ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರಿನ ‘ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌’ ಅನ್ನು ಮಹಾರಾಷ್ಟ್ರ ಮೂಲದ ಕಾಸ್ಮೋಸ್‌ ಕೋ ಆಪರೇಟಿವ್ ಬ್ಯಾಂಕ್ ಲಿ.ನೊಂದಿಗೆ ವಿಲೀನಗೊಳಿಸಲು ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾ ಅನುಮೋದನೆ ನೀಡಿದೆ.

ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಬೆಂಗಳೂರಿನ ‘ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌’ ಅನ್ನು ಮಹಾರಾಷ್ಟ್ರ ಮೂಲದ ಕಾಸ್ಮೋಸ್‌ ಕೋ ಆಪರೇಟಿವ್ ಬ್ಯಾಂಕ್ ಲಿ.ನೊಂದಿಗೆ ವಿಲೀನಗೊಳಿಸಲು ರಿಸರ್ವ್‌ ಬ್ಯಾಂಕ್ ಆಫ್‌ ಇಂಡಿಯಾ ಅನುಮೋದನೆ ನೀಡಿದೆ.

ಈ ಬಗ್ಗೆ ಆರ್‌ಬಿಐ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ‘ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 56ರ ಅಡಿಯಲ್ಲಿ ವಿಲೀನಕ್ಕೆ ಅನುಮೋದಿಸಲಾಗಿದೆ. ಈ ಯೋಜನೆಯು 2025ರ ಜನವರಿ 6 ರಿಂದ ಜಾರಿಗೆ ಬರಲಿದೆ’ ಎಂದಿದೆ.

ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌ನ ಬೆಂಗಳೂರು ಶಾಖೆಯು ಮಹಾರಾಷ್ಟ್ರದ ಕಾಸ್ಮೋಸ್‌ ಕೋ ಆಪರೇಟಿವ್ ಬ್ಯಾಂಕ್‌ನ ಶಾಖೆಗಳಿಗೆ ಕೆಲಸ ನಿರ್ವಹಿಸಲಿದೆ ಎಂದಿದೆ. ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಬೆಂಗಳೂರಿನಲ್ಲಿ 12, ಮೈಸೂರಿನಲ್ಲಿ ಒಂದು ಶಾಖೆಯನ್ನು ಹೊಂದಿದೆ.

‘ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್‌’ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅದರ ವಿರುದ್ದ 2023ರಲ್ಲೇ ಒಂದಷ್ಟು ಕ್ರಮಗಳನ್ನು ಆರ್‌ಬಿಐ ಕೈಗೊಂಡಿತ್ತು. ಗ್ರಾಹಕರಿಗೆ 50,000 ರು.ಗಿಂತ ಹೆಚ್ಚಿನ ಹಣ ಹಿಂಪಡೆತಕ್ಕೆ ನಿಷೇಧ ಹೇರಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಬ್ಯಾಂಕ್‌ನ್ನು ಬೇರೊಂದು ಬ್ಯಾಂಕಲ್ಲಿ ವಿಲೀನ ಮಾಡಲು ನಿರ್ಧರಿಸಲಾಗಿದೆ.