ಮಧುಮೇಹ, ಹೃದಯರೋಗ, ಅಧಿಕ ರಕ್ತದೊತ್ತಡ ನಿರ್ವಹಣೆ ಹೇಗೆ: ವಿಶೇಷ ಲೇಖನ

| Published : Aug 19 2025, 01:00 AM IST

ಮಧುಮೇಹ, ಹೃದಯರೋಗ, ಅಧಿಕ ರಕ್ತದೊತ್ತಡ ನಿರ್ವಹಣೆ ಹೇಗೆ: ವಿಶೇಷ ಲೇಖನ
Share this Article
  • FB
  • TW
  • Linkdin
  • Email

ಸಾರಾಂಶ

ಈಗೀಗ ಮಧುಮೇಹ, ಹೃದಯರೋಗ, ಅಧಿಕ ರಕ್ತದೊತ್ತಡ ಬಹುತೇಕರನ್ನು ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗಳ ಸೂಕ್ತ ನಿರ್ವಹಣೆಯ ಕುರಿತು ಬೆಂಗಳೂರು ನಾರಾಯಣ ಹೆಲ್ತ್ ನ ಸೀನಿಯರ್ ಕನ್ಸಲ್ಟೆಂಟ್ ಡಾ.ದೀಪಕ್ ಪಧ್ಮನಾಭನ್ ವಿಶೇಷ ಲೇಖನ ಬರೆದಿದ್ದಾರೆ.

-ಡಾ. ದೀಪಕ್ ಪದ್ಮನಾಭನ್, ಸೀನಿಯರ್ ಕನ್ಸಲ್ಟೆಂಟ್, ಸ್ಟ್ರಾಟೆಜಿಕ್ ಲೀಡ್ - ಕಾರ್ಡಿಯಾಕ್ ಇಪಿ ಕೊಲೀಜಿಯಂ, ನಾರಾಯಣ ಹೆಲ್ತ್, ಬೆಂಗಳೂರು.

ಈಗೀಗ ಎಲ್ಲಾ ಪ್ರದೇಶಗಳಲ್ಲೂ ಹೆಚ್ಚಾಗಿ ಕೇಳಿ ಬರುವ ಆರೋಗ್ಯ ಸಮಸ್ಯೆ ಎಂದರೆ ಅದು ಒಂದೋ ಮಧುಮೇಹ, ಅಥವಾ ಅಧಿಕ ರಕ್ತದೊತ್ತಡ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೃದಯರೋಗ. ಇವೆಲ್ಲವೂ ಜೀವನಶೈಲಿಗೆ ಸಂಬಂಧಪಟ್ಟ ರೋಗಗಳು. ಬಹಳಷ್ಟು ಮಂದಿ ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಜ್ಞರು ಈ ರೋಗಗಳಿಂದ ಪಾರಾಗಬೇಕಾದರೆ ಒಂದು ಸಲಹೆ ನೀಡುತ್ತಾರೆ. ಅದೇನೆಂದರೆ ನಮ್ಮ ದೈನಂದಿನ ವರ್ತನೆಗಳು ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು.

ಮಾನಸಿಕ ಆರೋಗ್ಯ ಮತ್ತು ಜೀವನಶೈಲಿ ರೋಗಗಳ ನಡುವಿನ ಸಂಬಂಧ

ಮಾನಸಿಕ ಆರೋಗ್ಯ ಮತ್ತು ಜೀವನಶೈಲಿ ರೋಗಗಳ ನಡುವಿನ ಸಂಬಂಧದ ಕುರಿತು ಈಗೀಗ ಹೆಚ್ಚು ಚರ್ಚೆ ನಡೆಯುತ್ತಿದೆ. ಒತ್ತಡ, ಆತಂಕ ಮತ್ತು ಖಿನ್ನತೆಯು ಹಾರ್ಮೋನ್‌ಗಳ ಅಸಮತೋಲನ, ಕಳಪೆ ಪೌಷ್ಟಿಕತೆ ಉಂಟು ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ವ್ಯಸನಕ್ಕೆ ಕೂಡ ಕಾರಣವಾಗಬಹುದು. ನಮ್ಮಲ್ಲಿ ಸಾಮಾಜಿಕ ಕಳಂಕ ಮತ್ತು ಜಾಗೃತಿಯ ಕೊರತೆಯಿಂದ ಈ ವಿಷಯಗಳು ಮುನ್ನೆಲೆಗೆ ಬರುವುದೇ ಇಲ್ಲ.

ಆದರೆ ಈಗೀಗ ವೈದ್ಯರು, ಆಸ್ಪತ್ರೆಗಳು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಒಗ್ಗೂಡಿಸಿಕೊಂಡಿರುವ ಸಮಗ್ರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಕೌನ್ಸೆಲಿಂಗ್, ಧ್ಯಾನ, ವ್ಯಾಯಾಮಗಳಿಗೆ ಒತ್ತು ನೀಡಲಾಗುತ್ತಿದೆ. ಇವೆಲ್ಲವೂ ಉತ್ತಮ ಜೀವನಶೈಲಿ ಹೊಂದಲು ಸಹಾಯ ಮಾಡುತ್ತದೆ.

ಸಾಂಪ್ರದಾಯಿಕ ವಿಧಾನಗಳ ಎಲ್ಲೆ ಮೀರಿ

ಜೀವನಶೈಲಿ ರೋಗಗಳ ಚಿಕಿತ್ಸೆಯಲ್ಲಿ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಬಳಸುವ ವಿಧಾನ ಈಗ ಅಚ್ಚುಮೆಚ್ಚಾಗಿದೆ. ಯಾಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಆನುವಂಶಿಕ, ಚಯಾಪಚಯ ಮತ್ತು ಸಾಂಸ್ಕೃತಿಕ ಗುಣಲಕ್ಷಣಗಳಿರುತ್ತವೆ. ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯ ವಿಧಾನವನ್ನು ಬಳಸಲಾಗುತ್ತದೆ. ಆದರೆ ವೈದ್ಯರು ಈಗ ಸಾಂಪ್ರದಾಯಿಕ ವಿಧಾನಗಳನ್ನು ಮೀರಿ, ರೋಗಿಗಳ ನಿರ್ದಿಷ್ಟ ಆನುವಂಶಿಕ ಗುಣಲಕ್ಷಣಗಳು, ಜೀವನಶೈಲಿ ವಿಧಾನ ಮತ್ತು ಈಗಿರುವ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ.

ಉದಾಹರಣೆಗೆ, ಒಬ್ಬ ರೋಗಿಯು ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳುವ ರೀತಿಯ ಮೇಲೆ ಆನುವಂಶಿಕ ಗುಣಲಕ್ಷಣಗಳು ಪರಿಣಾಮ ಬೀರಬಹುದು. ಸಾರ್ಕೋಪೆನಿಕ್ ಒಬೇಸಿಟಿಯಂತಹ ಸಮಸ್ಯೆಗಳು ಸಾಂಪ್ರದಾಯಿಕ ತೂಕದ ಮೌಲ್ಯಮಾಪನದಲ್ಲಿ ಗುರುತಿಸಲಾಗದೇ ಹೋಗಬಹುದು. ಇಲ್ಲಿ, ಡೆಕ್ಸಾ ಸ್ಕ್ಯಾನ್‌ನಂತಹ ಸುಧಾರಿತ ಉಪಕರಣಗಳು ಈ ಸ್ಥಿತಿಯನ್ನು ತಿಳಿಸಲು ಸಹಾಯ ಮಾಡುತ್ತವೆ. ಈ ಸಂದರ್ಭದಲ್ಲಿ ಅದಕ್ಕೆ ಪೂರಕವಾದ ಆಹಾರ ಮತ್ತು ವ್ಯಾಯಾಮ ಯೋಜನೆಗಳನ್ನು ರೂಪಿಸಬಹುದು. ಔಷಧಗಳು, ವ್ಯಾಯಾಮಗಳು ಮತ್ತು ಆಹಾರ ಯೋಜನೆಯನ್ನು ವೈಯಕ್ತಿಕವಾಗಿ ಕಸ್ಟಮೈಸ್ ಮಾಡಬಹುದು.

ಆಧುನಿಕ ವ್ಯವಸ್ಥೆ

ಇಂದು ಚಿಕಿತ್ಸಾ ವಿಧಾನಗಳು ಬದಲಾಗಿವೆ. ಮೊಬೈಲ್ ಹೆಲ್ತ್ ಆಪ್ ಗಳು, ಟೆಲಿಮೆಡಿಸಿನ್ ಸೇವೆಗಳು ಮತ್ತು ಎಐ ಆಧರಿತ ಮಾನಿಟರ್‌ಗಳು ಇತ್ಯಾದಿ ವ್ಯವಸ್ಥೆಗಳ ಮೂಲಕ ಬಳಕೆದಾರರು ಮನೆಯಿಂದಲೇ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆ ಮಟ್ಟದ ಬದಲಾವಣೆಗಳನ್ನು ಸುಲಭವಾಗಿ ಗಮನಿಸಬಹುದು. ಇದರಿಂದ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಹಚ್ಚಬಹುದಾಗಿದೆ ಮತ್ತು ದುಬಾರಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಜೊತೆಗೆ ವಿಶೇಷವಾಗಿ ಈ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಲು ಸಮಾನ ಮನಸ್ಕರ ಗುಂಪುಗಳನ್ನು ಕಟ್ಟಿಕೊಳ್ಳುವ ಕ್ರಮಗಳೂ ಇವೆ.

ಜೀವನಶೈಲಿ ರೋಗಗಳನ್ನು ಎದುರಿಸಲು ದೊಡ್ಡ ಬದಲಾವಣೆ ಣಾಡುವುದಕ್ಕೆ ಬದಲಾಗಿ ಸಣ್ಣದಾದ, ಸ್ಥಿರವಾದ ಹೆಜ್ಜೆಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು, ದೈನಂದಿನ ವೇಳಾಪಟ್ಟಿಯಲ್ಲಿ ಸಣ್ಣ ವ್ಯಾಯಾಮ ಚಟುವಟಿಕೆಗಳನ್ನು ಸೇರಿಸಿಕೊಳ್ಳುವುದು, ನಿದ್ರೆಗೆ ಆದ್ಯತೆ ನೀಡುವುದು ಮತ್ತು ಸ್ಕ್ರೀನ್ ಬಳಕೆ ಕಡಿಮೆ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವುದು ಇತ್ಯಾದಿಗಳಿಗೆ ಒತ್ತು ನೀಡಲಾಗುತ್ತದೆ. ಕಾಲಾಂತರದಲ್ಲಿ, ಈ ಸಣ್ಣ ಬದಲಾವಣೆಗಳು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಕೊನೆಯ ಮಾತು

ತಂತ್ರಜ್ಞಾನ, ಸಮಾಜದ ಭಾಗವಹಿಸುವಿಕೆ ಮತ್ತು ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಸಂಯೋಜಿಸುವ ಸಮಗ್ರ, ಬಹು-ಆಯಾಮದ ವೈದ್ಯಕೀಯ ವಿಧಾನಗಳನ್ನು ಬಳಸುವುದು ಜೀವನಶೈಲಿ ರೋಗಗಳನ್ನು ಎದುರಿಸಲು ಸೂಕ್ತ ಮಾರ್ಗವಾಗಿದೆ. ಅದನ್ನು ಎಲ್ಲರೂ ಮನಸ್ಸಲ್ಲಿ ಇರಿಸಿಕೊಂಡು ಮುಂದುವರಿಯಬೇಕಾಗಿದೆ.