ಮಹರ್ಷಿ ವಾಲ್ಮೀಕಿ ಕಂಡ ಕನಸು : ‘ಪ್ರಜಾರಾಜ್ಯ’ - ರಾಮಾಯಣದಲ್ಲಿ ವಿವರಣೆ

| N/A | Published : Oct 07 2025, 06:12 AM IST

valmiki jayanti 2024
ಮಹರ್ಷಿ ವಾಲ್ಮೀಕಿ ಕಂಡ ಕನಸು : ‘ಪ್ರಜಾರಾಜ್ಯ’ - ರಾಮಾಯಣದಲ್ಲಿ ವಿವರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗರಿಕತೆಯ ತುತ್ತ ತುದಿಯಲ್ಲಿರುವ ನಾವು ರಾಮಾಯಣ ಕಾಲದ ರಾಜಕೀಯ ತತ್ವಗಳನ್ನು ಅಳವಡಿಸಿಕೊಳ್ಳುವ, ಮಾನವೀಯರಾಗಬೇಕಿರುವ ಅಗತ್ಯಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

-ಡಾ। ಮಹೇಂದ್ರ ಟಿ.ಎಂ, ಪೋಸ್ಟ್‌ ಡಾಕ್ಟರಲ್ ರಿಸರ್ಚರ್

ಕನ್ನಡ ಭಾರತಿ ವಿಭಾಗ, ಕುವೆಂಪು ವಿಶ್ವವಿದ್ಯಾಲಯ

ವಾಲ್ಮೀಕಿ ರಾಮಾಯಣದಿಂದ ಇಂದಿಗೂ ಅನುಸರಿಸಬಹುದಾದ ಒಂದು ಮುಖ್ಯ ಸಂಗತಿ ‘ಪ್ರಜಾತಂತ್ರ’. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗಿರುವ ಅಧಿಕಾರ ಬಹಳ ದೊಡ್ಡದು. ಇಂದು ಪ್ರಜಾಪ್ರಭುತ್ವ ರಾಜ ಪ್ರಭುತ್ವವಾಗಿ ಬದಲಾದಂತೆ ಭಾಸವಾಗುತ್ತಿರುವ ಸಂಕೀರ್ಣ ಸ್ಥಿತಿಯಲ್ಲಿ ನಾವಿದ್ದೇವೆ. ಹಣಕ್ಕೊ, ಧರ್ಮಕ್ಕೊ ತಮ್ಮ ಮತವನ್ನು ಮಾರಿಕೊಳ್ಳುವವರೇ ಹೆಚ್ಚು. ಹೀಗಿರುವಾಗ ಇದಕ್ಕೊಂದು ಪರಿಹಾರವಾದರೂ ನಾವು ನಡೆದು ಬಂದ ಇತಿಹಾಸದಿಂದಲೇ ಹುಡುಕಬೇಕಲ್ಲವೇ? ಅದರಲ್ಲೂ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯದಲ್ಲಿ ಪ್ರಜಾತಂತ್ರಕ್ಕೆ ಅತ್ಯುತ್ತಮ ನಿದರ್ಶನಗಳಿವೆ ಎನ್ನಬಹುದು. ಪ್ರಜೆಗಳಿಂದ ರಾಜನ ಆಯ್ಕೆ ಎನ್ನುವುದೊಂದು ನ್ಯಾಯಯುತ ರಾಜಕೀಯ ಪರಿಕಲ್ಪನೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನಿಗೆ ಪಟ್ಟವಾಗುವುದು ಹಿರಿತನದಿಂದ ಸರಿಯಾದುದಾಗಿದ್ದರೂ, ಯುವರಾಜನನ್ನು ಘೋಷಿಸುವಾಗ ಪ್ರಜೆಗಳ ಇಂಗಿತವನ್ನು ಅರಿತೇ ಆಯ್ಕೆ ಮಾಡಲಾಗಿತ್ತು ಎಂಬುದನ್ನು ಕವಿ ನೇರವಾಗಿಯೇ ಹೇಳಿದ್ದಾನೆ- ‘ತಮೇವಂ ವೃತ್ತಸಂಪನ್ನಂ ಅಪ್ರಧೃಷ್ಯಪರಾಕ್ರಮ, ಲೋಕಪಾಲೋಪಮಂ ನಾಥಮಕಾಮಯತ ಮೇದಿನೀ’ ಹಾಗಾಗಿ ಇಲ್ಲಿ ರಾಜನ ಆಯ್ಕೆ ಜನರ ಇಚ್ಛೆಯಾಗಿದೆ.

ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ವಿಚಾರ ವಿನಿಮಯ, ಚರ್ಚೆಗಳ ಮೂಲಕವೇ ನಿರ್ಧರಿಸಲಾಗುತ್ತಿತ್ತು ಎನ್ನುವುದಕ್ಕೆ ರಾಮಾಯಣ ಕಾವ್ಯದಲ್ಲಿ ಉದಾಹರಣೆಗಳಿವೆ. ಜನಪ್ರತಿನಿಧಿಗಳು ಮತ್ತು ಸಾಮಂತರ ಎದುರಿಗೆ ವಿಚಾರಗಳನ್ನು ಮಂಡಿಸಿದ ನಂತರವೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿತ್ತು. ಅಂತಹ ಮಂಡನೆಗಳನ್ನು ಮಾನ್ಯ ಮಾಡಲೇಬೇಕೆಂಬ ಯಾವ ನಿಯಮವಿರಲಿಲ್ಲ. ರಾಮ ರಾಜನಾಗಬೇಕೆಂಬುದಕ್ಕೆ ಪ್ರಜೆಗಳ ಸಮ್ಮತಿಯಿದೆ ಎಂದು ದಶರಥ ಅರಿತಿದ್ದ, ಅದಾಗ್ಯೂ ರಾಮ ಜೇಷ್ಠಪುತ್ರ, ಆದರೂ ದಶರಥ ಲೋಕಸಭೆಯನ್ನು ಕರೆಯುತ್ತಾನೆ, ತನ್ನ ಇಂಗಿತವನ್ನು ಪ್ರಸ್ತಾಪಿಸುತ್ತಾನೆ. ಜನಪ್ರತಿನಿಧಿಗಳಿಗೂ, ಸಾಮಂತರಿಗೂ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತಾನೆ.

ಯದೀದಂ ಮೇನುರೂಪಾರ್ಥಂ ಮಯಾ ಸಾಧು ಸುಮಂತ್ರಿತಂ

ಭವಂತೋ ಮೇನುಮನ್ಯಂತಾಂ ಕಥಂ ವಾ ಕರವಾಣ್ಯಹಂ

ಯದ್ಯಪ್ಯೇಷಾ ಮಮ ಪ್ರೀತಿರ್ಹತಮನ್ಯತ್ ವಿಚಿಂತ್ಯತಾಂ

ಅನ್ಯಾ ಮಧ್ಯಸ್ಥವೆಂತಾ ಹಿ ವಿಮರ್ದಾಭ್ಯಧಿಕೋದಯಾ

‘ನಾನು ಈಗ ಪ್ರಸ್ತಾಪಿಸಿದ ವಿಚಾರ ಯೋಗ್ಯವಾದುದೆಂದು ನಿಮಗೆಲ್ಲ ಅನ್ನಿಸಿದರೆ ಸಮ್ಮತಿ ನೀಡಬೇಕು. ನಾನು ಹೇಳಿರುವ ಮಾತು ನನಗೆ ಪ್ರಿಯವಾದುದಾಗಿದ್ದರೂ ನಿಮಗೆ ಅಹಿತವಾಗಿದ್ದರೆ, ನಿಮಗೆ ಸರಿಯಾದ ರೀತಿ ಪ್ರತ್ಯೇಕ ನಿರ್ಣಯವನ್ನು ಸೂಚಿಸಬಹುದು. ಈ ವಿಷಯದ ಕುರಿತಂತೆ ಪರಿಶೀಲಿಸಿ ನಿರ್ಣಯ ಕೈಗೊಳ್ಳಲೆಂದೇ ಪ್ರಸ್ತಾಪವನ್ನು ಮಂಡಿಸಿದ್ದೇನೆ’ ಎಂದು ದಶರಥ ಪ್ರಜಾಪ್ರತಿನಿಧಿಗಳಲ್ಲಿ, ಸಾಮಂತರಲ್ಲಿ ವಿನಮ್ರವಾಗಿ ಕೇಳಿಕೊಳ್ಳುತ್ತಾನೆ. ಇದು ನಿಜವಾದ ಪ್ರಜಾತಂತ್ರವೆನಿಸುತ್ತದೆ. ಇಲ್ಲಿ ನಿರಂಕುಶ ಅಧಿಕಾರಕ್ಕೆ ಜಾಗವೇ ಇಲ್ಲ. ಒಂದು ವೇಳೆ ಸಭೆ ರಾಮನನ್ನು ಯುವರಾಜನನ್ನಾಗಿ ಮಾಡಲು ತಿರಸ್ಕರಿಸಿದ್ದರೆ ದಶರಥ ಅದನ್ನು ಒಪ್ಪಿಕೊಳ್ಳುತ್ತಿದ್ದ.

ಒಂದು ಸಾರಿ ಜನರನ್ನು ಮರಳು ಮಾಡಿ ಐದು ವರುಷ ಜನರನ್ನು ನರಳಿಸುವ ಇಂದಿನ ಪ್ರಜಾತಂತ್ರವನ್ನು ಬದಲಿಸಿ ಹೊಸ ದೃಷ್ಟಿಕೋನ, ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳುವ ತುರ್ತು ಇಂದಿಗೆ ಹೆಚ್ಚಾಗಿಯೇ ಕಾಣುತ್ತದೆ. ಜಾತಿ, ಧರ್ಮ, ಹಣ, ಹೆಂಡಗಳನ್ನು ತಿರಸ್ಕರಿಸಿ ಯೋಗ್ಯತೆಯನ್ನೇ ಮುಖ್ಯವಾಗಿರಿಸಿ ಪ್ರಜಾಪ್ರತಿನಿಧಿಗಳನ್ನು ಆರಿಸಿದರೆ ‘ರಾಮರಾಜ್ಯ’ ಎನ್ನುವುದು ಧರ್ಮ ಅಥವಾ ಮತದ ಹಿನ್ನೆಲೆಯುಳ್ಳ ಕಲ್ಪನೆಯಲ್ಲ. ಇದೊಂದು ‘ಪ್ರಜಾತಂತ್ರ’ ತಳಹದಿಯ ರಾಜಕೀಯ ವ್ಯವಸ್ಥೆ. ಇಲ್ಲಿ ಸರ್ವರ ಅಭಿಪ್ರಾಯಕ್ಕೆ ಸ್ವಾಗತವಿದೆ. ಆದರೆ ಇಂದು ಭಾವಿತವಾಗುತ್ತಿರುವ ‘ರಾಮರಾಜ್ಯ’ದ ಕಲ್ಪನೆ ಎಂಥಹದ್ದು. ಬಹುಶಃ ಆ ಹೆಸರಿಗೆ ವಿರುದ್ಧವಾದದ್ದು. ದಶರಥನಂತೆ ವಿನಂತಿಸಿಕೊಳ್ಳುವ, ರಾಮನಂತೆ ಕಾಡಿಗೆ ತೆರಳುವ, ಭರತನಂತೆ ಪಾದುಕೆ ಇಟ್ಟು ಆಡಳಿತ ನಡೆಸುವ ವ್ಯವಧಾನ ಇಂದು ಯಾರಿಗಿದೆ. ನಾಗರಿಕತೆಯ ತುತ್ತ ತುದಿಯಲ್ಲಿರುವ ನಾವು ರಾಮಾಯಣ ಕಾಲದ ರಾಜಕೀಯ ತತ್ವಗಳನ್ನು ಅಳವಡಿಸಿಕೊಳ್ಳುವ, ಮಾನವೀಯರಾಗಬೇಕಿರುವ ಅಗತ್ಯಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ರಾಜಕೀಯ ವ್ಯವಸ್ಥೆಯಲ್ಲಿ ಯಾವುದೋ ಒಂದು ರಾಜತಂತ್ರವೇ ಸರ್ವಶ್ರೇಷ್ಠ ಎಂದು ವೈಭವೀಕರಿಸುವುದಕ್ಕಿಂತ ಆ ‘ರಾಜತಂತ್ರ’ವನ್ನು ನಿಯಂತ್ರಿಸಿ ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆ ರಾಮಾಯಣ ಕಾಲ ಸಂದರ್ಭಕ್ಕಿಂತ ಇಂದಿಗೆ ಬಹಳ ಇದೆ.

ರಾಮಾಯಣದಲ್ಲಿ ‘ಶಾಸನ ಸಂಸ್ಥೆ’ ಎನ್ನುವುದು ಉಪಜೀವನದ ಮಾರ್ಗವಲ್ಲ, ಅದೊಂದು ನಿಸ್ವಾರ್ಥ ಸೇವೆ, ಬದ್ಧತೆ, ಪ್ರಜೆಗಳನ್ನೇ ಸರ್ವಸಂಪತ್ತೆಂದು ಭಾವಿಸಬೇಕಾಗಿರುವ ಹುದ್ದೆ. ಆದರೆ ಇಂದು ರಾಜಕೀಯ ಹಣ, ಆಸ್ತಿಗಳಿಸಿರುವ ಸಂಸ್ಥೆ. ಪ್ರಜೆಗಳಿಗೆ ಯಾವ ನ್ಯಾಯವೋ ರಾಜನಿಗೂ ಅದೇ ನ್ಯಾಯ! ಇದು ವಾಲ್ಮೀಕಿಯ ನ್ಯಾಯವ್ಯವಸ್ಥೆ! ಹಾಗಾಗಿಯೇ ರಾಮನ ವನವಾಸ, ಸೀತೆಯ ಅಗ್ನಿಪ್ರವೇಶ ಇತ್ಯಾದಿ ಘಟನೆಗಳೆಲ್ಲ ಜರಗಿದ್ದು. ವಾಲ್ಮೀಕಿ ರಾಮನ ಪಾತ್ರದಲ್ಲಿ ಕಂಡದ್ದು ಆದರ್ಶ ರಾಜನನ್ನು ಎನ್ನುವುದಕ್ಕಿಂತ ಆದರ್ಶ ಪ್ರಜಾಸೇವಕನನ್ನಾಗಿ ಎನ್ನಬಹುದು. ರಾಮಾಯಣ ಮಹಾಕಾವ್ಯವೇ ಮನುಷ್ಯನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಕಾವ್ಯ. ಇಲ್ಲಿ ಅಧರ್ಮಕ್ಕೆ ಜಾಗವಿಲ್ಲ. ಕವಿ ವಾಲ್ಮೀಕಿ ಕಂಡ ಕನಸೇ ‘ರಾಮರಾಜ್ಯ’.

ಈ ಹಿನ್ನೆಲೆಯಲ್ಲಿ ‘ರಾಜತಂತ್ರ’ದ ಮಂಕುಬೂದಿಗೆ ಮಂಕಾಗಿರುವ ಯುವಜನತೆ ರಾಮಾಯಣ ಕಾಲದ ಪ್ರಜೆಗಳಂತೆ ಬುದ್ಧಿವಂತಿಕೆಯಿಂದ ನಮ್ಮನಾಳುವವರನ್ನು ಆರಿಸಿ ಕಳಿಸಬೇಕಿದೆ. ಇಲ್ಲವಾದರೆ ಮತ್ತೆ ನಿರಂಕುಶ ಆಡಳಿತ ಪದ್ಧತಿ ಬರುವ ದಿನಗಳು ದೂರವೇನಿಲ್ಲ. ತಾನು, ತನ್ನ ಮಗ ಅಥವಾ ಮಗಳು, ತನ್ನ ಕುಟುಂಬ ಇವರೇ ತನ್ನ ಉತ್ತರಾಧಿಕಾರಿಯಾಗಿ ಮುಂದುವರಿಯಬೇಕು ಎನ್ನುವಂತಹ ಧೋರಣೆಗಳನ್ನು ಜನ ಧಿಕ್ಕರಿಸಬೇಕಿದೆ. ದಶರಥನ ಧರ್ಮ, ನೀತಿ, ರಾಜನಿಷ್ಠೆ, ರಾಮನ ಸೇವಾ ಮನೋಭಾವ, ನಿಸ್ವಾರ್ಥತೆ, ಕರ್ತವ್ಯಪರತೆ, ಸತ್ಯನಿಷ್ಠತೆ, ಸಹಿಷ್ಣುತೆ, ಧರ್ಮನಿಷ್ಠತೆ ನಾವಿಂದು ಅಳವಡಿಸಿಕೊಳ್ಳಬಹುದಾದ ಗುಣಗಳು. ಹಾಗಾಗಿ ರಾಮಾಯಣ ಏಕಮುಖ ಬೋಧನಾ ಕಾವ್ಯವಲ್ಲ. ರಾಜನಿಗೆ ರಾಜನ ಕಾರ್ಯಗಳನ್ನು, ಕರ್ತವ್ಯಗಳನ್ನು ತಿಳಿಸಿದರೆ ಪ್ರಜೆಗಳಿಗೆ ಅವರ ಜವಾಬ್ಧಾರಿಯನ್ನೂ ನೆನಪಿಸುವ ಕಾವ್ಯ. ವ್ಯಕ್ತಿ ವ್ಯಕ್ತಿತ್ವಗಳನ್ನು ಸರಿಪಡಿಸಿಕೊಳ್ಳಬಹುದಾದ ಸಾಧ್ಯತೆಗಳಿರುವ ಕಾವ್ಯ. ಹಾಗಾಗಿಯೇ ಪ್ರತಿಮನೆಗಳಲ್ಲಿಯೂ ರಾಮಾಯಣದ ರಾಮ, ಲಕ್ಷ್ಮಣ, ಸೀತೆ, ಭರತನೆಂಬ ಹೆಸರುಗಳಿವೆ. ಅಂತಹ ವ್ಯಕ್ತಿತ್ವಗಳಿಗೆ ಸಮಾಜದಲ್ಲಿ ಅತ್ಯುನ್ನತ ಗೌರವಗಳಿವೆ. ಏಕೆಂದರೆ ಆದರ್ಶಗಳನ್ನು ಪಾಲಿಸಲು, ಅಳವಡಿಸಿಕೊಳ್ಳಲು ಎಲ್ಲರಿಂದ ಸಾಧ್ಯವಿಲ್ಲ.

 ರಾಮನಂತಾಗುವುದು ಸಾಧ್ಯವಾಗದಿರಬಹುದು, ಆದರೆ ಇತರರಿಗೆ ಕೇಡನ್ನು ಬಯಸದೇ ಬದುಕುವುದು ಎಲ್ಲರಿಗೂ ಸಾಧ್ಯವಾಗಬಹುದಾಗಿರುವಂತಹದ್ದು. ಅಷ್ಟರಮಟ್ಟಿನ ಪರಿವರ್ತನೆಯಾದರೂ ಸಾಧ್ಯವಾಗದೆ ಹೋದರೆ ನಮ್ಮ ನಾಳಿನ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಸಾಧ್ಯವಿಲ್ಲ. ದುರಾದೃಷ್ಟವೆಂದರೆ ರಾಮಾಯಣದ ವ್ಯಕ್ತಿತ್ವಗಳು ನೀತಿ ಪಾಠವಾಗಬೇಕಿರುವಾಗ ಈ ಕಾಲದಲ್ಲಿ ವ್ಯಕ್ತಿ ವೈಭವೀಕರಣ ಪ್ರಕ್ರಿಯೆ ನಿರಂತರ ಚಾಲ್ತಿಯಲ್ಲಿದೆ. ‘ರಾಮ’ ದೈವವಾಗಿ ಆರಾಧ್ಯನಾಗುತ್ತಿದ್ದಾನೆಯೇ ಹೊರತು ವ್ಯಕ್ತಿಯಾಗಿ ಅಲ್ಲ. ಅವನ ವ್ಯಕ್ತಿತ್ವದ ಪಾಲನೆ ಯಾರಿಗೂ ಬೇಡದ ವಿಚಾರ. ಸರ್ವರ ರಾಮನಾಗಬೇಕಾಗಿದ್ದವನು, ಯಾವುದೋ ಒಂದು ಧರ್ಮದ ರಾಮನಾಗಿ ಮಂದಿರದ ಗರ್ಭಗುಡಿಗೆ ಸೀಮಿತನಾಗಿದ್ದಾನೆ. ಇಂದು ಕೋಮು ಸೌಹಾರ್ದತೆಯ ಸಡಿಲಗೊಂಡು, ಸಮಾಜದಲ್ಲಿ ಕೋಮು ಸಂಘರ್ಷಗಳು ಹೆಚ್ಚಲು ಸಹ ಕಾರಣವಾಗಿದೆ. ಹಾಗಾಗಿ ನಮಗಿಂದು ರಾಮ ವೇದ್ಯನಾಗಬೇಕಾಗಿರುವುದು ವ್ಯಕ್ತಿಯಾಗಿ, ದೇವರಾಗಿ ಅಲ್ಲ ವ್ಯಕ್ತಿತ್ವವಾಗಿ, ಮಾರ್ಗದರ್ಶಕನಾಗಿ ಎನ್ನುವುದನ್ನು ಅರಿಯಬೇಕಿದೆ.

Read more Articles on