ಸಾರಾಂಶ
ಬೆಂಗಳೂರು : ಆಟೋ ಪ್ರಯಾಣ ದರ ಹೆಚ್ಚಳ ಆದೇಶ ಹೊರಡಿಸುವಲ್ಲಿ ವಿಳಂಬ ಮಾಡುತ್ತಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಟೋ ಚಾಲಕರ ಸಂಘಟನೆಗಳು, ಜೂ.25ರೊಳಗೆ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಸ್ ದರ ಹೆಚ್ಚಳದ ನಂತರದಿಂದ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಟೋ ಚಾಲಕರು ಆಗ್ರಹಿಸುತ್ತಲೇ ಇದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರುಆಟೋ ಚಾಲಕರು-ಮಾಲೀಕರ ಸಂಘಗಳ ಪ್ರಮುಖರೊಂದಿಗೆ ಈಗಾಗಲೇ ಎರಡ್ಮೂರು ಬಾರಿ ಸಭೆಯನ್ನೂ ನಡೆಸಿದ್ದಾರೆ. ಸಭೆಯಲ್ಲಿ ಕನಿಷ್ಠ ದರ 30 ರು.ನಿಂದ 40 ರು.ಗೆ ಹಾಗೂ ಆನಂತರ ಪ್ರತಿ ಕಿಮೀ ದರ 15 ರು.ನಿಂದ 20 ರು.ಗೆ ಹೆಚ್ಚಿಸುವಂತೆ ಆಟೋ ಚಾಲಕರ ಸಂಘಗಳ ಪ್ರಮುಖರು ಪ್ರಸ್ತಾವನೆ ಸಲ್ಲಿಸಿದ್ದರು. ಅಂತಿಮವಾಗಿ ಕನಿಷ್ಠ ದರ 38 ರು. ಹಾಗೂ ಆನಂತರ ಪ್ರತಿ ಕಿಮೀ ದರ 18 ರು.ಗೆ ನಿಗದಿ ಮಾಡಲಾಗಿತ್ತು.
ಆದರೆ, ಆ ಕುರಿತು ಈವರೆಗೆ ಅಧಿಕೃತ ಆದೇಶ ಹೊರಡಿಸಿಲ್ಲ. ಹೀಗಾಗಿ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶ ಹೊರಡಿಸುವಂತೆ ಆಟೋ ಚಾಲಕರ ಸಂಘಟನೆಗಳು ಆಗ್ರಹಿಸುತ್ತಿವೆ. ಜೂ. 25ರೊಳಗೆ ಆದೇಶ ಹೊರಡಿಸಬೇಕು, ಇಲ್ಲದಿದ್ದರೆ ನಗರದ ಆಟೋ ಚಾಲಕರು ಪ್ರತಿಭಟನೆ ನಡೆಸುವುದಾಗಿ ತಿಳಿಸಿವೆ.