ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ವಿದ್ಯುಕ್ತ ತೆರೆ : ಆರು ಕೋಟಿಗೂ ಮಿಕ್ಕು ವಹಿವಾಟು

| Published : Nov 18 2024, 01:15 AM IST / Updated: Nov 18 2024, 06:53 AM IST

ಸಾರಾಂಶ

ಲಕ್ಷಾಂತರ ಜನರ ಭೇಟಿ, ಆರು ಕೋಟಿ ರುಪಾಯಿಗೂ ಮಿಕ್ಕು ವಹಿವಾಟು, ಕೃಷಿಗೆ ಸಂಬಂಧಪಟ್ಟ ಹೊಸ ತಳಿಗಳ ಬಿಡುಗಡೆಯೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಲಕ್ಷಾಂತರ ಜನರ ಭೇಟಿ, ಆರು ಕೋಟಿ ರುಪಾಯಿಗೂ ಮಿಕ್ಕು ವಹಿವಾಟು, ಕೃಷಿಗೆ ಸಂಬಂಧಪಟ್ಟ ಹೊಸ ತಳಿಗಳ ಬಿಡುಗಡೆಯೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ಭಾನುವಾರ ವಿದ್ಯುಕ್ತ ತೆರೆ ಬಿತ್ತು.

‘ಹವಾಮಾನ ಚತುರ ಡಿಜಿಟಲ್‌ ಕೃಷಿ’ ಘೋಷವಾಕ್ಯದಡಿ ಹಮ್ಮಿಕೊಂಡಿದ್ದ ಮೇಳಕ್ಕೆ ರೈತರು, ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಘಗಳ ಸದಸ್ಯರು, ಸ್ತ್ರೀ ಶಕ್ತಿ ಸಂಘಗಳು, ಸಾರ್ವಜನಿಕರು ಸೇರಿದಂತೆ ಲಕ್ಷಾಂತರ ಜನರು ಭೇಟಿದರು.

ಕೃಷಿ ಮತ್ತು ತೋಟಗಾರಿಕೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಸೇರಿದಂತೆ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಾಮರಾಜನಗರ, ಮೈಸೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸಾಧಕ ರೈತರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸೂರ್ಯಕಾಂತಿ, ಅಲಸಂದೆ, ಮುಸುಕಿನ ಜೋಳ, ಮೇವಿನ ಹೊಸ ತಳಿಗಳನ್ನು ವಿವಿ ಲೋಕಾರ್ಪಣೆ ಮಾಡಿತು. ತಾಕುಗಳಲ್ಲಿ ಪ್ರಾತ್ಯಕ್ಷಿಗೂ ಅವಕಾಶ ಕಲ್ಪಿಸಿತ್ತು. ಸೂರ್ಯಕಾಂತಿ ಪ್ರಾತ್ಯಕ್ಷಿಕೆಯಂತೂ ‘ಸೆಲ್ಫಿ’ ಪ್ರಿಯರ ಮೆಚ್ಚಿನ ತಾಣವಾಗಿತ್ತು. 19 ನೂತನ ತಾಂತ್ರಿಕತೆಗಳನ್ನೂ ಬಿಡುಗಡೆಗೊಳಿಸಲಾಯಿತು.

ತಾಂತ್ರಿಕತೆಯ ಅನಾವರಣ:

ಸಮಗ್ರ ಮತ್ತು ಖುಷ್ಕಿ ಬೇಸಾಯ, ಹನಿ ಮತ್ತು ತುಂತುರು ನೀರಾವರಿ, ಮಳೆ ಹಾಗೂ ಚಾವಣಿ ನೀರಿನ ಕೊಯ್ಲು, ಜೈವಿಕ ಮತ್ತು ನವೀಕರಿಸಬಹುದಾದ ಇಂಧನ, ಮಣ್ಣುರಹಿತ ಕೃಷಿ, ಸಿರಿಧಾನ್ಯಗಳ ಮಹತ್ವ, ಸಮಗ್ರ ಪೋಷಕಾಂಶಗಳು ಹಾಗೂ ಪೀಡೆ ನಿರ್ವಹಣೆ, ಔಷಧೀಯ ಮತ್ತು ಸುಗಂಧ ದ್ರವ್ಯಗಳು ಸೇರಿದಂತೆ ಕೃಷಿಯಲ್ಲಿ ಯಾವ ರೀತಿ ತಾಂತ್ರಿಕತೆ ಅನುಸರಿಸಬೇಕು ಎಂಬುದನ್ನು ಮೇಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಸಿರಿಧಾನ್ಯಗಳ ಬೋಟಿ, ಬಿಸ್ಕೆಟ್‌, ಚಾಕೋಲೆಟ್‌, ಸಾವಯವ ಬೆಲ್ಲ, ರೇಷ್ಮೆ ಮತ್ತು ಬಾಳೆದಿಂಡಿನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಶುದ್ಧ ಜೇನು, ತುಪ್ಪದ ವಸ್ತುಗಳು, ನರ್ಸರಿಯಲ್ಲಿನ ಮಾವು, ಹಲಸು, ಸಪೋಟಾ ಸೇರಿದಂತೆ ಹಣ್ಣಿನ ಸಸಿಗಳು, ಸೊಪ್ಪು ಮತ್ತು ತರಕಾರಿಯ ಬೀಜಗಳು, ಮಕ್ಕಳ ಆಟಿಕೆಗಳು, ತೆಂಗಿನ ಕಾಯಿ ಸುಲಿಯುವ ಯಂತ್ರ, ಕುಡುಗೋಲು ಮತ್ತಿತರ ಕೃಷಿ ಸಲಕರಣೆಗಳು ಹೆಚ್ಚಾಗಿ ಮಾರಾಟವಾಗಿದ್ದ ಕಂಡುಬಂತು.

ಗಮನಸೆಳೆದ ಜಾಫ್ರಾಬಾದಿ, ಹಳ್ಳಿಕಾರ್‌:

 ₹2.65 ಲಕ್ಷ ಮೌಲ್ಯದ ಗುಜರಾತ್‌ನ ಪೋರಬಂದರ್‌ನ ದೈತ್ಯ ‘ಜಾಫ್ರಾಬಾದಿ’ ತಳಿಯ ಎಮ್ಮೆ, ಹಳ್ಳಿಕಾರ್‌ ಎತ್ತುಗಳು, ಪುಂಗನೂರು, ಮಲ್ನಾಡ್‌ ಗಿಡ್ಡ, ಹರಿಯಾಣ, ರಾಠಿ ಮತ್ತಿತರ ಹಸುಗಳ ತಳಿಗಳು, ಬೆಂಗಳೂರಿನ ಉದ್ದ ಕಿವಿಯ ಮೇಕೆ, ಗಿರಿರಾಜ, ಸ್ವರ್ಣಧಾರ ಮತ್ತಿತರ ಕೋಳಿಯ ತಳಿಗಳು, ಗೋಲ್ಡ್‌ಫಿಶ್‌, ಗೆಂಡೆ, ಜೈಂಟ್‌ ವೈರಲ್‌ ಮತ್ತಿತರ ತಳಿಗಳ ಮತ್ಸ್ಯಲೋಕ ಪ್ರಮುಖ ಆಕರ್ಷಣೆಯಾಗಿತ್ತು.

ವಿದ್ಯಾರ್ಥಿಗಳ ಸೇವಾ ಕಾರ್ಯ: 

ವಿವಿಯ ವಿದ್ಯಾರ್ಥಿಗಳು ಭೋಜನಾಲಯ, ಸಂಚಾರ ನಿರ್ವಹಣೆ, ಪಾರ್ಕಿಂಗ್‌, ಪ್ರವೇಶ ದ್ವಾರಗಳಿಂದ ಆಗಮಿಸುವ ವಾಹನಗಳ ಅಂಕಿ-ಅಂಶ ಸಂಗ್ರಹದಿಂದ ಹಿಡಿದು ನಿಗದಿಪಡಿಸಿದ್ದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಅಚ್ಚುಕಟ್ಟಾದ ಊಟದ ವ್ಯವಸ್ಥೆ: 

ಪ್ರತಿ ದಿನವೂ ರುಚಿಕರವಾದ ಮುದ್ದೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿತ್ತು. ನಾಲ್ಕು ದಿನಗಳ ಅವಧಿಯಲ್ಲಿ 53,111 ಮಂದಿ ಸೇವಿಸಿದ್ದಾರೆ ಎಂದು ವಿವಿ ತಿಳಿಸಿದೆ.

ಸುಗಮ ಸಂಚಾರಕ್ಕೆ ವ್ಯವಸ್ಥೆ: 

ಲಕ್ಷಾಂತರ ಜನರು ಭೇಟಿ ನೀಡಿದ್ದರ ನಡುವೆಯೂ ಜಿಕೆವಿಕೆ ಕ್ಯಾಂಪಸ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕೆಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಜಿಕೆವಿಕೆ ಪ್ರವೇಶ ದ್ವಾರದಿಂದ ಕೃಷಿ ಮೇಳದ ಮೈದಾನಕ್ಕೆ ಉಚಿತ ಸಾರಿಗೆ ಬಸ್‌ ವ್ಯವಸ್ಥೆ ಮಾಡಿದ್ದು ಸಾವಿರಾರು ಜನರು ಇದರ ಪ್ರಯೋಜನ ಪಡೆದರು.

₹6.17 ಕೋಟಿ ವಹಿವಾಟು: ನಾಲ್ಕು ದಿನದ ಕೃಷಿ ಮೇಳದಲ್ಲಿ ಮಳಿಗೆಗಳು ಸೇರಿದಂತೆ ಒಟ್ಟಾರೆ ₹6.17 ಕೋಟಿ ವಹಿವಾಟು ನಡೆದಿದೆ. ಮೊದಲನೇ ದಿನ ₹85 ಲಕ್ಷ, ಎರಡನೇ ದಿನ ₹1.25 ಕೋಟಿ, ಮೂರನೇ ದಿನ ₹1.75 ಕೋಟಿ, ನಾಲ್ಕನೇ ದಿನ ₹2.32 ಕೋಟಿ ಸೇರಿದಂತೆ ಒಟ್ಟಾರೆ ₹6.17 ಕೋಟಿ ವಹಿವಾಟು ನಡೆದಿದೆ ಎಂದು ವಿವಿ ಮೂಲಗಳು ತಿಳಿಸಿವೆ.

‘ಕೃಷಿ ಮೇಳ’ದ ಕೊನೆಯ ದಿನವಾದ ಭಾನುವಾರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು.