ಸಾರಾಂಶ
ಬೆಂಗಳೂರು : ಮೆಟ್ರೋ ಪ್ರಯಾಣಿಕ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಸಿ ಪ್ರಯಾಣಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ. ಏರಿಸಿದ್ದು ನೂರು, ಇಳಿಸಿದ್ದು ಮೂರು!
ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪರಿಷ್ಕೃತ ದರದ ಪ್ರಮಾಣದಲ್ಲಿ ಒಂದಿಷ್ಟು ಇಳಿಸಿ ಪುನಃ ಹೊಸ ದರವನ್ನು ಶುಕ್ರವಾರದಿಂದ ಜಾರಿಗೊಳಿಸಿದೆ. ಆದರೆ, ಅಲ್ಪ ಪ್ರಮಾಣ ಕಡಿಮೆಗೆ ಪ್ರಯಾಣಿಕರಿಂದ ವ್ಯಕ್ತವಾದ ಅಭಿಪ್ರಾಯ ಹೀಗಿದೆ. ಶೇ.70ರಿಂದ ಶೇ.100ರಷ್ಟು ದರ ಏರಿಕೆಯಾದ ಭಾಗದಲ್ಲಿ ಗರಿಷ್ಠ ₹10 ಇಳಿಸಿದ್ದು, ನಿತ್ಯದ ಮೆಟ್ರೋ ಪ್ರಯಾಣಿಕರಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮೆಟ್ರೋ ಟಿಕೆಟ್‌ನ ಕನಿಷ್ಠ ₹10 ಹಾಗೂ ಗರಿಷ್ಠ ₹90 ದರ ಹಾಗೆಯೇ ಮುಂದುವರೆದಿದೆ. ದರವನ್ನು ಕೈಗೆಟಕುವಂತೆ ಮಾಡಬೇಕು ಎಂದು ಜನತೆ ತಮ್ಮ ಆಗ್ರಹವನ್ನು ಮುಂದುವರಿಸಿದ್ದಾರೆ.
ಟಿಕೆಟ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ರಾವ್ ಸುದ್ದಿಗೋಷ್ಠಿ ನಡೆಸಿ, ಶೇ.70ಕ್ಕಿಂತ ಹೆಚ್ಚಾದ ಭಾಗದಲ್ಲಿ ಶೇ.30ರವರೆಗೆ ದರ ಇಳಿಸುವುದಾಗಿ ತಿಳಿಸಿದ್ದರು.
ಇಳಿದ ಪ್ರಯಾಣಿಕರ ಸಂಖ್ಯೆ: ಮೆಟ್ರೋ ದರ ಏರಿಕೆ ಮೊದಲು ನಿತ್ಯ ಸರಾಸರಿ 8.03 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಫೆ.10ರಂದು ದರ ಏರಿಕೆ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆ ಸರಾಸರಿ 7.48 ಲಕ್ಷಕ್ಕೆ ಇಳಿಕೆಯಾಗಿತ್ತು. ಫೆ.12ರಂದು 7, 62,811 ಮಂದಿ ಪ್ರಯಾಣಿಕರ ದಾಖಲಾಗಿದೆ. ಅಂದರೆ 1,04,749 ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಫೆ.13ರಂದು 751251 ಪ್ರಯಾಣಿಕರು ಮಾತ್ರ ಸಂಚಿಸಿದ್ದಾರೆ. ಇತ್ತ ಬಿಎಂಟಿಸಿ ಪ್ರಯಾಣಿಕ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದೆ.
ಗರಿಷ್ಠ ₹10 ಇಳಿಕೆ: ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್‌ಗೆ ಏರಿಸಲಾಗಿದ್ದ ₹90 ಅನ್ನು ₹80ಕ್ಕೆ ಇಳಿಸಲಾಗಿದೆ. ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ಇದ್ದ ₹20 ಅನ್ನು ₹10ಕ್ಕೆ ಹಾಗೂ ಚಲ್ಲಘಟ್ಟಕ್ಕೆ ಇದ್ದ ₹70 ಅನ್ನು ₹ 60ಕ್ಕೆ ಇಳಿಸಲಾಗಿದೆ.
ಇಳಿಕೆಯ ಕೆಲ ಮಾದರಿ ನಿಲ್ದಾಣ ಮೂಲ ದರ - ಏರಿಕೆ - ಪ್ರಸ್ತುತ ದರ
ನಲ್ಲೂರು ಹಳ್ಳಿ-ಬೆನ್ನಿಗಾನಹಳ್ಳಿ 23 50 40
ಟ್ರಿನಿಟಿ- ಮಹಾಲಕ್ಷ್ಮಿ 28 60 50
ಬೆನ್ನಿಗಾನಹಳ್ಳಿ-ಬನಶಂಕರಿ 47 80 70
ರಾಜಾಜಿನಗರ-ಟ್ರಿನಿಟಿ 30 60 50
ಮೆಜೆಸ್ಟಿಕ್- ಬೆನ್ನಿಗಾನಹಳ್ಳಿ 28.56 50
ಮೆಟ್ರೋ ಬಿಟ್ಟು ಪುಸ್ತಕ ಸಂಗ್ರಹಿಸುವೆ!:
ಸ್ಪರ್ಧಾತ್ಮಕ ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಕಳಿಸುವ ಅಶೋಕ್ ಚಿಕ್ಕಪರಪ್ಪಾ ಎನ್ನುವವರು ಮೆಟ್ರೋ ದರ ಹೆಚ್ಚಳದಿಂದ ದುಪ್ಪಟ್ಟು ಖರ್ಚು ಬಂದಿದ್ದು, ಮೆಟ್ರೋ ಬಿಟ್ಟು ಬಿಎಂಟಿಸಿಗೆ ಮರಳುತ್ತೇನೆ. ಇದರಿಂದ ಪುಸ್ತಕ ಸಂಗ್ರಹಿಸಲು ಹಣ ಉಳಿಯುತ್ತದೆ ಎಂದು ಬರೆದುಕೊಂಡಿರುವ ಪತ್ರ ‘ಎಕ್ಸ್’ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲು ಬಿಎಂಟಿಸಿಯಲ್ಲಿ ಓಡಾಡುತ್ತಿದ್ದ ನಾನು ಬಳಿಕ ಮೆಟ್ರೋದಲ್ಲಿ ಸಂಚರಿಸುತ್ತಿದ್ದೆ. ದರ ಹೆಚ್ಚಾದ ಬಳಿಕ ಮೊದಲಿಗಿಂತ ₹2ಸಾವಿರ ಖರ್ಚು ಮಾಡಬೇಕಿದೆ.
ಅದರ ಬದಲು ಹಿರಿಯ ನಾಗರಿಕರಿಗೆ ಬಿಎಂಟಿಸಿ ನೀಡುವ ₹1800 ತಿಂಗಳ ಪಾಸ್ ಸಿಕ್ಕಿದೆ. ಮೆಟ್ರೋದಲ್ಲಿ ಪ್ರಯಾಣಿಸದೆ ಇರುವುದರಿಂದ ಉಳಿತಾಯವಾಗುವ ಹಣದಲ್ಲಿ ಮತ್ತಷ್ಟು ಒಳ್ಳೇ ಪುಸ್ತಕ ಸಂಗ್ರಹಿಸುವ ಯೋಚನೆ ಇದೆ. ಎತ್ತರಿಸಿದ ಮಾರ್ಗದಲ್ಲಿ ಓಡಾಡುತ್ತಿದ್ದಾಗ ಇದ್ದ ಅಹಂಕಾರ ಈಗ ಇಳಿದಿದ್ದು, ವಾಸ್ತವಕ್ಕೆ ಮರಳಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಜನರಿಗೆ ಅರ್ಥವಾಗದ ಮೆಟ್ರೋ ದರ ಲಾಜಿಕ್ : ಕನ್ವಿನ್ಸ್ ಮಾಡಲು ಸಾಧ್ಯವಾಗದಿದ್ದರೆ ಕನ್ಫ್ಯೂಸ್ ಮಾಡಿ! ಮೆಟ್ರೋ ಪರಿಷ್ಕೃತ ದರ ವಿಚಾರದಲ್ಲಿ ಬಿಎಂಆರ್‌ಸಿಎಲ್ ಅಕ್ಷರಶಃ ಇದೇ ತಂತ್ರ ಅನುಸರಿಸಿದೆ. ಪರಿಷ್ಕೃತ ದರ ಜಾರಿಗೊಂಡ ಒಂದೇ ವಾರದಲ್ಲಿ ಮತ್ತೆ ಬದಲಾಗಿದೆ.
ಆದರೆ, ವಾರ ಕಳೆದರೂ ಕೂಡ ಯಾವ ಮಾನದಂಡದಲ್ಲಿ ಏರಿಸಲಾಯಿತು, ಯಾವ ಅಂಶಗಳನ್ನು ಆಧರಿಸಿ ಇಳಿಸಲಾಗಿದೆ ಎಂಬುದು ಈವರೆಗೆ ಜನಸಾಮಾನ್ಯನಿಗೆ ಅರ್ಥವಾಗಿಲ್ಲ. ಬಿಎಂಆರ್‌ಸಿಲ್ ಉದ್ದೇಶಪೂರ್ವಕವಾಗಿ ದರದ ಬಗ್ಗೆ ಜನತೆಗೆ ಸರಳವಾಗಿ ಅರ್ಥಮಾಡಿಸದೆ ಗೊಂದಲಕ್ಕೆ ನೂಕಿದೆ ಎಂಬ ಅಭಿಪ್ರಾಯ ಸಾಮಾನ್ಯ ಪ್ರಯಾಣಿಕರಲ್ಲಿದೆ.
ದರ ಹೆಚ್ಚಳದ ಬಗ್ಗೆ ಅಧ್ಯಯನ ನಡೆಸಿದಾಗ ಸುಮಾರು 350 ಪ್ರಕರಣದಲ್ಲಿ (ಮಾರ್ಗ) ಟಿಕೆಟ್ ದರ ಶೇ.80 ಕ್ಕಿಂತ ಹೆಚ್ಚಾಗಿದ್ದು ಕಂಡುಬಂದಿದೆ. ಇದನ್ನು ಸರಿಪಡಿಸಿದ್ದೇವೆ. ಇದರಿಂದ ಶೇ.40ರಷ್ಟು ಅಂದರೆ ಸುಮಾರು 2.91ಲಕ್ಷದಷ್ಟು ಪ್ರಯಾಣಿಕರಿಗೆ ಸಂಚಾರ ದರ ಕಡಿಮೆ ಆಗಲಿದೆ.
- ಮಹೇಶ್ವರ್ ರಾವ್, ಬಿಎಂಆರ್‌ಸಿಎಲ್‌ಎಂಡಿ