ಸಾರಾಂಶ
2016ರಲ್ಲಿ ಕೃಷಿ ಸಚಿವರಾಗಿದ್ದ ಇಂದಿನ ಕಂದಾಯ ಸಚಿವ ಕೃಷ್ಣಬೈರೇಗೌಡರು ಆಸಕ್ತಿಯಿಂದ ಅಡಿಪಾಯ ಹಾಕಿದ ರೈತ ಉತ್ಪಾದನಾ ಸಹಕಾರಿ ಒಕ್ಕೂಟ ಇಂದು 25 ಕೋಟಿ ರೂಪಾಯಿ ವಹಿವಾಟಿನ ಕಂಪನಿಯಾಗಿ ಬೆಳೆದು ನಿಂತಿದೆ.
ಆಧುನಿಕ ಜಗತ್ತಿನಲ್ಲಿ ನವಣೆ, ಸಾಮೆ, ಆರ್ಕ, ಕೊರ್ಲೆ, ಊದಲು ಮುಂತಾದ ಸಿರಿಧಾನ್ಯಗಳು ಅನೇಕ ಮನೆಗಳ ನಿತ್ಯಾಹಾರಕ್ಕೆ ಬೇಕೇ ಬೇಕಾಗಿರುವ ಧಾನ್ಯಗಳು.
2010ರಿಂದ ಈಚೆಗೆ ಸಿರಿಧಾನ್ಯ ಬಳಕೆಯ ಕ್ರೇಜ್ ಜೋರಾಗಿದೆ. ಅದಕ್ಕೆ ವ್ಯವಸ್ಥಿತ ಮಾರುಕಟ್ಟೆ ರೂಪಿಸಲೆಂದು 2016ರಲ್ಲಿ ಕೃಷಿ ಸಚಿವರಾಗಿದ್ದ ಇಂದಿನ ಕಂದಾಯ ಸಚಿವ ಕೃಷ್ಣಬೈರೇಗೌಡರು ಆಸಕ್ತಿಯಿಂದ ಅಡಿಪಾಯ ಹಾಕಿದ ರೈತ ಉತ್ಪಾದನಾ ಸಹಕಾರಿ ಒಕ್ಕೂಟ ಇಂದು 25 ಕೋಟಿ ರೂಪಾಯಿ ವಹಿವಾಟಿನ ಕಂಪನಿಯಾಗಿ ಬೆಳೆದು ನಿಂತಿದೆ.
ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಸಿರಿಧಾನ್ಯ ಬೆಳೆವ ರೈತರ ಸಂಖ್ಯೆ ದೊಡ್ಡದಾಗಿತ್ತು. ಆದರೆ, ಸಿರಿ ಧಾನ್ಯದ ಡಿಮ್ಯಾಂಡಿನ ಲಾಭ ನೇರವಾಗಿ ರೈತರಿಗೆ ಸಿಗುತ್ತಿರಲಿಲ್ಲ. ಇದನ್ನು ಗುರುತಿಸಿದ ಅಂದಿನ ಸಚಿವ ಕೃಷ್ಣೇಬೈರೇಗೌಡರು ರೈತರನ್ನೇ ಸಂಘಟಿತರನ್ನಾಗಿಸಲು ಸೂಚಿಸಿದರು. ಅದರ ಚುಕ್ಕಾಣಿ ಹಿಡಿಯಲು ಎನ್ಜಿಓ ಒಂದರಲ್ಲಿ ಕೆಲಸ ಮಾಡುತ್ತಾ ಸಿರಿಧಾನ್ಯ ಕೃಷಿಯಲ್ಲೂ ತೊಡಗಿದ್ದ ಕೃಪ ಅವರನ್ನು ಒಪ್ಪಿಸಿದರು.
2016ರಲ್ಲಿ ದಾವಣಗೆರೆ - ಚಿತ್ರದುರ್ಗ ಸಿರಿಧಾನ್ಯ ಬೆಳೆಗಾರರ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಕೃಪ ಅವರು 3 ಸಾವಿರ ರೈತರನ್ನು ಒಕ್ಕೂಟದ ಸದಸ್ಯರನ್ನಾಗಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಎರಡೂ ಜಿಲ್ಲೆಗಳಲ್ಲಿ 3 ಸಾವಿರ ರೈತರು 10 ಸಾವಿರ ಎಕರೆಯಲ್ಲಿ 9 ಸಾವಿರಕ್ಕೂ ಹೆಚ್ಚು ಟನ್ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಈ ಪೈಕಿ 3 ಸಾವಿರ ಟನ್ ಸಿರಿ ಧಾನ್ಯವನ್ನು ಬೆಳೆಗಾರರ ಒಕ್ಕೂಟವೇ ಖರೀದಿಸಿ ಮಾರುತ್ತಿದೆ. ತನ್ನ ಸದಸ್ಯ ರೈತರಿಗೆ ಹೆಚ್ಚಿನ ಲಾಭವನ್ನೂ ನೀಡುತ್ತಿದೆ. ಮೊದಲಿಗೆ ಸಿರಿಧಾನ್ಯ ಕ್ಲೀನಿಂಗ್, ಗ್ರೇಡಿಂಗ್ ಮತ್ತು ಪ್ಯಾಕ್ ಮಾಡಿ ಮಾರುವ ವ್ಯವಸ್ಥೆ ರೂಪಿಸಿದ ಸಂಸ್ಥೆಯು 2022ರಲ್ಲಿ ಸ್ವತಃ ಸಿರಿಧಾನ್ಯ ಉತ್ಪನ್ನಗಳ ಉತ್ಪಾದನೆ ಶುರು ಮಾಡಲು ತೀರ್ಮಾನಿಸಿತು. ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಮೂಲಕ 33 ಲಕ್ಷ ರೂಪಾಯಿ ಪಿಎಂಎಫ್ಎಂಇ ಸಾಲ ಪಡೆದರು.
15 ಲಕ್ಷ ರೂಪಾಯಿ ಸಬ್ಸಿಡಿಯನ್ನೂ ಪಡೆದಿದ್ದಾರೆ. ಸಿರಿಧಾನ್ಯಗಳಲ್ಲಿ 9 ಬಗೆಯ ಅವಲಕ್ಕಿ, ರೆಡಿ ಟು ಕುಕ್ ಆಹಾರಗಳಾದ ನೂಡಲ್ಸ್, ಇಡ್ಲಿ, ದೋಸೆ ಮಿಕ್ಸ್ಗಳು, ಮಕ್ಕಳ ಕುರುಕಲು ತಿಂಡಿಗಳು ಸೇರಿದಂತೆ 120 ಬಗೆಯ ಸಿರಿಧಾನ್ಯ ಆಹಾರೋತ್ಪನ್ನಗಳನ್ನು ಸೀಮಿ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಎಲ್ಲಾ ಬಗೆಯ ಸಿರಿಧಾನ್ಯಗಳು ಸಹ 25 ಕೆಜಿವರೆಗಿನ ಚೀಲಗಳಲ್ಲಿ ಸೀಮಿ ಬ್ರ್ಯಾಂಡಿನ ಹೆಸರಿನಲ್ಲೇ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಸಿರಿಧಾನ್ಯ ಉತ್ಪನ್ನಗಳ ಆರಂಭಕ್ಕೆ ಮುನ್ನ 15 ರಿಂದ 18 ಕೋಟಿ ರೂ. ಆಸುಪಾಸಿನಲ್ಲಿದ್ದ ವಹಿವಾಟು ಕಳೆದ ವರ್ಷ 25 ಕೋಟಿ ರೂಪಾಯಿಗೆ ಏರಿದೆ.
ಫ್ಲಿಪ್ಕಾರ್ಟ್, ಅಮೆಜಾನ್ ಆನ್ಲೈನ್ ಮಳಿಗೆಗಳಲ್ಲೂ ಲಭ್ಯ ಇರುವ ಸಿಮಿ ಉತ್ಪನ್ನಗಳು ಸ್ವತಃ ಶಾಪಿಂಗ್ ವೆಬ್ಸೈಟ್ ಹೊಂದಿದೆ. ಸಿಮಿ ಉತ್ಪನ್ನಗಳನ್ನು www.seemi.in ಗೆ ಲಾಗಿನ್ ಆಗಿಯೂ ಖರೀದಿಸಬಹುದು. ಪ್ರತಿ ತಿಂಗಳು 250 ಟನ್ ಸಿರಿಧಾನ್ಯಗಳನ್ನು ಕೊಂಡು ಮಾರುವ ಬೆಳೆಗಾರರ ಒಕ್ಕೂಟವು ರೈತರಿಂದ ಖರೀದಿ ಮತ್ತು ಸಂಸ್ಕರಣೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯೋಚಿಸುತ್ತಿದೆ. ಟಾಟಾ, ಐಟಿಸಿ ಅಂತಹ ಕಂಪನಿಗಳ ಜೊತೆಗೆ ಸಗಟು ಮಾರಾಟ ಒಪ್ಪಂದಕ್ಕೆ ಈ ವರ್ಷ ಹೆಚ್ಚು ಒತ್ತು ನೀಡುತ್ತಿದ್ದೇವೆ.
ನಮ್ಮ ಉತ್ಪನ್ನಗಳನ್ನು ಬೇರೊಂದು ರಫ್ತು ಕಂಪನಿ ಮೂಲಕ ವಿದೇಶಗಳಿಗೆ ಕಳಿಸುತ್ತಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ನೇರವಾಗಿ ಸೀಮಿ ಉತ್ಪನ್ನಗಳನ್ನ ಒಕ್ಕೂಟವೇ ರಫ್ತು ಮಾಡುವ ಸಾಮರ್ಥ್ಯ ಪಡೆದುಕೊಳ್ಳುವ ಗುರಿ ಹೊಂದಿವೆ. ರಫ್ತು ಮಾಡಲು ಬೇಕಾದ ಸರ್ಟಿಫಿಕೇಶನ್ ಮತ್ತು ಉತ್ಪಾದನಾ ವಿಧಾನ, ಮೂಲಸೌಕರ್ಯ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದೇವೆ. ಒಕ್ಕೂಟಕ್ಕೆ ಲಾಭ ಆದರೆ ರೈತರಿಗೆ ನೇರವಾಗಿ ಲಾಭ ಆದಂತೆಯೇ. ಈಗ ಪ್ರಸ್ತುತ ರೈತರಿಗೆ ಆಗಿರುವ ಅನುಕೂಲ ಅಲ್ಲದೇ ಬೆಳೆಗಾರರ ಒಕ್ಕೂಟವು 50 ಜನರಿಗೆ ನೇರ ಉದ್ಯೋಗ ನೀಡಿದೆ ಎಂದು ದಾವಣಗೆರೆ -ಚಿತ್ರದುರ್ಗ ಸಿರಿಧಾನ್ಯ ಬೆಳೆಗಾರರ ಸಹಕಾರ ಒಕ್ಕೂಟದ ಅಧ್ಯಕ್ಷ ಕೃಪ ಅವರು ಕನ್ನಡಪ್ರಭಕ್ಕೆ ವಿವರಿಸಿದರು. ಬೆಂಗಳೂರಲ್ಲಿ 10 ಔಟ್ಲೆಟ್:
ನಮ್ಮ ಮಾರ್ಕೆಟಿಂಗ್ ಸಾಮರ್ಥ್ಯ ಹೆಚ್ಚಿಸಿಕೊಳ್ಳು ತೀರ್ಮಾನಿಸಿದ್ದೇವೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಒಂದು ಔಟ್ಲೆಟ್ ಇದೆ. ಇನ್ನು ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 10 ಔಟ್ಲೆಟ್ ತೆರೆಯಲಿದ್ದೇವೆ. ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲೂ ಒಂದೊಂದು ಔಟ್ಲೆಟ್ ತೆರೆಯುವ ಯೋಚನೆ ಇದೆ. ಪ್ರಸ್ತುತ ದೇಶದ 12 ರಾಜ್ಯಗಳಿಗೆ ನಮ್ಮ ಸೀಮಿ ಉತ್ಪನ್ನಗಳು ಸರಬರಾಜಾಗುತ್ತಿವೆ. ಪ್ರತಿ ರಾಜ್ಯದಲ್ಲೂ ಸೀಮಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸುವುದು ನಮ್ಮ ಉದ್ದೇಶ. ಒಬ್ಬ ಸಾಮಾನ್ಯ ರೈತನನ್ನು ಸರ್ಕಾರವು ಉದ್ಯಮಿಯಾಗಿ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು ಕೃಪ.
ಸೀಮಿ ಉತ್ಪನ್ನಗಳಿಗೆ ಸಂಪರ್ಕಿಸಿ – 9945425506 ಅಥವಾ www.seemi.in ಲಾಗಿನ್ ಆಗಿ.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.