ಸಾರಾಂಶ
ಆರ್.ವಿ.ರಸ್ತೆ - ಬೊಮ್ಮಸಂದ್ರ (18.8 ಕಿ.ಮೀ.) ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗವನ್ನು ಜೂನ್‌ನಲ್ಲಿ ಪ್ರಯಾಣಿಕರಿಗೆ ಮುಕ್ತ
ಬೆಂಗಳೂರು : ಅರ್ಧ ಗಂಟೆಗೊಮ್ಮೆ ರೈಲು ಸಂಚಾರದ ಮೂಲಕ ಆರ್.ವಿ.ರಸ್ತೆ - ಬೊಮ್ಮಸಂದ್ರ (18.8 ಕಿ.ಮೀ.) ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗವನ್ನು ಜೂನ್‌ನಲ್ಲಿ ಪ್ರಯಾಣಿಕರಿಗೆ ಮುಕ್ತವಾಗಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಹಳದಿ ಮಾರ್ಗದ ಸಿವಿಲ್ ಕಾಮಗಾರಿ ಮುಗಿದು ಒಂದು ವರ್ಷವಾದರೂ ರೈಲುಗಳ ಕೊರತೆಯಿಂದ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗಿಲ್ಲ. ಅಗತ್ಯವಿರುವ 14 ರೈಲುಗಳಿಗೆ ಕಾಯುತ್ತ ಕುಳಿತರೆ ಇನ್ನಷ್ಟು ವಿಳಂಬ ಆಗುವ ಹಿನ್ನೆಲೆಯಲ್ಲಿ ಮೂರೇ ರೈಲುಗಳ ಮೂಲಕ ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿರ್ಧರಿಸಿದೆ.
ಸದ್ಯ ಕಳೆದ ವರ್ಷ ಫೆಬ್ರವರಿಯಲ್ಲಿ ಚೀನಾದಿಂದ ಬಂದ ಚಾಲಕ ರಹಿತ ರೈಲು ಹಾಗೂ ಈ ವರ್ಷ ಕೋಲ್ಕತ್ತಾ ಕಳುಹಿಸಿದ್ದ ರೈಲು ಸೇರಿ ಎರಡು ರೈಲುಗಳು ಹಳದಿ ಮಾರ್ಗಕ್ಕಿದೆ. ಮೂರನೇ ರೈಲಿನ ಮೂರು ಬೋಗಿಗಳನ್ನು ಕೊಲ್ಕತ್ತಾದ ತೀತಾಘರ್ ರೈಲ್ ಸಿಸ್ಟಂ ಬೆಂಗಳೂರಿಗೆ ಕಳುಹಿಸಿದೆ. ಉಳಿದ ಮೂರು ಬೋಗಿಗಳು ಶೀಘ್ರವೇ ರವಾನೆ ಆಗಲಿವೆ. ಇವೆಲ್ಲವೂ ತಿಂಗಳಾಂತ್ಯದಲ್ಲಿ ಹೆಬ್ಬಗೋಡಿ ಡಿಪೋ ತಲುಪಿ ಅಲ್ಲಿ ಜೋಡಣೆ ಆಗಲಿದೆ. ಬಳಿಕ ಪ್ರಾಯೋಗಿಕ ಸಂಚಾರ ಮೇ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.
ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ಆಧಾರಿತ ಚಾಲಕ ರಹಿತ ಹೊಸ ಮಾದರಿಯ ರೈಲುಗಳು ಆಗಿರುವ ಕಾರಣ ಎಲ್ಲವನ್ನೂ ತಪಾಸಣೆ ಮಾಡಿಯೇ ಮುಖ್ಯ ಮಾರ್ಗಕ್ಕೆ ತರಬೇಕಾಗುತ್ತದೆ. ಇದಕ್ಕೆ ಒಂದು ವಾರ ಬೇಕು. ಹೀಗಾಗಿ ಜೋಡಣೆ ಆದ ಬಳಿಕ ಪ್ರಾಯೋಗಿಕ ಸಂಚಾರ ನಡೆಸಲಿದ್ದೇವೆ. ಬಳಿಕ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ಪಡೆದು ಸಂಚಾರ ಆರಂಭಿಸುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋಗಾಗಿ ಚೀನಾದಿಂದ ಬಂದ 2 ಪ್ರೊಟೋಟೈಪ್ ರೈಲು ಸೇರಿ ಕೋಲ್ಕತ್ತಾದಲ್ಲಿ 36 ರೈಲುಗಳು ಸಿದ್ಧಗೊಳ್ಳುತ್ತಿವೆ. ಈ ಪೈಕಿ 14 ರೈಲುಗಳು ಹಳದಿ ಮಾರ್ಗಕ್ಕೆ ನಿಯೋಜನೆ ಆಗಲಿದ್ದು, ಸದ್ಯ ಎರಡು ರೈಲುಗಳಿವೆ. ಇನ್ನೊಂದು ರೈಲು ಬರುತ್ತಿದೆ. ಉಳಿದವು ಹಸಿರು, ನೇರಳೆ ಮಾರ್ಗಕ್ಕೆ ಹಂಚಿಕೆ ಆಗಲಿವೆ. ಇನ್ನಷ್ಟು ವಿಳಂಬ ತಪ್ಪಿಸಲು ಮೂರು ರೈಲುಗಳೊಂದಿಗೆ ಹಳದಿ ಮಾರ್ಗ ಆರಂಭಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಒಂದು-ಎರಡು ತಿಂಗಳಿಗೊಂದರಂತೆ ರೈಲುಗಳನ್ನು ಹಳದಿ ಮಾರ್ಗಕ್ಕೆ ಸೇರ್ಪಡೆ ಮಾಡಲಾಗುವುದು. ಇದರಿಂದ ರೈಲುಗಳ ಸಂಚಾರದ ಅಂತರ ಹಂತ ಹಂತವಾಗಿ ತಗ್ಗಲಿದೆ. ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವುದರಿಂದ ಹೆಚ್ಚಿನ ಐಟಿ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ. ಆರಂಭದಲ್ಲಿ ಈ ಮಾರ್ಗ 50 ಸಾವಿರ ಜನರಿಗೆ ಸೇವೆ ಒದಗಿಸಲಿದ್ದು, ಮುಂದೆ 3.5 ಲಕ್ಷ ಜನ ಅನುಕೂಲ ಪಡೆಯಲಿದ್ದಾರೆ ಎಂದರು.
ಕೊನೆ ಮೈಲಿ ಸಂಪರ್ಕ ಸಮಸ್ಯೆ ನಿವಾರಿಸಲು ಈಗಾಗಲೇ ಬಿಎಂಟಿಸಿ ಜೊತೆಗೆ ಜಂಟಿ ಸರ್ವೆ ನಡೆಸಿ ಕ್ರಮ ವಹಿಸಲಾಗಿದೆ. ಫೀಡರ್ ಬಸ್ಸುಗಳು ಎಷ್ಟು ಬೇಕು ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುವುದು. ಹೆಚ್ಚಿನ ಕಂಪನಿಗಳ ಐಟಿ ಉದ್ಯೋಗಿಗಳು ಮೆಟ್ರೋ ಬಳಸಲು ಪ್ರೋತ್ಸಾಹಿಸುವಂತೆ ಎಲೆಕ್ಟ್ರಾನಿಕ್ ಸಿಟಿ ಕಂಪನಿಗಳ ಒಕ್ಕೂಟದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.