ಕೇಂದ್ರ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ

| Published : Apr 09 2025, 12:34 AM IST

ಕೇಂದ್ರ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ತಾರತಮ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಕೋರಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮಾರ್ಗಸೂಚಿ ಪರಿಷ್ಕರಣೆಗೆ ಶಿಫಾರಸು । ಸಮಾಲೋಚನಾ ಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ

ಡಾ.ಸಿ.ನಾರಾಯಣಸ್ವಾಮಿ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

15ನೇ ಕೇಂದ್ರ ಹಣಕಾಸು ಆಯೋಗ ಅನುದಾನ ಹಂಚಿಕೆಗೆ ಅಳವಡಿಸಿಕೊಂಡಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡುವಂತೆ, 16ನೇ ಕೇಂದ್ರ ಹಣಕಾಸು ಆಯೋಗದ ಅಧ್ಯಕ್ಷರಿಗೆ ಶಿಫಾರಸ್ಸು ಮಾಡುವುದಾಗಿ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಹೇಳಿದರು.

ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿ ಮಾತನಾಡಿದ ಅವರು

ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶ ವ್ಯಾಪ್ತಿಯನ್ನು ಪ್ರಮುಖ ಮಾನದಂಡವಾಗಿ ಅನುಸರಿಸಿ 15ನೇ ಕೇಂದ್ರ ಹಣಕಾಸು ಆಯೋಗ, ಕೇಂದ್ರ ಸರ್ಕಾರದ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದೆ. ಇದರಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಡಿಮೆ ಅನುದಾನ ಲಭಿಸಿದೆ ಎಂದರು.

ಕೇಂದ್ರ ಸರ್ಕಾರವೇ ರೂಪಿಸಿದ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ. ಇದರಿಂದಾಗಿ ಜನಸಂಖ್ಯೆ ಬೆಳವಣಿಗೆ ದರ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯಕ್ಕೆ ಕಡಿಮೆ ಅನುದಾನ ಲಭಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆ ಹಾಗೂ ಸುಂಕಗಳು ಸಲ್ಲಿಕೆಯಾಗುತ್ತಿವೆ. ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಸರಿಪಡಿಸಿ, ರಾಜ್ಯ ತೆರಿಗೆ ಸಂಗ್ರಹದಲ್ಲಿನ ಪಾಲಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾರ್ಗಸೂಚಿಗಳನ್ನು ರಚಿಸಲು ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಕೇಂದ್ರ ಹಣಕಾಸು ಆಯೋಗದ ನಿಬಂಧನೆಗಳಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಬೇಕು. ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳು ನಡೆಯದ ಕಾರಣ ರಾಜ್ಯಕ್ಕೆ ಲಭಿಸಬೇಕಾದ ರು.2100 ಕೋಟಿ ಅನುದಾನವನ್ನು ಕೇಂದ್ರ ಹಣಕಾಸು ಆಯೋಗ ತಡೆ ಹಿಡಿದಿದೆ. 2026ರ ಮಾರ್ಚ್ ಅಂತ್ಯಕ್ಕೆ 15ನೇ ಕೇಂದ್ರ ಹಣಕಾಸು ಆಯೋಗದ ಅವಧಿ ಮುಕ್ತಾಯವಾಗಲಿದೆ. ಇದರ ಒಳಗಾಗಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ, ತಡೆ ಹಿಡಿದ ರು.2100 ಕೋಟಿ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು. ನಗರಸಭೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ಥಿತಿಗತಿಗಳನ್ನು ಅವಲೋಕಿಸಿ, ಸ್ಥಳೀಯ ಸಂಸ್ಥೆಗಳ ಅನುದಾನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಸಂವಿಧಾನ 243 (ಐ) ವಿಧಿ ಅನುಸಾರ 5 ವರ್ಷಗಳ ಅವಧಿಗೆ ರಾಜ್ಯಪಾಲರು ರಾಜ್ಯ ಹಣಕಾಸು ಆಯೋಗವನ್ನು ರಚಿಸುತ್ತಾರೆ. ಈ ಆಯೋಗವು ರಾಜ್ಯ ಸರ್ಕಾರ ತೆರಿಗೆ, ಸುಂಕ ಹಾಗೂ ಶುಲ್ಕ ಸಂಗ್ರಹದ ಮೂಲಕ ಗಳಿಸುವ ಆದಾಯವನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಸಮರ್ಪಕವಾಗಿ ಹಂಚಿಕೆ ಮಾಡುವ ಕುರಿತು ಶಿಫಾರಸ್ಸು ನೀಡುತ್ತದೆ. ಮಹಾನಗರ ಪಾಲಿಕೆ, ನಗರಸಭೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ತೆರಿಗೆ ಹಾಗೂ ಸುಂಕ ವಿಧಿಸುವ ಹಕ್ಕಿದೆ. ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬಿಯಾದರೆ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ಡಾ.ಸಿ.ನಾರಾಯಣಸ್ವಾಮಿ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ಮಾತನಾಡಿ, ನಗರಸಭೆಗೆ ತೆರಿಗೆ ಪಾವತಿಯಿಂದಲೇ ಹೆಚ್ಚಿನ ಆದಾಯ ಸಂಗ್ರಹವಾಗಲಿದೆ. ಈ ತೆರಿಗೆ ಸಂಗ್ರಹ ಹಣದಿಂದಲೇ ಪೌರಕಾರ್ಮಿಕರ ವೇತನ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೂ ಇದರಿಂದಲೇ ಭರಿಸಲಾಗುತ್ತಿದೆ. ಹೀಗಾಗಿ ನಗರಸಭೆಗೆ ಅನುದಾನ ಕಡಿಮೆ ಇರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಕಷ್ಟವಾಗಲಿದ್ದು, ಸರ್ಕಾರದಿಂದ ಹೆಚ್ಚಿನ ಆದಾಯದ ಅವಶ್ಯಕತೆ ಇದೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರು ನಿರ್ವಹಣಾ ವ್ಯವಸ್ಥೆಗೆ ಹಾಗೂ ನಗರ ಒಳ ಚರಂಡಿ ವ್ಯವಸ್ಥೆಗೆ ಹೆಚ್ಚಿನ ಅನುದಾನಕ್ಕಾಗಿ ವಿಶೇಷ ಪ್ಯಾಕೇಜ್ ಬಿಡುಗಡೆಗೆ ರಾಜ್ಯ ಹಣಕಾಸು ಆಯೋಗದಿಂದ ಶಿಫಾರಸ್ಸು ಮಾಡಿದರೆ ತುಂಬಾ ಅನುಕೂಲವಾಗಲಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಮಾತನಾಡಿ, ಚಿತ್ರದುರ್ಗ ನಗರದ 33ನೇ ವಾರ್ಡ್‍ನಲ್ಲಿ ಮಳೆ ಬಂದರೆ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ. ಚರಂಡಿಗಳು ತುಂಬಾ ಚಿಕ್ಕದಾಗಿದ್ದು, ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ದೊಡ್ಡ ಚರಂಡಿಗಳ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸರುಲ್ಲಾ ನಗರಸಭೆ ಚುನಾಯಿತ ಪ್ರತಿನಿಧಿಗಳಿಗೆ ನೀಡುವ ಗೌರವಧನ ಮೊತ್ತವನ್ನು ಹೆಚ್ಚಿಸಲು ಮನವಿ ಮಾಡಿದರು. 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್.ಪೋಂಡೆ, ಸಮಾಲೋಚಕರಾದ ಕೆಂಪೇಗೌಡ, ಸುಪ್ರಸನ್ನ, ಆಪ್ತ ಕಾರ್ಯದರ್ಶಿ ಯಾಲಕ್ಕಿಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಇದ್ದರು.