ಸಾರಾಂಶ
ಆಮದು ಸ್ತ್ರೀವಾದ ಕೇವಲ ರಾಜಕೀಯ ಪಿತೂರಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾಶ ಮಾಡಲು ಮೂಲಭೂತವಾದಿಗಳು ಕೈ ಚಾಚಿದಾಗ, ನಾವು ಹೆಮ್ಮೆಯಿಂದ ಹೇಳೋಣ. ನಾವು ಶಕ್ತಿಯ ಮಕ್ಕಳು, ಧರ್ಮದ ವಾರಸುದಾರರು. ಭಾರತಮಾತೆ ಯಾವಾಗಲೂ ಮಕ್ಕಳನ್ನು ಕಾಪಾಡಿದ್ದಾಳೆ. ಈಗ ಮಕ್ಕಳು ಭಾರತಮಾತೆ ರಕ್ಷಿಸಲು ಏಳಬೇಕು
ಆಮದು ಸ್ತ್ರೀವಾದ ಕೇವಲ ರಾಜಕೀಯ ಪಿತೂರಿ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾಶ ಮಾಡಲು ಮೂಲಭೂತವಾದಿಗಳು ಕೈ ಚಾಚಿದಾಗ, ನಾವು ಹೆಮ್ಮೆಯಿಂದ ಹೇಳೋಣ. ನಾವು ಶಕ್ತಿಯ ಮಕ್ಕಳು, ಧರ್ಮದ ವಾರಸುದಾರರು. ಭಾರತಮಾತೆ ಯಾವಾಗಲೂ ಮಕ್ಕಳನ್ನು ಕಾಪಾಡಿದ್ದಾಳೆ. ಈಗ ಮಕ್ಕಳು ಭಾರತಮಾತೆ ರಕ್ಷಿಸಲು ಏಳಬೇಕು.
-ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು,
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ. ನಮ್ಮ ಭಾರತೀಯ ನಾಗರಿಕತೆ ಅಪ್ರತಿಮ- ಅದು ಮಾನವೀಯ ಮೌಲ್ಯಗಳ ಅನಂತ ಗಣಿ. ಲಿಂಗ, ವರ್ಣ, ವರ್ಗಗಳ ಸಂಘರ್ಷಕ್ಕಿಂತಲೂ, ಸಾಮರಸ್ಯವನ್ನು ಪೋಣಿಸಿದ ಗುಣ ಮಣಿ. ಸ್ತ್ರೀ ತತ್ತ್ವವನ್ನು ದೇವರ ರೂಪವಾಗಿ ಕಂಡು, ಅದನ್ನೇ ಸೃಷ್ಟಿಯ ಮೂಲವಾಗಿ ಆರಾಧಿಸಿದ ಏಕೈಕ ಸಂಸ್ಕೃತಿ ನಮ್ಮದು. ನಮ್ಮಲ್ಲಿ ಸ್ತ್ರೀಯರನ್ನು ಕೇವಲ ಗೌರವಿಸುವುದಲ್ಲ, ಶಕ್ತಿಯಾಗಿ ಪೂಜಿಸುತ್ತೇವೆ- ದುರ್ಗೆ, ಲಕ್ಷ್ಮಿ, ಸರಸ್ವತಿ, ಕಾಮಾಕ್ಷಿ, ಮೀನಾಕ್ಷಿ, ಕನ್ಯಾಕುಮಾರಿ ರೂಪಗಳಲ್ಲಿ ಭಜಿಸುತ್ತೇವೆ. ಅಕ್ಕಮಹಾದೇವಿ, ಲಲ್ಲೇಶ್ವರಿ, ಮುಕ್ತಾಯಿ, ಮೀರಾಬಾಯಿ, ಆನಂದಮಯಿ ಮಾ, ಶಾರದಾ ಮಾತೆ, ಸಜ್ಜಲಗುಡ್ಡ ಶರಣಮ್ಮ ತಾಯಿಗಳನ್ನು ದೇವತೆಗಳಂತೆ ಆರಾಧಿಸುತ್ತೇವೆ. ನಮ್ಮ ಬದುಕಿಗೆ ಆಧಾರವಾದ ಗಂಗೆಯಿಂದ ಗೋದಾವರಿವರೆಗೆ ಪ್ರತಿಯೊಂದು ನದಿಯೂ ನಮ್ಮಲ್ಲಿ ದೇವಿಯಾಗಿ ಪೂಜಿತಳಾಗಿದ್ದಾಳೆ. ‘ಮಾತೃಭೂಮಿ’, ‘ಗೋಮಾತೆ’, ‘ಭಾರತಮಾತೆ’- ಈ ಶಬ್ದಪ್ರಯೋಗಗಳೇ ನಮ್ಮ ಸಂಸ್ಕೃತಿಯ ಜೀವಂತ ಸಾಕ್ಷಿಗಳು.
ಗೌರವಾದರಗಳನ್ನು ನಮಗ್ಯಾರೂ ಕಲಿಸಿಕೊಡಬೇಕಿಲ್ಲ:
ಸ್ತ್ರೀವಾದ (Feminism) ಎಂಬುದು ನಮಗೆ ಆಮದು. ಆದರೆ ಈ ಆಮದು ತತ್ವವನ್ನು, ಮೂಲಭೂತವಾದಿಗಳು ನಮ್ಮ ಭಾರತೀಯ ಸಾಂಸ್ಕೃತಿಕ ಮಂದಿರಗಳ ಮೇಲೆ ಶಸ್ತ್ರವಾಗಿ ಬಳಸುತ್ತಿದ್ದಾರೆ. ಇದರ ಗುರಿ ಸ್ತ್ರೀಸಮೂಹದ ಒಳಿತಲ್ಲ, ಧರ್ಮಭಂಜನೆ. ಮೂಲಭೂತವಾದಿಗಳ ಕಾರ್ಯತಂತ್ರ ಸರಳ- ಮೊದಲು ನೈತಿಕತೆಯನ್ನು ಕುಗ್ಗಿಸುವುದು, ನಂತರ ಸಮಾಜವನ್ನು ವಿಭಜಿಸುವುದು, ಕೊನೆಗೆ ಮೂಲವನ್ನೇ ನಾಶ ಮಾಡುವುದು. ಇತಿಹಾಸವೇ ಸಾಕ್ಷಿ: ಮೊದಲು ಜನರಲ್ಲಿ ತಮ್ಮ ಪರಂಪರೆ, ಸಂಪ್ರದಾಯಗಳ ಬಗ್ಗೆ ಅಸಡ್ಡೆ ಉಂಟುಮಾಡುವುದು; ಬಳಿಕ ‘ಸಮಾನತೆ’, ‘ಹಕ್ಕು’, ‘ನ್ಯಾಯ’ ಎಂಬ ಭಾವುಕ ಪದಪುಂಜಗಳಿಂದ ಉದ್ರೇಕಿಸಿ, ಜನರ ಮನಸ್ಸಿನಲ್ಲಿ ಅಸಮಾಧಾನ ಬೆಳೆಸುವುದು; ಆ ಭಾವನೆಗಳನ್ನು ದುರುಪಯೋಗ ಮಾಡಿ ನಾಗರಿಕತೆಯ ಆಧಾರಸ್ತಂಭವನ್ನು ಶಿಥಿಲಗೊಳಿಸುವುದು.
ಭಾರತದಲ್ಲಿ ಆ ಆಧಾರಸ್ತಂಭವೇ ಧರ್ಮ;
ಅದರ ಹೃದಯವೇ ದೇವಾಲಯಗಳು. ಹೀಗಾಗಿ ಶಕ್ತಿಯುತ, ವ್ಯವಸ್ಥಿತ ದಾಳಿ ದೇಗುಲಗಳ ಮೇಲೆ ನಡೆಯುವುದು ಅಚ್ಚರಿಯಲ್ಲ. ಇದು ಕೇವಲ ಕಟ್ಟಡಗಳ ಮೇಲಿನ ದಾಳಿ ಅಲ್ಲ- ಇದು ಸಾವಿರಾರು ವರ್ಷಗಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಆಧ್ಯಾತ್ಮೀಕ ಪರಂಪರೆಯ ಮೇಲೆ ನಡೆಯುತ್ತಿರುವ ಘೋರ ಯುದ್ಧ. ಸ್ತ್ರೀವಾದದ ನೆಪದಲ್ಲಿ ಶಬರಿಮಲೆ ಪರಂಪರೆ ಮೇಲೆ ದಾಳಿ ಭಾರತ ಬಹುತ್ವದ ದೇಶ. ಪ್ರತಿಯೊಂದು ದೇವಸ್ಥಾನಕ್ಕೆ ಅದರದೇ ಆದ ಪದ್ಧತಿಗಳಿವೆ. ಬೇರೆ ಬೇರೆಡೆ ಒಂದೇ ದೇವರ ದೇಗುಲಗಳಿದ್ದರೂ ರೀತಿ ರಿವಾಜುಗಳು ವಿಶಿಷ್ಟ. ಶತಮಾನಗಳಿಂದ ಅಯ್ಯಪ್ಪಸ್ವಾಮಿಯು ನೈಷ್ಠಿಕ ಬ್ರಹ್ಮಚರ್ಯ ವ್ರತಕ್ಕೆ ಅನುಗುಣವಾಗಿ ಮಹಿಳೆಯರ ಪ್ರವೇಶಕ್ಕೆ ವಯಸ್ಸಿನ ಮಿತಿ ಇದೆ. ನೂರಾರು ವರ್ಷಗಳಿಂದ ಕೋಟ್ಯಂತರ ಮಹಿಳಾ ಭಕ್ತರು ಇದನ್ನು ಪಾಲಿಸಿಕೊಂಡು ಬಂದಿದ್ದಾರೆ. ಮೂಲಭೂತವಾದಿಗಳ ಹೊರತು ಅದ್ಯಾರಿಗೂ ಸಮಸ್ಯೆಯಾಗಿಲ್ಲ. ಇದು ಅವರಿಗೆ ಲಿಂಗ ತಾರತಮ್ಯವಾಗಿ ಕಂಡಿತು. ಯಾವತ್ತೂ ದೇವರ ಮೇಲೆ ಶ್ರದ್ಧೆ ಇಟ್ಟುಕೊಳ್ಳದ ಇವರು ದೇಗುಲ ಪ್ರವೇಶಕ್ಕೆ ಚಳವಳಿ ಶುರು ಮಾಡಿದರು. ಭಕ್ತರಲ್ಲದ ‘ಕಾರ್ಯಕರ್ತರು’ ಮಾಧ್ಯಮದಲ್ಲಿ ಮಿಂಚಿದರು. ಪರಿಣಾಮ ದೇವಾಲಯದ ಬಾಗಿಲಲ್ಲಿ ಗಲಾಟೆ, ಭಕ್ತರ ಮೇಲೆ ಲಾಠಿ ಪ್ರಹಾರ, ಕಣ್ಣೀರು ಹಾಕಿದ ದೇಗುಲದ ಸೇವಕರು. ಈ ಸಂಪ್ರದಾಯವನ್ನು ನಂಬಿದವರನ್ನು ‘ಹಿಂದೂ ಸಂಕುಚಿತರು’ ಎಂದು ಕೆಲವು ಪೂರ್ವಾಗ್ರಹ ಪೀಡಿತ ಮಾಧ್ಯಮಗಳು ಚಿತ್ರಿಸಿದವು. ಇದರಿಂದ ಮಹಿಳೆಯರಿಗಾದ ಲಾಭ ದೊಡ್ಡ ಸೊನ್ನೆ. ಭೇದ, ಅವಿಶ್ವಾಸ, ಮತ್ತು ಸಾಂಸ್ಕೃತಿಕತೆಗೆ ಹಾನಿ ಎಂಬ ಮೂಲಭೂತವಾದಿಗಳ ಗುರಿ ಸಫಲವಾಯಿತು.
ಶನಿ ಶಿಂಗಣಾಪುರ: ಅದೇ ನಾಟಕ, ಬೇರೆ ವೇದಿಕೆ
ಶನಿ ಶಿಂಗಣಾಪುರ ಶನಿ ದೇವನಿಗಾಗಿ ಮೀಸಲಿಟ್ಟ ದೇವಾಲಯ. ಮನೆಗೆ ಬಾಗಿಲುಗಳೇ ಇಲ್ಲದ ಊರು. 400 ವರ್ಷಗಳಿಂದ ವಿಶಿಷ್ಟ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ, ಅದಕ್ಕೆ ಸ್ಥಳೀಯರ ಸಂಪೂರ್ಣ ಬೆಂಬಲವಿದೆ. ಇದೆಲ್ಲವನ್ನು ನಿರ್ಲಕ್ಷಿಸಿ ಅಲ್ಲಿ ಮೂಲಭೂತವಾದಿಗಳಿಂದ ದಾಳಿಯಾಯಿತು. ಹೀಗೆ ‘ನವ ಇತಿಹಾಸದ ನಿರ್ಮಾಣ’, ‘ಸ್ತ್ರೀ ಶೋಷಣೆಗೆ ತಿಲಾಂಜಲಿ’ ಎಂಬೆಲ್ಲ ಶೀರ್ಷಿಕೆಗಳು ಟಿವಿ ಮಾಧ್ಯಮಗಳಲ್ಲಿ ರಾರಾಜಿಸಿದವು. ಇದು ಶತಮಾನಗಳಿಂದ ಒಂದು ಸಣ್ಣ ಬಿರುಕು ಬಾರದೆ ನಿಂತಿದ್ದ ಆಚರಣೆಯನ್ನು ‘ಶೋಷಣೆಯ ಸಂಕೇತ’ ಎಂದು ಪಕ್ಕಕ್ಕೆ ಸರಿಸುವ ತಂತ್ರ. ಧರ್ಮಸ್ಥಳ: ಹೊಸ ಗುರಿ, ಪಕ್ಕಾ ಕುತಂತ್ರ ಧರ್ಮಸ್ಥಳ ಕೋಟ್ಯಂತರ ಕನ್ನಡಿಗರ ಶ್ರದ್ಧಾ ಕೇಂದ್ರ. ಅಲ್ಲಿ ಧರ್ಮವೇ ಪ್ರಧಾನ. ನಿತ್ಯ ನೂರಾರು ಪ್ರಕರಣಗಳನ್ನು ಬಗೆ ಹರಿಸುವ ಅಣ್ಣಪ್ಪ ಸ್ವಾಮಿಯ ನ್ಯಾಯದೇಗುಲ. ಜೈನ ಕುಟುಂಬವೊಂದು ನಿರ್ವಹಿಸುವ ಶಿವನ ದೇವಾಲಯ ಅದಕ್ಕೆ ವೈಷ್ಣವರ ಪೂಜೆ ಇರುವ ಅಪೂರ್ವ ಸಮನ್ವಯದ ಕೇಂದ್ರವಿದು. ಅನ್ನದಾನ, ಅಭಯದಾನ ಎರಡನ್ನೂ ದಯಪಾಲಿಸುವ ದೇವಾಲಯ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಎಲ್ಲದರಲ್ಲಿ ಇದರ ಕೊಡುಗೆ ಅಪಾರ. ಇದರ ಯಶಸ್ಸು ಮೂಲಭೂತವಾದಿಗಳಿಗೆ ಕಣ್ಣು ಕುಕ್ಕಿಸಿದೆ. ಹೇಗಾದರೂ ಮಾಡಿ ದೇವಾಲಯವನ್ನು ಮತ್ತು ಧರ್ಮಾಧಿಕಾರಿಗಳಿಗೆ ಚ್ಯುತಿ ಬರುವಂತೆ ಮಾಡುವುದು. ಆ ಮೂಲಕ ಭಕ್ತರ ಭಕ್ತಿ ಭಾವನೆಗಳನ್ನು ಬತ್ತುವಂತೆ ಮಾಡುವುದು. ಧರ್ಮವೇ ಜನರನ್ನು ಏಕತೆಯಡಿ ತರಬಲ್ಲ ಶಕ್ತಿಯೆಂಬ ಸತ್ಯಕ್ಕೆ ಹೊಡೆತ.
ಭಾರತೀಯ ಸ್ತ್ರೀಶಕ್ತಿ vs ಆಮದಿತ ಸ್ತ್ರೀವಾದ
ಭಾರತದ ಶಾಕ್ತ ಪರಂಪರೆಯಲ್ಲಿ, ದೇವಿಯೇ ಬ್ರಹ್ಮಾಂಡದ ಆದಿ ಮತ್ತು ಅಂತ್ಯ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಸ್ತ್ರೀಯರು ಗೌರವಿಸಲ್ಪಟ್ಟಲ್ಲಿ ದೇವತೆಗಳು ವಾಸಿಸುತ್ತಾರೆ ಎಂಬುದು ಸ್ಮೃತಿ. ಆದರೆ ಆಮದಿತ ಸ್ತ್ರೀವಾದ ಸ್ತ್ರೀಯನ್ನು ‘ರಾಜಕೀಯ ವರ್ಗ’ವಾಗಿ ಕುಗ್ಗಿಸುವ ಸಾಧನ. ಸಮನ್ವಯದ ಬದಲು ಸಂಘರ್ಷ. ಗೌರವದ ಬದಲು ದ್ವೇಷ. ಮೂಲಭೂತವಾದಿಗಳ ಕೈಯಲ್ಲಿ ಇದು ಸಂಸ್ಕೃತಿಯನ್ನು ಹಾಳು ಮಾಡುವ ಆಯುಧ. ದೇವಾಲಯಗಳೇ ಏಕೆ ಟಾರ್ಗೆಟ್? ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ- ಅವು ನಮ್ಮ ಇತಿಹಾಸ, ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಜೀವಂತ ಸ್ಮಾರಕಗಳು. ಅವು ಸಾಂಸ್ಕೃತಿಕ ವಿಶ್ವವಿದ್ಯಾಲಯಗಳು, ಸಮುದಾಯ ಕೇಂದ್ರಗಳು, ಧರ್ಮಾರ್ಥ ಸಂಸ್ಥೆಗಳು ಮತ್ತು ಇತಿಹಾಸದ ಜೀವಂತ ಕಾವಲುಗಾರರು. ಇವುಗಳನ್ನು ದುರ್ಬಲಗೊಳಿಸಿದರೆ, ಸಮಾಜದ ಬೆನ್ನೆಲುಬೇ ಕುಸಿಯುತ್ತದೆ. ಮಸೀದಿ-ಚರ್ಚುಗಳ ಮೇಲೆ ನಿರಂತರ ದಾಳಿ ನಡೆಸಲು ಶತ್ರು ಯತ್ನಿಸುವುದಿಲ್ಲ. ಏಕೆಂದರೆ ಅವುಗಳು ಭಾರತದ ನಾಗರಿಕತೆಯ ಹೃದಯವಲ್ಲ. ದೇವಾಲಯಗಳು ಭಾರತದ ಹೃದಯ.
ಅಂತಿಮ ಗುರಿ: ಸಮಾಜವನ್ನು ಮೂಲ ಬೇರುಗಳಿಂದ ಬೇರ್ಪಡಿಸುವುದು. ಮೂಲ ಬೇರುಗಳಿಂದ ಬೇರ್ಪಡಿಸಲ್ಪಟ್ಟ, ವಿಘಟಿತ ಸಮಾಜವನ್ನು ನಿಯಂತ್ರಿಸುವುದು ಸುಲಭ. ಸಾಂಸ್ಕೃತಿಕ ಹೆಮ್ಮೆಯಿಲ್ಲದ ಜನರಿಗೆ ಯಾವುದೇ ವಿದೇಶಿ ಕಥನ ಥಟ್ಟನೆ ರುಚಿಸುತ್ತದೆ. ಮಹಿಳಾ ಹಕ್ಕುಗಳ ಮಾತು ಇದು ಬಾಹ್ಯ ಮುಖವಾಡ, ಆದರೆ ಒಳಹಿನ ಗುರಿ ಸಾಂಸ್ಕೃತಿಕ ಸ್ಮೃತಿಭ್ರಂಶ. ನಾವೇನು ಮಾಡಬೇಕು? ನೈತಿಕ ಕುಸಿತದಿಂದ ಪುನರುಜ್ಜೀವನಕ್ಕೆ ಪಯಣಿಸಲು ಈ ಹುನ್ನಾರವನ್ನು ಪ್ರತಿಭಟಿಸಬೇಕು. ದೇವಾಲಯ, ಮಠ, ಪೀಠ ಪರಂಪರೆಗಳ ನಿಜವಾದ ಅರ್ಥ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಉಪಕ್ರಮಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಹಿಂದೂ ಪದ್ಧತಿಗಳನ್ನು ಆಯ್ದುಕೊಂಡು ಗುರಿಯಾಗಿಸುವವರ ದ್ವಂದ್ವ ನೀತಿಯನ್ನು ಬಯಲಿಗೆಳೆಯಬೇಕು. ದೇವಾಲಯಗಳ ಸ್ವಾಯತ್ತತೆಯನ್ನು ಕಾಪಾಡುವ ಕಾನೂನು- ಸಾಂಸ್ಕೃತಿಕ- ಸಮುದಾಯ ಹೋರಾಟ ನಡೆಸಬೇಕು. ಹಬ್ಬ-ಆಚರಣೆಗಳನ್ನು ನಾಚಿಕೆಪಡುವ ಬದಲು ಹೆಮ್ಮೆಯಿಂದ ಆಚರಿಸಬೇಕು. ದೇವಾಲಯಗಳ ಮೇಲೆ ದಾಳಿ ನಡೆದಾಗ, ಜಾತಿ-ಭಾಷಾ-ಪ್ರಾಂತ ಭೇದಗಳನ್ನು ಮೀರಿ ಏಕತೆಯ ಶಕ್ತಿ ತೋರಿಸಬೇಕು. ನೈತಿಕ ಕುಸಿತ ಅವರ ಮೊದಲ ಹೆಜ್ಜೆ, ಆದರೆ ಭಾರತ ಸುಲಭವಾಗಿ ಶರಣಾಗುವ ಭೂಮಿಯಲ್ಲ. ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ನಾಶ ಮಾಡಲು ಮೂಲಭೂತವಾದಿಗಳು ಕೈ ಚಾಚಿದಾಗ, ನಾವು ಹೆಮ್ಮೆಯಿಂದ ಹೇಳೋಣ. ನಾವು ಶಕ್ತಿಯ ಮಕ್ಕಳು, ಧರ್ಮದ ವಾರಸುದಾರರು. ಭಾರತಮಾತೆ ಯಾವಾಗಲೂ ಮಕ್ಕಳನ್ನು ಕಾಪಾಡಿದ್ದಾಳೆ. ಈಗ ಮಕ್ಕಳು ಭಾರತಮಾತೆ ರಕ್ಷಿಸಲು ಏಳಬೇಕು. ನೆನಪಿರಲಿ, ಇತಿಹಾಸದಲ್ಲಿ ಎಷ್ಟು ದಾಳಿಗಳು ನಡೆದರೂ, ದೇವಾಲಯಗಳ ಘಂಟಾನಾದ ಎಂದಿಗೂ ನಿಲ್ಲಲಿಲ್ಲ; ಇಂದು, ಅದೇ ಘಂಟಾನಾದವನ್ನು ಮತ್ತಷ್ಟು ಗಟ್ಟಿಯಾಗಿ ಮೊಳಗಿಸುವ ಹೊಣೆ ನಮ್ಮದಾಗಿದೆ.