ರಾಜ್ಯದ ಕೈ ಬಣಗಳ ನಡುವೆ ಕಾಲೆಳೆದಾಟಕ್ಕೆ ಕಾರಣಗಳು - ನವೆಂಬರ್‌ ಅಥವಾ ಅಕ್ಟೋಬರ್‌ ಕ್ರಾಂತಿಯ ಪೂರ್ವ ಕಿಡಿಗಳಾ?

| N/A | Published : Feb 16 2025, 01:45 AM IST / Updated: Feb 16 2025, 04:50 AM IST

ರಾಜ್ಯದ ಕೈ ಬಣಗಳ ನಡುವೆ ಕಾಲೆಳೆದಾಟಕ್ಕೆ ಕಾರಣಗಳು - ನವೆಂಬರ್‌ ಅಥವಾ ಅಕ್ಟೋಬರ್‌ ಕ್ರಾಂತಿಯ ಪೂರ್ವ ಕಿಡಿಗಳಾ?
Share this Article
  • FB
  • TW
  • Linkdin
  • Email

ಸಾರಾಂಶ

  ಕಾಂಗ್ರೆಸ್‌ ಆಂತರಿಕ ರಾಜಕಾರಣ ಇದೀಗ, ಮುಂದಿನ ಚುನಾವಣೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಇರಬೇಕು ಎಂಬಲ್ಲಿಗೆ ಬಂದು ನಿಂತಿದ್ದು, ತನ್ಮೂಲಕ ನವೆಂಬರ್‌ ಅಥವಾ ಅಕ್ಟೋಬರ್‌ ಕ್ರಾಂತಿಗೆ ಪೂರ್ವ ಕಿಡಿಗಳು ರಾಜ್ಯ ರಾಜಕಾರಣದ ಅಂಕಣದಲ್ಲಿ ಭರ್ಜರಿಯಾಗಿ ಸಿಡಿಯತೊಡಗಿವೆ.

ಎಸ್.ಗಿರೀಶ್ ಬಾಬು

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಂಥ ವಿಚಾರಗಳ ಸುತ್ತ ಸುತ್ತುತ್ತಿದ್ದ ಕಾಂಗ್ರೆಸ್‌ ಆಂತರಿಕ ರಾಜಕಾರಣ ಇದೀಗ, ಮುಂದಿನ ಚುನಾವಣೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಇರಬೇಕು ಎಂಬಲ್ಲಿಗೆ ಬಂದು ನಿಂತಿದ್ದು, ತನ್ಮೂಲಕ ನವೆಂಬರ್‌ ಅಥವಾ ಅಕ್ಟೋಬರ್‌ ಕ್ರಾಂತಿಗೆ ಪೂರ್ವ ಕಿಡಿಗಳು ರಾಜ್ಯ ರಾಜಕಾರಣದ ಅಂಕಣದಲ್ಲಿ ಭರ್ಜರಿಯಾಗಿ ಸಿಡಿಯತೊಡಗಿವೆ.

ಮೂಲಗಳ ಪ್ರಕಾರ, ರಾಜ್ಯ ರಾಜಕಾರಣದಲ್ಲಿ ತಕ್ಷಣಕ್ಕೆ ಯಾವುದೇ ಪ್ರಮುಖ ಬೆಳವಣಿಗೆ ಇಲ್ಲ. ಬಜೆಟ್ ಮುಗಿಯುವವರೆಗಂತೂ ಹೇಳಿಕೆಯ ರಾಜಕಾರಣದ ಹೊರತಾಗಿ ಮತ್ತೇನೂ ನಡೆಯುವುದಿಲ್ಲ.

ಆದರೆ, ನವೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಪ್ರಮುಖ ಬದಲಾವಣೆ ನಡೆಯಲಿದೆ ಎಂದು ಒಂದು ಬಣ ಬಿಂಬಿಸುತ್ತಿದೆ. ಇದನ್ನು ಕಪೋಲಕಲ್ಪಿತ ಎನ್ನುವ ಎದುರಾಳಿ ಬಣ, ಒಳಗೊಳಗೆ ಇಂತಹ ಬೆಳವಣಿಗೆ ನಡೆಯದಂತೆ ತಡೆಯಲು ಭರ್ಜರಿ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಅದರ ಫಲವಾಗಿ ರಾಜಕಾರಣದ ಅಂಕಣದಲ್ಲಿ ಕಿಡಿ ಸಿಡಿಯತೊಡಗಿವೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರ ಹಿಡಿದ ಸಂದರ್ಭದಲ್ಲಿ ಎರಡೂವರೆ ವರ್ಷ ಅಧಿಕಾರ ಹಂಚಿಕೊಳ್ಳುವ ಒಂದು ಒಪ್ಪಂದ ನಡೆದಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿದ್ದರೂ ಅದನ್ನು ಯಾವ ಬಣವೂ ಖಚಿತಪಡಿಸುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಣವು ಹೈಕಮಾಂಡ್‌ ಮಟ್ಟದಲ್ಲಿ ಏರ್ಪಟ್ಟಿರುವ ಒಪ್ಪಂದದಂತೆ ಎಲ್ಲ ನಡೆಯಲಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡಿದ ಕೆಲಸಕ್ಕೆ ತಮಗೆ ಕೂಲಿ ಸಿಕ್ಕೇ ಸಿಗುತ್ತದೆ ಎಂದು ನಂಬಿದೆ ಮತ್ತು ಸಂಪೂರ್ಣವಾಗಿ ಕಾಂಗ್ರೆಸ್‌ ವರಿಷ್ಠರನ್ನು ಅವಲಂಬಿಸಿದೆ. ಹೀಗಾಗಿಯೇ ಎದುರು ಬಣದಿಂದ ಎಷ್ಟೇ ಪ್ರಚೋದನೆ ಬರುತ್ತಿದ್ದರೂ ಸಂಯಮ ಕಾಪಾಡಿಕೊಳ್ಳುವ ತೀವ್ರ ಪ್ರಯತ್ನವನ್ನು ಈ ಬಣ ನಡೆಸುತ್ತಿದೆ.

ಆದರೆ, ಎದುರು ಬಣ ಮಾತ್ರ ಈ ವಿಚಾರದಲ್ಲಿ ಬಹಿರಂಗವಾಗಿಯೇ ಯುದ್ದಕ್ಕೆ ಇಳಿದಿದೆ. ರಾಜ್ಯದಲ್ಲಿ ಬದಲಾವಣೆಯ ಪ್ರಯತ್ನಗಳು ನಡೆದರೆ ರಾಜ್ಯ ಕಾಂಗ್ರೆಸ್‌ನಲ್ಲಿ ಏನಾಗಬಹುದು ಎಂಬ ತಿಳಿವಳಿಕೆಯನ್ನು ಹೈಕಮಾಂಡ್‌ ವರಿಷ್ಠರಿಗೆ ನೀಡುವ ಪ್ರಯತ್ನವನ್ನು ಸದರಿ ಬಣ ಪ್ರಬಲವಾಗಿ ಆರಂಭಿಸಿದೆ. ಇದರ ಫಲವಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗ್ರಹ ಕೇಳಿ ಬರತೊಡಗಿದೆ.

ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಂಥ ಎರಡು ಹುದ್ದೆಯ ವಿಶೇಷ ಸ್ಥಾನಮಾನ ಯಾರಿಗೂ ಇರಬಾರದು. ಒಂದು ವೇಳೆ ಇಂಥ ಸ್ಥಾನಮಾನಕ್ಕೆ ಹೈಕಮಾಂಡ್‌ ಮಾನ್ಯತೆ ಇದ್ದರೆ, ಆ ಸ್ಥಾನಮಾನ ನಮಗೂ ನೀಡಿ. ನಾವೂ ಪಕ್ಷ ಸಂಘಟನೆಗೆ ರೆಡಿ ಎಂದು ನೇರವಾಗಿ ಹೈಕಮಾಂಡ್‌ ನಾಯಕರಿಗೆ ಮನದಟ್ಟು ಮಾಡಿಕೊಡುವ ನೇರ ಪ್ರಯತ್ನವನ್ನು ಸಚಿವರಾದ ಸತೀಶ್‌ ಜಾರಕಿಹೊಳಿ ಹಾಗೂ ಕೆ.ಎನ್‌. ರಾಜಣ್ಣ ಮಾಡಿದ್ದಾರೆ.

ಗೃಹ ಸಚಿವ ಪರಮೇಶ್ವರ್‌ ಅವರಂತೂ ಈ ಹಿಂದೆ ನಾನು ಎರಡು ಹುದ್ದೆಯಲ್ಲಿದ್ದಾಗ ಸ್ಥಾನ ಬಿಟ್ಟುಕೊಟ್ಟಿದ್ದೆ. ಇದು ಎಲ್ಲರಿಗೂ ಅನ್ವಯಿಸಬೇಕು ಎಂದು ಬಹಿರಂಗವಾಗಿಯೇ ಹೇಳಿಕೆ ನೀಡತೊಡಗಿದ್ದಾರೆ. ಈ ಎಲ್ಲ ಬೆಳವಣಿಗೆಗಳಲ್ಲಿ ಮೇಲ್ನೋಟಕ್ಕೆ ಕೆಲವೇ ಸಚಿವರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇನ್ನೂ ಹಲವು ಸಚಿವರು ಈ ಪ್ರಯತ್ನಗಳಿಗೆ ಸಾಥ್ ನೀಡುತ್ತಿರುವುದು ಗುಪ್ತವಾಗಿ ಉಳಿದಿಲ್ಲ.

ಒಟ್ಟಾರೆ ಈ ಬಣವು ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ಪ್ರಯತ್ನ ನಡೆದರೆ ಆಗ ರಾಜ್ಯದ ಪ್ರಮುಖ ನಾಯಕರ ಅಭಿಪ್ರಾಯ ಕೇಳಬೇಕು. ಅಭಿಪ್ರಾಯ ಪಡೆಯದೆ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೇರಿಕೆ ಮಾಡುವ ಪ್ರಯತ್ನ ಮಾಡಿದರೆ ಅದಕ್ಕೆ ನಮ್ಮ ಆಕ್ಷೇಪವಿದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸುವ ಪ್ರಯತ್ನ ನಡೆಸಿದೆ.

ಹೀಗೆ ಹೈಕಮಾಂಡ್‌ಗೆ ಸಂದೇಶ ರವಾನಿಸುವ ಹಂತದಲ್ಲೇ ಮುಖ್ಯಮಂತ್ರಿಯವರ ಆಪ್ತ ಬಳಗವು ಸಿದ್ದರಾಮಯ್ಯ ಅವರ ನಾಯಕತ್ವ ಮುಂದಿನ ಚುನಾವಣೆಗೂ ಬೇಕಿದೆ ಎಂದು ಘೋಷಿಸಿದೆ. ಇನ್ನು ಖುದ್ದು ಸಿದ್ದರಾಮಯ್ಯ ಅವರೇ ರಾಜಕೀಯ ನಿವೃತ್ತಿಯ ಮಾತು ಹಿಂಪಡೆಯುವ ಮಾತುಗಳನ್ನು ಆಡತೊಡಗಿರುವುದು ಈ ಒಳಸುಳಿಯಾಟ ಮತ್ತೊಂದು ಹಂತ ಮುಟ್ಟುವ ಲಕ್ಷಣ ಕಾಣಿಸಿಕೊಳ್ಳತೊಡಗಿದೆ.

ಇದಕ್ಕೆ ಸದ್ಯ ಸಂಯಮ ತೋರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಣ ಹಾಗೂ ಹೈಕಮಾಂಡ್‌ ಪ್ರತಿಕ್ರಿಯೆ ಹೇಗಿರಲಿದೆ ಎಂಬುದರ ಮೇಲೆ ನವೆಂಬರ್ ಅಥವಾ ಅಕ್ಟೋಬರ್ ಕ್ರಾಂತಿಯ ಸ್ವರೂಪ ನಿರ್ಧಾರವಾಗಲಿದೆ.

ಬಣ ಬಡಿದಾಟ ಈಗ ಶುರುವಾಗಿದ್ದೇಕೆ?

- ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ 2023ರ ಮೇನಲ್ಲಿ ಅಥಿಕಾರಕ್ಕೆ ಬಂದಾಗ ಒಂದು ಒಪ್ಪಂದವಾಗಿದೆ ಎಂಬ ಮಾತಿದೆ- ಎರಡೂವರೆ ವರ್ಷ ಅಧಿಕಾರ ಹಂಚಿಕೊಳ್ಳುವ ಸಂಬಂಧ ಡೀಲ್‌ ಏರ್ಪಟ್ಟಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ವಾದವಿದೆ- ಇದನ್ನು ಯಾವ ಬಣವೂ ಖಚಿತಪಡಿಸುತ್ತಿಲ್ಲ. ಆದರೆ ಒಪ್ಪಂದದಂತೆ ಎಲ್ಲ ನಡೆಯಲಿದೆ ಎಂಬುದು ಡಿಕೆಶಿ ಬಣದ ನಂಬಿಕೆ- ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡಿದ ಕೆಲಸಕ್ಕೆ ತಮಗೆ ಕೂಲಿ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಆ ಬಣ ಇದೆ- ಇದಕ್ಕಾಗಿ ಕಾಂಗ್ರೆಸ್‌ ವರಿಷ್ಠರನ್ನು ಸಂಪೂರ್ಣವಾಗಿ ಅವಲಂಬಿಸಿದೆ. ಎಷ್ಟೇ ಪ್ರಚೋದನೆ ಬಂದರೂ ಸಂಯಮದಿಂದ ಇದೆ- ಆದರೆ ಎದುರು ಬಣ ಬಹಿರಂಗ ಯುದ್ಧಕ್ಕೆ ಇಳಿದಿದೆ. ಬದಲಾವಣೆ ಯತ್ನ ನಡೆದರೆ ಏನಾಗುತ್ತೆಂದು ಸಂದೇಶ ರವಾನಿಸುತ್ತಿದೆ- ಇದೆಲ್ಲದರ ಫಲವೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗ್ರಹ. ಡಿಕೆಶಿಗೆ ಸಚಿವ ಸ್ಥಾನ, ಅಧ್ಯಕ್ಷ ಸ್ಥಾನ ಎರಡೂ ಇದೆ ಎಂದು ದೂರು- ಇಂತಹ ಸ್ಥಾನಮಾನಕ್ಕೆ ಹೈಕಮಾಂಡ್‌ನಲ್ಲಿ ಮಾನ್ಯತೆ ಇದ್ದರೆ ನಮಗೂ ಕೊಡಿ, ನಾವೂ ಸಂಘಟನೆಗೆ ರೆಡಿ ಎಂದು ಪಟ್ಟು ಹಿಡಿದಿದೆ

ಬಣಗಳ ಭವಿಷ್ಯದ ಲೆಕ್ಕಾಚಾರ ಏನು?

- ರಾಜ್ಯದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಯನ್ನು ಅಕ್ಟೋಬರ್‌/ನವೆಂಬರ್‌ ಕ್ರಾಂತಿಯ ಪೂರ್ವ ಕಿಡಿ ಎಂದು ವ್ಯಾಖ್ಯಾನಿಸಲಾಗುತ್ತಿದೆ- ಮುಖ್ಯಮಂತ್ರಿ ಬದಲಾವಣೆ ಯತ್ನ ಆ ಸಂದರ್ಭದಲ್ಲಿ ಏನಾದರೂ ನಡೆದರೆ ಪ್ರಮುಖ ನಾಯಕರ ಅಭಿಪ್ರಾಯ ಕೇಳಬೇಕು ಎಂದು ಪಟ್ಟು- ಅಭಿಪ್ರಾಯ ಪಡೆಯದೇ ನಿರ್ದಿಷ್ಟ ವ್ಯಕ್ತಿಯನ್ನು ಹೇರಿಕೆ ಮಾಡುವ ಪ್ರಯತ್ನ ಮಾಡಿದರೆ ಅದಕ್ಕೆ ನಮ್ಮ ಆಕ್ಷೇಪವಿದೆ ಎಂದು ಬಿಂಬಿಸಲೆತ್ನ- ಇಂತಹ ಸಂದೇಶ ರವಾನಿಸುವ ಸಂದರ್ಭದಲ್ಲೇ ಸಿದ್ದು ನಾಯಕತ್ವ ಮುಂದಿನ ಚುನಾವಣೆಗೂ ಬೇಕಿದೆ ಎಂದು ಅವರ ಆಪ್ತ ಬಳಗ ವಾದ- ಇದರ ಬೆನ್ನಲ್ಲೇ ರಾಜಕೀಯ ನಿವೃತ್ತಿಯನ್ನು ಹಿಂಪಡೆಯುವ ಮಾತುಗಳನ್ನು ಸಿದ್ದರಾಮಯ್ಯ ಆಡಿರುವುದರಿಂದ ಮತ್ತಷ್ಟು ಗೊಂದಲ- ಹೀಗಾಗಿ ಡಿಕೆಶಿ ಬಣ ಹಾಗೂ ಹೈಕಮಾಂಡ್‌ನ ಪ್ರತಿಕ್ರಿಯೆ ಕುರಿತು ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಭಾರಿ ಕುತೂಹಲ