ಸಾರಾಂಶ
ಮಗಳ ರುಬೆಲಾ ನಿಯಂತ್ರಿಸಿದ ಸರಿಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು! ಸಿರಿಧಾನ್ಯದ ಗುಟ್ಟು - ಮಗಳ ಕಾಯಿಲೆ ಗುಣಪಡಿಸಲು ಸಿದ್ಧಪಡಿಸಿದ ಸರಿಹಿಟ್ಟಿನಿಂದ ಈಗ ನೂರಾರು ಜನರಿಗೆ ಲಾಭ । ಶುಗರ್, ಬಿಪಿ, ಥೈರಾಯ್ಡ್ ಸೇರಿ ಹಲವು ಸಮಸ್ಯೆಗಳಿಗೆ ರಾಮಬಾಣ ‘ತೃಪ್ತಿ ಸಿರಿಧಾನ್ಯ ಸರಿ
ಇವರ ಮಗಳಿಗೆ ಹುಟ್ಟುವಾಗಲೇ ರೋಗ ನಿರೋಧಕ ಶಕ್ತಿ ಕುಂದಿಸುವ ರುಬೆಲಾ ಎಂಬ ಅಪರೂಪದ ಕಾಯಿಲೆ. ದೃಷ್ಟಿದೋಷದಿಂದ ಹಿಡಿದು ಅನೇಕ ಆರೋಗ್ಯದ ಏರುಪೇರುಗಳಿಗೆ ಇಂತಹ ಮಕ್ಕಳು ತುತ್ತಾಗುತ್ತಾರೆ. 2005ರಲ್ಲಿ ಜನಿಸಿದ ಈ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಾಯಿ ನಾನಾ ಪ್ರಯೋಗ, ಸಂಶೋಧನೆ ಮಾಡುತ್ತಾರೆ. ಹಿರಿಯರು, ಅಜ್ಜಿಯರು ಹೇಳಿಕೊಟ್ಟ ಸೂತ್ರಗಳನ್ನೆಲ್ಲಾ ಪ್ರಯೋಗಿಸಿ ತಮ್ಮದೇ ಒಂದು ಸೂತ್ರ -ಪಾಕ ಸಿದ್ಧಪಡಿಸುತ್ತಾರೆ ಚಿಕ್ಕಮಗಳೂರಿನ ಬೆಳವಡಿಯ ಲತಾ.
ಲತಾ ಅವರು ಸಿದ್ಧಪಡಿಸಿದ ಸಿರಿಧಾನ್ಯ ಪ್ರಧಾನವಾಗಿರುವ 42 ಧಾನ್ಯಗಳ ಮಿಶ್ರಣದ ಸರಿ ಹಿಟ್ಟು ಸೇವಿಸುವ ಆ ಮಗು ಬೆಳೆಯುತ್ತಾ ಬೆಳೆಯತ್ತಾ ರುಬೆಲಾ ಲಕ್ಷಣಗಳನ್ನು ಕಳೆದುಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಾಳೆ. ಅದೇ ಸಮಸ್ಯೆಯಿಂದ ಬಳಲುವ ಇತರ ಮಕ್ಕಳಿಗಿಂತ ಆರೋಗ್ಯವಾಗಿ ಬೆಳೆಯುವ ಆ ಮಗುವಿನ ಶಕ್ತಿಯೇ ಈ ಸರಿ ಹಿಟ್ಟು ಎಂದು ಅಮ್ಮನಾದ ಲತಾ ನಂಬುತ್ತಾರೆ. ಅಪ್ಪ ರವೀಂದ್ರ ಬೆಳವಡಿ ಪತ್ನಿಯ ಮಾತನ್ನು ನೇರವಾಗಿ ನಂಬದೇ ಅನೇಕ ಕಡೆ ಪರೀಕ್ಷೆಗೆ ಒಳಪಡಿಸುತ್ತಾರೆ.
ತಮ್ಮೂರಿಗೆ ಬಂದಿದ್ದ ಮೂಡಿಗೆರೆ ತೋಟಗಾರಿಕೆ ಕಾಲೇಜು ತಂಡವು ಈ ಸರಿಹಿಟ್ಟು ತಯಾರಿಕೆ ನೋಡಿ ಪರೀಕ್ಷೆಗೆ, ಸಂಶೋಧನೆಗೆ ಸಹಕಾರ ನೀಡುತ್ತಾರೆ. ಅಲ್ಲಿನ ವಿಜ್ಞಾನಿ ಭರತ್ ಅವರು ಇದಕ್ಕೆ ಸೂಕ್ತ ಮಾರ್ಗದರ್ಶನ ಮಾಡುತ್ತಾರೆ. ಈ ಸರಿಹಿಟ್ಟು ಕೇವಲ ರುಬೆಲಾಗಲ್ಲ ಅನೇಕ ಆರೋಗ್ಯ ನ್ಯೂನ್ಯತೆ ಸರಿಪಡಿಸುತ್ತದೆ ಎನ್ನುವ ನಂಬಿಕೆ ಬಂದ ಮೇಲೆ ಲತಾ ಮತ್ತು ರವೀಂದ್ರ ದಂಪತಿ ಅನೇಕ ಸಂಬಂಧಿಕರಿಗೆ, ಸ್ನೇಹಿತರಿಗೆ ಈ ಸರಿಹಿಟ್ಟು ಹಂಚಿ ಅವರ ಪ್ರತಿಕ್ರಿಯೆ ಪಡೆಯುತ್ತಾರೆ. ಜನರ ಆರೋಗ್ಯ ಹೆಚ್ಚಿಸಲು ಇದಕ್ಕೆ ಉದ್ಯಮ ರೂಪ ನೀಡಲು ತೀರ್ಮಾನಿಸುತ್ತಾರೆ. ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮೂಲಕ ಪಿಎಂಎಫ್ಎಂಇ ಯೋಜನೆಯಿಂದ 30 ಲಕ್ಷ ರೂ. ಸಾಲ ಪಡೆದು ಈ ಸರಿಹಿಟ್ಟು ಉತ್ಪಾದನೆ ಮತ್ತು ವಿತರಣೆಗೆ ವೃತ್ತಿಪರತೆಯ ಸ್ಪರ್ಶ ನೀಡಿದ್ದಾರೆ. ಏಳೆಂಟು ವರ್ಷಗಳ ಸಂಶೋಧನೆ, ಪ್ರಯೋಗದಿಂದ ಸಿದ್ಧವಾದ ಈ ಸರಿಹಿಟ್ಟನ್ನು ಕಳೆದ ಮಾರ್ಚ್‌ನಲ್ಲಿ ಅಧಿಕೃತವಾಗಿ ‘ತೃಪ್ತಿ ಸಿರಿಧಾನ್ಯ ಸರಿ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.
ಚಿಕ್ಕಮಗಳೂರಿನ ಶುಭ್ ಸೂಪರ್ ಮಾರ್ಕೆಟ್, ಪತಂಜಲಿ ಅಂಗಡಿ, ಕಾಮಧೇನು ಸೇರಿದಂತೆ ಹಲವು ಅಂಗಡಿಗಳಲ್ಲಿ ಈ ತೃಪ್ತಿ ಸರಿಹಿಟ್ಟು ಬೇಡಿಕೆ ಸೃಷ್ಟಿಸಿಕೊಂಡಿದೆ. ಹಳ್ಳಿ ಹಳ್ಳಿಗಳಲ್ಲಿ ಈ ಕುರಿತ ಜಾಗೃತಿ ಮೂಡಿಸುತ್ತಾ ಇದರ ಮಾರುಕಟ್ಟೆ ವಿಸ್ತರಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ ಲತಾ ಮತ್ತು ರವೀಂದ್ರ ದಂಪತಿ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವೀಂದ್ರ ಬೆಳವಡಿ ಅವರು ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯರೂ ಆಗಿದ್ದಾರೆ. ಅರಿವಿನ ಮೂಲಕ ಇದರ ಮಾರುಕಟ್ಟೆ ವಿಸ್ತರಿಸುವುದು ನಮ್ಮ ಉದ್ದೇಶ. ಬೇರೆ ಉತ್ಪನ್ನಗಳಂತೆ ಅಡ್ವರ್ಟೈಸ್ ಮಾಡಿ ಇದನ್ನು ಮಾರುವುದು ನಮ್ಮ ಉದ್ದೇಶವಲ್ಲ. ಗ್ರಾಮೀಣ ಮಹಿಳೆಯರಿಗೆ ಜಾಗೃತಿಯ ಜೊತೆಗೆ ಇದನ್ನು ಮನೆ ಮನೆಗೆ ತಲುಪಿಸುವ ಪ್ರಯತ್ನದಲ್ಲಿದ್ದೇವೆ ಎಂದು ‘ಕನ್ನಡಪ್ರಭ’ಕ್ಕೆ ವಿವರಿಸಿದರು ರವೀಂದ್ರ ಬೆಳವಡಿ. ಡಯಾಬಿಟೀಸ್, ಬಿಪಿ, ಚರ್ಮ ಕಾಯಿಲೆ, ಥೈರಾಯ್ಡ್, ಮಲಬದ್ಧತೆ ಸಮಸ್ಯೆಗಳು ಇದರ ಸೇವನೆಯಿಂದ ನಿಯಂತ್ರಣಕ್ಕೆ ಬಂದಿದೆ ಎಂಬುದು ಹಲವರ ಅನುಭವವಾಗಿದೆ. ಸ್ವತಃ ತಮ್ಮ ಪತಿಯ ಡಯಾಬಿಟೀಸ್ ಕೂಡ ಇದರ ಸೇವನೆಯಿಂದ ನಿಯಂತ್ರಣವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಂತು ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. 1 ರಿಂದ 4 ವರ್ಷದೊಳಗಿನ ಮಕ್ಕಳಿಗಾಗಿ ಜೂನಿಯರ್ ಸರಿ ಎಂಬ ಪ್ರತ್ಯೇಕ ಉತ್ಪನ್ನ ಸಿದ್ಧಪಡಿಸಿದ್ದೇವೆ. ಅಮೆರಿಕದಲ್ಲಿ ಸೈನಿಕರಿಗೆ ನೀಡುವ ಕಿನವಾ, ಕನ್ನಡದಲ್ಲಿ ಅದನ್ನ ವರದಕ್ಕಿ ಎಂದೂ ಕರೆಯುತ್ತಾರೆ. ವರದಕ್ಕಿ ಮತ್ತು ರಾಜಗಿರಿ (ದಂಟಿನ ಸೊಪ್ಪಿನ ಬೀಜ) ಧಾನ್ಯ ಸೇರಿಸಿ ತಯಾರಿಸಿದ ಸರಿಯಿಂದ ಇನ್ನೂ ಹೆಚ್ಚಿನ ಅನುಕೂಲದ ಅನುಭವವಾಗಿದೆ. ಗೋಧಿ, ಮೈದಾ ಬದಲಿಗೂ ಇದನ್ನು ಬಳಸಬಹುದು ಎಂದು ಲತಾ ತಿಳಿಸಿದರು.
ತಿಂಗಳಿಗೆ 400 ರಿಂದ 500 ಕೆ.ಜಿ. ಸಿರಿಧಾನ್ಯ ಸರಿ ಸಿದ್ಧವಾಗಿ ಜನರಿಗೆ ತಲುಪುತ್ತಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿನ ಅಂಗಡಿಯಲ್ಲೂ ನಮ್ಮ ಉತ್ಪನ್ನ ದೊರೆಯುತ್ತದೆ. ಬೆಂಗಳೂರಿಗೆ ಡಿಸ್ಟ್ಟ್ರಿಬ್ಯೂಷನ್ ನೀಡುವ ಉದ್ದೇಶವಿದೆ. ಸಿರಿಧಾನ್ಯದ ಬಿಸ್ಕೇಟ್, ಪೇಡ ತಯಾರಿಸುವ ಪ್ರಯೋಗ ನಡೆಸಿದ್ದೇವೆ. ಹೋಮ್ ಮೇಡ್ ಸೋಪ್ ಕೂಡ ತೃಪ್ತಿ ಹೆಸರಿನಲ್ಲಿ ಸಿದ್ಧಪಡಿಸುತ್ತಿದ್ದೇವೆ. ಬಾಯಿಂದ ಬಾಯಿಗೆ ಪ್ರಚಾರ ನಡೆದೇ ನಮ್ಮ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಬೇಕು ಎನ್ನುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಲಾಭವನ್ನು ಪಡೆಯುವ ಯೋಚನೆ ಇದೆ. ನಿನಾಸಂ ಪ್ರಶಾಂತ್ ಅವರಿಂದ ಜಾಗೃತಿ ವಿಡಿಯೋ ಮಾಡಿಸುವ ಕುರಿತು ಚರ್ಚೆ ನಡೆದಿದೆ ಎಂದರು ರವೀಂದ್ರ ಬೆಳವಡಿ. ತೃಪ್ತಿ ಸಿರಿಧಾನ್ಯ ಉತ್ಪನ್ನಗಳಿಗೆ ಸಂಪರ್ಕಿಸಿ -9731441279 ಅಥವಾ 9449665587
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.