ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ.
-ಡಾ। ಮುರಲೀ ಮೋಹನ್‍ಚೂಂತಾರು
MDS, DNB, MOSRCSEd (U.K), M.B.A
-ಕಾರ್ಗಿಲ್ ವಿಜಯ್ ದಿವಸ- ಜುಲೈ 26
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ 1999 ಮೇ 3ರಂದು ಆರಂಭವಾಗಿ ಜುಲೈ 26ರಂದು ಅಧಿಕೃತವಾಗಿ ಭಾರತದ ವಿಜಯದೊಂದಿಗೆ ಮುಕ್ತಾಯವಾಯಿತು. ಈ ಕಾರ್ಗಿಲ್ ಯುದ್ಧದ ಕುರುಹಾಗಿ ಕಾರ್ಗಿಲ್ ಯುದ್ಧ ಸ್ಮಾರಕ ಅಥವಾ ದ್ರಾಸ್ ಯುದ್ಧ ಸ್ಮಾರಕವನ್ನು ಭಾರತೀಯ ಸೇನೆ ಲಡಾಕ್ ಪ್ರಾಂತ್ಯದ ಕಾರ್ಗಿಲ್ ಜಿಲ್ಲೆಯ ಕಾರ್ಗಿಲ್ ನಗರದ ಹತ್ತಿರದ ದ್ರಾಸ್ ಎಂಬ ಪಟ್ಟಣದಲ್ಲಿ ನಿರ್ಮಿಸಿತು. ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಿಂದ 5 ಕಿಲೋ ಮೀಟರ್ ದೂರದಲ್ಲಿರುವ ದ್ರಾಸ್ ಪಟ್ಟಣದಲ್ಲಿ ಟೈಗರ್ ಹಿಲ್ ಸಮೀಪ ಈ ಸ್ಮಾರಕ ಇದೆ. ಪ್ರತಿ ದಿನ ಸಾವಿರಾರು ಮಂದಿ ಈ ಸ್ಮಾರಕಕ್ಕೆ ಭೇಟಿ ನೀಡಿ ವೀರ ಜವಾನರ ಪ್ರಾಣತ್ಯಾಗದ ಸ್ಮಾರಕವನ್ನು ನೋಡಿ ದೇಶಕ್ಕಾಗಿ ಸಮರ್ಪಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ ಮತ್ತು ದೇಶಭಕ್ತಿಯನ್ನು ಆವಾಹನೆ ಮಾಡಿಕೊಳ್ಳುತ್ತಾರೆ.
ವೀರ ಯೋಧರ ಸ್ಮರಣೆ:
ಈ ಸ್ಮಾರಕವನ್ನು 108 ಎಂಜಿನಿಯರ್ ರೆಡಿಮೇಡ್ ತುಕಡಿ 2000 ರಲ್ಲಿ ನಿರ್ಮಿಸಿತು. ಆ ಬಳಿಕ 2014ರಲ್ಲಿ ಭಾರತ ಸೇನೆ ಸರ್ಕಾರದ ನೆರವಿನಿಂದ ಪೂರ್ಣ ಪ್ರಮಾಣದ ಈಗಿನ ಸುಂದರ ಸ್ಮಾರಕವನ್ನು ನಿರ್ಮಿಸಲಾಯಿತು. ಪಿಂಕ್ ಸ್ಯಾಂಡ್ ಸ್ಟೋನ್‍ನಿಂದ ನಿರ್ಮಿಸಲಾದ ಈ ಸ್ಮಾರಕದಲ್ಲಿ ಹಿತ್ತಾಳೆಯ ತಟ್ಟೆಯಲ್ಲಿ ಯುದ್ಧದಲ್ಲಿ ಹುತಾತ್ಮರಾದ ವೀರ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಈ ಸ್ಮಾರಕವನ್ನು ಯುದ್ಧ ನಡೆದ ಟೋಲೊರಿಂಗ್ ಹೈಟ್ಸ್, ಟೈಗರ್ ಹಿಲ್ಸ್ ಮತ್ತು 4875 ಪಾಯಿಂಟ್ (ಬಾತ್ರಾ ಟಾಪ್) ನಿಂದ ಕಾಣಬಹುದಾಗಿದೆ. ಈ 3 ಜಾಗದಲ್ಲಿ ಕಾರ್ಗಿಲ್ ಕದನ ನಡೆದಿತ್ತು. ಈ ಸ್ಮಾರಕದಲ್ಲಿ ಕ್ಯಾಪ್ಟನ್ ಮನೋಜ್ ಪಾಂಡೆ ಗ್ಯಾಲರಿ ಕೂಡಾ ಇದೆ. ಅವರಿಗೆ ಮರಣೋತ್ತರವಾಗಿ ಕಾರ್ಗಿಲ್‍ನಲ್ಲಿ ಹುತಾತ್ಮರಾದ ಕುರುಹಾಗಿ ಪರಮ ವೀರ ಚಕ್ರವನ್ನು ನೀಡಿ ಗೌರವಿಸಲಾಗಿದೆ. 2012, ಜುಲೈ 26ರಂದು ಪ್ಲಾಗ್ ಫೌಂಡೇಷನ್ ಆಫ್ ಇಂಡಿಯಾ ಅವರು ಸುಮಾರು 30 ಮೀಟರ್ ಎತ್ತರದ (100 ಅಡಿ) ಮತ್ತು 15 ಕಿಲೋಗ್ರಾಮ್ ತೂಕದ ಧ್ವಜಸ್ತಂಭವನ್ನು ನಿರ್ಮಿಸಿದರು. ಅದರಲ್ಲಿ 11.4/7.6 ಮೀಟರ್ ಉದ್ದಗಲದ ಭಾರತೀಯ ಧ್ವಜವನ್ನು ಅರಳಿಸಲಾಗಿದೆ. ಇದೊಂದು ರಾಷ್ಟ್ರೀಯ ಸ್ಮಾರಕವಾಗಿದ್ದು ವಾರ್ಷಿಕವಾಗಿ 10 ಲಕ್ಷ ಜನ ಈ ಸ್ಮಾರಕವನ್ನು ಭೇಟಿ ಮಾಡಿ ರಾಷ್ಟ್ರ ಭಕ್ತಿಯನ್ನು ಅವಾಹನೆ ಮಾಡಿಕೊಳ್ಳುತ್ತಾರೆ.
ಕಾರ್ಗಿಲ್ ಬಳಿ ಆಪರೇಷನ್ ವಿಜಯ:
3 ಮೇ ಯಿಂದ ಜುಲೈ 26 ರವರೆಗೆ 2 ತಿಂಗಳು, ಮೂರು ವಾರ, 2 ದಿನ ಜಮ್ಮು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ (ಈಗಿನ ಲಡಾಕ್) ನಿಯಂತ್ರಣ ರೇಖೆಯ ಸುತ್ತ ನಡೆದ ಈ ಐತಿಹಾಸಿಕ ಯುದ್ಧದಲ್ಲಿ ಭಾರತದ 1363 ಸೈನಿಕರು ಗಾಯಗೊಂಡು 577 ಮಂದಿ ಹುತಾತ್ಮರಾದರು, ಈ ಯುದ್ಧಕ್ಕೆ ‘ಆಪರೇಷನ್ ವಿಜಯ’ ಎಂದು ಹೆಸರಿಸಿತು. ಭಾರತದ ಭೂ ಸೇನೆ, ವಾಯು ಸೇನೆಯ ನೆರವಿನಿಂದ ಪಾಪಿ ಪಾಕಿಸ್ತಾನದ ನುಸುಳು ಕೋರರನ್ನು ಹೊಸಕಿಹಾಕಿ, ಹೊರದಬ್ಬಿ ಪಾಕ್ ಆಕ್ರಮಿತ ಕಾರ್ಗಿಲ್ ಪ್ರದೇಶವನ್ನು ಮಗದೊಮ್ಮೆ ತನ್ನ ತೆಕ್ಕೆಗೆ ಸೇರಿಸಿಕೊಂಡ ಸ್ಮರಣೀಯ ಯುದ್ಧ ಇದಾಗಿದೆ.
1971ರ ಭಾರತ ಪಾಕ್ ಯುದ್ಧದ ಬಳಿಕ ಭಾರತ ಮತ್ತು ಪಾಕ್ ಸಂಬಂಧ ಮತ್ತಷ್ಟು ಹದಗೆಟ್ಟಿತು. ಸೋಲಿನಿಂದ ಹತಾಶವಾಗಿದ್ದ ಪಾಕಿಸ್ತಾನ ಕಾಲುಕೆರೆದು ಜಗಳವಾಡಲು ತುದಿಗಾಲಲ್ಲಿ ನಿಂತಿತ್ತು. ಏನಾದರೂ ಕುಂಟು ನೆಪಮಾಡಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇತ್ತು. 1980ರ ಸಮಯದಲ್ಲಿ ನಿಯಂತ್ರಣ ರೇಖೆಯ ಸುತ್ತ ವ್ಯಾಪಿಸಿದ ಮಿಲಿಟರಿ ಹೊರ ಠಾಣೆಗಳ ಕಾರಣದಿಂದ ಹಲವಾರು ಬಾರಿ ಮಿಲಿಟರಿ ಚಕಮಕಿಗಳು ಭಾರತ ಪಾಕ್ ನಡುವೆ ನಡೆಯುತ್ತಲೇ ಇತ್ತು. 1990ರ ದಶಕದಲ್ಲಿ ಪಾಕ್ ಪ್ರಚೋದಿತ ಕಾಶ್ಮೀರದ ಪ್ರತ್ಯೇಕವಾದಿ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಲೇ ಇತ್ತು. ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಮತ್ತು ಘರ್ಷಣೆಗಳು ಉಲ್ಬಣಗೊಳ್ಳುತ್ತಲೇ ಇದ್ದವು. ಅದೇ ಸಮಯದಲ್ಲಿ 1998ರಲ್ಲಿ ಭಾರತ ಮತ್ತು ಪಾಕ್ ಪರಮಾಣು ಪರೀಕ್ಷೆ ನಡೆಸಿ ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಜಗತ್ತಿಗೆ ಸಾಬೀತು ಪಡಿಸಿದ್ದು ಉರಿಯುವ ಬೆಂಕಿಗೆ ತುಪ್ಪ ಸವರಿದಂತಾಯಿತು.
ಸ್ನೇಹದ ಹಸ್ತ ಚಾಚಿದ್ದಕ್ಕೆ ಚೂರಿ:
ಭಾರತದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಮತ್ತು ಪಾಕ್ ನಡುವಿನ ಸಂಬಂಧ ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಮಾರ್ಚ್ ತಿಂಗಳು ಭಾರತೀಯರು ಲಾಹೋರಿಗೆ ಬಸ್ ಸಂಚಾರವನ್ನು ಆರಂಭಿಸಿದ್ದರು. ಆದರೆ ಪಾಪಿ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿತ್ತು. ಆಗಿನ ಪಾಕ್ ಪ್ರಧಾನಿ ನವಾಜ್ ಷರೀಫ್ ಒಳಗೊಳಗೆ ಕುದಿಯುತ್ತಲೇ ಇದ್ದರು. ಸ್ನೇಹಿತನ ಸೋಗಿನಲ್ಲಿ ಬೆನ್ನಿಗೆ ಚೂರಿಹಾಕಲು ಹೊಂಚುಹಾಕಿ ಪಾಕಿಸ್ತಾನ ಅವಕಾಶಕ್ಕಾಗಿ ಕಾದು ಕುಳಿತಿತ್ತು. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಶ್ಮೀರ ಸಂಘರ್ಷ ಶಾಂತಿಯುತ ಮತ್ತು ದ್ವಿಪಕ್ಷೀಯ ಪರಿಹಾರ ಒದಗಿಸುವ ಭರವಸೆಯೊಂದಿಗೆ ಫೆಬ್ರವರಿ 1999ರಲ್ಲಿ ಎರಡೂ ದೇಶಗಳು ಲಾಹೋರ್ ಡಿಕ್ಲರೇಷನ್‌ಗೆ ಸಹಿ ಹಾಕಿದರು. ಆದರೆ ಪಾಕಿಸ್ತಾನ ಆಪರೇಷನ್ ಬದ್ರಿ ಎಂಬ ಹೆಸರಿನಿಂದ ತನ್ನ ಪಡೆಗಳನ್ನು ಮತ್ತು ಅರೆ ಸೇನಾ ಪಡೆಗಳನ್ನು ಭಾರತ ನಿಯಂತ್ರಣಾ ರೇಖೆಯ ಭಾಗದಲ್ಲಿ ಕಳುಹಿಸಿದ್ದರು. ನಿಧಾನವಾಗಿ ಕಾರ್ಗಿಲ್ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದು ಕಾಶ್ಮೀರವನ್ನು ಕಾರ್ಗಿಲ್‌ನಿಂದ ಬೇರ್ಪಡಿಸುವ ಹುನ್ನಾರ ಈ ನುಸುಳುವಿಕೆಯಲ್ಲಿತ್ತು. ಆದರೆ ಭಾರತದ ಸೈನಿಕರಿಗೆ ಇದಾವುದರ ಮಾಹಿತಿಯೇ ಇರಲಿಲ್ಲ. ಆರಂಭದಲ್ಲಿ ಒಳ ನುಸುಳುವಿಕೆಯ ಪ್ರಮಾಣದಿಂದ ನುಸುಳುಕೋರರು ಜಿಹಾದಿ ಭಯೋತ್ಪಾದಕರು ಎಂದು ತಿಳಿದಿದ್ದರು. ಆದರೆ ನುಸುಳುಕೋರರು ಬಳಸಿದ ತಂತ್ರಜ್ಞಾನ, ಆಯುಧಗಳ ಬಳಕೆ ಮತ್ತು ಪ್ರಮಾಣವನ್ನು ಕಂಡು ಇದೊಂದು ವ್ಯವಸ್ಥಿತ ಪಾಕ್ ಸೇನೆಯ ಪಿತೂರಿ ಎಂದು ಅರಿತು ತಕ್ಷಣವೇ ಭಾರತ ಸರ್ಕಾರ 2,00,000 ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ ಆಪರೇಷನ್ ವಿಜಯ ಮುಖಾಂತರ ಪ್ರತಿಕ್ರಿಯಿಸಿತು.
ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯದ ಬೆಟ್ಟ ಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್ ಕಾಶ್ಮೀರದ ರಾಜಧಾನಿ ಶ್ರೀನಗರದ 705 ಕಿ.ಮೀ. ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾರ್ಗಿಲ್ ಮುಖಾಂತರ ಹಾದು ಹೋಗುತ್ತದೆ. ಈ ಪ್ರದೇಶದಿಂದ ಪಕ್ಕದ ಹೆದ್ದಾರಿ ಇದಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರವಾದ ಯುದ್ಧ ಭೂಮಿ ಸಿಯಾಚಿನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಹಿಂದೆ ಕಾಶ್ಮೀರ ಮತ್ತು ಕಾರ್ಗಿಲ್ ಸಂಪರ್ಕ ಕಡಿದು ಹಾಕಿದ್ದಲ್ಲಿ ಸಿಯಾಚಿನ್ ಹಿಮ ನದಿಯಿಂದ ಭಾರತ ತನ್ನ ಸೇನೆಯನ್ನು ಹಿಂಪಡೆಯುವಂತೆ ಮಾಡುತ್ತದೆ. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿವಾದಕ್ಕೆ ಹೆಚ್ಚಿನ ಒತ್ತಡ ಹಾಕಿ ಬೇಗನೆ ಪರಿಹಾರ ಮಾಡಿ ಇತ್ಯರ್ಥವಾಗುವಂತೆ ಮಾಡಬಹುದು ಎಂದು ಪಾಕ್ ಸೇನೆ ಬಲವಾಗಿ ನಂಬಿತ್ತು, ಈ ಎಲ್ಲಾ ಪೂರ್ವ ಸಿದ್ಧತೆಯೊಂದಿಗೆ, ದುರಾಲೋಚನೆಯೊಂದಿಗೆ ಪಾಕ್ ಪ್ರಾಯೋಜಿತ ಸೈನಿಕರು ನುಸುಳುಕೋರರ ವೇಷದಲ್ಲಿ ಒಳ ನುಗ್ಗಿ ಕಾರ್ಗಿಲ್ ಕದನಕ್ಕೆ ನಾಂದಿ ಹಾಡಿದರು. ಆದರೆ ಭಾರತದ ವಿವಿಧ ಸೈನಿಕರ ಮುಂದೆ ಪಾಕ್ ಸೈನಿಕರ ಆಟ ನಡೆಯಲಿಲ್ಲ. ಮತ್ತೆ ದೊಣ್ಣೆ ಕೊಟ್ಟು ಪೆಟ್ಟು ತಿಂದು ಬಾಲ ಸುಟ್ಟ ಬೆಕ್ಕಿನಂತೆ ಸೋತು ಸುಣ್ಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡು ಇದ್ದ ಮರ್ಯಾದೆಯನ್ನು ಹರಾಜು ಹಾಕಿಕೊಂಡಿತು ಎಂದರೆ ಅತಿಶಯೋಕ್ತಿಯಾಗಲಾರದು.
ಪಾಕ್‌ನ ಚಳಿ ಬಿಡಿಸಿದ ಭಾರತ:
ಕಾರ್ಗಿಲ್ ಪ್ರದೇಶದ ನಿಯಂತ್ರಣ ರೇಖೆಯಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್‍ಗೆ ಇಳಿಯತ್ತದೆ. ಇದರಿಂದ ಇಲ್ಲಿ ಗಡಿ ಕಾಯುವುದು ಬಹಳ ಸವಾಲಿನ ಕೆಲಸ. ಈ ಕಾರಣದಿಂದ ಎರಡು ಭಾಗದ ಸೈನಿಕರು ಸ್ಥಳಾಂತರಗೊಳ್ಳುವುದು ವಾಡಿಕೆ. ಇದೇ ಅವಕಾಶವನ್ನು ದುರ್ಬಳಕೆ ಮಾಡಿ, ಮೋಸದಿಂದ ಒಳ ನುಗ್ಗಿ, ಯುದ್ಧಕ್ಕೆ ಕಾರಣವಾದ ಪಾಕ್ ಸೈನಿಕರ ದುರ್ಬುದ್ಧಿಗೆ ಹಿಡಿದ ಕೈಗನ್ನಡಿ. ಪಾಕ್ ಮೋಸದಾಟ ತಿಳಿಯದ ಭಾರತದ ಸೈನಿಕರು ಯಾವುದೇ ಸಂದೇಹ ಪಡದೆ ತಮ್ಮ ಕರ್ತವ್ಯದಲ್ಲಿ ಮಗ್ನರಾಗಿದ್ದರು. ಕೆಲವು ಕುರಿಗಾಯಿ ಜನರು ಭಾರತದ ಸೈನಿಕರಿಗೆ ವಿಷಯ ತಿಳಿಸಿದ ಬಳಿಕವಷ್ಟೇ ಸತ್ಯ ಹೊರಗೆ ಬಂತು. ವಿಚಾರ ಸತ್ಯಾಸತ್ಯತೆ ತಿಳಿಯಲು ಹೋದ ಭಾರತದ ಸೈನಿಕರನ್ನು ಹಿಡಿದು ಚಿತ್ರಹಿಂಸೆ ನೀಡಿ ಕೊಂದರು. ಇದನ್ನೇ ಗಂಭೀರವಾಗಿ ಪರಿಗಣಿಸಿ ಭಾರತ ತಕ್ಷಣವೇ ತನ್ನ ಸೈನ್ಯವನ್ನು ಸಜ್ಜುಗೊಳಿಸಿ ಮೇ 3ರಂದು ಆಪರೇಷನ್ ವಿಜಯ ಆರಂಭಿಸಿತು. ಭಾರತದ ಭೂ ಸೇನೆಯ ಪಿರಂಗಿ, ವಾಯು ಸೇನೆಯ ಮಿಗ್-29 ಯುದ್ಧ ವಿಮಾನಗಳ ಮುಂದೆ 5000 ಸಂಖ್ಯೆಯ ಪಾಕ್ ಸೈನಿಕರ ಆರ್ಭಟ ಜಾಸ್ತಿ ದಿನ ಸಾಗಲಿಲ್ಲ. ಆಪರೇಷನ್ ಸಫೇದ್ ಸಾಗರ ಮತ್ತು ಆಪರೇಷನ್ ತಲ್ವಾರ್ (ನೌಕಾ ಪಡೆ) ಮುಖಾಂತರ ಪಾಕಿಸ್ತಾನ ಸೇನೆಯನ್ನು ಭಾರತೀಯ ಸೇನೆ ಬಗ್ಗುಬಡಿಯಿತು. ಜುಲೈ 24ರಂದೇ ಯುದ್ಧ ಕೊನೆಗೊಂಡು ಭಾರತ ಕಾರ್ಗಿಲ್ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೆ ಪ್ರಧಾನಿ ವಾಜಪೇಯಿ ಅಧಿಕೃತವಾಗಿ ಜುಲೈ 26ರಂದು ಯುದ್ಧ ಮುಕ್ತಾಯವನ್ನು ಘೋಷಿಸಿದರು.
ಈ ಯುದ್ಧದಲ್ಲಿ ಬಲಿದಾನಗೈದ ನಾಯಕರಿಗೆ ಸೇನೆಯ ಪರಮೋಚ್ಚ ಪ್ರಶಸ್ತಿ ಪರಮ ವೀರ ಚಕ್ರವನ್ನು ರೈಫಲ್ ಮ್ಯಾನ್ ಸಂಜಯ್ ಕುಮಾರ್, ಗ್ರೆನೇಡಿಯಲ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾ. ಮನೋಜ್ ಕುಮಾರ್ ಪಾಂಡೆ ಮತ್ತು ಕ್ಯಾ. ವಿಕ್ರಮ್ ಬಾತ್ರ ಅವರಿಗೆ ನೀಡಲಾಗಿದೆ. ಈ ವರ್ಷ 2026ರ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸದ 26ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಹುತಾತ್ಮರಾದ ಎಲ್ಲಾ ಸೈನಿಕರಿಗೆ ನಮಿಸುತ್ತಾ ನಾವೆಲ್ಲರೂ ನಾವು ದೇಶಕ್ಕೆ ನಮ್ಮಿಂದಾದ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ. ಅದುವೇ ನಾವು ಈ ಹುತಾತ್ಮ ಸೈನಿಕರಿಗೆ ಮತ್ತು ದೇಶಕ್ಕೆ ನೀಡುವ ಬಹುದೊಡ್ಡ ಗೌರವ ಎಂದರು ತಪ್ಪಾಗಲಾರದು.
