ಸಾರಾಂಶ
ಸಾವಳಗೆಪ್ಪ ರಾಚಪ್ಪ ಐಹೊಳಿ ಅವರ ಪುತ್ರ ಬಸವರಾಜ ಐಹೊಳಿ ತಂದೆಯ ಕರದಂಟು ಅಂಗಡಿ ಮುಂದುವರೆಸಿ, ವಿವಿಧ ಸಿಹಿ ಪದಾರ್ಥಗಳ ತಯಾರಿಕೆಯನ್ನು ಆರಂಭಿಸಿದರು. ಹೀಗಾಗಿ ಅಂಗಡಿಗೆ ತಮ್ಮ ಪತ್ನಿ ವಿಜಯಾ ಹೆಸರು ಇಟ್ಟರು. ಬಸವರಾಜ ಐಹೊಳಿ ಅವರ ವಿಜಯಾ ಸ್ವೀಟ್ಸ್‌ನಲ್ಲೂ ಕರದಂಟಿಗೇ ಹೆಚ್ಚು ಬೇಡಿಕೆ.
1907ರಲ್ಲಿ ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಗರಡಿ ಮನೆ ಒಂದರ ಎದುರು ಸಾವಳಗೆಪ್ಪ ರಾಚಪ್ಪ ಐಹೊಳಿ ಅವರು ಅಂಗಡಿ ನಡೆಸುತ್ತಿದ್ದರು. ಸಕ್ಕರೆ ಜೊತೆ ಡ್ರೈಫ್ರೂಟ್ಸ್ ಬೆರಸಿ ಕರದಂಟು ಮಾಡಿ ಮಾರುತ್ತಿದ್ದರು. ಕೆಲವೊಮ್ಮೆ ಬೆಲ್ಲದ ಜೊತೆಗೆ ಕರದಂಟು ರೆಡಿಯಾಗುತಿತ್ತು. ಗರಡಿ ಮನೆಯಲ್ಲಿ ಸಾಮು, ತಾಲೀಮು ಮುಗಿಸಿದ ಪೈಲ್ವಾನರು ಒಂದು ಚೂರು ಕರದಂಟು ತಿಂದು, ನೀರು ಕುಡಿದರೇನೆ ನೆಮ್ಮದಿ ಎನ್ನುತ್ತಿದ್ದರಂತೆ.
ಡ್ರೈಫ್ರೂಟ್ಸ್ ಸಂಖ್ಯೆ ಹೆಚ್ಚಾದಂತೆ ಕರದಂಟು ತಯಾರಿಕೆಯಲ್ಲೂ ಬದಲಾವಣೆಗಳಾಗಿವೆ. ಇದಕ್ಕಿರುವ ಬೇಡಿಕೆ ನೋಡಿ ಇಡೀ ಅಮೀನಗಡದಲ್ಲಿ ಕರದಂಟು ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಕ್ಕೂ ಒಂದೇ ಹೆಸರು ಅಮೀನಗಡ ಕರಂದಂಟು. ಶೇಂಗಾ, ಗೋಡಂಬಿ, ಬಾದಾಮಿ ಹೀಗೆ ಪ್ರೊಟೀನ್‌ಯುಕ್ತವಾಗಿರುವುದರಿಂದ ಬಾಣಂತಿಯರಿಗೂ ಕಡ್ಡಾಯ ಆಹಾರವಾಗಿ ಬದಲಾಗಿದೆ. ಜೊತೆಗೆ ದೂರದ ಊರಿಗೆ ಪ್ರಯಾಣಿಸುವವರ ಬ್ಯಾಗು ಸೇರಿದೆ ಕರಂದಂಟು.
ಸಾವಳಗೆಪ್ಪ ರಾಚಪ್ಪ ಐಹೊಳಿ ಅವರ ಪುತ್ರ ಬಸವರಾಜ ಐಹೊಳಿ ತಂದೆಯ ಕರದಂಟು ಅಂಗಡಿ ಮುಂದುವರೆಸಿ, ವಿವಿಧ ಸಿಹಿ ಪದಾರ್ಥಗಳ ತಯಾರಿಕೆಯನ್ನು ಆರಂಭಿಸಿದರು. ಹೀಗಾಗಿ ಅಂಗಡಿಗೆ ತಮ್ಮ ಪತ್ನಿ ವಿಜಯಾ ಹೆಸರು ಇಟ್ಟರು. ಬಸವರಾಜ ಐಹೊಳಿ ಅವರ ವಿಜಯಾ ಸ್ವೀಟ್ಸ್‌ನಲ್ಲೂ ಕರದಂಟಿಗೇ ಹೆಚ್ಚು ಬೇಡಿಕೆ. ಇವರ ಪುತ್ರ ಸಂತೋಷ್ ಐಹೊಳಿ ಆರನೇ ಕ್ಲಾಸಿನಿಂದಲೇ ಸ್ವೀಟ್ ಅಂಗಡಿಯಲ್ಲಿ ಕೂರಲು ಆರಂಭಿಸಿ ಪಿಯುಸಿ ನಂತರ ಓದಲು ಹೋಗಲಿಲ್ಲ. ತಾತ ಶುರು ಮಾಡಿ, ಅಪ್ಪ ನಡೆಸಿದ ಅಂಗಡಿಯನ್ನು ದೊಡ್ಡದಾಗಿ ಬೆಳಸುವ ಕನಸು ಕಂಡರು. ಆದರೆ, ವ್ಯಾಪಾರ ವಿಸ್ತರಣೆಗೆ ತಂದೆ ಸಾಲ ಮಾಡಲು ಒಪ್ಪಲೇ ಇಲ್ಲ. ತಂದೆಯ ಜೊತೆ ಕೆಲಸ ಮಾಡುತ್ತಾ ವಿಜಯಾ ಸ್ವೀಟ್ಸ್ ಬದಲು 27 ವರ್ಷದ ಹಿಂದೆ ವಿಜಯಾ ಕರದಂಟು ಎಂದು ಹೆಸರು ಬದಲಿಸಿ, ಅಮೀನಗಡದಾಚೆಗೂ ಮಾರುವ ಪ್ರಯತ್ನ ಮಾಡಿದರು.
28 ಫ್ರಾಂಚೈಸಿ ಅಂಗಡಿಗಳಾದವು: ಆದರೆ, ಉತ್ಪಾದನೆ ಜಾಸ್ತಿ ಮಾಡಲು ಮಷೀನುಗಳ ಅಗತ್ಯವಿತ್ತು. ಆದರೆ, ಅದಕ್ಕೆಲ್ಲಾ ಅಪ್ಪ ಒಪ್ಪದೇ ಇದ್ದುದರಿಂದ ಹಾಗೇ ಮುಂದುವರೆದರು. 2021ರಲ್ಲಿ ಅಪ್ಪನನ್ನು ಒಪ್ಪಿಸಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮೂಲಕ ಪಿಎಂಎಫ್ಎಂಇ ಯೋಜನೆಯಿಂದ 20 ಲಕ್ಷ ಸಾಲ ಪಡೆದು ಮಷಿನ್ ಅಳವಡಿಸಿದರು. ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ಮಾರ್ಕೆಂಟಿಂಗ್ ಶುರು ಮಾಡಿದರು. ರಾಯಚೂರು, ಬೆಂಗಳೂರು, ಹುಬ್ಬಳ್ಳಿ ಹೀಗೆ 28 ಕಡೆ ಫ್ರಾಂಚೈಸಿ ನೀಡಿ ಅಂಗಡಿ ತೆರೆದರು. ಕಪೆಕ್ ನೆರವು ಪಡೆದು ಮಷಿನ್ ಅಳವಡಿಸಿಕೊಳ್ಳುವ ಮೊದಲು ವಾರ್ಷಿಕ ವಹಿವಾಟು 60 ರಿಂದ 70 ಲಕ್ಷ ರೂ. ಇತ್ತು. ಕಳೆದ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ. ವಹಿವಾಟು ನಡೆಸಿದ್ದೇವೆ. ಈ ಬಾರಿ 15 ಕೋಟಿ ವಹಿವಾಟು ನಡೆಯೋ ಮುನ್ಸೂಚನೆ ಸಿಕ್ಕಿದೆ. ತಾಯಿ ವಿಜಯಾ ಅವರ ಹೆಸರಲ್ಲೇ ವ್ಯವಹಾರ ನಡೆಸುತ್ತಿದ್ದೇನೆ. ಸಿಹಿ ಉತ್ಪಾದನಾ ಘಟಕದ ಸಂಪೂರ್ಣ ಉಸ್ತುವಾರಿ ಪತ್ನಿ ಲಕ್ಷ್ಮೀ ಐಹೊಳಿ ಹೊತ್ತಿದ್ದಾರೆ. ಲಕ್ಷ್ಮೀ ಅವರ ಸಹೋದರ ಸುನಿಲ್ ಬೆಂಗಳೂರು ಮಾರ್ಕೆಟಿಂಗ್ ನೋಡಿಕೊಳ್ತಾರೆ. ಉಳಿದದ್ದು ನನ್ನ ಕೆಲಸ ಎಂದು ‘ಕನ್ನಡಪ್ರಭ’ದೊಂದಿಗೆ ಕರದಂಟಿನ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಹೇಳಿದವರು ಮೂರನೇ ತಲೆಮಾರಿನ ಸಂತೋಷ್ ಐಹೊಳಿ. ವಿಜಯಾ ಕರದಂಟು ಅಂಗಡಿಗಳಲ್ಲಿ ಐದು ಬಗೆಯ ಕರದಂಟು ದೊರೆಯುತ್ತದೆ. ಸುಪ್ರೀಂ ಕರದಂಟಿಗೆ ಹೆಚ್ಚು ಬೇಡಿಕೆ ಇದೆ. ಕರಂದಂಟು ಪೀಸ್‌ಗಳನ್ನು ಚಾಕ್ಲೇಟ್ ಮಾದರಿ ಪ್ಯಾಕಿಂಗ್ ಮಾಡಿದ್ದು ತುಂಬಾ ಜನರಿಗೆ ಇಷ್ಟವಾಗಿ, ಬೇಡಿಕೆ ಹೆಚ್ಚಾಗಿದೆ. ಡ್ರೈಫ್ರೂಟ್ಸ್ ಮತ್ತು ಬೆಲ್ಲ ಇರುವದರಿಂದ 3 ರಿಂದ 8 ತಿಂಗಳವರೆಗೂ ಕೆಡದಂತೆ ಇಡಬಹುದಾಗಿದೆ. ಖರ್ಜೂರ, ಅಂಜೀರ್, ಮಿಕ್ಸ್ ಡ್ರೈಫ್ರೂಟ್ ಹೀಗೆ ಬಗೆ ಬಗೆಯ ಕರದಂಟುಗಳ ಜೊತೆಗೆ ಡಿಂಕ್ ಲಾಡು, ರಾಗಿ ಲಾಡು, ಹನಿ ಲಾಡು, ಓಟ್ಸ್ ಲಡ್ಡು, ಶುಗರ್ ಲೆಸ್ ಲಡ್ಡು ಸೇರಿದಂತೆ 35 ಬಗೆಯ ಸಿಹಿ ಹಾಗೂ ಖಾರಾ ತಿನಿಸುಗಳು ವಿಜಯಾ ಕರದಂಟು ಅಂಗಡಿಗಳಲ್ಲಿ ಲಭ್ಯ ಇವೆ. 28 ಫ್ರಾಂಚೈಸಿ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳು ಹಾಗೂ ನಗರಗಳ 200 ಅಂಗಡಿಗಳಲ್ಲೂ ವಿಜಯಾ ಕರದಂಟಿನ ಉತ್ಪನ್ನ ಸಿಗುವಂತೆ ಮಾಡಿದ್ದಾರೆ. ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲೂ ಬೇಡಿಕೆ ಇದೆ ಎನ್ನುತ್ತಾರೆ ಸಂತೋಷ್ ಐಹೊಳಿ. ರಫ್ತು - ಮಿಲಿಟರಿ ಸರಬರಾಜು ಗುರಿ:
ಬಹುತೇಕ ಸಿಹಿ ತಿನಿಸುಗಳನ್ನು ಆರ್ಗ್ಯಾನಿಕ್ ಬೆಲ್ಲ ಬಳಸಿಯೇ ಮಾಡುತ್ತೇವೆ. ಬೆಲ್ಲದ ಪೇಡೆಯು ಭಾರೀ ಬೇಡಿಕೆ ಪಡೆದುಕೊಂಡಿದೆ. ಕಪೆಕ್‌ನವರು ಸಾಲದ ಜೊತೆಗೆ ವಿವಿಧ ಮೇಳಗಳಲ್ಲಿ ಉಚಿತ ಮಳಿಗೆ ನೀಡಿದ್ದು ಮಾರ್ಕೆಟಿಂಗ್‌ಗೆ ಹೆಚ್ಚು ಅನುಕೂಲವಾಯಿತು. ಹೊರ ರಾಜ್ಯ ಮತ್ತು ದೇಶದ ಸಂಪರ್ಕಗಳು ಅದರಿಂದಲೇ ದೊರೆತವು. ವಿದೇಶಕ್ಕೆ ರಫ್ತು ಮಾಡುವುದು ಹಾಗು ನಮ್ಮ ಭಾರತೀಯ ಸೈನ್ಯಕ್ಕೆ ಸರಬರಾಜು ಮಾಡುವ ಆಸೆ ಇದೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಭಾರತೀಯ ಸೈನ್ಯದ ಕ್ಯಾಂಟಿನ್ ಜೊತೆ ಎರಡು ಸುತ್ತಿನ ಮಾತುಕತೆ ನಡೆದಿದೆ. ಉತ್ತಮ ಪೋಷಕಾಂಶ ಇರುವ ಕರದಂಟು ಸೈನಿಕರ ದಣಿವಾರಿಸುವ ಜೊತೆಗೆ ಶಕ್ತಿ ನೀಡುತ್ತದೆ. ರಫ್ತು ಮಾಡಲು ಅಗತ್ಯ ಸರ್ಟಿಫಿಕೇಶನ್ ಕೆಲಸ ಮಾಡಬೇಕಿದೆ ಎಂದರು ಸಂತೋಷ್ ಐಹೊಳಿ.
ವಿಜಯಾ ಕರದಂಟಿನ ಉತ್ಪನ್ನಗಳಿಗೆ ಸಂಪರ್ಕಿಸಿ – 9880112002 ಅಥವಾ www.amingadkaradant.comಗೆ ಭೇಟಿ ನೀಡಿ ನೇರ ಖರೀದಿಸಬಹುದು. 15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.