ಬೆಂಗಳೂರು : ಸ್ವಚ್ಛ ಸರ್ವೇಕ್ಷಣ್ 2025-26ರ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 29 ಬೃಹತ್‌ ನೀರುಗಾಲುವೆಗಳ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲಾಗಿದ್ದು, 6.7 ಮೆಟ್ರಿಕ್‌ ಟನ್‌ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ 290 ಪೌರ ಕಾರ್ಮಿಕ ಸಿಬ್ಬಂದಿ

ಸ್ವಚ್ಛತಾ ಕಾರ್ಯದಲ್ಲಿ 290 ಪೌರ ಕಾರ್ಮಿಕ ಸಿಬ್ಬಂದಿ ಪಾಲ್ಗೊಂಡಿದ್ದರು. ಸ್ವಚ್ಛ ಸರ್ವೇಕ್ಷಣ 2025-26 ರ ಶ್ರೇಯಾಂಕ ಪಟ್ಟಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಗಳಿಸಬೇಕಾದ ಹಿನ್ನೆಲೆಯಲ್ಲಿ 29 ಬೃಹತ್ ನೀರುಗಾಲುವೆ ಸುತ್ತಲಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಶುಚಿಗೊಳಿಸಲಾಗಿದೆ. ಸುತ್ತಮುತ್ತ ತ್ಯಾಜ್ಯ ಹಾಕದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.

ಬೃಹತ್‌ ನೀರುಗಾಲುವೆಗಳು


ಬೃಹತ್‌ ನೀರುಗಾಲುವೆಗಳು ಮತ್ತು ಅವುಗಳ ಸುತ್ತಮುತ್ತ ಪೌರಕಾರ್ಮಿಕ ಸಿಬ್ಬಂದಿ ಸ್ವಚ್ಛತಾ ಕಾರ್ಯಕೈಗೊಂಡಿದ್ದರು. ಸ್ವಚ್ಛತಾ ಕಾರ್ಯದಲ್ಲಿ 214 ಪೌರಕಾರ್ಮಿಕರು ಹಾಗೂ 76 ಇತರೆ ಸ್ವಚ್ಛತಾ ಸಿಬ್ಬಂದಿಗಳು ಭಾಗಿಯಾಗಿದ್ದರು ಎಂದಿದ್ದಾರೆ.

ಈ ಸಂದರ್ಭದಲ್ಲಿ ಪಾಲಿಕೆಯ ಅಪರ ಆಯುಕ್ತ ದಲ್ಜಿತ್ ಕುಮಾರ್ ಅವರ ಮೇಲುಸ್ತುವಾರಿಯಲ್ಲಿ ನಡೆದ ಈ ಸ್ವಚ್ಛತಾ ಅಭಿಯಾನದಲ್ಲಿ ಡಿಜಿಎಂ ಭೀಮೇಶ್ ನಾಯಕ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.