ಡಾ.ಅಂಬೇಡ್ಕರ್ ಬದುಕು, ಹೋರಾಟದ ಚಿಂತನ ಕಥನ

| Published : Jun 22 2024, 12:45 AM IST / Updated: Jun 22 2024, 04:46 AM IST

ಡಾ.ಅಂಬೇಡ್ಕರ್ ಬದುಕು, ಹೋರಾಟದ ಚಿಂತನ ಕಥನ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಕುರಿತು  ಜನರಿಗೆ ಗೊತ್ತಿರುವುದು ಸಂವಿಧಾನ ಶಿಲ್ಪಿ, ಮೀಸಲಾತಿ ಜನಕ, ದಲಿತರ ನಾಯಕ, ಮನುಸ್ಮೃತಿ ಸುಟ್ಟವರು, ಬೌದ್ಧಧರ್ಮ ಸೇರಿದವರು, ಪ್ರತಿಮೆಯಾಗಿರುವವರು- ಇಷ್ಟು ವಿಚಾರಗಳು ಮಾತ್ರ.  ಅಂಬೇಡ್ಕರ್ ಅವರ ಕೊಡುಗೆಗಳು ಅದರಾಚೆಗೂ ಇವೆ ಎಂಬುದನ್ನು ಅಪ್ಪಗೆರೆ ಸೋಮಶೇಖರ್  ನಿರೂಪಿಸಿದ್ದಾರೆ.

 ಮೈಸೂರು   :  ಮಾನವತೆಯ ಮಾರ್ಗದಾತ: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಬದುಕು ಮತ್ತು ಹೋರಾಟದ ಚಿಂತನ ಕಥನ ಕೃತಿಯನ್ನು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಅವರು ರಚಿಸಿದ್ದಾರೆ.

ಅಂಬೇಡ್ಕರ್ ಕುರಿತು ಈವರೆಗೆ ಹೆಚ್ಚು ಜನರಿಗೆ ಗೊತ್ತಿರುವುದು ಸಂವಿಧಾನ ಶಿಲ್ಪಿ, ಮೀಸಲಾತಿ ಜನಕ, ದಲಿತರ ನಾಯಕ, ಮನುಸ್ಮೃತಿ ಸುಟ್ಟವರು, ಬೌದ್ಧಧರ್ಮ ಸೇರಿದವರು, ಪ್ರತಿಮೆಯಾಗಿರುವವರು- ಇಷ್ಟು ವಿಚಾರಗಳು ಮಾತ್ರ. ಅವರನ್ನು ಜನ್ಮದಿನವಾದ ಏ.14, ಪರಿನಿಬ್ಬಾಣ ದಿನವಾದ ಡಿ.6 ರಂದು ಸ್ಮರಣೆ ಮಾಡಿಕೊಳ್ಳುತ್ತೇವೆ. ಆದರೆ, ಅಂಬೇಡ್ಕರ್ ಅವರ ಕೊಡುಗೆಗಳು ಅದರಾಚೆಗೂ ಇವೆ ಎಂಬುದನ್ನು ಅಪ್ಪಗೆರೆ ಸೋಮಶೇಖರ್ ಅವರು ಇಲ್ಲಿ ನಿರೂಪಿಸಿದ್ದಾರೆ. ಇದಕ್ಕಾಗಿ ಅವರು ಹತ್ತು ಹಲವು ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ, ಈ ಕೃತಿಯಲ್ಲಿ ಅವರ ಒಟ್ಟಾರೆ ಕೊಡುಗೆಯನ್ನು ಸಂಕ್ಷಿಪ್ತವಾಗಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇನ್ನೂ ವಿಸ್ತೃತವಾಗಿ ಅರಿಯಬೇಕಿದ್ದಲ್ಲಿ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಎಂದು ಸಲಹೆ ಮಾಡಿ, ಕೊನೆಯಲ್ಲಿ 31 ಗ್ರಂಥಗಳ ಪಟ್ಟಿಯನ್ನು ನೀಡಿದ್ದಾರೆ.

ಕೋರೆಗಾಂವಃ ಜಾತಿವಾದಿಗಳ ವಿರುದ್ಧ ಸ್ವಾಭಿಮಾನಿ ಮಹರರ ಬಂಡಾಯ, ಅಂಬೇಡ್ಕರ್ ವಾದಿ ರಾಷ್ಟ್ರೀಯತೆ, ಸಾಮಾಜಿಕ ನ್ಯಾಯವಾದಿ, ಮಹರರ ಮಹಾಡ್ ಚಳವಳಿ, ಮನುಸ್ಮೃತಿಯ ದಹನ, ಬಾಬಾ ಸಾಹೇಬರ ಒಳಗೊಳ್ಳುವ ವಿವೇಕ, ವತನದಾರ ಪದ್ದತಿಯ ವಿರುದ್ಧ ಹೋರಾಟ, ಸೈಮನ್ ಕಮೀಷನ್ಗೆ ಪ್ರಸ್ತಾವನೆ, ಸ್ಟಾರ್ಟೆ ಸಮಿತಿಯ ಸದಸ್ಯರು, ಪೌರೋಹಿತ್ಯ ಹುದ್ದೆಯ ಪ್ರಜಾಪ್ರಭುತ್ವೀಕರಣ, ದುಂಡುಮೇಜಿನ ಪರಿಷತ್, ಪೂನಾ ಒಪ್ಪಂದ, ಮಂದಿರ ಪ್ರವೇಶಕ್ಕಿಂತ ರಾಜಕೀಯ ಪ್ರಾತಿನಿಧ್ಯ ಮುಖ್ಯ, ಜಾತಿ ವಿನಾಶಃ ಜಾತ್ಪಾತ್ ತೋಡಕ್ ಮಂಡಲ್, ಸ್ವತಂತ್ರ ಕಾರ್ಮಿಕ ಪಕ್ಷ, ದೇಶದ ಮೊದಲ ಕಾನೂನು ಮಂತ್ರಿಯಾಗಿ ಮಹಿಳಾ ಪರ ಚಿಂತನೆ, ಸಂವಿಧಾನ ಕರ್ತೃ - ಎಂದು ಅಂಬೇಡ್ಕರ್ ಅವರ ಬೇರೆ ಬೇರೆ ಕೊಡುಗೆಗಳನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆ ಮೂಲಕ ಅಂಬೇಡ್ಕರ್ ಕೇವಲ ಒಂದು ಸಮುದಾಯದ ನಾಯಕರಲ್ಲ, ಎಲ್ಲಾ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟ ಮಹಾನಾಯಕ, ಸ್ವತಂತ್ರ ಭಾರತವು ಬಹುತ್ವ ಭಾರತವಾಗಿ ಉಳಿಯುವಂತೆ ಸಂವಿಧಾನ ಎಂಬ ರಕ್ಷಾಕವಚ ನೀಡಿದ್ದಾರೆ ಎಂದು ನಿರೂಪಿಸಿದ್ದಾರೆ.

ಇದಲ್ಲದೆ ಬಹುತ್ವದ ಭಾರತದ ನೈತಿಕ ಪ್ರಶ್ನೆಗಳು, ಬಹುಜನರ ಬೌದ್ಧ ಭಾರತ, ದಲಿತ ಸಮುದಾಯದ ಮುಂದಿರುವ ಸವಾಲುಗಳು, ಸಂಘಟನಾತ್ಮಕತೆಯ ಅರಿವಿನ ಹುಡುಕಾಟ, ದಲಿತ ಚಳವಳಿ ಹಾಗೂ ಸಮುದಾಯ ಕೇಳಿಕೊಳ್ಳಬೇಕಾಗಿರುವ ಆತ್ಮಾವಲೋಕನದ ಪ್ರಶ್ನೆಗಳು, ಜನಪರ ಚಳವಳಿಗಳ ಮರು ಧ್ರುವೀಕರಣ ಕುರಿತು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಈ ಕೃತಿಯನ್ನು ಮೈಸೂರಿನ ಚಿಂತನ ಚಿತ್ತಾರ ಪ್ರಕಟಿಸಿದೆ. ಪ್ರೊ.ಕಾಶಿನಾಥ ಅಂಬಲಗೆ ಅವರ ಮುನ್ನುಡಿ, ಸನತ್ ಕುಮಾರ್ ಬೆಳಗಲಿ ಅವರ ಬೆನ್ನುಡಿ ಇದೆ. ಆಸಕ್ತರು ಪ್ರಕಾಶಕ ನಿಂಗರಾಜು ಚಿತ್ತಣ್ಣನವರ್, ಮೊ. 99456 68082 ಸಂಪರ್ಕಿಸಬಹುದು.