ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ಬಿಬಿಎಂಪಿಯು 2025-26ನೇ ಸಾಲಿನಲ್ಲಿ ಬರೋಬ್ಬರಿ ₹20 ಸಾವಿರ ಕೋಟಿಗೂ ಅಧಿಕ ಗಾತ್ರದ ಬಜೆಟ್ ಮಂಡಿಸಿದರೂ, ವಲಯವಾರು ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮಾಡಲಾಗಿದೆ.
ಸಿಕ್ಕಿಂ ಹಾಗೂ ಮಿಜೋರಾಂ ರಾಜ್ಯ ಸರ್ಕಾರಗಳು ಮಂಡಿಸುವ ಗಾತ್ರಕ್ಕಿಂತ ಹೆಚ್ಚಿನ ಮೊತ್ತದ ದಾಖಲೆಯ ₹20,439.77 ಕೋಟಿ ಬಜೆಟ್ ಅನ್ನು ಬಿಬಿಎಂಪಿ ಮಂಡಿಸಿದರೂ ಪಾಲಿಕೆಯ 8 ವಲಯಗಳಿಗೆ ಮಾತ್ರ ಅತಿ ಕಡಿಮೆ ಅನುದಾನ ಹಂಚಿಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಅನುದಾನವನ್ನು ಕೇಂದ್ರ ಕಚೇರಿಯ ವಿಭಾಗವಾರು ಹಂಚಿಕೆ ಮಾಡಿಕೊಳ್ಳಲಾಗಿದೆ.
ಬಿಬಿಎಂಪಿಯ 2020ರ ಕಾಯ್ದೆ ಜಾರಿಗೊಳಿಸಿ ಅಧಿಕಾರ ವಿಕೇಂದ್ರಿಕರಣ ಹೆಸರಿನಲ್ಲಿ ಬಿಬಿಎಂಪಿಯ 8 ವಲಯಗಳಿಗೆ 8 ಐಎಎಸ್ ಅಧಿಕಾರಿಗಳವನ್ನು ವಲಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಆದರೆ, ವಲಯಗಳಿಗೆ ಅನುದಾನ ನೀಡದೇ ಅಧಿಕಾರವನ್ನು ಮತ್ತೆ ಕೇಂದ್ರೀಕರಿಸುವ ಕೆಲಸ ಮಾಡಲಾಗುತ್ತಿದೆ.
ವಲಯಗಳಿಗೆ ₹2 ಸಾವಿರ ಕೋಟಿ:
ಬಿಬಿಎಂಪಿಯ 8 ವಲಯಗಳಿಗೆ ಒಟ್ಟು ₹2,071 ಕೋಟಿ ಅನುದಾವವನ್ನು ಮಾತ್ರ ನೀಡಲಾಗಿದೆ. ಅದರಲ್ಲೂ ನಗರದ ಕೇಂದ್ರ ಭಾಗದಲ್ಲಿರುವ ಮೂರು ವಲಯಗಳಿಗೆ ₹1250 ಕೋಟಿ ಹಂಚಿಕೆ ಮಾಡಲಾಗಿದ್ದು, ಉಳಿದ ₹750 ಕೋಟಿಯನ್ನು ಬಾಕಿ ಉಳಿದ 8 ವಲಯಗಳಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ ಕೇಂದ್ರ ಕಚೇರಿಗೆ ವಲಯವಾರು ಲೆಕ್ಕಚಾರದಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟುಕೊಳ್ಳಲಾಗಿದೆ. ಕಳೆದ ಬಾರಿ ₹620.93 ಕೋಟಿ ಮೀಸಲಿಡಲಾಗಿತ್ತು. ಈ ಅನುದಾನವನ್ನು ಪ್ರಸಕ್ತ 2025-26ನೇ ಸಾಲಿನಲ್ಲಿ ಹೆಚ್ಚಿಸಿಕೊಳ್ಳಲಾಗಿದ್ದು, ಒಟ್ಟು ₹1,027.82 ಕೋಟಿ ಮೀಸಲಿಡಲಾಗಿದೆ.
ಕಳೆದ ವರ್ಷಕ್ಕಿಂತ ಕಡಿಮೆ:
ಕಳೆದ 2024-25ನೇ ಸಾಲಿನಲ್ಲಿ ಬಿಬಿಎಂಪಿಯು ₹13 ಸಾವಿರ ಕೋಟಿ ಬಜೆಟ್ ಮಂಡಿಸಿದರೂ 8 ವಲಯಗಳಿಗೆ ₹2,579 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ₹20 ಸಾವಿರ ಕೋಟಿ ದಾಟಿದರೂ ವಲಯಗಳಿಗೆ ಹೆಚ್ಚಿನ ಅನುದಾನ ಸಿಕ್ಕಿಲ್ಲ. ಜತೆಗೆ, ಕಳೆದ ವರ್ಷ ನೀಡಿದ ಅನುದಾನಕ್ಕಿಂತ ₹450 ಕೋಟಿ ಕಡಿತಗೊಳಿಸಲಾಗಿದೆ.
ಸಮಸ್ಯೆಗಳೂ ಕೇಂದ್ರ ಕಚೇರಿ ಕಡೆಗೆ
ಸಾರ್ವಜನಿಕರ ಸಮಸ್ಯೆ, ಕುಂದು-ಕೊರತೆಗಳನ್ನು ವಲಯ ಕಚೇರಿಯ ಅಧಿಕಾರಿಗಳಿಗಳ ಹೆಗಲಿಗೆ ಹಾಕಲಾಗುತ್ತಿದೆ. ಆದರೆ, ಸಮಸ್ಯೆ ಪರಿಹಾರಕ್ಕೆ ಕಾಮಗಾರಿ, ಕಾರ್ಯಕ್ರಮ ಕೈಗೊಳ್ಳುವುದಕ್ಕೆ ಅನುದಾನ ಇಲ್ಲವಾಗಿದೆ. ಇದರಿಂದ ವಲಯ ಆಯುಕ್ತರ ನೇಮಕ ಮಾಡಿದರೂ ಪ್ರಯೋಜನ ಇಲ್ಲದಂತಾಗಿದ್ದು, ಸಮಸ್ಯೆ ಹೇಳಿಕೊಂಡು ಜನರು ಕೇಂದ್ರ ಕಚೇರಿಗೆ ಅಲೆಯುವುದು ತಪ್ಪಿಲ್ಲ.
ವಲಯವಾರು ಅನುದಾನ ಹಂಚಿಕೆ ವಿವರವಲಯ2024-25(ಕೋಟಿ ರು.)2025-26(ಕೋಟಿ ರು.)
ಪೂರ್ವ526.78420.44
ಪಶ್ಚಿಮ502.68414.56
ದಕ್ಷಿಣ497.47410.37
ಯಲಹಂಕ167.67134.64
ಮಹದೇವಪುರ250.28193.04
ಬೊಮ್ಮನಹಳ್ಳಿ270.72210.76
ಆರ್‌ಆರ್ ನಗರ236.45188.57
ದಾಸರಹಳ್ಳಿ124.6498.94
ಕೇಂದ್ರ ಕಚೇರಿ620.781027.82