ಸಾರಾಂಶ
ಬೆಂಗಳೂರು : ಕೃಷಿಕರ ಜೀವನೋಪಾಯ ಭದ್ರತೆ ಖಾತ್ರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. 2047ರೊಳಗೆ ಭಾರತ ವಿಶ್ವದ ಆಹಾರ ಬುಟ್ಟಿಯಾಗಿಸುವ ನಿಟ್ಟಿನಲ್ಲಿ ಸಾಧನೆ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದ್ದಾರೆ.
ಗುರುವಾರ ನಗರದ ಹೊರವಲಯದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್-ಐಐಎಚ್‌ಆರ್) ಸಂಸ್ಥೆ ಆವರಣದಲ್ಲಿ ‘ವಿಕಸಿತ ಭಾರತಕ್ಕಾಗಿ ತೋಟಗಾರಿಕೆ: ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಪರಿಕಲ್ಪನೆ ಅಡಿ ಆಯೋಜಿಸಿದ್ದ ಮೂರು ದಿನಗಳ ‘ರಾಷ್ಟ್ರೀಯ ತೋಟಗಾರಿಕೆ ಮೇಳ-2025’ಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಹಸಿರುಕ್ರಾಂತಿ ಪ್ರಯತ್ನಗಳ ಮೂಲಕ ಭಾರತ ಆಹಾರ ಭದ್ರತೆ ಸಾಧಿಸಿದೆ. ಆದರೂ ಆಹಾರ ಉತ್ಪಾದನೆಯಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುವ ಅಗತ್ಯತೆ ಇದೆ. ಅದಕ್ಕಾಗಿ ಉತ್ಕೃಷ್ಟ ತಳಿಗಳು, ಹೆಚ್ಚು ಸಾಂದ್ರತಾ ಬೆಳೆ ಪದ್ಧತಿಗಳು ಮತ್ತು ಸ್ಥಿರತೆಯಿಂದ ಯುಕ್ತವಾದ ನವೀನ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಪಾಯ ಕುರಿತು ಕೃಷಿ ವಿಜ್ಞಾನಿಗಳು ಪರಿಣಾಮಕಾರಿಯಾಗಿ ಜಾಗೃತ ಮೂಡಿಸಬೇಕಿದೆ. ಸಮಾಜದ ಆರ್ಥಿಕ ಸ್ಥಿತಿಯ ಅವಿರತ ಬದಲಾವಣೆಗಳ ಕಾರಣದಿಂದ ತಕ್ಷಣದ ಅಡುಗೆ ಮತ್ತು ಸೇವನೆಗೆ ತಯಾರಾದ ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಎಂಎಸ್‌ಎಂಇ ವಲಯ ಸಹಾಯ ಮಾಡಬಹುದು ಎಂದು ತಿಳಿಸಿದರು.
ನೀತಿ ಆಯೋಗದ ಸದಸ್ಯ ಪ್ರೊ.ರಮೇಶ್‌ಚಂದ್ ಮಾನತಾಡಿ, ತೋಟಗಾರಿಕೆ ವೃದ್ಧಿ ದರವು ಕೃಷಿ ವೃದ್ಧಿ ದರಕ್ಕಿಂತ ಶೇ.3ರಷ್ಟು ಹೆಚ್ಚಿದೆ. ತೋಟಗಾರಿಕೆಯಲ್ಲಿ ರೈತರು ತಮ್ಮ ಆದಾಯವನ್ನು ಈಗಾಗಲೇ ದ್ವಿಗುಣಗೊಳಿಸಿದ್ದಾರೆ. ಪೋಷಕಾಂಶ ಒಳಗೊಂಡ ಹೊಸ ತೋಟಗಾರಿಕೆ ತಳಿಗಳ ಅಭಿವೃದ್ಧಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪರಿಷ್ಕರಣೆ ಅಗತ್ಯವಿದೆ ಎಂದರು.
ಮೇಳದಲ್ಲಿ ರೈತ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಐಸಿಎಆರ್ ನಿರ್ದೇಶಕ ಡಾ.ತುಷಾರ್ ಕಾಂತಿ ಬೇಹೇರಾ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್, ಸಂಶೋಧನಾ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ. ನಾಯಕ್, ದೆಹಲಿ ತೋಟಗಾರಿಕೆ ವಿಭಾಗದ ಸಹಾಯಕ ಮಹಾನಿರ್ದೇಶಕ ಡಾ. ವಿ.ಬಿ.ಪಟೇಲ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು ಸೇರಿದಂತೆ ಮತ್ತಿತರರಿದ್ದರು.