ಸಾರಾಂಶ
ನಾನು ಆಧುನಿಕರು ಕತ್ತಲನ್ನು ಕಾಣದವರು. ಆದರೆ ಆ ವಾಟರ್ ಮಿಲ್ ಊರಿನ ಮುದುಕನ ಹಾಗೆ ಬದುಕು ಸವೆಸಿದ ಮಹಾನ್ ಜೀವ ಡಾ ಹೇಮಾ ಸಾನೆ. ಇವರನ್ನು ಸಸ್ಯಶಾಸ್ತ್ರದ ಎನ್‌ಸೈಕ್ಲೋಪೀಡಿಯಾ ಅಂತ ಕರೆಯುತ್ತಾರೆ. ಕಳೆದ ತಿಂಗಳು ತನ್ನ 85 ವರ್ಷದ ತುಂಬು ಜೀವನಕ್ಕೆ ಕೊನೆ ಹಾಡಿದರು.
ಪೀಕೆ
ನಿರ್ದೇಶಕ ಅಕಿರಾ ಕುರಸೋವಾ ಅವರ ‘ಡ್ರೀಮ್ಸ್’ ಅಂತೊಂದು ಆ್ಯಂಥಾಲಜಿ ಬಹಳ ಹಿಂದೆ ಬಂತು. ಅದರಲ್ಲಿ ‘ದ ವಿಲೇಜ್ ಆಫ್ ದ ವಾಟರ್ ಮಿಲ್ಸ್’ ಅಂತೊಂದು ಚಂದದ ಸಿನಿಮಾ. ಒಬ್ಬ ಅಲೆಮಾರಿ ಯುವಕ ವಾಟರ್ ಮಿಲ್‌ಗಳ ಹಳ್ಳಿಗೆ ಬರುತ್ತಾನೆ. ಅದು ಆಧುನಿಕತೆಯ ಸ್ಪರ್ಶವಿಲ್ಲದ ಅಪ್ಪಟ ಹಳ್ಳಿ. ಅಲ್ಲೊಬ್ಬ ಮುದುಕ ಮುರಿದ ನೀರೆತ್ತುವ ಮರದ ಗಾಲಿಯನ್ನು ಸರಿ ಮಾಡುತ್ತಾ ಇರುತ್ತಾನೆ. ಹುಡುಗನಿಗೆ ಆ ಹಳ್ಳಿಯ ಬಗ್ಗೆ, ಅಲ್ಲಿನ ಬದುಕಿನ ಬಗ್ಗೆ ಎಲ್ಲಿಲ್ಲದ ಕುತೂಹಲ. ಮುದುಕನ ಬಳಿ ಆತನದು ಪ್ರಶ್ನೆ ಮೇಲೆ ಪ್ರಶ್ನೆ. ‘ನಿಮ್ಮೂರಲ್ಲಿ ಕರೆಂಟೇ ಇಲ್ವಲ್ಲಾ?’ ‘ಹೌದಪ್ಪ, ಕರೆಂಟಿಲ್ಲ’, ‘ಮತ್ತೆ ರಾತ್ರಿ ಹೊತ್ತು ಕತ್ತಲಲ್ಲಿ ಹೇಗಿರ್ತೀರಿ?’ ‘ರಾತ್ರಿ ಅಂದರೇ ಕತ್ತಲೆ ಅಲ್ವಾ? ಕತ್ತಲೆಯಲ್ಲಿ ಬೆಳಕಿದ್ದರೆ ಅದು ಕತ್ತಲೆ ಹೇಗಾಗುತ್ತದೆ..’ ಅನ್ನುವ ಅರ್ಥದಲ್ಲಿ ಚಾಲಾಕಿ ಮುದುಕನ ಉತ್ತರ.
ನಾನು ಆಧುನಿಕರು ಕತ್ತಲನ್ನು ಕಾಣದವರು. ಆದರೆ ಆ ವಾಟರ್ ಮಿಲ್ ಊರಿನ ಮುದುಕನ ಹಾಗೆ ಬದುಕು ಸವೆಸಿದ ಮಹಾನ್ ಜೀವ ಡಾ ಹೇಮಾ ಸಾನೆ. ಇವರನ್ನು ಸಸ್ಯಶಾಸ್ತ್ರದ ಎನ್‌ಸೈಕ್ಲೋಪೀಡಿಯಾ ಅಂತ ಕರೆಯುತ್ತಾರೆ. ಕಳೆದ ತಿಂಗಳು ತನ್ನ 85 ವರ್ಷದ ತುಂಬು ಜೀವನಕ್ಕೆ ಕೊನೆ ಹಾಡಿದರು.
ಸಸ್ಯಶಾಸ್ತ್ರದ ಈ ಅದ್ವಿತೀಯ ಸಾಧಕಿ ಜೀವನಪರ್ಯಂತ ವಿದ್ಯುತ್ ಬಳಸಲೇ ಇಲ್ಲ. ಕತ್ತಲಲ್ಲಿ ಕತ್ತಲೆಯನ್ನೇ ಕಂಡರು. ಅವರ ದಿನಚರಿ ಸುಸ್ಥಿರ ಬದುಕಿನ ಮಾದರಿಯ ಹಾಗಿತ್ತು. ಬೆಳಗಾಗೆದ್ದು ಅವರೇ ನೆಟ್ಟ ಗಿಡ ಮರಗಳ ಹಾಡಿಯಲ್ಲಿ ನಡೆಯುತ್ತಿದ್ದರು. ಹಕ್ಕಿಗಳ ಚಿಲಿಪಿಲಿಯೊಂದಿಗೆ ಅವರ ದಿನದ ಆರಂಭ. ಅವರೊಬ್ಬರ ಬದುಕಿಗೆ ಸಾಲುವಷ್ಟೇ ಜಾಗ ಇರುವ ಪುಟ್ಟ ಮಣ್ಣಿನ ಮನೆ. ಮನೆಯ ಮುಕ್ಕಾಲು ಭಾಗ ಪುಸ್ತಕಗಳು. ಸರಳ ಅಡುಗೆ. ಆರು ಗಂಟೆಗಳ ದೀರ್ಘ ಅಧ್ಯಯನ, ರಾತ್ರಿ ಬುಡ್ಡಿ ಬೆಳಕಲ್ಲಿ ಓದು, ಆಮೇಲೆ ನಿದ್ದೆ. ವಾಟರ್ ಮಿಲ್‌ನ ಮುದುಕನ ಹಾಗೆ ಎಷ್ಟೋ ಕಾಲ ನೀರು ಸೇದಲು ಮರದ ಗಾಲಿಯನ್ನೇ ಬಳಸುತ್ತಿದ್ದರು. ಸರಳ, ಸುಸ್ಥಿರ ತತ್ವದ ತುಂಬು ಬದುಕದು.
ಮಧ್ಯ ವಯಸ್ಸು ಅಡಿ ಇಡುತ್ತಿದ್ದ ಹಾಗೆ ಇನ್‌ಸೆಕ್ಯೂರಿಟಿಯಲ್ಲಿ ಒದ್ದಾಡುವ ಆಧುನಿಕ ಜನರಿಗೆ ವೃದ್ಧಾಪ್ಯದಲ್ಲೂ ಬದುಕು ಸಹನೀಯವೇ ಅಂತ ತೋರಿಸಿಕೊಟ್ಟ ತಾಯಿ ಈಕೆ. ತನ್ನ ಕೊನೆಗಾಲದಲ್ಲೂ ಅನಾರೋಗ್ಯ ಕಾಡಿದಾಗ ಆಸ್ಪತ್ರೆಗೆ ಹೋಗಲಿಲ್ಲ. ಎಷ್ಟು ಸಹಜವಾಗಿ ಬದುಕಿದರೋ ಅಷ್ಟೇ ಸಹಜವಾಗಿ ಮರಣವನ್ನಪ್ಪಿದರು.