ಸಾರಾಂಶ
ರಾತ್ರೋ ರಾತ್ರಿ ಮನೆಬಿಟ್ಟುಹೋದ ಬುದ್ಧನಿಗೆ ವರ್ಷಗಳ ಕಾಲ ತಪಸ್ಸು ಮಾಡಿದ ಬಳಿಕ ಜ್ಞಾನೋದಯವಾಯಿತು. ಏನಂಥ ಜ್ಞಾನೋದಯವಾಯಿತು? ಸುಳ್ಳು ಹೇಳಬಾರದು, ಆಸೆಪಡಬಾರದು, ಹಿಂಸೆ ಮಾಡಬಾರದು ಎಂದು ತಿಳಿಯಿತು.
ಜಿಎಂ ಕೊಟ್ರೇಶ್
ರಾತ್ರೋ ರಾತ್ರಿ ಮನೆಬಿಟ್ಟುಹೋದ ಬುದ್ಧನಿಗೆ ವರ್ಷಗಳ ಕಾಲ ತಪಸ್ಸು ಮಾಡಿದ ಬಳಿಕ ಜ್ಞಾನೋದಯವಾಯಿತು. ಏನಂಥ ಜ್ಞಾನೋದಯವಾಯಿತು? ಸುಳ್ಳು ಹೇಳಬಾರದು, ಆಸೆಪಡಬಾರದು, ಹಿಂಸೆ ಮಾಡಬಾರದು ಎಂದು ತಿಳಿಯಿತು.
ಮೇಷ್ಟ್ರ ಮಾತು ಕೇಳಿದ ತಕ್ಷಣ ಸತ್ಯ ಹೇಳಬೇಕೆಂದು ತಿಳಿಯಲು ವರ್ಷಗಟ್ಟಲೆ ತಪಸ್ಸು ಮಾಡಬೇಕೆ? ನಮ್ಮ ಮೇಷ್ಟ್ರ ಕೈಯಲ್ಲಿನ ಕೋಲಿನಿಂದ ಎರಡು ಬಾರಿಸಿದ್ದರೆ ಸಾಕಿತ್ತು ಸುಳ್ಳು ಹೇಳಬಾರದೆಂಬ ಸತ್ಯ ತಾನಾಗಿ ಗೊತ್ತಾಗುತ್ತಿತ್ತು ಅನಿಸಿತು. ನಮಗೆ ಬುದ್ಧನ ಪರಿಚಯವಾಗುವ ಮುಂಚೆಯೇ ಮನೆಯ ಹಿರಿಯರು, ಶಾಲೆಯ ಮೇಷ್ಟ್ರು ‘ಸುಳ್ಳು ಹೇಳಬಾರದು, ಆಸೆಪಡಬಾರದು’ ಎಂದು ಹೇಳಿಬಿಟ್ಟಿದ್ದರು. ಹಾಗಾಗಿ ನಮ್ಮ ದೃಷ್ಟಿಯಲ್ಲದು ಅನ್ನ, ನೀರು ಬಿಟ್ಟು ತಪಸ್ಸು ಮಾಡಿ ಗಳಿಸುವ ಜ್ಞಾನವೇನಲ್ಲ. ಹಾಗಿದ್ದರೆ ಬುದ್ಧನಲ್ಲಿ ಉದಯಿಸಿರುವ ಜ್ಞಾನವೇ ಬೇರೆ ಎಂಬ ಗುಮಾನಿ ಬಹಳ ಕಾಲ ಕಾಡಿತು. “ಜ್ಞಾನೋದಯ” ಅಂದ ತಕ್ಷಣ ಈ ಅಪಾರ ಸೃಷ್ಟಿಯ ಹುಟ್ಟಿನ ಗುಟ್ಟೇ ಅವನೆದುರು ಬಯಲಾಗಿರಬಹುದು. ಸೃಷ್ಟಿಕರ್ತನ ಉದ್ದೇಶವೂ ಅವನಿಗೆ ಗೊತ್ತಾಗಿರಬಹುದು ಅಂದುಕೊಂಡು ಬುದ್ಧನಿಗಾದ “ಜ್ಞಾನೋದಯ”ದ ಬಗ್ಗೆ ಭಾರೀ ಕುತೂಹಲಿಯಾಗಿದ್ದೆ.
ಆದರೆ ಯಾರ ಬಳಿ ಕೇಳಿದರೂ ಮತ್ತದೇ ಸಿದ್ಧ ಉತ್ತರ: “ಆಸೆಯೇ ದುಃಖಕ್ಕೆ ಮೂಲ. ಸುಳ್ಳು ಹೇಳಬೇಡ, ಹಿಂಸೆ ಮಾಡಬೇಡ, ಆಸೆ ಪಡಬೇಡ”.... ಅಲ್ಲಿಗೆ ಉತ್ತರ ಸಿಗುವುದೆಂಬ ಆಸೆಯನ್ನು ಬಿಟ್ಟೆ.
ಹಾಗೇ ಕಾಲ ಕಳೆಯಿತು. *
ಒಂದು ಬೇಸಗೆಯ ಬೆಳಗು. ಮನೆ ಮುಂದೆ ಚಪ್ಪರದಡಿಯಿಂದ ನೋಡಿದರೆ ಹೆದ್ದಾರಿ ಪಕ್ಕದಲ್ಲಿ ದೂರದಲ್ಲಿ ಒಂದು ಮನೆ. ಆ ಮನೆಯ ಹಿನ್ನೆಲೆಯಲ್ಲಿ ಒಂದು ಎತ್ತರದ ತೆಂಗಿನ ಮರ ಹೊಂಬೆಳಕಿಗೆ ಗರಿಗಳಾಡಿಸುತ್ತಾ ಅಂದೇಕೋ ಅದು ಈ ಲೋಕದ್ದೇ ಅಲ್ಲ ಎನ್ನುವಷ್ಟು ಸುಂದರವಾಗಿ ಕಂಡಿತು. ಮನೆ ಬಳಿಯ ಬಸಲಿ ಮರದ ತಾಮ್ರವರ್ಣದ ಚಿಗುರೆಲೆಗಳಂತೂ ತೆಳುಗಾಳಿಗೆ ಬಳುಕಾಡುತ್ತಾ ಎಳೆಬೆಳಕನ್ನು ಕನ್ನಡಿಯಂತೆ ಪ್ರತಿಫಲಿಸುತ್ತಿದ್ದವು. ಮರದ ತುಂಬಾ ಹಕ್ಕಿಗಳು ಮಾತುಕೇಳದ ಮಕ್ಕಳಂತೆ ಗಲಾಟೆ ಎಬ್ಬಿಸಿದ್ದವು. ರೈತನೊಟ್ಟಿಗೆ ಕುಣಿಯುತ್ತಾ ಹೊರಟಿದ್ದ ಹರೆಯದ ಬಿಳಿಎತ್ತುಗಳ ಕೊರಳ ಗಂಟೆಯ ನಾದವೂ ಸೇರಿ ತಂಬೆಲರ ತುಂಬ ವಿಶೇಷವಾದ ಪರಿಮಳ ಹರಡಿತ್ತು. ವಸಂತ ಋತುವಿನ ಪಾರದರ್ಶಕವಾದ ತೆಳುಪದರವೊಂದನ್ನು ಇಡೀ ಹಳ್ಳಿಗೆ ಬಿಗಿಯುಡಿಗೆಯಾಗಿ ತೊಡಿಸಿದಂತಿತ್ತು. ಎಲ್ಲವೂ ನಿತ್ಯದ ಘಟನೆಗಳೇ. ಆದರೆ ಅಂದೇಕೋ ತೊಳೆದಿಟ್ಟ ತೈಲವರ್ಣ ಕೃತಿಗೆ ಜೀವ ಬಂದಂತೆ ಅತೀವ ಸೌಂದರ್ಯವನ್ನು ವೃದ್ಧಿಸಿಕೊಂಡು ಕಂಡವು. ಇಡೀ ಹಳ್ಳಿ ಸ್ವರ್ಗದಿಂದಿಳಿದಿದೆ ಎಂಬಂತೆ ಗೋಚರಿಸಿ ಲೌಕಿಕ ಭಾಷೆಯಲ್ಲಿ ವಿವರಿಸಲಾಗದ “ಭಾವಾನುಭವ”ವೊಂದು ಕೆಲ ಕ್ಷಣಗಳ ಕಾಲ ಮೈ-ಮನದಲ್ಲೆಲ್ಲಾ ಮೂಡಿ ಮರೆಯಾಯಿತು. ಒಂದು ಕ್ಷಣ ಚಕಿತನಾದೆ. ತೀರಾ ಹೊಸತಾದ ಆ ಅನುಭವವನ್ನು ಮತ್ತೆ ಮತ್ತೆ ಅನುಭವಿಸಲು ಯತ್ನಿಸಿದೆ. ಊಹೂಂ... ಆಗಲಿಲ್ಲ. ಈಗ ಎಲ್ಲಾ ದೃಶ್ಯಗಳೂ ಎಂದಿನಂತೆ ಸಹಜವಾಗಿವೆ. ಆ ಅನುಭವ ನೆನಪಾಗುತ್ತಿದೆ ಹೊರತು ಅದನ್ನು ಪುನಃ ಹೊಂದಲಾಗುತ್ತಿಲ್ಲ! ಹಾಗಾದರೆ ಆ ಕ್ಷಣ ನನಗೇನಾಯಿತು.!?
ತುಂಬ ಯೋಚಿಸಿದೆ... ಓಹೋ... ಅಂದರೆ, ನಿತ್ಯದ ಇಡೀ ದೃಶ್ಯವನ್ನು ತುಸುಹೊತ್ತು ನನ್ನ ಮೆದುಳು ಎಂದಿಗಿಂತ ಹೊಸಬಗೆಯಲ್ಲಿ ಗ್ರಹಿಸಿತ್ತು! ಅದರ “ವಿಶೇಷಾನುಭವ” ನನಗಾಗಿತ್ತು! ಸದಾಕಾಲವೂ ನನ್ನ ಮೆದುಳು ಈ ಲೋಕವನ್ನು ಹಾಗೇಕೆ ಗ್ರಹಿಸುವುದಿಲ್ಲ? ಮತ್ತೆ ಯೋಚಿಸಿದೆ. ಉತ್ತರ ಸ್ಪಷ್ಟವಾಗಲಿಲ್ಲ.
ಕಾಲ ಕಳೆದಂತೆ ಬೇರೆ ಬೇರೆ ಜಾಗಗಳಲ್ಲಿ ಮತ್ತೆ ಇಂಥ ಅನುಭವಗಳಾದವು. ಕಾಣುವ ದೃಶ್ಯ ಭೌತಿಕವಾಗಿ ಒಂದೇ ಇದ್ದರೂ ಭಾವಲೋಕದಲ್ಲಿ ಎರೆಡೆರೆಡು ಬಗೆಯ ಅನುಭವ ಉಂಟಾಗುತ್ತಿದೆ. ಅಂದರೆ ಈ ಜಗತ್ತು ತಾನಿರುವಂತೆಯೇ ಕಾಣುತ್ತದೆ ಎಂಬುದಕ್ಕಿಂತ ಮೆದುಳು ಅದನ್ನು “ಗ್ರಹಿಸಿದ” ಬಗೆಯಲ್ಲಿ ಗೋಚರಿಸುತ್ತದೆ. ಒಬ್ಬ ವ್ಯಕ್ತಿಗೇ ಒಂದು ದೃಶ್ಯ ಎರೆಡೆರೆಡು ಬಗೆಯಲ್ಲಿ “ಗ್ರಹಿಕೆ”ಗೆ ಬರುತ್ತಿರುವಾಗ ಇನ್ನು ಪ್ರತಿ ವ್ಯಕ್ತಿಗೂ ದೃಶ್ಯಗಳು ಒಂದೇ ರೀತಿಯಲ್ಲಿ ಕಾಣುತ್ತವೆ ಎಂಬುದನ್ನು ಹೇಗೆ ನಂಬುವುದು? ಈ ಭೌತಲೋಕವನ್ನು ಒಬ್ಬೊಬ್ಬರ ಮೆದುಳೂ ಒಂದೊಂದು ಬಗೆಯಲ್ಲಿ ಗ್ರಹಿಸುತ್ತಿರಬಹುದು. ಹೀಗಿದ್ದಮೇಲೆ ಸ್ವತಃ ನಾನೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಗ್ರಹಿಕೆಗೆ ಬರುತ್ತಿರಬಹುದಲ್ಲವೇ? ಆ ಮೂಲಕ ಒಬ್ಬೊಬ್ಬರಿಗೆ ಒಂದೊಂದು ಭಾವ ಮೂಡಿಸುತ್ತಿರಬಹುದಲ್ಲವೇ? ಕೆಲವರಿಗೆ ಸಹಜ ವ್ಯಕ್ತಿಯಾಗಿ ಕಂಡರೆ ಕೆಲವರಿಗೆ ವಿಶೇಷವಾಗಿ ಕಾಣುತ್ತಿರಬಹುದು. ಕೆಲವರಿಗೆ ಆತ್ಮೀಯ ಭಾವ ಮೂಡಿಸಿದರೆ ಕೆಲವರಿಗೆ ಕಿರಿಕಿರಿಯೂ ಆಗುತ್ತಿರಬಹುದು. ಇನ್ನು ಕೆಲವರಿಗೆ ಜಾಣನಾಗಿ, ಕೆಲವರಿಗೆ ದಡ್ಡನಾಗಿ, ಕಡುಮೂರ್ಖನಂತೆಯೂ ಎಸಗುತ್ತಿರಬಹುದು! ಹಾಗಾದರೆ ಈ ಅನುಮಾನವನ್ನು ಪರಿಹರಿಸಿಕೊಳ್ಳುವುದಾದರೂ ಹೇಗೆ? ಇದಕ್ಕೆ ಪರಕಾಯ ಪ್ರವೇಶವೇ ಆಗಬೇಕು.
ಕೆಲ ಅಸಮಾನ್ಯರ ಮೆದುಳಿಗಂತೂ ಈ ಸೃಷ್ಟಿ ವಿಶೇಷವಾಗಿ ಬಿಚ್ಚಿಕೊಳ್ಳುತ್ತದೆ. ನಮ್ಮಂಥ ಸಾಮಾನ್ಯರಿಗೆ ವಸ್ತುಗಳು ಕೆಳಕ್ಕೆ ಬೀಳುವುದು ಸಹಜವಾಗಿ ಕಂಡರೆ ನ್ಯೂಟನ್ನನಿಗೆ ಅದೇ ವಸ್ತು ಮೇಲಕ್ಕೆ ಹೋಗದಿರುವುದೇ ಅಸಹಜವೆಂಬಂತೆ ಗೋಚರಿಸಿತು! ಅನಂತ ಆಗಸದ ಶೂನ್ಯಗುರುತ್ವದಲ್ಲಿ ಮಾತ್ರ ಅರಿವಿಗೆ ಬರಬಹುದಾದ ಸತ್ಯಗಳನ್ನು ಅವನ ಮೆದುಳು ಭೂಮಿಯ ಮೇಲಿದ್ದುಕೊಂಡೇ ಗ್ರಹಿಸಿತು! ಇನ್ನು ನಮಗೆಲ್ಲಾ ಸಮಯಕ್ಕೆ ಒಂದು ವ್ಯಾಖ್ಯಾನವನ್ನು ನೀಡುವುದೇ ಕಷ್ಟವಾಗಿರುವಾಗ ಐನ್‌ಸ್ಟೀನ್ ಮೆದುಳಿಗೆ ಅದು ಹಿಗ್ಗಲೂಬಲ್ಲ, ಕುಗ್ಗಲೂಬಲ್ಲ “ಅಭೌತ ವಸ್ತುವಾಗಿ”ಯೂ ಈ ಸೃಷ್ಟಿಯ ನಾಲ್ಕನೇ ಆಯಾಮವಾಗಿಯೂ ಗ್ರಹಿಕೆಗೆ ಬಂತು! ವಿಜ್ಞಾನ ಲೋಕದಲ್ಲಿಳಿದರಂತೂ ಸೃಷ್ಟಿಯಲ್ಲೇ ಇಲ್ಲದ ಅನೇಕ ವಿಚಾರಗಳನ್ನು ಇವೆ ಎಂಬಂತೆ ನಮ್ಮ ಮೆದುಳು ತೋರಿಸುವುದು ತಿಳಿಯುತ್ತದೆ. ಉದಾಹರಣೆಗೆ ಈ ಸೃಷ್ಟಿಯಲ್ಲಿ ಬಣ್ಣಗಳು ಅಸ್ತಿತ್ವದಲ್ಲೇ ಇಲ್ಲ! ಈ ಬೆಳಕಿನಲೆಗಳ ತರಂಗಾಂತರಗಳನ್ನು “ಇಂತಿಷ್ಟು ನ್ಯಾನೋ ಮೀಟರ್” ಎಂದು ಹೇಳಿ ಗೊಂದಲ ಮೂಡಿಸುವ ಬದಲು, ನಮ್ಮ ಮೆದುಳು ಬೇರೆ ಬೇರೆ ತರಂಗಾಂತರದ ಅಲೆಗಳಿಗೆ ಬೇರೆ ಬೇರೆ ಬಣ್ಣಗಳನ್ನು ಕಲ್ಪಿಸಿಕೊಂಡು ನಮ್ಮ ಅನುಭವಕ್ಕೆ ತರುತ್ತದೆ. ಬಣ್ಣಗಳೇನಿದ್ದರೂ ನಮ್ಮ ಮೆದುಳಿನ ಕಲ್ಪನೆಯಷ್ಟೇ! ಶಬ್ಧದ್ದೂ ಇದೇ ಕಥೆ. ಗಾಳಿಯ ಕಣಗಳ ಕಂಪನಗಳು ನಮ್ಮ ಕಿವಿ ತಮಟೆಯನ್ನು ಕಂಪಿಸುವಂತೆ ಮಾಡಿದಾಗ “ತಮಟೆಯ ಆ ಅದುರುವಿಕೆ”ಯನ್ನು ಮೆದುಳು ಶಬ್ಧದ ರೂಪದಲ್ಲಿ ನಮ್ಮ ಅನುಭವಕ್ಕೆ ತರುತ್ತದೆ. ಅಂದರೆ ಅಲೆಗಳು ನಮ್ಮ ಕಿವಿ ತಮಟೆಯನ್ನು ಅಲುಗಾಡಿಸಿದ ನಂತರವೇ ಅದು ಶಬ್ಧವಾಗಿ ಮಾರ್ಪಡುವುದು. ಅದಕ್ಕೂ ಮುಂಚೆ ಏನಿದ್ದರೂ ಬರೀ ಗಾಳಿಯ ಕಣಗಳ “ನಿಶ್ಯಬ್ಧ ಬಡಿದಾಟ”ವಷ್ಟೇ! ವಿಶ್ವದ ತುಂಬೆಲ್ಲಾ ಬರೀ ಮೌನವೇ ತುಂಬಿರುವುದು. ಶಬ್ಧವಿರುವುದು ನಮ್ಮ ಮೆದುಳಿನಲ್ಲಿ ಮಾತ್ರ!
ಅಂದರೆ ವಸ್ತು ಏನೇ ಇರಲಿ ಅದು ನಮ್ಮ ಮೆದುಳಿನ ಗ್ರಹಿಕೆಗೆ ತಕ್ಕಂತೆ ಗೋಚರಿಸುತ್ತದೆ. ನಮ್ಮ ಮೆದುಳಿನ ಕಲ್ಪನಾ ಸಾಮರ್ಥ್ಯಕ್ಕೆ ತಕ್ಕಂತೆ ಭಾವಲೋಕದಲ್ಲಿ ಅದರ ಅನುಭವವಾಗುತ್ತದೆ. ಭಾವನೆಗಳ ಪಕ್ವತೆಗನುಸಾರವಾಗಿ ವಿಚಾರ ಅರಳುತ್ತಾ ಸಾಗುತ್ತದೆ! *
ಈಗ ಬುದ್ಧ ಮತ್ತೆ ನೆನಪಿಗೆ ಬಂದ... ಅಂದು ನನ್ನ ಹಳ್ಳಿ ಎರೆಡೆರೆಡು ಬಗೆಯ ಗ್ರಹಿಕೆಯಲ್ಲಿ ನನ್ನ ಅನುಭವಕ್ಕೆ ಬಂದಂತೆ ಬುದ್ಧನ ತತ್ವನುಡಿಗಳಿಗೂ ಎರೆಡೆರೆಡು ನೋಟಗಳಿರಬಹುದಲ್ಲವೇ?
ಓಹ್... ಈಗ ಗೊತ್ತಾಯ್ತು... ಅಂದು ಬುದ್ಧನ “ಸತ್ಯದ ನುಡಿಗಳು” ಅವನ ಗ್ರಹಿಕೆಗೆ ಬಂದ ಬಗೆಯೇ ಬೇರೆ; ಸಾಮಾನ್ಯರ ದೃಷ್ಟಿಗೆ ಕಾಣುತ್ತಿರುವ ರೀತಿಯೇ ಬೇರೆ! ಈಗ ಅವನ ಜ್ಞಾನೋದಯದ ಬಗ್ಗೆ ಒಂದು ಸ್ಪಷ್ಟತೆ ಸಿಗತೊಡಗಿತು. ಬುದ್ಧನಷ್ಟೇ ಅಲ್ಲ. ಬಸವ, ಅಲ್ಲಮ, ದಾಸರು... ಹೀಗೆ ಎಲ್ಲ ದಾರ್ಶನಿಕರ ಜ್ಞಾನದ ಬಗ್ಗೆಯೂ ಸ್ಪಷ್ಟತೆ ಸಿಗತೊಡಗಿತು. ಅಂದು ನಾನಂದುಕೊಂಡಂತಲ್ಲದಿದ್ದರೂ ಸೃಷ್ಟಿಯ ರಹಸ್ಯ ಅವರೆದುರು ಬೇರೆಯದೇ ಬಗೆಯಲ್ಲಿ ಬಿಚ್ಚಿಕೊಂಡಿದೆ. ಹಾಗಾಗಿ “ಸತ್ಯ, ದಯೆ, ನಿಸ್ವಾರ್ಥ, ಅಹಿಂಸೆ”ಯಾದಿ ಸಾರ್ವಕಾಲಿಕ ಸತ್ಯಗಳು ಅವರ ಮೆದುಳಿನ ಗ್ರಹಿಕೆಗೆ ಬರುತ್ತಿರುವ ಬಗೆಯೇ ಬೇರೆ, ಸಾಮಾನ್ಯರ ಮೆದುಳು ಗ್ರಹಿಸುತ್ತಿರುವ ರೀತಿಯೇ ಬೇರೆ! ಅವರ ಗ್ರಹಿಕೆ ಅವರ ಹೃದಯಕ್ಕೆ ವಿಶೇಷ ಭಾವಾನುಭವವನ್ನು ನೀಡುತ್ತಿದೆ.
ಜ್ಞಾನವೆಂಬುದು ಬರೀ ತಿಳುವಳಿಕೆಯಲ್ಲ, ಅದು ಆತ್ಮಾನುಭಾವ. ಅಂಥ ಭಾವವನ್ನುದಯಿಸುವ ಶಕ್ತಿ ಅವರ ಗ್ರಹಿಕೆಯ ವಿಧಾನಕ್ಕಿದೆ. ಅವರಿಗದು ಸುಲಭದಲ್ಲಿ ವಿವರಿಸಲಾಗದ ಆತ್ಮಾನುಭೂತಿ. ಆ ಅನುಭವವನ್ನು ಸಮರ್ಥವಾಗಿ ಸಾಮಾನ್ಯರಿಗೆ ದಾಟಿಸಲು ಈ ಲೌಕಿಕ ಭಾಷೆಗೆ ಶಕ್ತಿ ಸಾಲದು. ಅದಕ್ಕೆ ‘ನೇರ ಶಕ್ತಿ ಸಂವಹನ’ವೇ ಆಗಬೇಕು. ಹಾಗಾಗಿ ಅವರ ತತ್ವನುಡಿಗಳು ಬಹುತೇಕರ ಹೃದಯದಲ್ಲಿ ಸತ್ಯ, ಪ್ರೀತಿ, ದಯೆಯ “ಜ್ಞಾನಾನುಭವ”ವನ್ನರಳಿಸದೇ ಬರೀ ಮಾಹಿತಿಯಾಗಷ್ಟೇ ಉಳಿಯುತ್ತಿವೆ. ವೇದಿಕೆ ಮೇಲೆ ನಿಂತು ಗಂಟೆಗಟ್ಟಲೆ ಗಂಟಲು ಹರಿದುಕೊಂಡು ಒಣಪಾಂಡಿತ್ಯ ಪ್ರದರ್ಶಿಸಲಷ್ಟೇ ಉಪಯೋಗಕ್ಕೆ ಬರುತ್ತಿವೆ. ಅದಕ್ಕೇ ಇರಬೇಕು ಬಸವನ ಎಲ್ಲಾ ತತ್ವಗಳನ್ನು ಒಪ್ಪುವ ನಾವು ಅಹಿಂಸೆಯ ವಿಷಯಕ್ಕೆ ಬಂದೊಡನೆ “ಆಹಾರ ನಮ್ಮ ಹಕ್ಕು ಅಥವಾ ನಮ್ಮ ಆಯ್ಕೆ” ಎಂದೋ ಅಥವಾ “ನಮ್ಮ ಸಂಸ್ಕೃತಿ” ಎಂದು ಹೇಳಿಯೋ ಮಾಂಸಾಹಾರವನ್ನು ಸಮರ್ಥಿಸಿಕೊಳ್ಳುತ್ತೇವೆ.
ಗಾಂಧಿ ಹುಟ್ಟಿದ ದಿನಕ್ಕೆ ಮಾತ್ರ ಅಹಿಂಸೆಯನ್ನು ಸೀಮಿತಗೊಳಿಸಿದ್ದೇವೆ. ಬಸವನ ಗ್ರಹಿಕೆಯೇ ನಮ್ಮಲ್ಲೂ ಆಗಿದ್ದರೆ ಎಲ್ಲರ ಹೃದಯದಲ್ಲೂ ದಯೆಯೇ ಪ್ರಧಾನವಾಗಬೇಕಿತ್ತು. ಅನ್ಯ ಜೀವದ ಹಿಂಸೆಯ ಕಂಡು ಅದು ಕರಗಬೇಕಿತ್ತು. ಊಹೂಂ... ಹೃದಯ ಮೃದುವಾಗಲೊಲ್ಲದು. ಆಸೆಯೇ ಪ್ರಧಾನವಾಗಿದೆ. “ದಯೆಯೇ ಧರ್ಮದ ಮೂಲ” ಎಂದು ಹೇಳಿದ ಬಸವಣ್ಣ. ಅದೆಂಥ ಸತ್ಯ! ದಯೆಯೊಂದಿದ್ದರೆ ಉಳಿದೆಲ್ಲಾ ಅಧರ್ಮಕಾರ್ಯಗಳು ನಿಂತುಹೋಗುತ್ತವೆ. ಅನ್ಯ ಜೀವಿಯ ನೋವಿಗೇ ದುಃಖಿಸುವವ ಮನುಷ್ಯನನ್ನು ಹಿಂಸಿಸಿಯಾನೇ? ನಾವೆಂಥ ಮೂರ್ಖರು ಮೂಲವನ್ನು ಮರೆತು ಟೊಂಗೆಗಳಿಗೆ ಜೋತುಬಿದ್ದಿದ್ದೇವೆ. ಧರ್ಮವೃಕ್ಷ ಬಾಡುತ್ತಿದೆ. ಸಕಲ ಜೀವಕ್ಕೂ ಲೇಸನ್ನು ಬಯಸುವ “ಜ್ಞಾನದ ಉದಯ” ಇಷ್ಟು ಕಷ್ಟವೇಕಾಯಿತೋ... “ಮನುಷ್ಯತ್ವ” ಪದದ ಹುಟ್ಟೇ ವ್ಯರ್ಥವಾಯಿತೇ..?