‘ಗವಿಸಿದ್ದೇಶ್ವರ ಜಾತ್ರೆ ದೇಶದ ಎಂಟನೇ ಅದ್ಭುತ. ಇಲ್ಲಿಯ ದಾಸೋಹ, ಶ್ರೀಗಳ ಸಾಧನೆ ಎಲ್ಲವೂ ಸೇರಿದರೆ ದೇಶದ ಅಲ್ಲ, ವಿಶ್ವದ ಎಂಟನೇ ಅದ್ಭುತ!’ಇದು, ಕೊಪ್ಪಳ ಜಾತ್ರೆ ಮತ್ತು ಗವಿಮಠ ಕುರಿತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ ಅವರ ಉದ್ಗಾರ.

ಸೋಮರಡ್ಡಿ ಅಳವಂಡಿ

 ‘ಗವಿಸಿದ್ದೇಶ್ವರ ಜಾತ್ರೆ ದೇಶದ ಎಂಟನೇ ಅದ್ಭುತ. ಇಲ್ಲಿಯ ದಾಸೋಹ, ಶ್ರೀಗಳ ಸಾಧನೆ ಎಲ್ಲವೂ ಸೇರಿದರೆ ದೇಶದ ಅಲ್ಲ, ವಿಶ್ವದ ಎಂಟನೇ ಅದ್ಭುತ!’

ಇದು, ಕೊಪ್ಪಳ ಜಾತ್ರೆ ಮತ್ತು ಗವಿಮಠ ಕುರಿತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪ್ರೊ. ಎಂ. ಪುಷ್ಪಾವತಿ ಅವರ ಉದ್ಗಾರ.

ಹೌದು, ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಈಗ ದೇಶವ್ಯಾಪಿಯೂ ಚರ್ಚೆಯಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಹಿಂದೆ ಸಾವಿರಾರು ಭಕ್ತ ಗಣದೊಂದಿಗೆ ಸಣ್ಣದಾಗಿ ನಡೆಯುತ್ತಿದ್ದ

ಶ್ರೀ ಗವಿಸಿದ್ಧೇಶ್ವರ ಜಾತ್ರೆ ನೋಡು ನೋಡುತ್ತಿದ್ದಂತೆ ಲಕ್ಷ ಲಕ್ಷ ಜನ ಸೇರುವ ಮಹಾನ್ ಜಾತ್ರೆಯಾಯಿತು. ಅದರಲ್ಲೂ ಜಾತ್ರೆಗೆ ಬರುವ ಲಕ್ಷ ಲಕ್ಷ ಭಕ್ತರಿಗೆ ಬಗೆ ಬಗೆ ಖಾದ್ಯವನ್ನು ಬಡಿಸುವ ದೇಶದ ವಿಶೇಷ ಮಠವಿದು ಎನ್ನುವುದು ಗಮನಾರ್ಹ ಸಂಗತಿ. ಇದರ ಹಿಂದಿರುವ ಶಕ್ತಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು. ಅವರ ಕಥೆಯೂ ಸ್ಫೂರ್ತಿದಾಯಕವಾಗಿದೆ.

ಹಿಟ್ಟಿನ ಭಿಕ್ಷೆ ಎತ್ತುವ ಬಾಲಕ

ಕಲಬುರಗಿ ಜಿಲ್ಲೆಯ ಹಾಗರಗುಂಡಿ ಗ್ರಾಮದಲ್ಲಿ ಮಠಸ್ಥ ಕುಟುಂಬವೊಂದರಲ್ಲಿ ಹಿಟ್ಟಿನ ಭಿಕ್ಷೆ ಎತ್ತುತ್ತಿದ್ದ ಬಾಲಕ ಪರ್ವತಯ್ಯ ಮನೆಯಲ್ಲಿನ ಬಡತನದಿಂದಾಗಿ ಶಾಲೆಯನ್ನು ಬಿಡುವಂತಾಯಿತು. ಇದನ್ನು ತಿಳಿದ ವಿಜಯಪುರದ ತಮದೊಡ್ಡಿ ಶ್ರೀಗಳು ಶಾಲೆ ಸೇರಿಸಲು ಮುಂಡರಗಿ ಅನ್ನದಾನೀಶ್ವರ ಮಠಕ್ಕೆ ಸೇರಿಸಲು ಕರೆದುಕೊಂಡು ಹೋಗುತ್ತಿದ್ದಾಗ ಬಸ್ಸಿಲ್ಲದ ಕಾರಣ ರಾತ್ರಿ ತಂಗಲು ಕೊಪ್ಪಳ ಗವಿಮಠಕ್ಕೆ ತೆರಳುತ್ತಾರೆ. ಅಲ್ಲಿ ಗವಿಮಠದ 17ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳನ್ನು ಭೇಟಿಯಾಗುತ್ತಾರೆ. ಅವರ ಆಶೀರ್ವಾದ ಪಡೆದು, ಮಠದಲ್ಲಿಯೇ ತಂಗುತ್ತಾರೆ.

ಮಠದಲ್ಲಿ ಉಳಿದಾಗ ಬಾಲಕ ಪರ್ವತಯ್ಯನ ವಿಷಯ ತಿಳಿದು, ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ‘ಅನ್ನದಾನೀಶ್ವರ ಮಠಕ್ಕೆ ಯಾಕೆ ಕರೆದೊಯ್ಯುತ್ತೀರಿ, ಇಲ್ಲಿಯೇ ಇರಲಿ ಬಿಡಿ’ ಎಂದು ಉಳಿಸಿಕೊಳ್ಳುತ್ತಾರೆ. ಶ್ರೀ ಮಠದ ಶಾಲೆಯಲ್ಲಿ 8ನೇ ತರಗತಿಗೆ ಸೇರಿಸುತ್ತಾರೆ. ಬಳಿಕ ಬಾಲಕನಲ್ಲಿರುವ ಅದಮ್ಯ ಚೇತನವನ್ನು ನೋಡಿ ತಮ್ಮ ಗುಹೆಯ ಪಕ್ಕದಲ್ಲಿರಿಸಿಕೊಳ್ಳುತ್ತಾರೆ. ಆತನಿಗೆ ಬೋಧನೆಯನ್ನು ಮಾಡುವಾಗ ಬಾಲಕನಲ್ಲಿನ ಕಲಿಕೆಯ ಸಾಮರ್ಥ್ಯ ಮತ್ತು ಶ್ರದ್ಧೆ ನೋಡಿ ತಮ್ಮ ಶಿಷ್ಯರನ್ನಾಗಿ ಸ್ವೀಕಾರ ಮಾಡುತ್ತಾರೆ. ಪದವಿ ಓದುವ ವೇಳೆಗೆ ಈತನ ನನ್ನ ಮುಂದಿನ ಪಟ್ಟದ ಶಿಷ್ಯ ಎಂದು ನಾಮಕರಣ ಮಾಡುತ್ತಾರೆ.

ರ‍್ಯಾಂಕ್‌ ಪದವೀಧರ

1998-99ನೇ ಸಾಲಿನಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಪದವಿ ಅಂತಿಮ ವರ್ಷದಲ್ಲಿ ಕಲಬುರಗಿ ವಿಶ್ವವಿದ್ಯಾಲಯದ 6ನೇ ರ‍್ಯಾಂಕ್‌ ವಿದ್ಯಾರ್ಥಿ. ಇದಾದ ಮೇಲೆ ಎಂ.ಎ.ದಲ್ಲಿ ಕನ್ನಡ ಅಭ್ಯಾಸ ಮಾಡುತ್ತಾರೆ. ಪುಣೆಯಲ್ಲಿದ್ದುಕೊಂಡು ಸಂಸ್ಕೃತ ಪಂಡಿತ ಮತ್ತು ಎಂ.ಎ. ಇಂಗ್ಲಿಷ್‌ ಅಭ್ಯಾಸ ಮಾಡಿರುತ್ತಾರೆ. ಹೀಗೆ, ಮೂರು ಸ್ನಾತಕೋತ್ತರ ಪದವೀಧರರಾಗಿದ್ದ ಪರ್ವತಯ್ಯ ಅಭಿನವ ಗವಿಸಿದ್ಧೇಶ್ವರರಾದರು. ಪರ್ವತಯ್ಯ ಎನ್ನುವ ಇವರನ್ನು ಪರುತ ದೇವರು ಎಂದು ಇವರು ಗುರುಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ಕರೆಯುತ್ತಿರುತ್ತಾರೆ. 2002 ಡಿ. 13ರಂದು ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಎಂದು ನಾಮಕರಣ ಮಾಡಿ, ಗವಿಮಠದ 18ನೇ ಪೀಠಾಧಿಪತಿಗಳಾಗಿ ಪಟ್ಟಗಟ್ಟುತ್ತಾರೆ.

ಶುರುವಾದ ಕ್ರಾಂತಿ

ಗವಿಮಠದ 11ನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಜೀವಂತ ಸಮಾಧಿಯಾದ ಹಿನ್ನೆಲೆಯಲ್ಲಿ ಅವರ ಸ್ಮರಣೋತ್ಸವ ನಿಮಿತ್ತ ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು 1816ರಲ್ಲಿ ಪ್ರಾರಂಭಿಸಲಾಗುತ್ತದೆ. ಕೇವಲ ಬೆರಳೆಣಿಕೆಯ ಜನರಿಂದ ಪ್ರಾರಂಭವಾದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಕಾಲಕ್ರಮೇಣ ನೂರಾರು, ಸಾವಿರಾರು ಸಂಖ್ಯೆಯಿಂದ ಆಚರಣೆಯಾಗುತ್ತಿತ್ತು.

2002 ಡಿಸೆಂಬರ್ 13ರಂದು ಶ್ರೀ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಪಟ್ಟಗಟ್ಟಿದ ಮೇಲೆ ದೊಡ್ಡ ಕ್ರಾಂತಿಯೇ ಆಗಲಾರಂಭಿಸಿತು. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಜಾತ್ರೆ ಎಂದರೆ ಕೇವಲ ಜಾತ್ರೆಯಲ್ಲ, ಅದು ಮೋಜು ಮಸ್ತಿಗಾಗಿ ಅಲ್ಲ, ಅದೊಂದು ಜಾಗೃತಿ ಯಾತ್ರೆಯಾಗಬೇಕು ಎಂದು ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾರಂಭಿಸಿದರು. ಪ್ರತಿ ವರ್ಷವೂ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು. ಮಹಾರಕ್ತದಾನ, ಬಾಲ್ಯವಿವಾಹ ತಡೆ ಜಾಗೃತಿ, ಜಲದೀಕ್ಷೆಯಂತಹ ಸಮಾಜ ಜಾಗೃತಿ ಕಾರ್ಯಕ್ರಮಗಳನ್ನು, ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಜಾತ್ರೆ ಎನ್ನುವ ಕಲ್ಪನೆಗೆ ಹೊಸಭಾಷ್ಯ ಬರೆದರು.

ಮಹಾದಾಸೋಹ

ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮೊದಲನಿಂದಲೂ ಪ್ರಸಾದ ವ್ಯವಸ್ಥೆ ಇತ್ತು. ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿತ್ತು. ಸಂಗಟಿ ಮತ್ತು ರಬ್ಬುಳಿಯನ್ನು ನೀಡಲಾಗುತ್ತಿತ್ತು. ಶ್ರೀ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಪಟ್ಟಗಟ್ಟಿದ ಮೇಲೆ ದಾಸೋಹವನ್ನು ಮಹಾದಾಸೋಹ ಎಂದು ನಾಮಕರಣ ಮಾಡಿದರು. ಅದಕ್ಕೊಂದು ಹೊಸ ಅರ್ಥ ಕಲ್ಪಿಸಿ, ಬಗೆ ಬಗೆಯ ಖಾದ್ಯವನ್ನು ಮಹಾದಾಸೋಹದಲ್ಲಿ ನೀಡುವ ಮೂಲದ ದಿಬ್ಬಣದೂಟವನ್ನು ಮೀರುವಂತಹ ವೈಭವವನ್ನು ಕಲ್ಪಿಸಲಾಯಿತು.

ಮಹಾದಾಸೋಹದಲ್ಲಿ ಎಲ್ಲವೂ ದಾಖಲೆಯಾಗುತ್ತಿವೆ. ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಾಗುವ ಮಹಾದಾಸೋಹದ ದಾಖಲೆಗಳನ್ನು ಅದೇ ಜಾತ್ರೆಯಲ್ಲಿ ಮುರಿದು ಪುಡಿಗಟ್ಟಿ, ಹೊಸ ದಾಖಲೆ ನಿರ್ಮಾಣ ಮಾಡಲಾಗುತ್ತದೆ.

2026ನೇ ಸಾಲಿನ ಮಹಾದಾಸೋಹದಲ್ಲಿ 10-12 ಲಕ್ಷ ಮೈಸೂರು ಪಾಕ ಸಿದ್ಧ ಮಾಡಿ, ಎರಡೇ ದಿನಗಳಲ್ಲಿ ವಿತರಣೆ ಮಾಡಲಾಯಿತು. 45 ಟನ್ ಮಾದಲಿಯ ಬಂದಿದ್ದರೆ ಲಕ್ಷಗಟ್ಟಲೇ ರವೆ ಉಂಡಿ, ಕರ್ಚಿಕಾಯಿ, ಬಾದೂಶಹ, ಟನ್‌ಗಟ್ಟಲೇ ಶೇಂಗಾಪುಡಿ, ಕ್ವಿಂಟಾಲ್‌ಗಟ್ಟಲೇ ಕೆಂಪುಚಟ್ನಿ, 15-20 ಕ್ವಿಂಟಲ್ ತುಪ್ಪ, ಹತ್ತು ಸಾವಿರ ಲೀಟರ್ ಹಾಲು ಹೀಗೆ ಹೇಳುತ್ತಾ ಹೋದರೆ ಇದರ ದೊಡ್ಡ ಪಟ್ಟಿಯೇ ಇದೆ. 20, 25 ಲಕ್ಷ ರೊಟ್ಟಿಗಳು ಸಂಗ್ರಹವಾಗುತ್ತವೆ ಎನ್ನುವುದಕ್ಕಿಂತ ಪ್ರಸಾದಕ್ಕೆ ಅಷ್ಟು ಖರ್ಚಾಗುತ್ತವೆ. 5,6 ಲಕ್ಷ ಮಿರ್ಚಿ ಭಜ್ಜಿ ಮಾಡಲಾಗುತ್ತದೆ. ಸಿಹಿ ಪದಾರ್ಥವೇ 100- 120 ಟನ್ ಆಗುತ್ತದೆ. ಇನ್ನು 1500 ಕ್ವಿಂಟಲ್ ಅಕ್ಕಿ ಬಳಕೆಯಾಗುತ್ತದೆ. ಸರಿಸುಮಾರು 18-20 ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡುತ್ತಾರೆ.

ಶಾಂತಿ ಸಾಗರ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆ

ಐಪಿಎಲ್ ವಿಜಯೋತ್ಸವದಲ್ಲಿ ಕೇವಲ ಒಂದೆರಡು ಲಕ್ಷ ಜನ ಸೇರಿದರೂ ಕಾಲ್ತುಳಿತವಾಯಿತು. ಹೈದರಾಬಾದ್ ಪುಷ್ಪಾ-2 ಚಿತ್ರ ಬಿಡುಗಡೆಯ ವೇಳೆಯಲ್ಲಿ ಕಾಲ್ತುಳಿತವಾಯಿತು. ಅಷ್ಟೇ ಯಾಕೆ, ಉತ್ತರ ಪ್ರದೇಶದ ಬೋಲೆಬಾಬಿ ಸತ್ಸಂಗದಲ್ಲಿಯೂ ಕಾಲ್ತುಳಿತವಾಗಿ ನೂರಕ್ಕೂ ಹೆಚ್ಚು ಭಕ್ತರು ಪ್ರಾಣ ಕಳೆದುಕೊಂಡರು. ಹೀಗೆ, ಕೇವಲ ಲಕ್ಷ, ಲಕ್ಷಕ್ಕೂ ಅಧಿಕ ಜನರು ಸೇರುವ ಕಡೆಯಲ್ಲಿಯೇ 2025ರಲ್ಲಿ ಕಾಲ್ತುಳಿತಕ್ಕೆ ಎರಡುನೂರಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದಾರೆ. ಆದರೆ, ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ ಬರೋಬ್ಬರಿ 6-7 ಲಕ್ಷ ಭಕ್ತರು ಏಕಕಾಲಕ್ಕೆ ಸೇರುತ್ತಾರೆ. ಆದರೂ ಕೊಂಚವೂ ಗಲಾಟೆಯಾಗುವುದಿಲ್ಲ, ನೂಕುನುಗ್ಗಲು ಆಗುವುದಿಲ್ಲ, ಜನಸಾಗರ ಶಾಂತಿಸಾಗರದಂತೆ ಇರುತ್ತದೆ.

ಅಷ್ಟೇ ಯಾಕೆ, ಮಹಾರಥೋತ್ಸವಕ್ಕೆ ಚಾಲನೆ ನೀಡಿ, ಸೇರಿದ್ದ 6, 7 ಲಕ್ಷ ಭಕ್ತಸಾಗರವನ್ನು ಉದ್ದೇಶಿಸಿ ಶ್ರೀ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಒಂದು ನಿಮಿಷ ಇಲ್ಲಿ ಕೇಳಿ ಎನ್ನುತ್ತಿದ್ದಂತೆ ಲಕ್ಷಾಂತರ ಭಕ್ತರು ಸ್ತಬ್ಧವಾಗುತ್ತಾರೆ. ಪಿನ್ ಡ್ರಾಪ್‌ ಸೈಲೆನ್ಸ್ ಎನ್ನುವುದು ಇಲ್ಲಿ ವೇದ್ಯವಾಗಿರುತ್ತದೆ. ಹೀಗೆ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಅನೇಕ ಸ್ವಾಮೀಜಿಗಳು ಮಾತನಾಡಿದರೂ ಶಾಂತಚಿತ್ತದಿಂದಲೇ ಕೇಳುತ್ತಿರುತ್ತಾರೆ ಸೇರಿರುವ ಭಕ್ತ ಸಮೂಹ.

ರಥೋತ್ಸವದ ಬಳಿಕವೂ ಸೇರಿದ್ದ ಲಕ್ಷಾಂತರ ಭಕ್ತರು ಯಾವುದೇ ಗದ್ದಲವಿಲ್ಲದೆ ಶಾಂತವಾಗಿಯೇ ಮರಳುತ್ತಾರೆ. ಇದೊಂದು ರೀತಿಯಲ್ಲಿ ಪವಾಡದಂತೆ ಕಾಣುತ್ತಿರುತ್ತದೆ. ಆ ಗವಿಸಿದ್ಧನ ಕರ್ತೃ ಗದ್ದುಗೆಯ ಶಕ್ತಿಯ ಫಲವಾಗಿ ಭಕ್ತರು ಭಕ್ತಿಯಿಂದ ಇರುವುದರಿಂದ ಗೋಜು, ಗೊಂದಲಗಳಿಗೆ ಅವಕಾಶ ಇರುವುದಿಲ್ಲ.

ಪ್ರವಾಸೋಧ್ಯಮ ಅಭಿವೃದ್ಧಿ ಮತ್ತು ಬಡವರ ಬದುಕು ಹಸನ

ಬೆಳೆದ ನಾಗರಿಕತೆಯಿಂದ ಜಾತ್ರೆಯಂತ ಕಲ್ಪನೆಯ ನಾಶವಾಗುತ್ತಿದೆ. ಅದರಲ್ಲೂ ಮೆಟ್ರೋ ಸಿಟಿ ಸಂಸ್ಕೃತಿಯಿಂದಾಗಿ ನಮ್ಮ ಸಂಪ್ರದಾಯ ಮತ್ತು ಭಕ್ತಿ ಮರೆಯಾಗುತ್ತಿದೆ. ಬಾಂಧವ್ಯ ಇಲ್ಲವಾಗುತ್ತಿದೆ. ಆಧುನಿಕ ಶೈಲಿಯ ಬದುಕು ಮತ್ತು ನಗರಪ್ರದೇಶದ ಮೋಜು, ಮಸ್ತಿಯ ಶೈಲಿಯಿಂದಾಗಿ ಗ್ರಾಮೀಣ ಪ್ರದೇಶದ ಸೊಗಡು ಇಲ್ಲವಾಗುತ್ತಿದೆ. ಆದರೆ, ಅದೆಲ್ಲವನ್ನು ಮತ್ತೆ ಮರುಕಳಿಸುವಂತೆ ಮಾಡುತ್ತಿರುವ ಹಿರಿಮೆ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಸಲ್ಲುತ್ತದೆ. ಜಾತ್ರೆಯುದ್ದಕ್ಕೂ ಬರುವ 25-30 ಲಕ್ಷ ಭಕ್ತರು ಕೊಪ್ಪಳ ಪ್ರವಾಸೋದ್ಯಮದ ಬೆಳವಣಿಗೆಗೆ ಕಾರಣವಾಗುತ್ತಿದ್ದಾರೆ.

ಹಿಂದುಳಿದ ಹಣೆಪಟ್ಟಿಯನ್ನು ಹೊಂದಿರುವ ಕೊಪ್ಪಳ ಜಿಲ್ಲೆಗೆ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಹೊಸ ಹೊಳಪನ್ನು ನೀಡುತ್ತಿದೆ. ಇಲ್ಲಿಯ ಜನರ ಬದುಕು ಹಸನ ಆಗಲು ಕಾರಣವಾಗುತ್ತಿದೆ. ನೂರಾರು ಕೋಟಿ ರುಪಾಯಿ ವಹಿವಾಟು ಜನರ ಆರ್ಥಿಕ ಸ್ಥಿತಿಯ ಮಟ್ಟವನ್ನು ಅರಿವಿಗೆ ಬಾರದಂತೆ ಸುಧಾರಿಸುತ್ತಿದೆ.

ಅಚ್ಚರಿ ಎನಿಸಬಹುದು. ಶ್ರೀ ಗವಿಸಿದ್ಧೇಶ್ವರ ಜಾತ್ರೆಯಿಂದಾಗಿ ಆಟೋದವರ ಆದಾಯ ಹೆಚ್ಚಳವಾಗಿದೆ. ಜಾತ್ರೆ ಜೋರಾಗಿಂದ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯೇ ಸುಧಾರಣೆಯಾಗಿದೆ. ನಮ್ಮ ಮಕ್ಕಳನ್ನು ನಾವು ಉತ್ತಮ ಶಾಲೆಯಲ್ಲಿ ಓದಿಸುವಂತೆ ಆಗಿದೆ ಎಂದು ವಿವರಿಸುತ್ತಾರೆ ಆಟೋ ಚಾಲಕ ಶರಣಬಸಪ್ಪ ಅವರು. ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಬರೋಬ್ಬರಿ ನೂರಿನ್ನೂರು ಕೋಟಿ ರುಪಾಯಿಗೂ ಅಧಿಕ ವಹಿವಾಟು ನಡೆಯುತ್ತದೆ. ಇದು ಸ್ಥಳೀಯ ಆರ್ಥಿಕ ವೃದ್ಧಿಗೂ ಕಾರಣವಾಗುತ್ತಿದೆ ಎಂದೇ ಬಣ್ಣಿಸಲಾಗುತ್ತದೆ.

ದಾನ ಧರ್ಮ

ಶ್ರೀ ಗವಿಸಿದ್ಧೇಶ್ವರ ಜಾತ್ರೆಯಿಂದಾಗಿ ದಾನಧರ್ಮ ಹೆಚ್ಚಳವಾಗುತ್ತಿದೆ ಎನ್ನುವುದನ್ನು ಹೇಳಲು ಮಹಾದಾಸೋಹಕ್ಕೆ ಹರಿದುಬರುವ ನೆರವೇ ಸಾಕ್ಷಿಯಾಗಿದೆ. ಹತ್ತು ಲಕ್ಷ ಮೈಸೂರು ಪಾಕ ಮಾಡಿಕೊಡುವ ಭಕ್ತರಿಂದ ಹಿಡಿದು ಹಣ್ಣು ಹಣ್ಣಾದ ಅಜ್ಜಿಯೋರ್ವಳು ತಾನು ಹಣವನ್ನು ಕೂಡಿಟ್ಟುಕೊಂಡು ಜಾತ್ರೆಗೆ ಅರ್ಪಿಸುತ್ತಾರೆ. ಹತ್ತು ರೊಟ್ಟಿ ಮಾಡಿಕೊಡುವವರಿಂದ ಹಿಡಿದು ಲಕ್ಷ ರೊಟ್ಟಿಯನ್ನು ಮಾಡಿಕೊಡುತ್ತಾರೆ. ಕೆಜಿ ಮಾದಲಿಯಿಂದ ಹಿಡಿದು ಗೆಳೆಯರ ಬಳಗದವರು ಸೇರಿ ಬರೋಬ್ಬರಿ 25 ಟನ್ ಮಾದಲಿ ಮಾಡಿಕೊಂಡುಬಂದು ಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ದಾಸೋಹದಲ್ಲಿಯೂ ಪೈಪೋಟಿಯ ಮೇಲೆ ಸೇವೆ ಮಾಡುತ್ತಾರೆ. ಪ್ರಸಾದ ಸ್ವೀಕಾರ ಮಾಡುವುದಕ್ಕಷ್ಟೇ ಅಲ್ಲ, ಸೇವೆ ಮಾಡುವುದಕ್ಕೂ ಇಲ್ಲಿ ಸರದಿ ಇರುತ್ತದೆ. ಇಂಥ ಆಧುನಿಕ ಭರಾಟೆಯ ಜಗತ್ತಿನಲ್ಲಿ ದಾನ, ಧರ್ಮ, ಸೇವೆಯ ಸಾಕ್ಷಾತ್ಕಾರವಾಗುತ್ತಿದೆ ಎನ್ನುವುದು ಮಾತ್ರ ಸೋಜಿಗವೇ ಸರಿ.