ಸಾರಾಂಶ
ಅಧಿಕಾರ ಲಾಲಸೆಯ ನಿರ್ಲಜ್ಜ ಆಟಕ್ಕೆ ನಲುಗಿದ ದೇಶ । ರಬ್ಬರ್ ಸ್ಟಾಪ್ ರಾಷ್ಟ್ರಪತಿ, ಸೃಷ್ಟಿಯಾಗಿದ್ದೇ ಆಗ
-ಎಮರ್ಜೆನ್ಸಿ ಕರಾಳತೆ ತೆರೆದಿಡುವ ಎಲ್.ಕೆ.ಆಡ್ವಾಣಿ ಬರೆದಿರುವ ‘ಎ ಪ್ರಿಸನರ್ಸ್ ಸ್ಕ್ರ್ಯಾಪ್ ಬುಕ್’
ಕಾಂಗ್ರೆಸ್ ಗೋಮುಖವ್ಯಾಘ್ರ ಎನ್ನುವುದು ಜಗಜ್ಜಾಹೀರಾಯಿತು. ಏಕೆಂದರೆ, ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡಿದ್ದ ಇಂದಿರಾ ಗಾಂಧಿ ಸಂವಿಧಾನ, ನ್ಯಾಯಾಂಗ, ಸ್ವತಂತ್ರ ಮಾಧ್ಯಮಗಳನ್ನೆಲ್ಲ ಕಾಲಕಸವೆಂದು ಭಾವಿಸಿ, ಜೂ.25ರ ಮಧ್ಯರಾತ್ರಿ ಎಮರ್ಜೆನ್ಸಿಯನ್ನು ಹೇರಿದರು!
ಆರ್.ಅಶೋಕ, ವಿಧಾನಸಭೆ ಪ್ರತಿಪಕ್ಷದ ನಾಯಕ
‘ಸ್ವಾತಂತ್ರ್ಯವೇ ನನ್ನ ಜೀವನದ ಧ್ಯೇಯ. ಅದು ನನ್ನ ವ್ಯಕ್ತಿತ್ವ, ಮನಸ್ಸು ಮತ್ತು ಚೈತನ್ಯಗಳ ಸ್ವಾತಂತ್ರ್ಯ. ತಿಂಡಿ-ತೀರ್ಥ, ಭದ್ರತೆ, ವೈಯಕ್ತಿಕ ಏಳ್ಗೆ, ಸರ್ಕಾರದ ವೈಭವ ಅಥವಾ ಬೇರಾವುದೇ ಇರಲಿ, ಅವೇನೇ ಸಿಗುತ್ತದೆಂದರೂ ನಾನು ಸ್ವಾತಂತ್ರ್ಯವನ್ನು ಮರೆತು, ರಾಜಿ ಮಾಡಿಕೊಳ್ಳಲಾರೆ’
-ಲೋಕನಾಯಕ ಜಯಪ್ರಕಾಶ ನಾರಾಯಣ
ನೀವೀಗ ರಾಹುಲ್ ಗಾಂಧಿ ಮತ್ತು ಕಂಪನಿ ಎಲ್ಲ ಕಡೆಗಳಲ್ಲೂ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪ್ರಚಾರದ ಗೀಳಿಗೆ ಇಳಿದಿರುವುದನ್ನು ನೋಡಿಯೇ ಇರುತ್ತೀರಿ. ಇದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಆರೆಸ್ಸೆಸ್ ಮತ್ತು ನಾವು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಸಾಂಸ್ಕೃತಿಕ ರಾಷ್ಟ್ರೀಯತೆ ಅಸ್ಮಿತೆಯ ಮೇಲೆ ಇವರೆಲ್ಲ ನಡೆಸುತ್ತಿರುವ ದಾಳಿಯ ಭಾಗ. ಅವರ ಈ ಟೂಲ್-ಕಿಟ್ ನ ಒಂದು ದಾಳವೆಂದರೆ, ಸಂವಿಧಾನ! ಏಕೆಂದರೆ, ಇವರಿಗೆ ಅಂಬೇಡ್ಕರರ ಸಂವಿಧಾನದ ಮೇಲೆ ಗೌರವ ಲವಲೇಶವೂ ಇಲ್ಲ. ನಿಜಕ್ಕೂ ಇದ್ದಿದ್ದರೆ, ರಾಹುಲ್ ಗಾಂಧಿಯ ಅಜ್ಜಿ ಇಂದಿರಾ ಗಾಂಧಿ ಈ ದೇಶದ ಮೇಲೆ ತಮ್ಮ ಅಧಿಕಾರದ ತೀಟೆಗೋಸ್ಕರ 21 ತಿಂಗಳ ಕಾಲ ತುರ್ತುಪರಿಸ್ಥಿತಿ ಹೇರುತ್ತಿರಲಿಲ್ಲ, ರಾಜಕೀಯ ವಿರೋಧಿಗಳನ್ನು ಹಿಂಸಿಸಿ ಜೈಲಿಗೆ ತಳ್ಳುತ್ತಿರಲಿಲ್ಲ, ಸ್ವಾತಂತ್ರ್ಯದ ಪರ ದನಿ ಎತ್ತಿದವರನ್ನು ಕಂಬಿ ಎಣಿಸುವಂತೆ ಮಾಡುತ್ತಿರಲಿಲ್ಲ, ದೇಶವನ್ನು ಅಂಧಕಾರದ ಕೂಪಕ್ಕೆ ದೂಡುತ್ತಿರಲಿಲ್ಲ.
50 ವರ್ಷಗಳ ಹಿಂದೆ (1975ರ ಜೂ.25) ಅಧಿಕಾರದಲ್ಲಿದ್ದಾಗ ಅವಾಂತರ ಸೃಷ್ಟಿಸಿದ ಕಾಂಗ್ರೆಸ್, ಈಗಲೂ ತನ್ನ ಎಡಬಿಡಂಗಿ ಆಟ ಆಡುತ್ತಲೇ ಇದೆ. ಈ ಇತಿಹಾಸವನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ಯಾರೊಬ್ಬರೂ ಮರೆಯಬಾರದು. ಅಷ್ಟೇ ಅಲ್ಲ, ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಆದರೆ, ಆ ಪಕ್ಷಕ್ಕೆ ಮೆತ್ತಿಕೊಂಡಿರುವ ಎಮರ್ಜೆನ್ಸಿಯ ಕಳಂಕವು ಯಾವ ಪರಿಮಳ ದ್ರವ್ಯವನ್ನು ಹಾಕಿದರೂ ಹೋಗುವುದಿಲ್ಲ! ಒಟ್ಟಿನಲ್ಲಿ ವಾಜಪೇಯಿ ಹೇಳಿದಂತೆ, ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಪಾಯಕಾರಿ. ಅಧಿಕಾರದಲ್ಲಿ ಇಲ್ಲದಿದ್ದಾಗ ಇನ್ನೂ ಹೆಚ್ಚು ಅಪಾಯಕಾರಿ’ ಎನ್ನುವುದು ನೂರಕ್ಕೆ ನೂರು ಸತ್ಯ.
ಒಂದೊಂದು ಕಾಲಧರ್ಮವನ್ನು ಒಂದೊಂದು ಗಹನ ತತ್ವ ರೂಪಿಸುತ್ತದೆ. 20ನೇ ಶತಮಾನದಲ್ಲಿ ಹೀಗೆ ಅವತರಿಸಿದ್ದೆಂದರೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ. ಸ್ವತಂತ್ರ ಭಾರತದ ಚರಿತ್ರೆಯಲ್ಲಿ 1975ರ ಜೂನ್ ತಿಂಗಳನ್ನು ಮರೆಯುವಂತೆಯೇ ಇಲ್ಲ. ಮೊದಲಿಗೆ, ಆ ವರ್ಷದ ಜೂ.12ರಂದು ಗುಜರಾತಿನ ಚುನಾವಣಾ ಫಲಿತಾಂಶ ಬಂತಷ್ಟೆ. ಅದರಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತ್ತು! ಅವತ್ತು ಮಧ್ಯಾಹ್ನವೇ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ವಿರುದ್ಧ ತನ್ನ ಐತಿಹಾಸಿಕ ತೀರ್ಪು ನೀಡಿ, ಅವರು ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳನ್ನು ಎಸಗಿರುವುದು ನಿಜ ಎಂದು ಸಾರಿತು. ಪರಿಣಾಮವಾಗಿ, ಇಂದಿರಾ ಗಾಂಧಿ ಆರು ವರ್ಷಗಳ ಕಾಲ ಅವರನ್ನು ಅಧಿಕಾರದಿಂದ ಅನರ್ಹಗೊಳಿಸಿತು. ದೇಶದಲ್ಲಿ ಪ್ರಜಾಸತ್ತೆಯನ್ನು ನಾಶ ಮಾಡಿ, ಪ್ರಜೆಗಳನ್ನು ತನ್ನ ಅಡಿಯಾಳುಗಳನ್ನಾಗಿ ಮಾಡಿಕೊಳ್ಳಲು ಹೊಂಚು ಹಾಕುತ್ತಿದ್ದವರ ಅಸಲಿ ಬಣ್ಣ ಆಗ ಬಯಲಾಯಿತು. ಕಾಂಗ್ರೆಸ್ ಗೋಮುಖವ್ಯಾಘ್ರ ಎನ್ನುವುದು ಜಗಜ್ಜಾಹೀರಾಯಿತು. ಏಕೆಂದರೆ, ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡಿದ್ದ ಇಂದಿರಾ ಗಾಂಧಿ ಸಂವಿಧಾನ, ನ್ಯಾಯಾಂಗ, ಸ್ವತಂತ್ರ ಮಾಧ್ಯಮಗಳನ್ನೆಲ್ಲ ಕಾಲಕಸವೆಂದು ಭಾವಿಸಿ, ಜೂ.25ರ ಮಧ್ಯರಾತ್ರಿ ಎಮರ್ಜೆನ್ಸಿಯನ್ನು ಹೇರಿದರು! ಪರಿಣಾಮವಾಗಿ, ಜಗತ್ತಿನ ಅತಿದೊಡ್ಡ ಪ್ರಜಾಸತ್ತೆಯಾಗಿದ್ದ ಭಾರತವು ಕ್ಷಣಾರ್ಧದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ಸರ್ವಾಧಿಕಾರಿ ದೇಶವಾಗಿ ಬಿಟ್ಟಿತು. ನಮ್ಮ ದೇಶದಲ್ಲಿ `ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿಗಳು’ ಮತ್ತು `ರಬ್ಬರ್ ಸ್ಟ್ಯಾಂಪ್ ನ್ಯಾಯಾಂಗ’ ಸೃಷ್ಟಿಯಾಗಿದ್ದೇ ಆವಾಗ! ಆಶ್ಚರ್ಯವೆಂದರೆ, ಇಂದಿರಾ ಗಾಂಧಿಯ ಈ ಫ್ಯಾಸಿಸ್ಟ್ ಆಟದ ವಿರುದ್ಧ ಕಾಂಗ್ರೆಸ್ಸಿನ ಯಾವೊಬ್ಬ ನಾಯಕನೂ ತುಟಿಕ್-ಪಿಟಿಕ್ ಎನ್ನಲಿಲ್ಲ. ತುರ್ತುಪರಿಸ್ಥಿತಿ ಹೇರಿರುವ ವಿಚಾರವನ್ನು ತಿಳಿಸಲು ಇಂದಿರಾ ಗಾಂಧಿ ಮರುದಿನ ಬೆಳಿಗ್ಗೆ ಆರು ಗಂಟೆಗೇ ಕರೆದಿದ್ದ ಸಂಪುಟ ಸಭೆಯು ಕೇವಲ ಹತ್ತು-ಹದಿನೈದು
ನಿಮಿಷಗಳಲ್ಲಿ ಮುಗಿದಿದ್ದೇ ಇದಕ್ಕೆ ಸಾಕ್ಷಿ.
ವಾಸ್ತವವಾಗಿ, 1972ರಲ್ಲಿ ಬಾಂಗ್ಲಾ ಯುದ್ಧ ಮುಗಿಯಿತಷ್ಟೆ. ಆಗಿನಿಂದಲೂ ಇಂದಿರಾ ಗಾಂಧಿ ‘ಬಾಹ್ಯ ತುರ್ತು ಪರಿಸ್ಥಿತಿ’ಯನ್ನು ಜಾರಿಯಲ್ಲಿಟ್ಟಿದ್ದರು. ಆದರೆ, 1975ರಲ್ಲಿ ಅವರು ಆಂತರಿಕ ಬೆದರಿಕೆಯ ಕಾರಣಗಳನ್ನೊಡ್ಡಿ ಇಂಟರ್ನಲ್ ಎಮರ್ಜೆನ್ಸಿಯನ್ನು ಹೇರಿದರು. ಇದರ ವಿರುದ್ಧ ನಿಜವಾಗಿಯೂ ಹೋರಾಟವನ್ನು ಸಂಘಟಿಸಿದ್ದೆಂದರೆ ಆರೆಸ್ಸೆಸ್ ಮತ್ತು ನಮ್ಮೊಂದಿಗೆ ವಿಚಾರ ಸಹಮತ ಹೊಂದಿದ್ದ ಇನ್ನಿತರ ಕೆಲವರಷ್ಟೆ! ಈಗ ಸಂವಿಧಾನ, ಅಂಬೇಡ್ಕರ್, ಹಕ್ಕುಗಳು ಇತ್ಯಾದಿಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ಸಿನ ಪ್ರಭೃತಿಗಳು (ಇತರ ನಾಯಕರು) ಇದನ್ನು ನೆನಪಿಸಿಕೊಳ್ಳಬೇಕು.
ನನ್ನನ್ನು ಎಳೆದೊಯ್ದ ಪೊಲೀಸರು
ಎಮರ್ಜೆನ್ಸಿಯ ದುಷ್ಪರಿಣಾಮವನ್ನು ಎದುರಿಸಿದವರಲ್ಲಿ ನಾನೂ ಒಬ್ಬ. ಆಗಿನ್ನೂ ಹದಿನೇಳರ ಯುವಕನಾಗಿದ್ದ ನಾನು, ಎಮರ್ಜೆನ್ಸಿಯ ವಿರುದ್ಧವಿದ್ದೆ ಮತ್ತು ಸಂಘದ ಕಾರ್ಯಕರ್ತನಾಗಿದ್ದೆ ಎಂದು ಪೊಲೀಸರು ಯಶವಂತಪುರ ಸರ್ಕಲ್ಲಿನಿಂದ ನನ್ನನ್ನು ಎಳೆದುಕೊಂಡು ಹೋಗಿದ್ದರು. ಆಗ ನಾನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಒಂದು ತಿಂಗಳು ಶಿಕ್ಷೆ ಅನುಭವಿಸಿದೆ. ಅತಿರಥ ಮಹಾರಥರಾದ ವಾಜಪೇಯಿ, ಆಡ್ವಾಣಿ, ಶಾಮಭಾವು, ಮಧು ದಂಡವತೆ ಅವರನ್ನೆಲ್ಲ ನಾನು ನೋಡಿದ್ದು ಅಲ್ಲೇ! ಉಳಿದಂತೆ ರಾಮಕೃಷ್ಣ ಹೆಗಡೆ, ವಿ.ಎಸ್.ಆಚಾರ್ಯ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಸುರೇಶಕುಮಾರ್, ಅನಂತಕುಮಾರ್, ಜೆ.ಎಚ್.ಪಟೇಲ್, ಜಾರ್ಜ್, ಮೈಕೇಲ್ ಮತ್ತು ಲಾರೆನ್ಸ್ ಫರ್ನಾಂಡಿಸ್ ಸಹೋದರರು, ಎಚ್.ಎಸ್.ದೊರೆಸ್ವಾಮಿ ಹೀಗೆ ಲೆಕ್ಕವಿಲ್ಲದಷ್ಟು ಜನರನ್ನು ಇಂದಿರಾ ಸರ್ಕಾರ ಜೈಲಿಗೆ ದೂಡಿತ್ತು. ಸಾಹಿತಿಗಳ ಪೈಕಿ ಎಮರ್ಜೆನ್ಸಿ ವಿರುದ್ಧ ದನಿಯೆತ್ತಿ ಬಂಧಿತರಾಗಿದ್ದವರೆಂದರೆ, ಚಂದ್ರಶೇಖರ ಪಾಟೀಲರು ಒಬ್ಬರೇ! ದೇಶದ ಉಳಿದೆಡೆಗಳಲ್ಲೂ ಬಿಜು ಪಟ್ನಾಯಕ್, ಚಂದ್ರಶೇಖರ್, ದೇವೀಲಾಲ್, ಬಲರಾಜ್ ಮುಧೋಕ್, ಅರುಣ್ ಶೌರಿ, ಅರುಣ್ ಜೇಟ್ಲಿ, ಟಿ.ಕೆ.ಅಬ್ದುಲ್ಲಾ, ಟಿ.ಆರ್.ಬಾಲು, ಪ್ರಕಾಶ್ ಸಿಂಗ್ ಬಾದಲ್, ಲಲಿತ್ ಕಿಶೋರ್ ಚತುರ್ವೇದಿ, ರಮಾದೇವಿ ಚೌಧರಿ, ಪ್ರಮೀಳಾ ದಂಡವತೆ, ರಘುವರ ದಾಸ್, ಮಧುಕರ್ ದೇವರಸ್, ಮೊರಾರ್ಜಿ ದೇಸಾಯಿ, ನಾನಾಜಿ ದೇಶಮುಖ್, ಮೃಣಾಲ್ ಗೋರೆ, ಪ್ರಕಾಶ್ ಜಾವ್ಡೇಕರ್, ಕರುಣಾನಿಧಿ, ಜೆ.ಬಿ.ಕೃಪಲಾನಿ, ಬಂಗಾರು ಲಕ್ಷ್ಮಣ್, ಮಧು ಲಿಮಯೆ, ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ, ಕೆ.ಆರ್.ಮಲ್ಕಾನಿ, ವೆಂಕಯ್ಯ ನಾಯ್ಡು, ಲೋಕನಾಯಕ ಜೇಪಿ, ರಾಜನಾರಾಯಣ್, ವಿಜಯ್ ರೂಪಾಣಿ ಹೀಗೆ ಲೆಕ್ಕವಿಲ್ಲದಷ್ಟು ಜನರನ್ನು ಕಾರಾಗೃಹಗಳಿಗೆ ತಳ್ಳಿತು. ಹೀಗೆ ಇಂದಿರಾ ಗಾಂಧಿ ದುಸ್ಸಾಹಸಕ್ಕೆ ಜೈಲುಪಾಲಾದವರ ಸಂಖ್ಯೆ ಒಂದು ಲಕ್ಷಕ್ಕಿಂತ ಹೆಚ್ಚು! ಇದಕ್ಕೆ ಅವರು ‘ಮೀಸಾ’ ಮತ್ತು ‘ಡಿಐಆರ್’ ಕಾಯ್ದೆ ಎರಡನ್ನೂ ದುರ್ಬಳಕೆ ಮಾಡಿಕೊಂಡರು. ಈಗ ಬಿಜೆಪಿ ಮತ್ತು ಮೋದಿ, ಸಂಘ ಮತ್ತು ರಾಷ್ಟ್ರೀಯತೆ ವಿರುದ್ಧ ಊಳಿಡುತ್ತಿರುವ ‘ಸೋಕಾಲ್ಡ್ ಪ್ರೋಗ್ರೆಸೀವ್ಸ್’ಗಳು ಇತಿಹಾಸದ ಈ ಕರಾಳ ಅಧ್ಯಾಯವನ್ನು ನೆನಪಿಸಿಕೊಳ್ಳಬೇಕು.
ಎಲ್.ಕೆ.ಆಡ್ವಾಣಿ ಬರೆದಿರುವ ‘ಎ ಪ್ರಿಸನರ್ಸ್ ಸ್ಕ್ರ್ಯಾಪ್ ಬುಕ್’, ಎನ್.ಟಂಡನ್ ವಿರಚಿತ ‘ಪಿಎಂ ಡೈರಿ’, ಉಮಾ ವಾಸುದೇವ್ ಅವರ ‘ಟೂ ಫೇಸಸ್ ಆಫ್ ಇಂದಿರಾ ಗಾಂಧಿ’, ಎಂ.ಸಿ.ಚಾಗ್ಲಾ ಅವರ ‘ರೊಸಸ್ ಇನ್ ದಿ ಡಿಸೆಂಬರ್’ ಪುಸ್ತಕಗಳನ್ನು ತಿರುವಿದರೆ, ಎಮರ್ಜೆನ್ಸಿ ಕಾಲದಲ್ಲಿ ಇಂದಿರಾ ಗಾಂಧಿ ಆಡಿದ ಅಮಾನುಷ ಆಟ ಗೊತ್ತಾಗುತ್ತದೆ. ಅವರ ಆ ಬರ್ಬರತೆಗಳಲ್ಲಿ ಆರೆಸ್ಸೆಸ್ಸನ್ನು ನಿಷೇಧಿಸಿದ್ದೂ ಒಂದು. ದುರಂತವೆಂದರೆ, ಗಾಂಧಿ ಜಯಂತಿಯನ್ನು ಆಚರಿಸಿದರೆಂಬ ಕಾರಣಕ್ಕೆ ಆಗ ಮಹಾತ್ಮ ಗಾಂಧೀಜಿಯವವರ ಸಾವಿರಾರು ಅಪ್ಪಟ ಅನುಯಾಯಿಗಳನ್ನು ಬಂಧಿಸಿದ ಕ್ರೌರ್ಯವೂ ಘಟಿಸಿತು.
ಸಂವಿಧಾನದ ನಾಶ
ಎಮರ್ಜೆನ್ಸಿ ಹೇರಿದ ಇಂದಿರಾ ಗಾಂಧಿ ಮಾಡತೊಡಗಿದ ಕೆಲಸವೆಂದರೆ, ಸಂವಿಧಾನದ ನಾಶ! ಇದಕ್ಕಾಗಿ ಅವರು ತಮ್ಮ ಭಟ್ಟಂಗಿಗಳೊಂದಿಗೆ ಸೇರಿಕೊಂಡು ಸಂವಿಧಾನಕ್ಕೆ 38, 39, 40, 41 ಮತ್ತು 42ನೇ ತಿದ್ದುಪಡಿಗಳನ್ನು ಏಕಪಕ್ಷೀಯವಾಗಿ ತಂದರು. ಇವುಗಳಿಂದ ನ್ಯಾಯಾಂಗದ ‘ಬಾಲ’ ಕತ್ತರಿಸಲ್ಪಟ್ಟಿತು! ಮೂಲಭೂತ ಹಕ್ಕುಗಳಿಗೆ ಧಕ್ಕೆಯೊದಗಿತು! ಆಸ್ತಿಪಾಸ್ತಿಗಳ ಮೇಲಿನ ಹಕ್ಕನ್ನೂ ಕಿತ್ತೊಗೆಯುವ ದುರುಳ ಆಲೋಚನೆ ಅವರಿಗಿತ್ತು. ಆದರೆ ಧೀಮಂತರಾಗಿದ್ದ ಕೆ.ಎಂ.ಹೆಗ್ಡೆ, ಮಹಮದಾಲಿ ಕರೀಂ ಚಾಗ್ಲಾ, ನಾನಿ ಪಾಲ್ಖೀವಾಲಾ, ಮಂಡಗದ್ಡೆ ರಾಮಾ ಜೋಯಿಸ್, ನ್ಯಾ.ಎಚ್.ಆರ್.ಖನ್ನಾ ಮುಂತಾದವರ ಧೈರ್ಯ-ಸಾಹಸಗಳು ದೇಶವನ್ನು ಇಂದಿರಾ ಅವರ ದವಡೆಯಿಂದ ಪಾರು ಮಾಡಿದವು.
ಹೆಸರಾಂತ ಪತ್ರಕರ್ತರಾಗಿದ್ದ ಖುಷ್ವಂತ್ ಸಿಂಗ್, ಎಮರ್ಜೆನ್ಸಿಯ ದಿನಗಳಲ್ಲಿ ಇಂದಿರಾ ಗಾಂಧಿ ಮಾಡಿದ್ದು ಸರಿ ಎನ್ನುತ್ತಿದ್ದವರೇ! ಆದರೆ ಅವರೇ ಆಮೇಲೆ, ‘ಸದಾ ಅಭದ್ರತೆಯಿಂದ ಬಳಲುತ್ತಿದ್ದ ಅವರು ದೇಶದ ಸಂಸ್ಥೆಗಳನ್ನೆಲ್ಲ ನಾಶಪಡಿಸಿದರು; ಸಂಸತ್ತಿನಲ್ಲಿ ತಮ್ಮ ಬಾಲಬಡುಕರನ್ನೆಲ್ಲ ತುಂಬಿದರು, ನ್ಯಾಯಮೂರ್ತಿಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡರು. ರಾಷ್ಟ್ರಪತಿಗಳನ್ನು ರಬ್ಬರ್ ಸ್ಟ್ಯಾಂಪ್ ಆಗಿ ಇಟ್ಟುಕೊಂಡರು, ನಾಗರಿಕ ಸೇವೆಗಳನ್ನು ಭ್ರಷ್ಟಗೊಳಿಸಿದರು. ಮೇರೆ ಮೀರಿದ ಸ್ವಜನ ಪಕ್ಷಪಾತ ತೋರಿದರು, ಜನರನ್ನು ಪರಸ್ಪರ ಎತ್ತಿ ಕಟ್ಟಿದರು, ಇದರಿಂದ ದೇಶ ಹಾಳಾಯಿತು’ ಎಂದು ಟೀಕಿಸಿದರು.
ಈಗಲೂ ಕಾಂಗ್ರೆಸ್-ಪೋಷಿತ ‘ಗ್ಯಾಂಗ್’ಗಳು ದೇಶದಲ್ಲಿವೆ. ಇಲ್ಲಿರುವ ದುಷ್ಟಶಕ್ತಿಗಳೇ ಆರೆಸ್ಸೆಸ್-ಬಿಜೆಪಿ-ಮೋದಿ ವಿರುದ್ಧ ‘ಅಘೋಷಿತ ತುರ್ತು ಪರಿಸ್ಥಿತಿ’ಯ ಹುಯಿಲೆಬ್ಬಿಸುತ್ತಿವೆ. ಆದರೆ ಮೋದಿಯವರೂ ಸೇರಿದಂತೆ ನಾವೆಲ್ಲರೂ ತುರ್ತುಪರಿಸ್ಥಿತಿಯ ವಿರುದ್ಧ ನಡೆದ ಚಾರಿತ್ರಿಕ ಹೋರಾಟದ ಸಕ್ರಿಯ ಕಾಲಾಳುಗಳು! ದೇಶದ ಮತ್ತು ದೇಶವಾಸಿಗಳ ಹಕ್ಕು ಮತ್ತು ಘನತೆಗಳಿಗಾಗಿ ದನಿ ಎತ್ತಿದವರ ವಿರುದ್ಧವೇ ತೇಲಿಬಿಡುತ್ತಿರುವ ಕಾಂಗ್ರೆಸ್ಸಿನ ಈ ‘ನರೇಟಿವ್’ ಎಷ್ಟು ಆಷಾಢಭೂತಿತನದ್ದೆಂದು ದೇಶದ ಪ್ರಜೆಗಳಿಗೆ ಗೊತ್ತಿದೆ. ಭಾರತ ತನ್ನ ಅಂತಃಸತ್ವದಿಂದ ಮತ್ತು ಮೋದಿಯವರ ಪ್ರಬಲ ನಾಯಕತ್ವದಿಂದ ಪ್ರಜ್ವಲಿಸುತ್ತಿದೆ. ಆದರೆ, ಕಾಂಗ್ರೆಸ್ ಹೇರಿದ ಎಮರ್ಜೆನ್ಸಿ ಎಚ್ಚರಿಕೆಯ ಗಂಟೆಯಾಗಿ ಉಳಿಯಲಿದೆ. ತನ್ನ ಈ ‘ಹಿಮಾಲಯನ್ ಬ್ಲಂಡರ್’ಗಾಗಿ ಆ ಪಕ್ಷಕ್ಕೆ ನಾಚಿಕೆಯಾಗಬೇಕು!