ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೆಪಿಟಿಸಿಎಲ್‌ ಮೌಲ್ಯವನ್ನೇ ಕುಗ್ಗಿಸಿ ಆಸ್ತಿ ನಗದೀಕರಣ?

| N/A | Published : Apr 11 2025, 01:35 AM IST / Updated: Apr 11 2025, 05:01 AM IST

ಸಾರಾಂಶ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು (ಕೆಪಿಟಿಸಿಎಲ್‌) ತನ್ನ ಲಕ್ಷಾಂತರ ಕೋಟಿ ರು. ಮೌಲ್ಯದ ವಿದ್ಯುತ್‌ ಪ್ರಸರಣ ಜಾಲದ ಆಸ್ತಿಗಳನ್ನು ನಗದೀಕರಣ (ಮಾನಿಟೈಸೇಷನ್‌) ನೆಪದಲ್ಲಿ ಕಡಿಮೆ ಮೌಲ್ಯಕ್ಕೆ ಖಾಸಗಿಯವರಿಗೆ ಧಾರೆ ಎರೆಯಲು ಪ್ರಸ್ತಾವನೆ ಸಿದ್ಧಪಡಿಸಿದೆ.

ಬೆಂಗಳೂರು :  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು (ಕೆಪಿಟಿಸಿಎಲ್‌) ತನ್ನ ಲಕ್ಷಾಂತರ ಕೋಟಿ ರು. ಮೌಲ್ಯದ ವಿದ್ಯುತ್‌ ಪ್ರಸರಣ ಜಾಲದ ಆಸ್ತಿಗಳನ್ನು ನಗದೀಕರಣ (ಮಾನಿಟೈಸೇಷನ್‌) ನೆಪದಲ್ಲಿ ಕಡಿಮೆ ಮೌಲ್ಯಕ್ಕೆ ಖಾಸಗಿಯವರಿಗೆ ಧಾರೆ ಎರೆಯಲು ಪ್ರಸ್ತಾವನೆ ಸಿದ್ಧಪಡಿಸಿದೆ.

ಈ ಪ್ರಸ್ತಾವನೆ ಬಗ್ಗೆ ನಿರ್ಧರಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ಕೆಪಿಟಿಸಿಎಲ್‌ ಆಡಳಿತ ಮಂಡಳಿ ಸಭೆ ಶೀಘ್ರ (ಏ. 15 ಅಥವಾ 16ರಂದು) ನಡೆಯುವ ಸಾಧ್ಯತೆಯಿದೆ. ಈ ಮಂಡಳಿ ಸಭೆಯಲ್ಲಿ ಇಂಥ ಪ್ರಸ್ತಾವನೆಗೆ ಒಪ್ಪಿಗೆ ದೊರೆತರೆ ಕೆಪಿಟಿಸಿಎಲ್‌ನ ಪ್ರಸರಣ ಜಾಲದ ಮೇಲೆ ಖಾಸಗಿ ಆಧಿಪತ್ಯ ಸ್ಥಾಪನೆಯಾಗಲಿದೆ.

ರಾಜ್ಯದಲ್ಲಿ 42,991 ಸರ್ಕಿಟ್‌ ಕಿ.ಮೀ.ನಷ್ಟು ವಿದ್ಯುತ್‌ ಪ್ರಸರಣ ಜಾಲ, 1384 ಸಬ್‌ ಸ್ಟೇಷನ್‌ ಹೊಂದಿರುವ ಕೆಪಿಟಿಸಿಎಲ್‌ 3.11 ಕೋಟಿ ಗ್ರಾಹಕರಿಗೆ ವಿದ್ಯುತ್‌ ಸರಬರಾಜು ಮಾಡುತ್ತಿದೆ. ನಿತ್ಯ 28,325 ಮೆ.ವ್ಯಾಟ್‌ ಸರಬರಾಜು ಸಾಮರ್ಥ್ಯದ ಪ್ರಸರಣ ಮಾರ್ಗ, ವಿದ್ಯುತ್‌ ಸ್ಟೇಷನ್‌, ನಿರ್ವಹಣಾ ವ್ಯವಸ್ಥೆ ಹೊಂದಿದೆ. 2024ರಲ್ಲಿ ಕೆಪಿಟಿಸಿಎಲ್‌ ಎಸ್ಕಾಂಗಳಿಂದ 4,886.73 ಕೋಟಿ ರು. ಪ್ರಸರಣ ಶುಲ್ಕ ಸಂಗ್ರಹಿಸಿದ್ದು, 800 ಕೋಟಿ ರು. ನಿವ್ವಳ ಲಾಭ ಗಳಿಸಿದೆ.

ಇಂತಹ ಕೆಪಿಟಿಸಿಎಲ್‌ ಆಸ್ತಿಯನ್ನು ಅಧಿಕಾರಿಗಳು ಕೇವಲ 20,000 ಕೋಟಿ ರು. ಎಂದು ಅಂದಾಜು ಮಾಡಿದ್ದು, ಆಸ್ತಿಯಲ್ಲಿ ಶೇ.20 ರಷ್ಟು ಆಸ್ತಿಯನ್ನು ನಗದೀಕರಣ ಹೆಸರಿನಲ್ಲಿ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ (ಐಎನ್‌ವಿಐಟಿ) ಮೂಲಕ ಖಾಸಗಿಯವರಿಗೆ ವಹಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಈ ರೀತಿ ಖಾಸಗಿಗೆ ವಹಿಸುವ ಪ್ರಸರಣ ಜಾಲವನ್ನು ಖಾಸಗಿ ಕಂಪನಿಯೇ ನಿರ್ವಹಣೆ ಮಾಡಲಿದ್ದು, ಎಸ್ಕಾಂಗಳಿಂದ ಸಂಗ್ರಹವಾಗುವ ಪ್ರಸರಣ ಶುಲ್ಕವನ್ನು ಕಂಪನಿಯೇ ಪಡೆಯಲಿದೆ. ಹೀಗೆ ಪ್ರಸರಣ ಜಾಲವನ್ನು ಖಾಸಗಿಗೆ ವಹಿಸಿದರೆ ಮುಂದೆ ಕಂಪನಿಗಳು ಬೇಕಾಬಿಟ್ಟಿ ಪ್ರಸರಣ ಶುಲ್ಕ ಹೆಚ್ಚಳ ಮಾಡಬಹುದು. ಇದರಿಂದ ವಿದ್ಯುತ್‌ ಶುಲ್ಕ ಹೆಚ್ಚಳ ಆಗಿ ಗ್ರಾಹಕರಿಗೆ ಬರೆ ಬೀಳುವುದು ಖಚಿತ ಎನ್ನಲಾಗುತ್ತಿದೆ.

ಮತ್ತೊಂದೆಡೆ ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ ಸೇರಿ ಕೆಪಿಟಿಸಿಎಲ್‌ ಉದ್ಯೋಗಿಗಳಲ್ಲೂ ಆತಂಕ ಶುರುವಾಗಿದೆ. ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಸಿದ್ಧಪಡಿಸಿರುವ ಈ ಪ್ರಸ್ತಾವನೆಯಲ್ಲಿ, ಬೆಸ್ಕಾಂ ಸೇರಿ ಎಸ್ಕಾಂಗಳು ಪ್ರಸರಣ ಶುಲ್ಕವನ್ನು 1 ರಿಂದ 1.5 ವರ್ಷದಷ್ಟು ವಿಳಂಬವಾಗಿ ಪಾವತಿಸುತ್ತಿವೆ. ಇದರಿಂದ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸು ಹೊಂದಾಣಿಕೆ ಕಷ್ಟವಾಗುತ್ತಿದ್ದು, ಖಾಸಗಿಯವರಿಗೆ ಮಾನಿಟೈಸ್‌ ಮಾಡಿ ಬರುವ ಹಣವನ್ನು ಅಭಿವೃದ್ಧಿಗೆ ಬಳಸಬಹುದು ಎಂದು ತಿಳಿಸಿದ್ದಾರೆ.

ಪ್ರಸ್ತಾವನೆಯಲ್ಲಿ 2023ರಲ್ಲಿ ಕೆಪಿಟಿಸಿಎಲ್‌ ತನ್ನ ಆಸ್ತಿಗಳನ್ನು 20,000 ಕೋಟಿ ರು. ಮೌಲ್ಯವಾಗಿ ಅಧ್ಯಯನ ಮಾಡಿತ್ತು. ಆಸ್ತಿ ಮೌಲ್ಯವನ್ನು ಪ್ರಸ್ತುತ 24,000 ರಿಂದ 27,000 ಕೋಟಿ ರು. ಎಂದು ಭಾವಿಸಿದರೂ ಶೇ.20 ರಷ್ಟು ಎಂದರೆ 5,000 ರಿಂದ 6,000 ಕೋಟಿ ರು. ನಗದು ಹರಿದುಬರಲಿದೆ. ಇದಕ್ಕಾಗಿ 2013ರ ಕಂಪನಿ ಕಾಯ್ದೆ ಅನ್ವಯ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ರಚನೆಗೂ ಉದ್ದೇಶಿಸಲಾಗಿದೆ.

ಸವಕಳಿ ಹೆಸರಲ್ಲಿ ಕಡಿಮೆ ಮೌಲ್ಯ ನಿಗದಿ:ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ 20,000 ಕೋಟಿ ರು. ಎಂದು ತೋರಿಸಲಾಗಿದೆ. ಜತೆಗೆ ಸವಕಳಿ ಮೌಲ್ಯ (ಡಿಪ್ರಿಸಿಯೇಷನ್‌ ವ್ಯಾಲ್ಯೂ) ಹೆಸರಿನಲ್ಲಿ ವರ್ಷದಿಂದ ವರ್ಷಕ್ಕೆ ಹಳೆಯದಾಗಿರುವ ಪ್ರಸರಣ ಜಾಲದ ಮೌಲ್ಯವನ್ನು ಕಡಿಮೆ ಎಂದು ತೋರಿಸಲಾಗಿದೆ. ಈ ರೀತಿ ಮಾಡಿದರೆ 10 ವರ್ಷಕ್ಕಿಂತ ಹಳೆಯದಾದ ಪ್ರಸರಣ ಜಾಲಕ್ಕೆ ಮೌಲ್ಯವೇ ಇರುವುದಿಲ್ಲ. ಹೀಗೆ ಆಸ್ತಿಯನ್ನು ಅಪಮೌಲ್ಯ ಮಾಡಿ ಕಡಿಮೆ ಹಣಕ್ಕೆ ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಗಿದೆ.

ಉದಾ: ಶಿವಮೊಗ್ಗದಿಂದ ವಿದ್ಯುತ್‌ ಪೂರೈಕೆ ಮಾಡುತ್ತಿರುವ 400 ಕೆವಿ ಮಾರ್ಗ 30-40 ವರ್ಷ ಹಳೆಯದು. ಈಗಲೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ ಕೆಪಿಟಿಸಿಎಲ್‌ ಸಿದ್ಧಪಡಿಸುತ್ತಿರುವ ಪ್ರಸ್ತಾವನೆ ಪ್ರಕಾರ ಮೌಲ್ಯ ಕಡಿಮೆ. ಗುಜರಿಗೆ ಹಾಕಿದರೂ ಕೋಟ್ಯಂತರ ರು. ಮೌಲ್ಯ ಬಾಳುವ ಆಸ್ತಿಗಳಿಗೆ ಕಡಿಮೆ ಮೌಲ್ಯ ನಿಗದಿ ಮಾಡಿ ಖಾಸಗಿಗೆ ವಹಿಸಿ ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತಿದ್ದಾರೆ ಎಂದು ಕೆಪಿಟಿಸಿಲ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸರಣ ಜಾಲವೇ ಖಾಸಗಿ ಕೈಗೆ:

ಮಾ.7ರಂದು ಮಂಡನೆಯಾಗಿರುವ ರಾಜ್ಯ ಬಜೆಟ್‌ನಲ್ಲೂ ಈ ವಿಷಯ ಪ್ರಸ್ತಾಪಿಸಲಾಗಿದೆ. ಇಂಧನ ಇಲಾಖೆಯ ಅಧಿಕಾರಿಗಳು ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ ಪ್ರಸರಣ ಜಾಲವನ್ನೇ ಖಾಸಗಿ ಕಂಪನಿ ಕೈಗಿಡಲು ಸಿದ್ಧತೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ಶೇ.20 ರಷ್ಟು ಆಸ್ತಿ ನೀಡುತ್ತಿದ್ದು ಬಳಿಕ ಹಂತ-ಹಂತವಾಗಿ ಮತ್ತಷ್ಟು ಆಸ್ತಿ ಖಾಸಗಿಗೆ ವಹಿಸುತ್ತಾರೆ. ಆಸ್ತಿ ನಗದೀಕರಣ ಯೋಜನೆಯಡಿ ನಿಗದಿತ ಅವಧಿಗೆ ಅನ್ವಯವಾಗುವಂತೆಯೇ ಮಾನಿಟೈಸ್ ಮಾಡಿದರೂ ವಾಪಸ್‌ ಪಡೆಯುವ ಆರ್ಥಿಕ ಸಾಮರ್ಥ್ಯ ಕೆಪಿಟಿಸಿಎಲ್‌ ಬಳಿ ಇಲ್ಲ. ಹೀಗಾಗಿ ಮುಂದೆ ಕೆಪಿಟಿಸಿಎಲ್‌ ಆಸ್ತಿಗಳು ಸಂಪೂರ್ಣ ಖಾಸಗಿ ಪಾಲಾಗಲಿವೆ ಎಂಬ ಆರೋಪ ವ್ಯಕ್ತವಾಗಿದೆ.ಕೆಪಿಟಿಸಿಎಲ್ ಹೊಂದಿರುವ ಆಸ್ತಿ ಎಷ್ಟು?

ಕೆಪಿಟಿಸಿಎಲ್‌ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಸಾವಿರಾರು ಎಕರೆ ವ್ಯಾಪ್ತಿಯಲ್ಲಿ ಪ್ರಸರಣ ಮಾರ್ಗ, ಸಬ್‌ ಸ್ಟೇಷನ್‌ಗಳನ್ನು ಹೊಂದಿದೆ. ಸರ್ಕಾರ ಮಂಜೂರು ಮಾಡಿರುವ ಭೂಮಿ ಆಗಿರುವುದರಿಂದ ಅದಕ್ಕೆ ಕೆಪಿಟಿಸಿಎಲ್‌ ಬೆಲೆ ಕಟ್ಟದೆ ಕೆಪಿಟಿಸಿಎಲ್‌ ಆಸ್ತಿ ನಿರ್ಧರಣೆಗೆ ಹೊರಟಿದೆ.

28,325 ಮೆ.ವ್ಯಾಟ್‌ ವಿದ್ಯುತ್‌ ಪ್ರಸರಣ ಸಾಮರ್ಥ್ಯ ಹೊಂದಿರುವ ಕೆಪಿಟಿಸಿಎಲ್‌ 400 ಕೆ.ವಿ.ಯ 9, 220 ಕೆವಿಯ 133, 110 ಕೆವಿಯ 517, 66 ಕೆವಿಯ 725 ಸಬ್‌ ಸ್ಟೇಷನ್‌ಗಳನ್ನು ಹೊಂದಿದೆ. 400 ಕೆವಿಯ 3,936 ಸರ್ಕಿಟ್‌ ಕಿ.ಮೀ., 220 ಕೆವಿಯ 13,259 ಸಿ.ಕಿ.ಮೀ, 110 ಕೆವಿಯ 12,868 ಸಿ.ಕಿ.ಮೀ, 66 ಕೆವಿಯ 12,943 ಸಿ.ಕಿ.ಮೀ. ಪ್ರಸರಣ ಜಾಲ ಹೊಂದಿದೆ. ಜತೆಗೆ 16,296 ಮಂಜೂರಾತಿ ಹುದ್ದೆ ಹೊಂದಿದ್ದು, 9,499 ಮಂದಿ ಕೆಲಸ ಮಾಡುತ್ತಿದ್ದಾರೆ.

ಕೆಪಿಟಿಸಿಎಲ್‌ನ ಸ್ವಲ್ಪ ಪ್ರಮಾಣದ ಆಸ್ತಿಗಳನ್ನು ಮಾನಿಟೈಸೇಷನ್‌ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಈ ಬಗ್ಗೆ ವಿವರಗಳನ್ನು ಮುಂದೆ ಹಂಚಿಕೊಳ್ಳಲಾಗುವುದು.

- ಪಂಕಜ್‌ಕುಮಾರ್‌ ಪಾಂಡೆ, ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್‌

- ಲಕ್ಷಾಂತರ ಕೋಟಿಯ ಆಸ್ತಿ ಬೆಲೆ ₹20000 ಕೋಟಿ ಎಂದು ನಮೂದು!- ಕೆಪಿಟಿಸಿಎಲ್‌ನಿಂದ ಪ್ರಸ್ತಾವ ರೆಡಿ । ಒಪ್ಪಿಗೆ ಸಿಕ್ಕರೆ ಜನರಿಗೂ ಹೊಡೆತ- 5ರಿಂದ 6 ಸಾವಿರ ಕೋಟಿ ರು. ಸಂಗ್ರಹಕ್ಕೆ ಕಸರತ್ತು

- ರಾಜ್ಯಾದ್ಯಂತ ವಿದ್ಯುತ್‌ ಪ್ರಸರಣ ಜಾಲವನ್ನು ಕೆಪಿಟಿಸಿಎಲ್‌ ಹೊಂದಿದೆ. ವಿದ್ಯುತ್‌ ಪ್ರಸರಣಕ್ಕೆ ಶುಲ್ಕ ಪಡೆಯುತ್ತದೆ- 2024ರಲ್ಲಿ ಎಸ್ಕಾಂಗಳಿಂದ 4886 ಕೋಟಿ ರು. ಪ್ರಸರಣ ಶುಲ್ಕ ಸಂಗ್ರಹಿಸಿದೆ. 800 ಕೋಟಿ ರು. ನಿವ್ವಳ ಲಾಭ ಗಳಿಸಿದೆ

- ಎಸ್ಕಾಂಗಳು 1.5 ವರ್ಷ ವಿಳಂಬವಾಗಿ ಶುಲ್ಕ ಪಾವತಿಸುತ್ತಿವೆ. ಇದರಿಂದ ಅಭಿವೃದ್ಧಿಗೆ ತೊಂದರೆ ಎಂದು ಪ್ರಸ್ತಾಪ

- ಖಾಸಗಿಗೆ ವಹಿಸಿದರೆ ಹಣ ಸಂಗ್ರಹವಾಗುತ್ತದೆ. ಆ ಹಣವನ್ನು ಅಭಿವೃದ್ಧಿಗೆ ಬಳಸಬಹುದು ಎನ್ನುತ್ತದೆ ಪ್ರಸ್ತಾವನೆ

- ಪ್ರಸರಣ ಖಾಸಗಿ ಕೈಗೆ ಹೋದರೆ ಅವು ಬೇಕಾಬಿಟ್ಟಿ ಶುಲ್ಕ ಹೆಚ್ಚಿಸಬಹುದು. ಇದರಿಂದ ಗ್ರಾಹಕರಿಗೆ ಹೊರೆ ಖಚಿತ- ಸಂಸ್ಥೆಯ ನಡೆಯಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿರುವ 9 ಸಾವಿರಕ್ಕೂ ಅಧಿಕ ಉದ್ಯೋಗಿಗಳಲ್ಲೂ ತೀವ್ರ ಆತಂಕ