ಸಾರಾಂಶ
ಫಿಲ್ಟರೇಶನ್ ಸಿಸ್ಟಮ್‌ಗಳ ಪ್ರಮುಖ ತಯಾರಕರಾಗಿರುವ ಎಲ್‌ಜಿ ಸಂಸ್ಥೆಯು ಹಲವು ಉದ್ಯಮಗಳ ಹಳೆಯ ಸಿಸ್ಟಮ್‌ಗಳನ್ನು ಬದಲಾಯಿಸಿದೆ. ಆ ಮೂಲಕ ಆ ಸಿಸ್ಟಮ್‌ಗಳಿಂದ ಉಂಟಾಗುತ್ತಿದ್ದ ತೊಂದರೆಗಳಿಂದ ಮುಕ್ತಿಕೊಡಿಸಿದೆ. ಇದೀಗ ಮಾನ್+ ಹಮ್ಮೆಲ್ ಸಂಸ್ಥೆಯು ಎಲ್‌ಜಿ ಈಕ್ವಿಪ್‌ಮೆಂಟ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಪ್ಯಾಟನ್ಸ್ ಇಂಕ್, ಯುಎಸ್‌ಎ ಜೊತೆಗಿನ ಸಹಭಾಗಿತ್ವದಲ್ಲಿ ತನ್ನ ಕಂಪ್ರೆಸ್ಡ್ ಏರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ನವೀಕರಣಗೊಳಿಸಿದ್ದು, ಈ ಮೂಲಕ ವರ್ಷಕ್ಕೆ 160,000 ಡಾಲರ್ ಉಳಿತಾಯ ಮಾಡಿಕೊಂಡಿದೆ. ಜೊತೆಗೆ ಗಣನೀಯವಾಗಿ ವಿದ್ಯುತ್ ಉಳಿತಾಯ ಮಾಡಿದೆ.
ಮಾನ್+ಹಮ್ಮೆಲ್ ಸಂಸ್ಥೆಯು ಆಟೋಮೋಟಿವ್, ಕೃಷಿ, ನಿರ್ಮಾಣ, ಡೇಟಾ ಸೆಂಟರ್, ಇಂಧನ, ಆಹಾರ ಮತ್ತು ಪಾನೀಯ ಸೇರಿದಂತೆ ಹಲವು ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ. ಕಂಪನಿಯ ಉತ್ಪಾದನಾ ಪ್ರಕ್ರಿಯೆಗಳು ಕಂಪ್ರೆಸ್ಡ್ ಏರ್ ಮತ್ತು ಶುದ್ಧ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಕಂಪನಿಯ ಹಳೆಯ ಮತ್ತು ದೋಷಪೂರಿತ ಏರ್ ಕಂಪ್ರೆಷನ್ ವ್ಯವಸ್ಥೆಯಿಂದ ದಿನಕ್ಕೆ 20ಕ್ಕೂ ಹೆಚ್ಚು ಗಾಳಿ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತಿದ್ದವು ಮತ್ತು ಗಂಟೆಗೆ 30 ಗ್ಯಾಲನ್‌ಗಳಷ್ಟು ನೀರು ಕಲುಷಿತ ವಾಗುತ್ತಿತ್ತು. ಇದರಿಂದ ಕಂಪನಿಗೆ ವರ್ಷಕ್ಕೆ 160,000 ಡಾಲರ್‌ಗಿಂತ ಹೆಚ್ಚು ನಷ್ಟವಾಗುತ್ತಿತ್ತು. ಜೊತೆಗೆ ವಿಳಂಬ, ಸಂಪನ್ಮೂಲಗಳ ವ್ಯರ್ಥ ಮತ್ತು ಪೂರೈಕೆ ಸರಪಳಿಯಲ್ಲಿ ಸಮಸ್ಯೆ ಇತ್ಯಾದಿ ತೊಂದರೆಗಳು ಉಂಟಾಗುತ್ತಿದ್ದವು. ಇದೀಗ ಆ ಸಮಸ್ಯೆಗಳೆಲ್ಲಾ ಇಲ್ಲವಾಗಿವೆ.
ಈ ಕುರಿತು ಮಾತನಾಡಿರುವ ಮಾನ್+ಹಮ್ಮೆಲ್ ನ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್‌ನ ಹಿರಿಯ ವ್ಯವಸ್ಥಾಪಕ ಸ್ಟೀವನ್ ಓವೆನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಮಾನ್+ಹಮ್ಮೆಲ್ ಕಂಪನಿಯು ಪ್ಯಾಟನ್ಸ್ ಜೊತೆ ಸೇರಿಕೊಂಡು ಈ ವ್ಯವಸ್ಥೆಯನ್ನು ಎಲ್‌ಜಿ ಏರ್ ಕಂಪ್ರೆಸರ್‌ಗಳು ಮತ್ತು ಡ್ರೈಯರ್‌ಗಳ ಜೊತೆಗೆ ಬದಲಾಯಿಸಿತು. ಪ್ಯಾಟನ್ಸ್ ಕಂಪನಿಯು ಮಾನ್+ಹಮ್ಮೆಲ್ ಕಂಪನಿಯ ಉತ್ಪಾದನಾ ಘಟಕಕ್ಕೆ ಸೂಕ್ತ ರೀತಿಯಲ್ಲಿ ಸರಿಹೊಂದುವ ವ್ಯವಸ್ಥೆಯನ್ನು ರೂಪಿಸಿತು. ಇದರ ಅನುಷ್ಠಾನ ಪ್ರಕ್ರಿಯೆಯು 12 ವಾರಗಳನ್ನು ತೆಗೆದುಕೊಂಡಿದ್ದು, ಈ ಸಮಯದಲ್ಲಿ, ಪ್ಯಾಟನ್ಸ್ ಬಾಡಿಗೆ ಕಂಪ್ರೆಸ್ಸರ್‌ಗಳನ್ನು ಒದಗಿಸಿ 500,000 ಡಾಲರ್ ಉಳಿಸಿತು.
ಈ ಕಾರ್ಯಕ್ಕಾಗಿ ಐದು ಎಲ್‌ಜಿ ಇಜಿ-160 ರೋಟರಿ ಸ್ಕ್ರೂ ಏರ್ ಕಂಪ್ರೆಸರ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಮೂರು ಸ್ಥಿರ-ವೇಗದವು ಸ್ಥಿರವಾಗಿ ಗಾಳಿ ಪೂರೈಕೆಯನ್ನು ಮಾಡಿದರೆ, ಎರಡು ವೇರಿಯಬಲ್ ಫ್ರೀಕ್ವೆನ್ಸಿ ಡ್ರೈವ್ (ವಿಎಫ್‌ಡಿ) ಗಳು ಬೇಡಿಕೆಗೆ ತಕ್ಕಂತೆ ಗಾಳಿಯನ್ನು ಸರಿಹೊಂದಿಸಿ ವಿದ್ಯುತ್ ಅನ್ನು ಉಳಿಸಿದವು. ಈ ಬಗ್ಗೆ ಸ್ಟೀವನ್ ಅವರು ‘ಇದು ಹೊಸ ಘಟಕವನ್ನು ಪಡೆದಂತೆ ಆಯಿತು. ಈ ಮೊದಲು ಪ್ರತಿದಿನ ಉತ್ಪಾದನೆ ನಿಂತು, ನಿರ್ವಹಣಾ ತಂಡಗಳು ಸಮಸ್ಯೆಗಳನ್ನು ಸರಿಪಡಿಸಲು ಓಡಾಡುತ್ತಿದ್ದವು, ಮತ್ತು ಪ್ರತಿ ನಿಮಿಷವೂ ಈ ಸಮಸ್ಯೆಯಿಂದ ಹಣ ಕಳೆದುಕೊಳ್ಳುತ್ತಿದ್ದೆವು. ಹೊಸ ವ್ಯವಸ್ಥೆ ಆರಂಭವಾದ ಮೇಲೆ ಈ ಎಲ್ಲವೂ ಸರಿಯಾಗಿ ಕೆಲಸ ಮಾಡತೊಡಗಿತು. ವರ್ಷಗಳಲ್ಲಿ ಮೊದಲ ಬಾರಿಗೆ ಇಡೀ ಘಟಕದಲ್ಲಿ ಸ್ಥಿರವಾದ ಮತ್ತು ವಿಶ್ವಾಸಾರ್ಹದ ಕಂಪ್ರೆಸ್ಡ್ ಏರ್ ಲಭ್ಯವಾಯಿತು’ ಎಂದು ಹೇಳಿದರು.