ಸಾರಾಂಶ
ಅಂಶಿ ಪ್ರಸನ್ನಕುಮಾರ್
ಮೈಸೂರು : ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಅನ್ನದಾತರನ್ನು ಕುರಿತು ಮೂರನೇ ಬಾರಿಗೆ ಸತತ ನೂರೊಂದು ದಿನಗಳು ಪ್ರಕಟವಾದ ‘ಉಳುವ ಯೋಗಿಯ ನೋಡಲ್ಲಿ’ ಸರಣಿ ಲೇಖನಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಏಪ್ರಿಲ್ 1 ರಿಂದ ಜುಲೈ 10 ರವರೆಗೆ ನಿರಂತರವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ ಕೃಷಿಯಲ್ಲಿ ಸಾಧನೆ ಮಾಡಿರುವ 1 ಎಕರೆಯಿಂದ 35 ಎಕರೆವರೆಗೆ ಇರುವ, ಸಾವಯವ, ಸಮಗ್ರ, ರಾಸಾಯನಿಕ ಕೃಷಿ ಅಳವಡಿಸಿಕೊಂಡಿರುವ ರೈತರು ಈ ಸರಣಿಯಲ್ಲಿ ಬಂದು ಹೋದರು. ತಾಲೂಕು, ಜಿಲ್ಲಾ ಮಟ್ಟದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದವರು, ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿ ನಡೆಯುವ ರೈತಮೇಳದಲ್ಲಿ ಪ್ರಶಸ್ತಿ ಪಡೆದವರು, ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ದಸರಾ ಮಹೋತ್ಸವ ಸಂದರ್ಭದಲ್ಲಿ ರೈತ ದಸರಾ ವತಿಯಿಂದ ಸನ್ಮಾನಿತರಾದವರು, ಯಾವುದೇ ಪ್ರಶಸ್ತಿ ಪಡೆಯವರು ಇಲ್ಲಿ ಇದ್ದಾರೆ. ಮಕ್ಕಳನ್ನು ಎಂಜಿನಿಯರ್, ಡಾಕ್ಟರ್, ಸಹಾಯಕ ಪ್ರಾದ್ಯಾಪಕರು ಮಾಡಿಸಿದ ರೈತರು ಇದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ನಾಗನಹಳ್ಳಿ ಸಾವಯವ ಸಂಶೋಧನಾ ಕೇಂದ್ರ, ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ಸಿ. ರಾಮಚಂದ್ರು, ಕೃಷಿ, ತೋಟಗಾರಿಕೆ ಸೇರಿದಂತೆ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳು ಅಗತ್ಯ ಮಾಹಿತಿ ನೀಡಿದರು.
ನಿಂಬೆ, ಕರಿಬೇವಿನ ಸೊಪ್ಪು ರಾಗಿ ಹಪ್ಪಳ, ಸಂಡಿಗೆ ಸದ್ದು!
ನಿಂಬೆ, ಕರಿಬೇವಿನ ಸೊಪ್ಪು ಮಾರಾಟದಿಂದ ಒಂದೂವರೆ ಲಕ್ಷ ಗಳಿಸುತ್ತಿರುವ ನಗರ್ತಹಳ್ಳಿಯ ನಾಗರತ್ನಮ್ಮ, ರಾಗಿ ಹಪ್ಪಳ, ಸಂಡಿಗೆ, ಲಾಡು ತಯಾರಿಸುವ ಹಂಪಾಪುರದ ಸುಧಾಮಣಿ, ಹೀರೆಕಾಯಿಂದಲೇ ಮೂರ್ನಾಲ್ಕು ಲಕ್ಷ ಆದಾಯ ಪಡೆಯುತ್ತಿರುವ ಚಿನ್ನಂಬಳ್ಳಿಯ ಸಿ.ಪಿ. ಚಿಕ್ಕಬುದ್ದಿ ಸುದ್ದಿಗಳು ಹೆಚ್ಚು ಸದ್ದು ಮಾಡಿದವು,
ಇದಲ್ಲದೇ ಡ್ಯಾಂ ಕಟ್ಟಲು ಬಂದು ಕೃಷಿಕರಾಗಿ ಬದಲಾದ ಬೀಚನಹಳ್ಳಿಯ ಜಿ.ವಿ.ಸೀತಾರಾಂ, ಮೀನುಕೃಷಿಯಲ್ಲಿ ಸಾಧಕನಾಗಿ ಈಗ ಹೊರಗುತ್ತಿಗೆ ಕಾರ್ಮಿಕನಾಗಿರುವ ಬಿದರಹಳ್ಳಿ ಕಾಲೋನಿಯ ಜ್ಯೋತಿಸಿದ್ದಯ್ಯ, ಅರ್ಧ ಎಕರೆ ಜಮೀನಿನಲ್ಲಿಯೇ ಮೀನುಗಾರಿಕೆ ಮಾಡಿ, ಜೀವನ ನಿರ್ವಹಿಸುತ್ತಿರುವ ಟೈಗರ್ ಬ್ಲಾಕಿನ ಲೋಕಸೇನಾ, ಒಂದೂವರೆ ಎಕರೆಯಲ್ಲಿ ಸಾವಯವ ತೋಟಗಾರಿಕೆ ಮಾಡುತ್ತಾ 9 ಲಕ್ಷ ರು. ಆದಾಯ ಮಾಡುತ್ತಿರುವ ಯಾಚೇನಹಳ್ಳಿಯ ವೈ.ಕೆ. ಚಂದ್ರು, ಕನಕಾಂಬರ ಬೆಳೆದು ಹೆಚ್ಚು ಆದಾಯ ಮಾಡುತ್ತಿರುವ ಕೋಣಗಹಳ್ಳಿಯ ಎಂ. ನಾಗೇಂದ್ರ, ಡ್ರಮ್ ಸೀಡರ್‌ನಿಂದ ಭತ್ತದ ನಾಟಿ ಮಾಡುವ ಹೊರಳಹಳ್ಳಿಯ ಎಚ್.ಎಂ. ದಶಕಂಠ, ಸುಗಂಧರಾಜ ಹೂವು ಬೆಳೆದು ಹೆಚ್ಚು ಆದಾಯ ಮಾಡುತ್ತಿರುವ ಕುರಬೂರಿನ ಸಿದ್ದೇಶ್, ಅರಿಸಿನ, ತೆಂಗು ಜೊತೆಗೆ ಟೆರೇಸ್ ಗಾರ್ಡನ್, ಜೇನು ಕೃಷಿ ಮಾಡುತ್ತಿರುವ ಆರ್. ಜಗನ್ನಾಥನ್,. ಕೈತೋಟದ ಸಾಧಕಿ ಎಚ್.ಎನ್. ದಮಯಂತಿ, ಪಪ್ಪಾಯದಲ್ಲಿ ವಾರ್ಷಿಕ 20 ಲಕ್ಷ ರು.ವರೆಗೆ ಆದಾಯ ಮಾಡುತ್ತಿರುವ ಹುಳಿಮಾವು ಎಚ್.ಡಿ, ಮಹೇಶ್, ತೋಟಗಾರಿಕೆ ಪದ್ಧತಿಯಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸುತ್ತಾ ಪ್ರಸ್ತುತ ಐರ್ಲೆಂಡ್ ಪ್ರವಾಸದಲ್ಲಿರುವ ಹಳ್ಳದ ಕೊಪ್ಪಲು ಶಿವಣ್ಣ, ತಮ್ಮ ಚಿತ್ರಕೂಟವನ್ನು ಪ್ರಯೋಗ ಶಾಲೆ ಮಾಡುತ್ತಿರುವ ವಡ್ಡಗೆರೆ ಚಿನ್ನಸ್ವಾಮಿ ಅವರ ಯಶೋಗಾಥೆಗಳು ಹೆಚ್ಚಿನ ಗಮನ ಸೆಳೆದಿವೆ.
ಇಬ್ಬರು ರೈತರಿಗೆ ಸನ್ಮಾನ, ಒಬ್ಬರಿಗೆ ಪ್ರಶಸ್ತಿ
‘ಕನ್ನಡಪ್ರಭ’ದಲ್ಲಿ 101 ದಿನಗಳು ನಿರಂತರಾಗಿ ಪ್ರಕಟವಾದ ‘ಉಳುವ ಯೋಗಿಯ ನೋಡಲ್ಲಿ’ ಸರಣಿಯ ಇಬ್ಬರು ರೈತರನ್ನು ಸನ್ಮಾನಿಸಲಾಗಿದೆ. ಒಬ್ಬರಿಗೆ ಪ್ರಶಸ್ತಿ ನೀಡಲಾಗಿದೆ.
ಟಿ.ನರಸೀಪುರ ತಾಲೂಕು ಯಾಚೇನಹಳ್ಳಿಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿ ಹಾಗೂ ಮೈಸೂರು ತೋಟಗಾರಿಕೆ ಕಾಲೇಜು ವತಿಯಂದ ನಡೆದ ಕಾರ್ಯಕ್ರಮದಲ್ಲಿ ಬಾಳೆ, ಅಡಿಕೆ, ತೆಂಗು ನರ್ಸರಿಯಲ್ಲಿ ಹೆಸರು ಮಾಡಿರುವ ಕೊಡಗಳ್ಳಿಯ ಕೆ.ಪುಟ್ಟಸ್ವಾಮಿ ಅವರ ಪುತ್ರ ಕಿರಣ್. ಬೀಡನಹಳ್ಳಿಯ ಮೀನು ಕೃಷಿಕ ಬಸವೇಗೌಡ, ಅವರನ್ನು ಸನ್ಮಾನಿಸಲಾಗಿದೆ.
ಪಿರಿಯಾಪಟ್ಟಣ ತಾಲೂಕು ಪಿ. ಬಸವನಹಳ್ಳಿಯ ಬಿ.ಎ. ಪ್ರಕಾಶ್ ಅವರಿಗೆ ಮೈಸೂರಿನ ಹಿರಿಯ ನಾಗರಿಕ ಮಂಡಳಿಯು ಎಸ್.ವಿ. ಗೌಡಪ್ಪ ಪ್ರಶಸ್ತಿ ನೀಡಿದೆ. ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಯಶೋಗಾಥೆಯ ಆಧಾರದ ಮೇಲೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಹಿಂದಿನ ರೈತ ಸರಣಿಗಳು
- ಅನ್ನದಾತರ ಆತ್ಮಕಥೆ- ಸತತ 101 ದಿನಗಳು
- ಬಿತ್ತಿ ಬೆಳೆದು ಬೆಳಕಾದವರು- ಸತತ 101 ದಿನಗಳು
- ತಂಬಾಕು ಬಿಟ್ಹಾಕಿ ಹೆಬ್ಬೇವು ಬೆಳೆದೇವು- ಸತತ 30 ದಿನಗಳು
- ಅನ್ನದಾತರ ಮತ್ತಷ್ಠು ಕಥೆಗಳು- ಬಿಡಿ ಬಿಡಿ 65 ಲೇಖನಗಳು
ರೈತರ ಸರಣಿ- ಪತ್ರಿಕಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು
ಉಳುವ ಯೋಗಿಯ ನೋಡಲ್ಲಿ- ನೂರೊಂದು ಮಂದಿ ರೈತರ ಕೃಷಿ ಬದುಕಿನ ಯಶೋಗಾಥೆ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ಸರಣಿ ಬರಹವಾಗಿ ಪ್ರಕಟವಾಗುವ ಮೂಲಕ ಪತ್ರಿಕಾ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಇಂದಿನ ದಿನಮಾನಗಳಲ್ಲಿ ದಿನಪತ್ರಿಕೆಗಳು ಕಣ್ಣಿಗೆ ರಾಚುವಂತೆ ಸುದ್ದಿ ಪ್ರಕಟಿಸಲು ಪೈಪೋಟಿಗೆ ಬಿದ್ದಿವೆ. ಮುಖ್ಯವಾಗಿ ರಾಜಕೀಯ, ರಾಜಕಾರಣದ ಟೀಕೆ - ಟಿಪ್ಪಣಿಗಳು, ಆರೋಪ - ಪ್ರತ್ಯಾರೋಪಗಳು, ಸಿನಿಮಾ, ಕ್ರೀಡಾ ಸೆಲೆಬ್ರಿಟಿಗಳ ವರ್ಣರಂಜಿತ ಸುದ್ದಿ ತುಣುಕುಗಳು, ಯುವ ಸಮುದಾಯದ ದಿಕ್ಕು ತಪ್ಪಿಸುವ ಜಾಹೀರಾತುಗಳು ತುಂಬಿರುತ್ತವೆ. ಆದರೆ, ಸಕಲ ಜೀವ ಸಂಕುಲಗಳಿಗೆ ಆಹಾರ ಒದಗಿಸುವ, ಪರಿಸರ ಸಂರಕ್ಷಿಸುವ ರೈತರ ಶ್ರಮದಾಯಕ ಕೃಷಿ ಯಶೋಗಾಥೆಗಳು ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ.
ಮರಳಿ ಮಣ್ಣನ್ನು ಹಾಗೂ ಮಣ್ಣಿನ ಮಕ್ಕಳನ್ನು ನೆನೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಅಪರೂಪದ ವ್ಯಕ್ತಿಯಾಗಿ, ಪತ್ರಕರ್ತರಾಗಿ, ಮಣ್ಣಿನ ವಾಸನೆಯ ರೈತ ಬಂಧುವಾಗಿ ನಮ್ಮ ನಡುವೆ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ಪತ್ರಿಕಾ ಧರ್ಮ ಹಾಗೂ ಕಾಯಕ ನಿಷ್ಟೆ ಪಾಲಿಸುತ್ತಿರುವ ಅಂಶಿ ಪ್ರಸನ್ನಕುಮಾರ್ ಅವರು ಕಳೆದ ಹಲವಾರು ವರ್ಷಗಳಿಂದ ರೈತ ಬದುಕಿನ ಯಶೋಗಾಥೆಗಳನ್ನು ಸಮಾಜಕ್ಕೆ ತಿಳಿಸುವ ಸಾರ್ಥಕ ಕೆಲಸ ಮಾಡುತ್ತಿದ್ದಾರೆ.
ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಸುಖಿ ಜೀವನಕ್ಕಾಗಿ ನಗರ ಮಹಾನಗರಗಳತ್ತ ಮುಖ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕೃಷಿಯನ್ನು ನಂಬಿ ಗ್ರಾಮೀಣ ಬದುಕಿನಲ್ಲೂ ಸುಖಕರವಾದ ಆರೋಗ್ಯಕರವಾದ ನೆಮ್ಮದಿಯ ಜೀವನ ನಡೆಸಬಹುದು ಎಂಬುದನ್ನು ಬಹಳ ಮಂದಿ ಕಣ್ಣಿಗೆ ಕಾಣುವಂತೆ ತೋರಿಸಿದ್ದಾರೆ. ಇವರೆಲ್ಲರ ಸಾಧನೆಯ ವೃತ್ತಿ ಬದುಕನ್ನು ಪತ್ರಿಕೆಯ ಮೂಲಕ ಅನಾವರಣಗೊಳಿಸಿ ಕೃಷಿ ಬದುಕಲ್ಲೂ ಖುಷಿ ಕಾಣಬಹುದೆಂಬುದನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಅಂಶಿ ಅವರಿಗೆ ಹಾಗೂ ಸತತ ನೂರೊಂದು ದಿನ ಅಂಕಣ ಬರೆಯಲು ಅವಕಾಶ ನೀಡಿರುವ ಪ್ರಧಾನ ಸಂಪಾದಕರಾದ ರವಿ ಹೆಗಡೆ ಮತ್ತು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ.
- ಪ್ರೊ.ಸಿ.ಡಿ.ಪರಶುರಾಮ, ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರು, ಕನ್ನಡ ವಿಭಾಗ, ಯುವರಾಜ ಕಾಲೇಜು, ಮೈಸೂರು