ಸಾರಾಂಶ
ಬೆಂಗಳೂರು : ಪೊಲೀಸ್ ಪರಿಶೀಲನೆ ಹಾಗೂ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪರಿಶೀಲನೆ ಬಾಕಿ ಇರುವುದರಿಂದ ಬಿಬಿಎಂಪಿಯ ಪೌರಕಾರ್ಮಿಕರ ನೇಮಕಾತಿ ಪತ್ರ ವಿತರಣೆ ಇನ್ನೂ ಎರಡ್ಮೂರು ತಿಂಗಳು ವಿಳಂಬವಾಗಲಿದೆ.
ಕಳೆದ 3 ವರ್ಷದಿಂದ ಬಿಬಿಎಂಪಿಯ ಪೌರಕಾರ್ಮಿಕ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅಧಿಸೂಚನೆ ಹೊರಡಿಸಿ 14,980 ಹುದ್ದೆಗಳ ಪೈಕಿ ಈಗಾಗಲೇ 12,699 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ನೇಮಕಗೊಂಡ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಸಹ ನಡೆಸಲಾಗಿದೆ. ಸಾಮಾನ್ಯ ವರ್ಗದಡಿ ನೇಮಕಗೊಂಡವರಿಗೆ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪರಿಶೀಲನೆ ಅಗತ್ಯವಿಲ್ಲ. ಆದರೆ, ಮೀಸಲಾತಿಯಡಿ ನೇಮಕಗೊಂಡ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರದ ಸಿಂಧುತ್ವದ ಪರಿಶೀಲನೆ ಹಾಗೂ ಪೊಲೀಸ್ ಪರಿಶೀಲನೆ ಅಗತ್ಯವಾಗಿದೆ.
ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳಿಗೆ ಅಭ್ಯರ್ಥಿಗಳ ದಾಖಲಾತಿ ಕಳುಹಿಸಿಕೊಡಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಸುಮಾರು 3500ಕ್ಕೂ ಅಧಿಕ ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪರಿಶೀಲನೆ ಬಾಕಿ ಇದೆ. ಉಳಿದಂತೆ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಯಾದಗಿರಿ ಸೇರಿದಂತೆ ಒಟ್ಟು 5 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಅರ್ಜಿಗಳು ವಿವಿಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ಬಾಕಿ ಇದೆ. ಹಾಗಾಗಿ, ನೇಮಕಾತಿ ಪ್ರಮಾಣ ಪತ್ರ ವಿತರಣೆ ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ಆಡಳಿತ ವಿಭಾಗ ಉಪ ಆಯುಕ್ತ ಮಂಜುನಾಥ ಸ್ವಾಮಿ ಮಾಹಿತಿ ನೀಡಿದ್ದಾರೆ.
700ಕ್ಕೂ ಅಧಿಕ ಮಂದಿ ಅಪರಾಧದಲ್ಲಿ ಭಾಗಿ:
ಅರ್ಜಿ ಸಲ್ಲಿಕೆ ಮಾಡಿದ ಸುಮಾರು 600 ರಿಂದ 700 ಮಂದಿ ಗುತ್ತಿಗೆ ಪೌರಕಾರ್ಮಿಕರು ಅಪರಾಧ ಕೃತ್ಯದ ಹಿನ್ನೆಲೆ ಹೊಂದಿದ್ದಾರೆ. ಹೀಗಾಗಿ, ಅವರನ್ನು ನೇಮಕಾತಿಯಿಂದ ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿನಾಯಿತಿಗೆ ಸರ್ಕಾರ ನಕಾರ:
ಕಳೆದ ಡಿಸೆಂಬರ್‌ನಲ್ಲಿಯೇ ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪೊಲೀಸ್ ಪರಿಶೀಲನೆ ಹಾಗೂ ಸಿಂಧುತ್ವ ಪರಿಶೀಲನೆಯ ಷರತ್ತು ವಿಧಿಸಿ ನೇಮಕಾತಿ ಪತ್ರ ವಿತರಣೆಗೆ ವಿನಾಯಿತಿ ನೀಡುವಂತೆ ಕೋರಿತ್ತು. ಆದರೆ, ಸರ್ಕಾರವೂ ಅನುಮತಿ ನೀಡದ ಹಿನ್ನೆಲೆಯಲ್ಲಿ ನೇಮಪಾತಿ ಪ್ರಮಾಣ ಪತ್ರ ವಿತರಣೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.