ಉದ್ಯೋಗ ಅರಸಬಹುದಾದ ಭಾರತದ ಅಗ್ರ 25 ಕಂಪನಿಗಳ 2025ರ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್ಇನ್‌

| N/A | Published : Apr 09 2025, 12:31 AM IST / Updated: Apr 09 2025, 05:06 AM IST

ಸಾರಾಂಶ

ಉದ್ಯೋಗ ಹುಡುಕುತ್ತಿರುವವರು ಉದ್ಯೋಗ ಅರಸಬಹುದಾದ ಭಾರತದ ಅಗ್ರ 25 ಕಂಪನಿಗಳ ಹೆಸರಿನ ಪಟ್ಟಿಯನ್ನು ಲಿಂಕ್ಡ್‌ಇನ್‌ ಸಂಸ್ಥೆ ಬಿಡುಗಡೆ ಮಾಡಿದೆ. ಆ ಕುರಿತ ಮಾಹಿತಿ ಇಲ್ಲಿದೆ.

 ಲಿಂಕ್ಡ್‌ ಇನ್ ಭಾರತದ ಅಗ್ರ 25 ಕಂಪನಿಗಳ 2025ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿನ ಮೊದಲ ಮೂರು ಸ್ಥಾನಗಳನ್ನು ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್ ಕಂಪನಿಗಳು ಪಡೆದಿವೆ.ವೃತ್ತಿಪರರು ಮುಂದಿನ ಉದ್ಯೋಗಾವಕಾಶವನ್ನು ಯಾವ ಕಂಪನಿಯಲ್ಲಿ ಹುಡುಕಬಹುದು ಎಂದು ತಿಳಿಸಲು ಈ ಪಟ್ಟಿಯು ನೆರವಾಗುತ್ತದೆ. ಜೊತೆಗೆ ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್‌ಗಳು ಮತ್ತು ಈ ಉನ್ನತ ಕಂಪನಿಗಳಲ್ಲಿನ ಪ್ರಮುಖ ಉದ್ಯೋಗ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.

ವಿಶೇಷ ಎಂದರೆ ಭಾರತದ ಉನ್ನತ 25 ಕಂಪನಿಗಳಲ್ಲಿ 19 ಕಂಪನಿಗಳು ತಂತ್ರಜ್ಞಾನ, ಫೈನಾನ್ಸ್ ಮತ್ತು ಎಂಟರ್‌ ಪ್ರೈಸ್ ಸಾಫ್ಟ್‌ ವೇರ್ ಕ್ಷೇತ್ರಕ್ಕೆ ಸೇರಿವೆ. ಈ ಕಂಪನಿಗಳು ತಾಂತ್ರಿಕ ಪರಿಣತಿ ಹೊಂದಿದ, ವಿವಿಧ ತಂಡಗಳಲ್ಲಿ ಕೆಲಸ ಮಾಡಬಲ್ಲ, ಚಿಂತನಾತ್ಮಕವಾಗಿ ಆಲೋಚಿಸುವ, ತ್ವರಿತವಾಗಿ ಹೊಂದಿಕೊಳ್ಳುವ ಮತ್ತು ಕಂಪನಿಯೊಂದಿಗೆ ಬೆಳೆಯಬಲ್ಲ ವೃತ್ತಿಪರರನ್ನು ಹುಡುಕುತ್ತಿವೆ. ಮೊದಲ ಅಥವಾ ಮುಂದಿನ ಉದ್ಯೋಗವನ್ನು ಅರಸುತ್ತಿರುವ ಆಸಕ್ತರಿಗೆ, ಇದು ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಸಮಯವಾಗಿದೆ. ನಿಮ್ಮ ಬೇಸಿಕ್ ಕೌಶಲಗಳನ್ನು ಬಲಪಡಿಸಿಕೊಳ್ಳಿ, ಮುಂದೆ ಉಪಯುಕ್ತವಾಗುವ ಕೌಶಲ್ಯಗಳನ್ನು ಕಲಿಯಿರಿ ಮತ್ತು ಉದ್ಯಮಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಗಮನಿಸಿ.

ಈ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್‌ನ ಕರಿಯರ್ ಎಕ್ಸ್ ಪರ್ಟ್ ಮತ್ತು ಭಾರತದ ಹಿರಿಯ ವ್ಯವಸ್ಥಾಪಕ ಸಂಪಾದಕಿ ನಿರಾಜಿತಾ ಬ್ಯಾನರ್ಜಿ ಅವರು, ‘ಈ ವರ್ಷದ ಪಟ್ಟಿಯಿಂದ ದೊರೆತ ದೊಡ್ಡ ಪಾಠವೆಂದರೆ, ಕಂಪನಿಗಳು ಪ್ರಸ್ತುತ ಅಗತ್ಯಕ್ಕೆ ಬೇಕಾಗಿ ಮಾತ್ರವೇ ನೇಮಕಾತಿ ಮಾಡುತ್ತಿಲ್ಲ, ಬದಲಿಗೆ ನಾಳೆಯ ಕುರಿತು ಯೋಚನೆ ಮಾಡಿಯೇ ನೇಮಕಾತಿ ಮಾಡಿಕೊಳ್ಳುತ್ತಿವೆ’ ಎನ್ನುತ್ತಾರೆ.

ಟಾಪ್ 25 ಕಂಪನಿಗಳ ಪಟ್ಟಿಯಲ್ಲಿ ಈ ವರ್ಷವೂ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಆಕ್ಸೆಂಚರ್ ಮತ್ತು ಇನ್ಫೋಸಿಸ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕಾಗ್ನಿಜೆಂಟ್ 5ನೇ ಸ್ಥಾನದಲ್ಲಿದೆ. ವಿಶೇಷವಾಗಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಹೆಚ್ಚಿನ ನೇಮಕಾತಿ ಅವಕಾಶ ದೊರೆಯುತ್ತಿವೆ.

ಪಟ್ಟಿಯಲ್ಲಿರುವ 25ರಲ್ಲಿ ಸುಮಾರು ಅರ್ಧದಷ್ಟು ಅಂದ್ರೆ 12 ಕಂಪನಿಗಳು ಈ ಪಟ್ಟಿಗೆ ಈ ವರ್ಷ ಹೊಸದಾಗಿ ಸೇರಿವೆ. ಮೊದಲ ಬಾರಿಗೆ ಸ್ಥಾನ ಪಡೆದ ಕಂಪನಿಗಳಲ್ಲಿ ಫಿಡೆಲಿಟಿ ಇನ್ವೆಸ್ಟ್‌ ಮೆಂಟ್ಸ್ (4) ಅಗ್ರ ಸ್ಥಾನ ಪಡೆದರೆ ನಂತರದ ಸ್ಥಾನಗಳಲ್ಲಿ ಸರ್ವಿಸ್‌ ನೌ (17) ಮತ್ತು ಸ್ಟ್ರೈಪ್ (21) ಇವೆ. ಫೈನಾನ್ಸ್ ಸೇವಾ ಸಂಸ್ಥೆಗಳು ಈ ವರ್ಷದ ಪಟ್ಟಿಯಲ್ಲಿ ಏಳು ಸ್ಥಾನಗಳನ್ನು ಪಡೆದಿದ್ದು, ಇದರಲ್ಲಿ ಜೆಪಿಮೋರ್ಗನ್ ಚೇಸ್ (7), ವೆಲ್ಸ್ ಫಾರ್ಗೋ (15), ಮತ್ತು ಅಮೆರಿಕನ್ ಎಕ್ಸ್‌ ಪ್ರೆಸ್ (25) ಸೇರಿವೆ.

ಜಾಗತಿಕ ತಂತ್ರಜ್ಞಾನ ಕಂಪನಿಗಳೂ ಈ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿವೆ. ಅಮೆಜಾನ್ (8), ಆಲ್ಫಾಬೆಟ್ (9), ಮತ್ತು ಸೇಲ್ಸ್‌ ಫೋರ್ಸ್ (12) ಕಂಪನಿಗಳು ಸಾಫ್ಟ್‌ ವೇರ್ ಇಂಜಿನಿಯರ್, ಡೇಟಾ ಅನಾಲಿಸ್ಟ್ ಮತ್ತು ಅಕೌಂಟ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ. ಸಿನೊಪ್ಸಿಸ್ ಇಂಕ್ (13), ಕಾಂಟಿನೆಂಟಲ್ (14) ಮತ್ತು ಆರ್ ಟಿ ಎಕ್ಸ್ (20) ಕಂಪನಿಗಳು ತಮ್ಮ ಡಿಸೈನ್ ಇಂಜಿನಿಯರಿಂಗ್, ಟೆಸ್ಟ್ ಇಂಜಿನಿಯರಿಂಗ್ ಮತ್ತು ಕ್ವಾಲಿಟಿ ಅಶೂರೆನ್ಸ್ ತಂಡಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿವೆ.

2025ರ ಭಾರತದ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ 25 ಕಂಪನಿಗಳು ಇಲ್ಲಿವೆ:

1.ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

2.ಆಕ್ಸೆಂಚರ್

3.ಇನ್ಫೋಸಿಸ್

4.ಫಿಡೆಲಿಟಿ ಇನ್ವೆಸ್ಟ್ಮೆಂಟ್ಸ್

5.ಕಾಗ್ನಿಜಂಟ್

6.ಒರಾಕಲ್

7.ಜೆಪಿಮೋರ್ಗನ್ ಚೇಸ್

8.ಅಮೆಜಾನ್

9.ಆಲ್ಫಾಬೆಟ್

10.ದಿ ಡಿಪಾಸಿಟರಿ ಟ್ರಸ್ಟ್ & ಕ್ಲಿಯರಿಂಗ್ ಕಾರ್ಪೊರೇಷನ್ (ಡಿಟಿಸಿಸಿ)

11.ಕ್ಯಾಪ್ ಜೆಮಿನಿ

12.ಸೇಲ್ಸ್ ಫೋರ್ಸ್

13.ಸಿನಾಪ್ಸಿಸ್ ಇಂಕ್

14.ಕಾಂಟಿನೆಂಟಲ್

15.ವೆಲ್ಸ್ ಫಾರ್ಗೊ

16.ಹೆಚ್ ಸಿ ಎಲ್ ಟೆಕ್

17.ಸರ್ವೀಸ್ ನೌ

18.ಮೋರ್ಗನ್ ಸ್ಟಾನ್ಲಿ

19.ಮಾಸ್ಟರ್ ಕಾರ್ಡ್

20.ಆರ್ ಟಿ ಎಕ್ಸ್

21.ಸ್ಟ್ರೈಪ್

22.ಅಟ್ಲಾಸಿಯನ್

23.ಎಂ ಎಸ್ ಸಿ ಐ ಇಂಕ್.

24.ಎಲಿ ಲಿಲ್ಲಿ ಆಂಡ್ ಕಂಪನಿ

25.ಅಮೆರಿಕನ್ ಎಕ್ಸ್ ಪ್ರೆಸ್