ಸಾರಾಂಶ
ಚಾಮರಾಜಪೇಟೆ ಈದ್ಗಾ ಮೈದಾನ ಸೇರಿ ವಿವಿಧೆಡೆಗಳಲ್ಲಿ ಪವಿತ್ರ ರಂಜಾನ್ (ಈದ್-ಉಲ್-ಫಿತ್ರ) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕರು ವಕ್ಫ್ ಕಾಯಿದೆ ವಿರೋಧಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಬೆಂಗಳೂರು : ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಸೇರಿ ವಿವಿಧೆಡೆಗಳಲ್ಲಿ ಪವಿತ್ರ ರಂಜಾನ್ (ಈದ್-ಉಲ್-ಫಿತ್ರ) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕರು ವಕ್ಫ್ ಕಾಯಿದೆ ವಿರೋಧಿಸಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಬೆಳಗ್ಗೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ನಮಾಝ್ ಸಲ್ಲಿಸಿದ ಬಳಿಕ ಈದ್ಗಾ ಮೈದಾನಗಳಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚಿನ ಕಾಲ ವಿಶೇಷ ಪ್ರಾರ್ಥನೆ ಬಳಿಕ ಕುರಾನ್ ಪಠಣ ನಡೆಯಿತು. ಧಾರ್ಮಿಕ ಗುರುಗಳು ವಿಶೇಷ ಬೋಧನೆ ಮಾಡಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಒಂದು ತಿಂಗಳ ಉಪವಾಸ ಮಾಡಿದ್ದ ಅವರು ತಮ್ಮ ಆದಾಯದಲ್ಲಿ ಬಡವರಿಗೆ ಜಕಾತ್, ಫಿತ್ರ ನೀಡುವ ಭಾಗವಾಗಿ ನಗದು, ದವಸ ಧಾನ್ಯವನ್ನು ದಾನ ಮಾಡಿದರು.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿದರು. ನೂರಾರು ಪುಟ್ಟ ಮಕ್ಕಳು ಹಬ್ಬದ ಧಿರಿಸಿನಲ್ಲಿ ಗಮನಸೆಳೆದರು. ಮೌಲಾನಾ ಮಕ್ಸುದ್ ಇಮ್ರಾನ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅದೇ ರೀತಿ ಮೈಸೂರು ರಸ್ತೆಯ ಈದ್ಗಾ ಮೈದಾನದಲ್ಲೂ ಭಾರಿ ಸಂಖ್ಯೆಯಲ್ಲಿ ಜನರಿಂದ ಪ್ರಾರ್ಥನೆ ನಡೆಯಿತು.
ಮಸೀದಿಗಳಲ್ಲಿ ಪ್ರಾರ್ಥನೆ:
ಮಿಲ್ಲರ್ಸ್ ರಸ್ತೆ, ಖುದ್ದೂಸ್ ಶಾ ಈದ್ಗಾ ಮೈದಾನ, ಮೈಸೂರು ರಸ್ತೆ, ಶಿವಾಜಿ ನಗರ, ಕದಿರೇನಹಳ್ಳಿ ಜಯನಗರ 4ನೇ ಬ್ಲಾಕ್, ಹೆಗಡೆ ನಗರ, ಬನ್ನೇರುಘಟ್ಟರಸ್ತೆಯ ಜುಮ್ಮಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಾರ್ಥನೆ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ನಗರದಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಮಸೀದಿ, ಮದರಸಾಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದವು.
ಶಿವಾಜಿನಗರ, ಫ್ರೇಜರ್ ಟೌನ್, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಹೈದ್ರಾಬಾದಿ ಹಲೀಂ, ಮಟನ್, ಚಿಕನ್ ಸಮೋಸಾ, ಕಬಾಬ್‌ಗಳನ್ನು ಜನತೆ ಸವಿದರು. ಜೊತೆಗೆ ಶುರ್‌ಕುರ್ಮಾ, ಬಾದಾಮ್ ಫಲೂದಾ, ರಸ್‌ಮಲಾಯಿ ಸಿಹಿಯನ್ನು ಸವಿದರು.
ಕೈಗೆ ಕಪ್ಪು ಪಟ್ಟಿ ಕಟ್ಟಿದ ಸಚಿವ ಜಮೀರ್ ಖಾನ್
ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ವಿರೋಧಿಸಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಾಗ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿ ಮುಸ್ಲಿಂ ಮುಖಂಡರು ಎಡಗೈ ತೋಳಿಗೆ ಕಪ್ಪು ಪಟ್ಟಿ ಧರಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರಾರ್ಥನೆ ಬಳಿಕ ಮಾತನಾಡಿದ ವಕ್ಫ್ ಮತ್ತು ಪ್ರವಾಸೋದ್ಯಮ ಜಮೀರ್, ದುವಾ ಸಮಯದಲ್ಲಿ, ಮುಸ್ಲಿಮರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು, ಎಲ್ಲ ಸಮುದಾಯದವರು ಸಹೋದರ ಸಹೋದರಿಯರಂತೆ ಒಟ್ಟಿಗೆ ಬದುಕಲು ಪ್ರಾರ್ಥಿಸಿದೆವು. ವಕ್ಫ್ ವಿರೋಧಿಸಿ ರಾಜ್ಯ ಸರ್ಕಾರ ಕಳೆದ ಕಲಾಪದಲ್ಲೇ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷ ಬೆಳಿಗ್ಗೆ ಪ್ರಾರ್ಥನೆಗೆ ಹಾಜರಾಗುತ್ತಾರೆ. ಆದರೆ, ಈ ಬಾರಿ ಅವರಿಗೆ ಅನಾರೋಗ್ಯದ ಕಾರಣ ಬಂದಿಲ್ಲ ಎಂದರು.