ಸಾರಾಂಶ
ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರು ₹23.24 ಕೋಟಿ ಮೌಲ್ಯದ ಒಟ್ಟು 9 ಎಕರೆ 19 ಗುಂಟೆ ಸರ್ಕಾರಿ ಜಮೀನನ್ನು ನಗರ ಜಿಲ್ಲಾಡಳಿತ ತೆರವುಗೊಳಿಸಿ ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲೂಕು, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಆನೇಕಲ್, ಯಲಹಂಕ, ತಾಲೂಕುಗಳಲ್ಲಿ ಒತ್ತುವರಿಯಾಗಿದ್ದ ಗೋಮಾಳ, ಗುಂಡುತೋಪು, ಸ್ಮಶಾನ, ಕಾಲುವೆ ಮತ್ತು ಸರ್ಕಾರಿ ಖರಾಬು ಜಾಗಗಳಿಗೆ ಪೊಲೀಸ್ ಭದ್ರತೆಯಲ್ಲಿ ತಹಸೀಲ್ದಾರ್‌ಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ದಕ್ಷಿಣ ತಾಲೂಕಿನ ವಿಟ್ಟಸಂದ್ರದಲ್ಲಿ ₹5 ಕೋಟಿ ಮೌಲ್ಯದ ಗೋಮಾಳ, ಸೋಮನಹಳ್ಳಿಯಲ್ಲಿ ₹1.5 ಕೋಟಿ ಮೌಲ್ಯದ ಗೋಮಾಳ ಒತ್ತುವರಿ ತೆರವುಗೊಳಿಸಲಾಯಿತು. ನೆರಳೂರಿನಲ್ಲಿ ₹1.49 ಕೋಟಿ ಮೌಲ್ಯದ ರಾಜಕಾಲುವೆ, ಆನೇಕಲ್ ತಾಲೂಕಿನ ಯಾರಂಡಹಳ್ಳಿಯಲ್ಲಿ ₹20 ಲಕ್ಷ ಮೌಲ್ಯದ ಕೆರೆ ಒತ್ತುವರಿ, ಬನ್ನೇರುಘಟ್ಟ ಗ್ರಾಮದಲ್ಲಿ ₹60 ಲಕ್ಷ ಮೌಲ್ಯದ ಗುಂಡುತೋಪು, ಸಮಂದೂರು ಗ್ರಾಮದಲ್ಲಿ ₹20 ಲಕ್ಷ ಮೌಲ್ಯದ ಗುಂಡುತೋಪು, ಚಿಕ್ಕಹೆಗಡೆ ಗ್ರಾಮದಲ್ಲಿ ₹19 ಲಕ್ಷ ಮೌಲ್ಯದ ಸ್ಮಶಾನ ಒತ್ತುವರಿಯನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ.
ಯಲಹಂಕ ತಾಲೂಕಿನ ತಿಂಡ್ಲುವಿನಲ್ಲಿ ₹40 ಲಕ್ಷ ಮೌಲ್ಯದ ಸರ್ಕಾರಿ ಜಮೀನು, ಚಿಕ್ಕಬೆಟ್ಟಹಳ್ಳಿಯಲ್ಲಿ ₹85 ಲಕ್ಷ ಮೌಲ್ಯದ ಖರಾಬು ಜಮೀನು, ಉತ್ತರ ತಾಲೂಕಿನ ಕಡಬಗೆರೆಯಲ್ಲಿ ₹3 ಕೋಟಿ ಮೌಲ್ಯದ 1 ಎಕರೆ ಸರ್ಕಾರಿ ಜಾಗ, ಹುಲ್ಲೇಗೌಡನಹಳ್ಳಿಯಲ್ಲಿ ₹4 ಕೋಟಿ ಮೌಲ್ಯದ ಗುಂಡುತೋಪನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ದೇವರಬೀಸನಹಳ್ಳಿಯಲ್ಲಿ ₹6 ಕೋಟಿ ಮೌಲ್ಯದ ಗುಂಡುತೋಪು, ಪೂರ್ವ ತಾಲೂಕಿನ ಹಂಚರಹಳ್ಳಿಯಲ್ಲಿ ₹1 ಕೋಟಿ ಮೌಲ್ಯದ ಗೋಮಾಳವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.