. ಆದರೆ ಕಿಟಕಿಯಿಂದ ಕಾಣುವ ಮರಗಳು ಅಥವಾ ಮನೆಯೊಳಗಿನ ಗಿಡಗಳು ನಮ್ಮ ಮೆದುಳಿಗೆ ವಿಶ್ರಾಂತಿ ನೀಡಿ, ಆಲೋಚನಾ ಶಕ್ತಿಯನ್ನು ಪುನಶ್ಚೇತನಗೊಳಿಸುತ್ತವೆ.

3. ಸೃಜನಶೀಲತೆ: ನೈಸರ್ಗಿಕ ಪರಿಸರದಲ್ಲಿ ಮೆದುಳು ಹೆಚ್ಚು ಮುಕ್ತವಾಗಿ ಆಲೋಚಿಸುತ್ತದೆ. ಇದರಿಂದ ಹೊಸ ಐಡಿಯಾಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ವೃದ್ಧಿಯಾಗುತ್ತದೆ.

ಬಯೋಫಿಲಿಕ್ ಡಿಸೈನ್‌ ಟ್ರೆಂಡ್‌

ಮನೆಯೊಳಗೆ ಮರ ಬೆಳೆಸಲಾಗುವುದಿಲ್ಲವಾದ್ದರಿಂದ ಬಯೋಫಿಲಿಕ್‌ ಡಿಸೈನ್‌ ಎಂಬ ಟ್ರೆಂಡ್‌ ಶುರುವಾಗಿದೆ. ಈ ಡಿಸೈನ್‌ನಲ್ಲಿ ಏನೇನು ಗಮನಹರಿಸಲಾಗುತ್ತದೆ ಎಂಬುದನ್ನು ಈ ಕೆಳಗೆ ನೋಡೋಣ.

1. ಲಿವಿಂಗ್ ವಾಲ್ಸ್: ಮನೆಯ ಒಂದು ಗೋಡೆಯನ್ನು ಸಂಪೂರ್ಣವಾಗಿ ಸಣ್ಣ ಸಣ್ಣ ಗಿಡಗಳಿಂದ ಆವರಿಸುವುದು ಈಗಿನ ದೊಡ್ಡ ಟ್ರೆಂಡ್. ಈ ರೀತಿ ಮಾಡುವುದರಿಂದ ಗಾಳಿ ಶುದ್ಧೀಕರಣಗೊಳ್ಳುವುದಲ್ಲದೆ, ಮನೆಯ ತಾಪಮಾನ ಕಡಿಮೆ ಆಗುತ್ತದೆ ಮತ್ತು ಸೌಂಡ್ ಪ್ರೂಫ್ ಆಗಿಯೂ ಕೆಲಸ ಮಾಡುತ್ತದೆ ಎನ್ನುತ್ತಾರೆ ಪರಿಣತರು.

2. ಸೂರ್ಯನ ಬೆಳಕಿನ ಗರಿಷ್ಠ ಬಳಕೆ: ಬಯೋಫಿಲಿಕ್ ವಿನ್ಯಾಸದಲ್ಲಿ ಕಿಟಕಿಗಳು ಕೇವಲ ಗಾಳಿಗಲ್ಲ, ಅವು ಸೂರ್ಯನ ಬೆಳಕನ್ನು ಸ್ವಾಗತಿಸುವ ದ್ವಾರಗಳು ಕೂಡ ಹೌದು. ಈ ರೀತಿ ಮುಂಜಾವುನಿಂದ ಮುಸ್ಸಂಜೆವರೆಗೂ ಸೂರ್ಯನ ಬೆಳಕು ಬೀಳುವಂತೆ ಮಾಡುವ ಮೂಲಕ ನಮ್ಮ ದೇಹದ ‘ಜೈವಿಕ ಗಡಿಯಾರ’ವನ್ನು ಉತ್ತಮಪಡಿಸಲಾಗುತ್ತದೆ. ಸೂರ್ಯನ ಬೆಳಕು ಇಲ್ಲದ ಹೊತ್ತಿನಲ್ಲಿ ಬೇಗ ನಿದ್ದೆ ಮಾಡಲು ಅನುಕೂಲ ಕಲ್ಪಿಸಲಾಗುತ್ತದೆ.

3. ನೈಸರ್ಗಿಕ ಸಾಮಗ್ರಿಗಳ ಬಳಕೆ: ಕೃತಕ ಪ್ಲಾಸ್ಟಿಕ್ ಅಥವಾ ಸಿಂಥೆಟಿಕ್ ವಸ್ತುಗಳ ಬದಲಿಗೆ ಮರ, ಕಲ್ಲು, ಸೆಣಬು ಮತ್ತು ಉಣ್ಣೆಯಂತಹ ನೈಸರ್ಗಿಕ ವಸ್ತುಗಳ ಬಳಕೆಗೆ ಇಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಈ ವಸ್ತುಗಳ ಸ್ಪರ್ಶವು ನಮಗೆ ಭೂಮಿ ಜೊತೆಗಿನ ನಂಟಿನ ನೆನಪು ಮಾಡಿ ಖುಷಿಯ ಅನುಭವ ನೀಡುತ್ತದೆ.

4. ಜಲಲ ಜಲಧಾರೆ: ಮನೆಯ ಒಂದು ಮೂಲೆಯಲ್ಲಿ ಸಣ್ಣದಾದ ನೀರಿನ ಕಾರಂಜಿ ಅಥವಾ ಅಕ್ವೇರಿಯಂ ಇಡುವುದು ಒಳ್ಳೆಯದು. ನೀರಿನ ಮೃದುವಾದ ಸದ್ದು ಒತ್ತಡವನ್ನು ಶಾಂತಗೊಳಿಸುವ ಶಕ್ತಿ ಹೊಂದಿದೆ.

ಪ್ರಯೋಜನಗಳು

ಪರಿಣಿತರು ಇದರಿಂದ ಅದ್ಭುತ ಪ್ರಯೋಜನಗಳು ಉಂಟಾಗುತ್ತವೆ ಎಂದು ಹೇಳುತ್ತಾರೆ.

- ಮಾನಸಿಕ ಆರೋಗ್ಯ: ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಶೇ.30ರಿಂದ 40ರಷ್ಟು ಕಡಿಮೆ ಮಾಡಬಹುದು ಎನ್ನಲಾಗುತ್ತದೆ.

- ದೈಹಿಕ ಚೇತರಿಕೆ: ಬಯೋಫಿಲಿಕ್ ವಿನ್ಯಾಸ ಹೊಂದಿರುವ ಆಸ್ಪತ್ರೆಗಳಲ್ಲಿರುವ ರೋಗಿಗಳು ಇತರರಿಗಿಂತ ವೇಗವಾಗಿ ಗುಣಮುಖರಾಗುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ.

-ಕೆಲಸದ ದಕ್ಷತೆ: ಗಿಡಗಳಿರುವ ಕಚೇರಿಗಳಲ್ಲಿ ಉದ್ಯೋಗಿಗಳ ಸೃಜನಶೀಲತೆ ಶೇ.15ರಷ್ಟು ಹೆಚ್ಚಾಗಿರುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ನಾವು ಇದನ್ನು ಹೇಗೆ ಅಳವಡಿಸಿಕೊಳ್ಳಬಹುದು?

ಬಯೋಫಿಲಿಕ್ ಜೀವನಶೈಲಿಗಾಗಿ ನಾವು ಮನೆಗೆ ಹೊಸ ವಿನ್ಯಾಸವನ್ನೇ ಮಾಡಬೇಕಿಲ್ಲ. ಈ ಕೆಳಗಿನ ಸರಳ ಬದಲಾವಣೆಗಳನ್ನು ಮಾಡಬಹುದು:

- ಕಿಟಕಿಗಳನ್ನು ತೆರೆಯಿರಿ: ಕೃತಕ ಏಸಿ ಗಾಳಿಗಿಂತ ತಾಜಾ ಗಾಳಿ ಮತ್ತು ಬೆಳಕಿಗೆ ಅವಕಾಶ ನೀಡಿ.

- ಒಳಾಂಗಣ ಗಿಡಗಳು: ಬೆಡ್‌ರೂಮ್ ಅಥವಾ ಹಾಲ್‌ನಲ್ಲಿ ಸ್ನೇಕ್ ಪ್ಲಾಂಟ್ ಅಥವಾ ಪೀಸ್ ಲಿಲ್ಲಿಯಂತಹ ಗಿಡಗಳನ್ನು ಬೆಳೆಸಿ.

- ನೈಸರ್ಗಿಕ ಕಲಾಕೃತಿಗಳು: ಪ್ರಕೃತಿಯ ಸುಂದರ ಚಿತ್ರಪಟಗಳನ್ನು ಗೋಡೆಯ ಮೇಲೆ ಹಾಕಿ.

- ವಾರಕ್ಕೊಮ್ಮೆ ಡಿಜಿಟಲ್ ಡಿಟಾಕ್ಸ್: ಮೊಬೈಲ್ ಬದಿಗಿಟ್ಟು ಪಾರ್ಕ್ ಅಥವಾ ಹಳ್ಳಿಯ ಪರಿಸರದಲ್ಲಿ ಬರಿಗಾಲಿನಲ್ಲಿ ನಡೆದಾಡಿ.

ಬಯೋಫಿಲಿಕ್ ಲಿವಿಂಗ್ ಅಥವಾ ಡಿಸೈನ್ ಎನ್ನುವುದು ಕೇವಲ ಶ್ರೀಮಂತರ ಹವ್ಯಾಸವಲ್ಲ; ಅದು ಎಲ್ಲರೂ ಅಳವಡಿಸಿಕೊಳ್ಳಬೇಕಾದ ಒಂದು ಜೀವನ ಕ್ರಮ. ನಮ್ಮ ಮೆದುಳು ಮತ್ತು ದೇಹವು ಹಸಿರನ್ನೇ ಹಂಬಲಿಸುತ್ತವೆ. ತಂತ್ರಜ್ಞಾನದ ಅಬ್ಬರದ ನಡುವೆ ಹಸಿರಿನ ಉಸಿರನ್ನು ನಮ್ಮ ಮನೆಗೆ ತುಂಬುವ ಮೂಲಕ ನಾವು ಹೆಚ್ಚು ಆರೋಗ್ಯಕರ, ಸಂತೋಷದಾಯಕ ಮತ್ತು ಸೃಜನಶೀಲ ಬದುಕನ್ನು ನಡೆಸಬಹುದು. ನೆನಪಿಡಿ, ನಾವು ಪ್ರಕೃತಿಯ ಭಾಗ. ಹಾಗಾಗಿ ಪ್ರಕೃತಿಯನ್ನು ನಮ್ಮ ಮನೆಗೆ ತರೋಣ, ಮೆದುಳಿಗೆ ಹೊಸ ಚೈತನ್ಯ ನೀಡೋಣ.