ನೀವು ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರೇ? ಸಾಲದ ಇಎಂಐ ಅಥವಾ ಕಾರ್ಡ್ ಬಿಲ್ ಪಾವತಿಯನ್ನು ಗಡುವಿನ ದಿನಾಂಕ ಮೀರಿ ಮುಂದೂಡುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಇನ್ಮುಂದೆ ಎಚ್ಚರದಿಂದ ಇರಲೇಬೇಕು.
ನೀವು ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರೇ? ಸಾಲದ ಇಎಂಐ ಅಥವಾ ಕಾರ್ಡ್ ಬಿಲ್ ಪಾವತಿಯನ್ನು ಗಡುವಿನ ದಿನಾಂಕ ಮೀರಿ ಮುಂದೂಡುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಇನ್ಮುಂದೆ ಎಚ್ಚರದಿಂದ ಇರಲೇಬೇಕು. ಏಕೆಂದರೆ, ಆರ್‌ಬಿಐ ಜಾರಿಗೆ ತಂದಿರುವ ನಿಯಮದ ಪ್ರಕಾರ, ಹಣಕಾಸು ಸಂಸ್ಥೆಗಳು ಈಗ ಪ್ರತಿ 15 ದಿನಗಳಿಗೊಮ್ಮೆ ಗ್ರಾಹಕರ ಸಾಲ ಮರುಪಾವತಿಯ ಸಮಗ್ರ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕಿದೆ.
ಹಳೆಯ ನಿಯಮದಂತೆ ಬ್ಯಾಂಕುಗಳು ಗ್ರಾಹಕರ ಸಾಲದ ವಹಿವಾಟುಗಳನ್ನು ತಿಂಗಳಿಗೊಮ್ಮೆ ಮಾತ್ರ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಕಳುಹಿಸುತ್ತಿದ್ದವು. ಇದರಿಂದಾಗಿ ಗ್ರಾಹಕರು ಯಾವುದಾದರೂ ತಿಂಗಳು ಇಎಂಐ ಕಟ್ಟಲು ವಿಳಂಬ ಮಾಡಿದರೆ, ಅದು ಸಿಬಿಲ್ ರಿಪೋರ್ಟ್‌ನಲ್ಲಿ ಕಾಣಿಸಿಕೊಳ್ಳಲು 30 ರಿಂದ 45 ದಿನಗಳು ಬೇಕಾಗುತ್ತಿತ್ತು.
ಹೊಸ ವ್ಯವಸ್ಥೆಯಲ್ಲಿ, ಬ್ಯಾಂಕುಗಳು ಪ್ರತಿ ಹದಿನೈದು ದಿನಕ್ಕೊಮ್ಮೆ ಸಾಲಗಾರರ ಡೇಟಾವನ್ನು ನವೀಕರಿಸಲಿವೆ. ಇದರಿಂದ ಗ್ರಾಹಕರ ಯಾವುದೇ ಮರುಪಾವತಿ ವಿಳಂಬವು ತಕ್ಷಣವೇ ಅವರ ಕ್ರೆಡಿಟ್ ಪ್ರೊಫೈಲ್‌ನಲ್ಲಿ ದಾಖಲಾಗಲಿದ್ದು, ಕ್ರೆಡಿಟ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರಲಿದೆ.
ಗ್ರಾಹಕರ ಮೇಲಾಗುವ ಪರಿಣಾಮಗಳು
1. ಕ್ರೆಡಿಟ್ ಕಾರ್ಡ್ ಬಿಲ್ ಅಥವಾ ಸಾಲದ ಕಂತನ್ನು ಕೇವಲ ಹತ್ತು-ಹದಿನೈದು ದಿನ ತಡವಾಗಿ ಕಟ್ಟಿದರೂ, ಅದು ತಕ್ಷಣವೇ ಸಿಬಿಲ್ ದಾಖಲೆಗೆ ಸೇರಿ ಸ್ಕೋರ್ ಕುಸಿಯುತ್ತದೆ. ಮುಂದಿನ ದಿನಗಳಲ್ಲಿ ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಇದು ಅಡ್ಡಿಯಾಗಬಹುದು.
2. ನೀವು ಬಾಕಿ ಉಳಿಸಿಕೊಂಡಿದ್ದ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪೂರ್ಣವಾಗಿ ಪಾವತಿಸಿ ನೋ ಡ್ಯೂಸ್ ಪಡೆದರೆ, ಕೇವಲ 15 ದಿನಗಳಲ್ಲಿ ಆ ಮಾಹಿತಿ ಸಿಬಿಲ್‌ನಲ್ಲಿ ದಾಖಲಾಗುತ್ತದೆ. ಈ ಮೊದಲು ಸ್ಕೋರ್ ಸುಧಾರಿಸಲು ತಿಂಗಳುಗಟ್ಟಲೆ ಕಾಯಬೇಕಿದ್ದ ಗ್ರಾಹಕರಿಗೆ ಇದು ವರದಾನವಾಗಲಿದೆ.
3. ಕೆಲವು ಗ್ರಾಹಕರು ಹಳೆಯ ಸಾಲದ ಮಾಹಿತಿ ಸಿಬಿಲ್‌ನಲ್ಲಿ ಅಪ್‌ಡೇಟ್ ಆಗುವುದರೊಳಗೆ ಮತ್ತೊಂದು ಬ್ಯಾಂಕ್‌ನಲ್ಲಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಇನ್ಮುಂದೆ ಅಂತಹ ಅತಿಯಾದ ಸಾಲ ಪಡೆಯುವಿಕೆ ಸಾಧ್ಯವಾಗುವುದಿಲ್ಲ.
ಗ್ರಾಹಕರು ಪಾಲಿಸಬೇಕಾದ 4 ಸೂತ್ರಗಳು
- ಇಎಂಐ ಕಡಿತವಾಗುವ ದಿನಾಂಕಕ್ಕಿಂತ ಕನಿಷ್ಠ 2 ದಿನ ಮುಂಚಿತವಾಗಿಯೇ ಉಳಿತಾಯ ಖಾತೆಯಲ್ಲಿ ಅಗತ್ಯ ಹಣ ಇರುವಂತೆ ನೋಡಿಕೊಳ್ಳಿ. ಕೊನೆಯ ಕ್ಷಣದ ಚೆಕ್ ಬೌನ್ಸ್ ಅಪಾಯ ತಪ್ಪಿಸಿ.
- ಕ್ರೆಡಿಟ್ ಕಾರ್ಡ್ ಬಿಲ್‌ನಲ್ಲಿ ಕೇವಲ ಕನಿಷ್ಠ ಮೊತ್ತ ಕಟ್ಟುವುದನ್ನು ಬಿಟ್ಟು, ಸಂಪೂರ್ಣ ಬಿಲ್ ಅನ್ನು ಗಡುವಿನ ಮುನ್ನವೇ ಪಾವತಿಸಿ.
- ಆರ್‌ಬಿಐ ನಿಯಮದ ಪ್ರಕಾರ ವರ್ಷಕ್ಕೊಮ್ಮೆ ಉಚಿತವಾಗಿ ಪೂರ್ಣ ಕ್ರೆಡಿಟ್ ವರದಿ ಪಡೆಯುವ ಹಕ್ಕಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಹೆಸರಿನಲ್ಲಿ ಯಾವುದೇ ತಪ್ಪಾದ ದಾಖಲೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.
- ಒಂದು ವೇಳೆ ನಿಮ್ಮ ಸಿಬಿಲ್ ವರದಿಯಲ್ಲಿ ತಪ್ಪು ದಾಖಲಾಗಿದ್ದು, ದೂರು ನೀಡಿದ 30 ದಿನಗಳೊಳಗೆ ಬ್ಯಾಂಕ್ ಅಥವಾ ಕ್ರೆಡಿಟ್ ಬ್ಯೂರೋ ಅದನ್ನು ಸರಿಪಡಿಸದಿದ್ದರೆ, ಗ್ರಾಹಕರಿಗೆ ದಿನವೊಂದಕ್ಕೆ ₹100 ದಂಡ ಪರಿಹಾರ ನೀಡಬೇಕೆಂಬ ನಿಯಮವೂ ಜಾರಿಯಲ್ಲಿದೆ.
