ಸಾರಾಂಶ
9 ವಿವಿ ಮುಚ್ಚುವ ಕುರಿತು ಇನ್ನೂ ನಿರ್ಧರಿಸಿಲ್ಲ
- ತಮ್ಮವರನ್ನು ಕುಲಪತಿ ಮಾಡಲು ಬಿಜೆಪಿಯಿಂದ ಜಿಲ್ಲೆಗೊಂದು ವಿವಿ । 30 ವಿವಿಗಳಿಗೆ ವರ್ಷಕ್ಕೆ ₹3000 ಕೋಟಿ ಬೇಕು: ಡಾ.ಸುಧಾಕರ್
ಡಾ.ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವರು
-ಲಿಂಗರಾಜು ಕೋರ
ಹಿಂದಿನ ಬಿಜೆಪಿ ಸರ್ಕಾರ ಆರಂಭಿಸಿದ ಹಾಗೂ ಬೊಕ್ಕಸದ ಮೇಲೆ ಹೊರೆ ಬೀರುವ ಹಲವು ಯೋಜನೆಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಈ ಸಾಲಿಗೆ ಇದೀಗ ಬಿಜೆಪಿ ಅವಧಿಯಲ್ಲಿ ಆರಂಭಗೊಂಡ 9 ವಿಶ್ವವಿದ್ಯಾಲಯಗಳು ಸೇರಲಿವೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ಯಾವುದೇ ಸೂಕ್ತ ಸ್ಥಳಾವಕಾಶ, ಅನುದಾನ, ಸಿಬ್ಬಂದಿ, ಸೌಲಭ್ಯಗಳಿಲ್ಲದೆ ಬಿಜೆಪಿ ಅಧಿಕಾರಾವಧಿಯಲ್ಲಿ ಈ ವಿವಿಗಳನ್ನು ಆರಂಭಿಸಲಾಗಿತ್ತು ಎಂಬುದು ಸರ್ಕಾರದ ವಾದವಾದರೆ, ಗ್ಯಾರಂಟಿಗಳಿಗೆ ಅಷ್ಟೊಂದು ಹಣ ನೀಡುವವರು ಈ ವಿವಿಗಳಿಗೆ ಅನುದಾನ ನೀಡಬಾರದೇ ಎಂಬುದು ಬಿಜೆಪಿ ವಾದ. ಈ ಎರಡು ವಾದಗಳಲ್ಲಿ ತಥ್ಯ ಯಾವುದು? ಅಸಲಿಗೆ 9 ವಿವಿ ರದ್ದಾಗುವುದು ನಿಶ್ಚಿತವೇ. ಸರ್ಕಾರದ ತಲೆಯಲ್ಲೇನಿದೆ? ಇನ್ನು ರಾಜ್ಯದಲ್ಲಿ ಖಾಸಗಿ ವಿವಿಗಳಿಗೂ ಅವಕಾಶ ಸಿಗುವುದೇ? ಈ ಎಲ್ಲ ವಿಷಯಗಳ ಜೊತೆಗೆ ಕಾಂಗ್ರೆಸ್‌ನಲ್ಲಿ ನಿಲ್ಲದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಗೊಂದಲಗಳ ಬಗ್ಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್.
ಬಿಜೆಪಿ ಅವಧಿಯಲ್ಲಿ ಆರಂಭಗೊಂಡ ರಾಜ್ಯದಲ್ಲಿರುವ 9 ವಿವಿ ಮುಚ್ಚುತ್ತೀರಂತೆ ಹೌದಾ?
ಅಂಥ ತೀರ್ಮಾನ ಇನ್ನೂ ಆಗಿಲ್ಲ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಉಪ ಸಮಿತಿ ಸಾಧಕ-ಬಾಧಕಗಳ ಚರ್ಚೆ ಮಾಡಿ ಸರ್ಕಾರಕ್ಕೆ ವರದಿ ಕೊಡಬೇಕು. ಆ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಬೇಕು. ಸಂಪುಟ ಹಾಗೂ ಮುಖ್ಯಮಂತ್ರಿಗಳು ಅಂತಿಮವಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಪ್ರಸ್ತುತ ಯಾವುದೇ ಅನುದಾನವಿಲ್ಲದೆ, ಸೌಕರ್ಯ ನೀಡದೇ ಕೇವಲ ತೋರಿಕೆಗಾಗಿ ಆರಂಭಿಸಲಾಗಿರುವ ಈ ವಿವಿಗಳ ವಿಚಾರದಲ್ಲಿ ಏನೇನು ಸಾಧ್ಯತೆಗಳಿವೆ ಎಂಬ ಬಗ್ಗೆ ಇಲಾಖೆಯು ಸಮಿತಿಗೆ ಮಾಹಿತಿ ನೀಡಿದೆ. ಸಮಿತಿ ಈ ಬಗ್ಗೆ ಚರ್ಚೆ ನಡೆಸಿ ವರದಿ ಸಲ್ಲಿಸುವುದು ಬಾಕಿಯಿದೆ.
ಏನೇನು ಸಾಧ್ಯತೆ ಅಥವಾ ಅವಕಾಶಗಳಿವೆ?
ಏನೇನು ಅವಕಾಶಗಳಿವೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಇರುವ ಅವಕಾಶಗಳ ಜೊತೆಗೆ ಹಣಕಾಸು ಇಲಾಖೆ ಕೆಲ ಮಾಹಿತಿಗಳನ್ನು ಕೇಳಿದೆ. ಎಲ್ಲವನ್ನೂ ಕೊಡುತ್ತೇವೆ. ನಂತರ ಸಚಿವ ಸಂಪುಟದ ಮುಂದೆ ಈ ವಿಷಯ ಚರ್ಚೆ ಆಗುತ್ತದೆ. ಅಲ್ಲಿ ಅಂತಿಮವಾಗಿ ಏನು ತೀರ್ಮಾನವಾಗುತ್ತೆ ನೋಡಬೇಕು. ಅದರಂತೆ ನಾವು ಮುಂದುವರೆಯುತ್ತೇವೆ. ಒಂದು ವೇಳೆ ವಿವಿಗಳನ್ನು ಮುಚ್ಚುವ ತೀರ್ಮಾನವಾದರೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪದವಿ ಪ್ರಮಾಣ ಪತ್ರದಲ್ಲಿ ವಿಶ್ವವಿದ್ಯಾಲಯದ ಹೆಸರಷ್ಟೇ ಬದಲಾಗುತ್ತದೆ. ಅದೂ ಹೆಸರಾಂತ ವಿಶ್ವವಿದ್ಯಾಲಯದ ಹೆಸರು ಬರುತ್ತದೆ. ಕಾಲೇಜು, ಕೋರ್ಸು ಎಲ್ಲವೂ ಹಾಗೇ ಇರುತ್ತದೆ. ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.
ಈ ವಿವಿಗಳ ಬಗ್ಗೆ ಇಂತಹದೊಂದು ಮರು ಚಿಂತನೆಗೆ ಕಾರಣವೇನು?
ಜಿಲ್ಲೆ, ತಾಲೂಕಿಗೊಂದು ಆಸ್ಪತ್ರೆ ಮಾಡೋದರಲ್ಲಿ ಅರ್ಥವಿದೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುವುದರಿಂದ ಶೈಕ್ಷಣಿಕವಾಗಿ ಏನು ಉಪಯೋಗ? ಒಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಐದು ವರ್ಷಗಳ ಅವಧಿಗೆ ಕನಿಷ್ಠ 342 ಕೋಟಿ ರು. ಅನುದಾನ ಬೇಕು. ನಂತರ ಮುನ್ನಡೆಸಿಕೊಂಡು ಹೋಗಲು ಅದರದ್ದೇ ಆದ ಸಂಪನ್ಮೂಲ, ವರಮಾನ ಬೇಕಲ್ವಾ? ಸಾಕಷ್ಟು ಸಂಖ್ಯೆಯಲ್ಲಿ ಸಂಯೋಜಿತ ಕಾಲೇಜುಗಳಿಲ್ಲದಿದ್ದರೂ ಸೂಕ್ತ ಕ್ಯಾಂಪಸ್ ಜಾಗ, ಕಟ್ಟಡ ನಿರ್ಮಾಣಕ್ಕೆ ಅನುದಾನ, ಅಗತ್ಯ ಬೋಧಕ ವರ್ಗ, ಸಂಶೋಧನಾ ಚಟುವಟಿಕೆಗಳಿಗೆ ವ್ಯವಸ್ಥೆ ಸೇರಿ ಯಾವ ಮೂಲಸೌಕರ್ಯವನ್ನೂ ನೀಡದೆ ಯಾರನ್ನೋ ಕುಲಪತಿ ಮಾಡಬೇಕು, ಕುಲಸಚಿವರನ್ನಾಗಿ ಮಾಡಬೇಕು ಎಂದು ವಿವಿ ಸ್ಥಾಪನೆ ಮಾಡಿದ್ದಾರೆ.
ವಿಸಿ, ಕುಲಸಚಿವರ ನೇಮಕಕ್ಕಾಗಿ ಹಿಂದಿನ ಸರ್ಕಾರ 9 ವಿವಿಗಳ ಸ್ಥಾಪಿಸಿತೇ?
ಹೌದು, ಅಷ್ಟೇ ಅರ್ಥಕ್ಕೆ ಇದು ಸೀಮಿತವಾಗುತ್ತದೆ. ಹಣಕಾಸು ಇಲಾಖೆಯ ಸ್ಪಷ್ಟ ವಿರೋಧದ ನಡುವೆಯೂ ಈ ವಿವಿಗಳನ್ನು ಆರಂಭಿಸಲಾಗಿದೆ. ಈ ವಿವಿಗಳಿಗೆ 2 ಕೋಟಿ ಅನುದಾನ ಕೊಡುವುದಾಗಿ ಹೇಳಿ ಕೊಟ್ಟಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೊಡಬೇಕಾಯಿತು. ಸಿಬ್ಬಂದಿಗೆ ಎಚ್‌ಆರ್‌ಎಂಎಸ್ ವೇತನವನ್ನೂ ನಮ್ಮ ಸರ್ಕಾರ ಬಂದ ಮೇಲೆ ಕೊಟ್ಟಿದೆ. ವಿವಿಗಳ ಕುಲಪತಿಗಳು ಈಗ ನಮ್ಮ ಸರ್ಕಾರದಲ್ಲಿ ಕಾರು ಕೊಡಿ, ಸಂಪನ್ಮೂಲ ಕೊಡಿ ಅಂತಿದ್ದಾರೆ. ಬೀದರ್ ಹೊರತುಪಡಿಸಿ ಉಳಿದ ವಿವಿಗಳ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳ ಸಂಖ್ಯೆ ಎರಡಂಕಿಯಷ್ಟಿದೆ. ಹೀಗಿದ್ದಾಗ ಅವುಗಳಿಗೆ ವರಮಾನ ಎಲ್ಲಿಂದ ಬರುತ್ತದೆ? ಸಾರ್ವಜನಿಕ ವಿವಿ, ಕಾಲೇಜುಗಳಿಗೆ ಬರುವ ಬಡವರ ಮಕ್ಕಳಿಂದ ದೊಡ್ಡ ಮೊತ್ತದ ಸಂಪನ್ಮೂಲ ಪಡೆಯಲು ಆಗುತ್ತಾ? ಅರ್ನ್ ವೈನ್ ಯು ಲರ್ನ್ ಅಂತ ಹೇಳಿ ವಿವಿಗಳನ್ನು ಆರಂಭಿಸುತ್ತಾರೆ, ತಂತ್ರಜ್ಞಾನ ಬಳಸಿಕೊಂಡು ವಿವಿ ನಡೆಸಬೇಕು ಅಂತ ಹೇಳ್ತಾರೆ.
ಸರ್ಕಾರ ಅನುದಾನ ನೀಡಿ ವಿವಿಗಳನ್ನು ಮೇಲೆತ್ತಲು ಸಹಕಾರ ಕೊಡಬಹುದಲ್ವಾ?
ವರ್ಷಕ್ಕೆ ಒಂದು ವಿವಿಗೆ 100 ಕೊಟಿ ರು. ಕೊಡಬೇಕು ಅಂದ್ರೂ 30 ವಿವಿಗಳಿಗೆ 3000 ಕೋಟಿ ರು. ಕೊಡಬೇಕು. ಸರ್ಕಾರ ಅಷ್ಟು ಆರ್ಥಿಕ ಸಹಕಾರ ನೀಡಲು ಸಾಧ್ಯವಿದೆಯಾ? ವಿದೇಶಗಳಲ್ಲಿ ವಿಶ್ವವಿದ್ಯಾಲಯಗಳು ಸಂಪೂರ್ಣ ಪೇಮೆಂಟ್ ಮೇಲೆ ನಡೆಯುತ್ತವೆ. ನಮ್ಮಲ್ಲಿ ಹಾಗಿಲ್ಲ. ಇರುವುದೇ ಕಡಿಮೆ ಶುಲ್ಕ, ಒಂದೆರಡು ಸಾವಿರ ಶುಲ್ಕ ಹೆಚ್ಚಳ ಮಾಡಿದರೂ ಪ್ರತಿಭಟನೆಗಳಾಗುತ್ತವೆ. ಮಹಾರಾಣಿ ಕಾಲೇಜು ವಿವಿ ಮಾಡುವ ಮೊದಲು 8000 ಮಕ್ಕಳಿದ್ದರು, ಈಗ 6000 ಆಗಿದೆ. ನೃಪತುಂಗ ವಿವಿಯೂ ಕೂಡ ಅದೇ ರೀತಿ ಇದೆ. ಹೀಗೆ ಕಾಲೇಜಿಗೊಂದು ವಿವಿ ಸ್ಥಾಪಿಸಿದರೆ ಹೇಗೆ ಅನುದಾನ ಕೊಡುವುದು?
ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ನೀಡುವವರಿಗೆ ವಿವಿಗಳಿಗೆ ಕೊಡಲು ಅನುದಾನ ಇಲ್ವಾ ಅಂತಾರೆ ಪ್ರತಿಪಕ್ಷದವರು?
ನಮ್ಮ ಗ್ಯಾರಂಟಿಗಳ ಮೇಲೆ ನಿಮಗ್ಯಾಕೆ (ಪ್ರತಿಪಕ್ಷದವರಿಗೆ) ಕಣ್ಣು. ಅವು ಜನರಿಗೆ ತಲುಪ್ತಿಲ್ವಾ? ಗ್ಯಾರಂಟಿಗಳು ಇಲ್ಲದಿದ್ದಾಗ ನೀವ್ಯಾಕೆ ವಿವಿಗಳಿಗೆ ಅನುದಾನ ಕೊಡಲಿಲ್ಲ? ಸನ್ಮಾನ್ಯ ಆರ್.ಅಶೋಕ್ 342 ಕೋಟಿ ರು. ಕೊಡಲು ಸರ್ಕಾರಕ್ಕೆ ಯೋಗ್ಯತೆ ಇಲ್ವಾ ಅಂದಿರೋದು ಕೇಳಿದ್ದೇನೆ. ಯಾವ 342 ಕೋಟಿ ರು. ಬಗ್ಗೆ ಮಾತನಾಡುತ್ತಿದ್ದೀರಿ ಸ್ವಾಮಿ... ಇದು ಬರೀ ಒಂದು ವಿವಿ ಸ್ಥಾಪನೆಗೆ 5 ವರ್ಷಕ್ಕೆ ಬೇಕಿರುವ ಮೊತ್ತ. 150, 200 ಎಕರೆ ಕ್ಯಾಂಪಸ್‌ನಲ್ಲಿ ವಿವಿ ಸ್ಥಾಪನೆ ಮಾಡುವುದಾದರೆ ಅದೂ ಸಾಲುವುದಿಲ್ಲ. ಈ ರೀತಿ ವಿವಿಗಳನ್ನು ಸ್ಥಾಪಿಸುವುದು ಒಂದು ರೀತಿ ಮಕ್ಕಳನ್ನು ಹುಟ್ಟಿಸಿ ಅವು ಹೆಂಗೋ ಬದುಕುತ್ತವೆ ಬಿಡಿ ಅಂದ ಹಾಗೆ ಆಗುತ್ತದೆ. ಅವುಗಳ ಭವಿಷ್ಯ ಹೆಂಗಿರಬೇಕೆಂಬ ತಯಾರಿ ಬೇಡವಾ? ಹುಟ್ಟಿಸೋದಷ್ಟೇ ನಮ್ಮ ಜವಾಬ್ದಾರಿ ಯಾರೋ ಬಂದು ಕಾಪಾಡುತ್ತಾರೆ ಅಂದರೆ ಏನರ್ಥ?
ಎಲ್ಲ ವಿವಿಗಳ ವಿಷಯದಲ್ಲೂ ರಾಜ್ಯಪಾಲರ ಅಧಿಕಾರ ಮೊಟಕು ಆಗುತ್ತಾ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ತಿದ್ದುಪಡಿ ಅಧಿನಿಯಮಕ್ಕೆ ರಾಜ್ಯಪಾಲರು ಇನ್ನೂ ಸಹಿ ಹಾಕಿಲ್ಲ. ಹಾಗಾಗಿ ಅದರಲ್ಲಿ ಅವರ ಅಧಿಕಾರ ಮೊಟಕು ಆಗಿಲ್ಲ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳ ಅಧಿನಿಯಮ-2000ಕ್ಕೆ ಸಮಗ್ರ ತಿದ್ದುಪಡಿಗೆ ಸಿದ್ಧತೆ ಮಾಡಿದ್ದೇವೆ. ವಿಸಿಗಳ ಕಾರ್ಯಕ್ಷಮತೆ, ಹೊಣೆಗಾರಿಕೆಗಳೇನು, ಶೈಕ್ಷಣಿಕ ಕಾರ್ಯಸಾಧನೆ ಹೇಗಿರಬೇಕು, ಸಿಂಡಿಕೇಟ್ ನಾಮನಿರ್ದೇಶಕ್ಕೂ ಉನ್ನತ ಮಟ್ಟದ ವಿದ್ಯಾರ್ಹತೆ ನಿಗದಿ.. ಹೀಗೆ ವಿಶ್ವವಿದ್ಯಾಲಯಗಳಿಗೆ ಏಕರೂಪದ ಒಂದಷ್ಟು ನಿಯಮಾವಳಿಗಳನ್ನು ಇದರಲ್ಲಿ ತರುತ್ತಿದ್ದೇವೆ. ಎರಡು ಮೂರು ರೀತಿಯ ಆಯ್ಕೆಗಳಿವೆ. ಅದನ್ನು ಕ್ಯಾಬಿನೆಟ್ ಮುಂದೆ ತರುತ್ತೇವೆ. ಅಲ್ಲಿ ಏನು ತೀರ್ಮಾನ ಆಗುತ್ತದೋ ಅದು ಉಭಯ ಸದನಗಳ ಮುಂದೆ ಬರುತ್ತದೆ. ಕುಲಪತಿಗಳ ನೇಮಕಾತಿ ವಿಚಾರದಲ್ಲೂ ಎರಡು ಮೂರು ಆಯ್ಕೆಗಳಿವೆ. ಸಚಿವ ಸಂಪುಟದ ಮುಂದೆ ತಂದ ಮೇಳೆ ಆ ಬಗ್ಗೆ ಮಾತನಾಡುತ್ತೇನೆ.
ರಾಜ್ಯದಲ್ಲಿ ವಿದೇಶಿ ವಿವಿಗಳಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಿರಿ? ಜಿಮ್ -2025ನಲ್ಲಿ 9 ವಿವಿಗಳಿಗೆ ಅವಕಾಶ ನೀಡಲು ಒಪ್ಪಂದ ಆಗಿದೆ?
ವಿದೇಶಿ ವಿವಿಗಳಿಗೆ ಅವಕಾಶ ನೀಡಲು ಯುಜಿಸಿ ನಿಯಮಗಳಲ್ಲಿ ಅವಕಾಶವಿದೆ. ಆದರೂ ನನ್ನ ಅನುಭವದಲ್ಲಿ ಜಿಮ್‌ನಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ವಿವಿಗಳು ದೊಡ್ಡ ಪ್ರಮಾಣದಲ್ಲಿ ಕ್ಯಾಂಪಸ್ ಸ್ಥಾಪಿಸಲು ಸಿದ್ಧರಿಲ್ಲ. ಸಣ್ಣ ಪ್ರಮಾಣದ ಜಾಗದಲ್ಲಿ ಆರಂಭಿಸುವ ಯೋಚನೆ ಅವರದ್ದು. ಆಫ್‌ಶೋರ್ ಕ್ಯಾಂಪಸ್ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ವಿದೇಶಕ್ಕೆ ಹೋಗಿ 60, 70 ಲಕ್ಷ ರು. ನೀಡಿ ಪದವಿ ಪಡೆಯುವವರಿಗೆ ಕಡಿಮೆ ಹಣದಲ್ಲಿ ನಮ್ಮ ರಾಜ್ಯದಲ್ಲೇ ವಿದೇಶಿ ವಿವಿಗಳ ಪದವಿ ಸಿಗುವಂತಾಗಬಹುದು.
ಯುಜಿಸಿ ಕರಡು ನಿಯಮಾವಳಿ ವಿರುದ್ಧ 6 ರಾಜ್ಯಗಳ ಆಕ್ಷೇಪಣೆಗಳಿಗೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಂತಾ?
ಕೇಂದ್ರದಿಂದಾಗಲಿ, ಯುಜಿಸಿಯಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಯುಜಿಸಿ ಕರಡು ನಿಯಮಾವಳಿಗಳಿಗೆ ರಾಜ್ಯಗಳು ಅಭಿಪ್ರಾಯ ತಿಳಿಸಲು ಇದ್ದ ಕೊನೆಯ ದಿನವನ್ನು ಫೆಬ್ರವರಿ ತಿಂಗಳ ಕೊನೆಯವರೆಗೂ ವಿಸ್ತರಿಸಲಾಗಿದೆ. ಬುಧವಾರ ಕೇರಳದಲ್ಲಿ ಆರೂ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ 2ನೇ ಸಭೆ ಇದೆ. ಅಲ್ಲಿ ಆಗುವ ನಿರ್ಣಯದಂತೆ ಮುಂದಿನ ತೀರ್ಮಾನ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರಗಳು ಮಾತ್ರವಲ್ಲದೆ, ಬಿಜೆಪಿ ಮಿತ್ರ ಪಕ್ಷಗಳೂ ಈ ನೀತಿಗೆ ವಿರೋಧ ವ್ಯಕ್ತಪಡಿಸಿವೆ. ಆದರೆ, ರಾಜಕೀಯ ಕಾರಣಕ್ಕೆ ನಮ್ಮ ಸಭೆಗೆ ಬಂದಿಲ್ಲ.
ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ರೂಪಿಸುವ ಕಾರ್ಯ ಎಲ್ಲಿಗೆ ಬಂತು?
ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಬಹುತೇಕ ಅಂಶಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ನಾವು ಎಸ್‌ಇಪಿ ರೂಪಿಸುತ್ತಿದ್ದೇವೆ. ಈಗಾಗಲೇ ಕರಡು ರಚನಾ ಸಮಿತಿಯ ಪ್ರಾಥಮಿಕ ವರದಿ ಆಧರಿಸಿ 2023-24ನೇ ಸಾಲಿನಿಂದ ಎನ್‌ಇಪಿ ಕೈಬಿಟ್ಟು, ರಾಜ್ಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇವೆ. ಈ ಸಮಿತಿ ಮುಂದಿನ ತಿಂಗಳು ತನ್ನ ಅಂತಿಮ ವರದಿ ನೀಡಲಿದೆ. ಆ ವರದಿ ಬಂದ ಬಳಿಕ ಜಾರಿಗೆ ಕ್ರಮ ವಹಿಸಲಾಗುವುದು.
ನಿಮ್ಮ ಪಕ್ಷದಲ್ಲಿ ಅಧ್ಯಕ್ಷರ ಬದಲಾವಣೆ ಕೂಗು ಎದ್ದಿದೆಯಲ್ಲ?
ನಮಗೆಲ್ಲ ತಿಳಿದಿರುವ ಪ್ರಕಾರ ಸರ್ಕಾರ ಬಂದ ಕೂಡಲೇ ಸ್ಥಾನ ಬಿಟ್ಟುಕೊಡಲು ಕೆಪಿಸಿಸಿ ಅಧ್ಯಕ್ಷರು ಸಿದ್ಧರಿದ್ದರು. ಆದರೆ, ನಾವು ಹೇಳುವವರೆಗೆ ನೀವೇ ಮುಂದುವರೆಯಿರಿ ಎಂದು ಹೈಕಮಾಂಡ್ ಅವರಿಗೆ ಹೇಳಿತ್ತು. ಇದು ಮುಖ್ಯಮಂತ್ರಿಯವರಿಗೂ ಗೊತ್ತಿರುವ ವಿಷಯ. ಈಗ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಇಂತಹ ವಿಚಾರಗಳ ಬಗ್ಗೆ ನಾವು ತೀರ್ಮಾನ ಕೈಗೊಳ್ಳುತ್ತೇವೆ. ನೀವ್ಯಾರು ತಲೆ ಕೆಡಿಸಿಕೊಳ್ಳಬೇಡಿ ಎಂದು ನಮಗೆಲ್ಲ ಹೇಳಿದ್ದಾರೆ. ಅಲ್ಲಿಗೆ ಮುಗಿಯುತು. ಮಾಧ್ಯಮವರು ಕೇಳಿದಾಗ ನಮ್ಮ ಪಕ್ಷದ ಸಚಿವರು ಯಾವುದೋ ಅರ್ಥದಲ್ಲಿ ಹೇಳಿದ್ದನ್ನು ಇನ್ಯಾವುದೋ ಅರ್ಥದಲ್ಲಿ ಬಿಂಬಿಸಿದಾಗ ರೆಕ್ಕೆಪುಕ್ಕ ಬೆಳೆದಿರುತ್ತದೆ ಅಷ್ಟೆ.
ರೆಕ್ಕೆಪುಕ್ಕ ಅಲ್ಲ, ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ ಮತ್ತಿತರರು ಹೇಳಿಕೆ ನೀಡುತ್ತಲೇ ಇದ್ದಾರೆ?
ವೈಯಕ್ತಿಕವಾಗಿ ಅಭಿಪ್ರಾಯ ಭೇದ ಇರುವ ಒಬ್ಬರೋ, ಇಬ್ಬರೋ ಏನೋ ಹೇಳಿಕೆ ಕೊಡುತ್ತಿದ್ದಾರೆ. ಎಲ್ಲಾ 34 ಸಚಿವರೂ ಮಾತನಾಡುತ್ತಿದ್ದಾರಾ? ಸತೀಶಣ್ಣ ಸ್ಪಷ್ಟನೆ ನೀಡಿದ್ದಾರೆ. ಸಚಿವ ರಾಜಣ್ಣ ಅವರೂ ಡಿ.ಕೆ.ಶಿವಕುಮಾರ್ ಬಗ್ಗೆ ವೈಯಕ್ತಿಕವಾಗಿ ಏನು ಇಲ್ಲ ಅಂತ ಹೇಳಿದ್ದಾರೆ. ಪರಮೇಶ್ವರ್ ಅವರೂ ಈ ವಿಚಾರ ಮಾತನಾಡುವುದು ನಿಲ್ಲಿಸಿದ್ದಾರೆ.
ಅಕ್ಟೋಬರ್ ಕ್ರಾಂತಿಯ ಕುದಿಗಳಿವು ಅಂತ ವ್ಯಾಖ್ಯಾನ ಇದೆಯಲ್ವಾ?
ಏನು ಕ್ರಾಂತಿ ಆಗುತ್ತೋ? ಶಾಂತಿ ಆಗುತ್ತೋ ಗೊತ್ತಿಲ್ಲ. ಬಿಜೆಪಿಯಲ್ಲಿ ಐದು ಬಣಗಳಾಗಿವೆ. ಮೊದಲು ವಿಜಯೇಂದ್ರ ಬಣ, ಯತ್ನಾಳ್ ಬಣ ಇತ್ತು. ಈಗ ಆರ್.ಅಶೋಕ್ ಬಣ, ಬಸವರಾಜ ಬೊಮ್ಮಾಯಿ ಬಣ ಜೊತೆಗೆ ಹೈಕಮಾಂಡ್ ಬಣ ಆಗಿದೆ. ನಮ್ಮಲ್ಲಿ ಯಾವ ಬಣವೂ ಇಲ್ಲ.