ಸಾರಾಂಶ
ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನಾಗರಾಜ ಯಾದವ್ ಮಾತುಗಳೆಂದರೆ ಎಕ್ಸ್‌ಪ್ರೆಸ್ ರೈಲಿನಂತೆ, ನಾನ್‌ಸ್ಟಾಪ್. ಕೆಲವು ಸಾರಿ ಬುಲೆಟ್ ಟ್ರೈನ್ ಎಂದರೂ ತಪ್ಪಾಗಲಾರದು.
ವರದಿಗಾರರ ಡೈರಿ
- ವಿಜಯಪುರ ನಗರಪಾಲಿಕೆ ಚುನಾವಣೆಯಲ್ಲಿ ಗದ್ದುಗೆಗೆ ಏರಿದ್ದು ಅಸಲಿ ಬಿಜೆಪಿಯೋ? ನಕಲಿ ಬಿಜೆಪಿಯೋ?!
ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ನಾಗರಾಜ ಯಾದವ್ ಮಾತುಗಳೆಂದರೆ ಎಕ್ಸ್‌ಪ್ರೆಸ್ ರೈಲಿನಂತೆ, ನಾನ್‌ಸ್ಟಾಪ್. ಕೆಲವು ಸಾರಿ ಬುಲೆಟ್ ಟ್ರೈನ್ ಎಂದರೂ ತಪ್ಪಾಗಲಾರದು. ಅದು ಟಿವಿಯಲ್ಲಿ ನಡೆಯುವ ಚರ್ಚೆ ಇರಬಹುದು, ಭಾಷಣ ಆಗಿರಬಹುದು. ಓತಪ್ರೋತವಾಗಿ ಮಾತನಾಡಲು ಶುರುವಿಟ್ಟುಕೊಂಡರೆ ಕೇಳುಗರು ಅವರ ಮಾತುಗಳನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟ. ಒಂದೇ ಉಸಿರಿಗೆ ಹೇಳಬೇಕಾದ ಎಲ್ಲವನ್ನೂ ಹೇಳಿ ಬಿಡುತ್ತಾರೆ. ಆದರೆ, ಅದು ಎಷ್ಟು ಜನರಿಗೆ ಅರ್ಥ ಆಯ್ತು ಅನ್ನುವುದು ಮಾತ್ರ ಗೊತ್ತಾಗುವುದಿಲ್ಲ.
ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಲು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಅನುಮತಿ ಕೇಳಲು ನಾಗರಾಜ ಯಾದವ್ ಎದ್ದು ನಿಂತಿದ್ದರು. ಈ ನಡುವೆ ವಿಪಕ್ಷದ ಕೆಲ ಸದಸ್ಯರು ತಮಗೆ ಪ್ರಶ್ನೆ ಕೇಳಲು ಅನುಮತಿ ಕೊಡಬೇಕೆಂದು ಆಗ್ರಹಿಸುತ್ತಿದ್ದರು.
ಸಭಾಪತಿ ಯಾರಿಗೆ ಅವಕಾಶ ಕೊಡಬೇಕೆಂದು ಯೋಚಿಸುತ್ತಿರುವಾಗಲೇ ನಾಗರಾಜ ಯಾದವ್, ತಾವು ಹೇಳಬೇಕೆಂದಿದ್ದ ವಿಚಾರವನ್ನು ಒಂದೇ ಉಸಿರಿಗೆ ಫುಲ್‌ಸ್ಟಾಪ್, ಕೊಮಾ ಇಲ್ಲದಂತೆ ಹೇಳಿ ಮುಗಿಸಿ ಬಿಟ್ಟರು. ಇದನ್ನು ನೋಡಿದ ಹೊರಟ್ಟಿ ಅವರು, ‘ಏ ಯಾದವ್, ಅದೇನು ಸ್ವಲ್ಪ ಕನ್ನಡದಲ್ಲಿ ಹೇಳಪ್ಪಾ...!’ ಎನ್ನುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿತು.
ಇದಕ್ಕೆ ಧ್ವನಿ ಸೇರಿಸಿದ ಬಿಜೆಪಿ ಸದಸ್ಯ ಎನ್.ರವಿಕುಮಾರ್, ನಾಗರಾಜ್ ಯಾದವ್ ಅವರದ್ದು ಎಕ್ಸ್‌ಪ್ರೆಸ್ ಟ್ರೈನ್... ಅರ್ಥ ಮಾಡ್ಕೋಬೇಕು ಅಂದ್ರೆ ರಿವೈಂಡ್ ಮಾಡಿ ಕೇಳ್ಕೋಬೇಕು ಅನ್ನೋದೇ!
ಗೆದ್ದಿದ್ದು ಬಿಜೆಪಿ, ಬಾವುಟ ಹಾರಿದ್ದು ಯತ್ನಾಳರದ್ದು!
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದರೆ, ಅದು ಓರಿಜಿನಲ್ಲಾ ಅಥವಾ ನಕಲಿಯಾ ಎಂಬ ವಿಚಿತ್ರ ವಾದ ಶುರುವಾಗಿದೆ. ಕಾರಣ ಇಷ್ಟೇ... ಮೇಯರ್, ಉಪಮೇಯರ್ ಆದವರು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರಾಗಿದ್ದಾರೆ.
ಮೇಯರ್, ಉಪಮೇಯರ್ ಆದಾಗ ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ ಅವರ ಬಾವುಟಗಳೇ ರಾರಾಜಿಸಿದ್ದು ಸುಳ್ಳಲ್ಲ. ಬಿಜೆಪಿಯ ಒಂದು ಬಾವುಟ ಕೂಡ ನೈವೇದ್ಯಕ್ಕೂ ಕಾಣಸಿಗಲಿಲ್ಲ. ಈ ಮಧ್ಯೆ ಯತ್ನಾಳ ಅವರೊಂದು ಬಾಂಬ್ ಸಿಡಿಸಿದ್ದಾರೆ. ಏನೆಂದರೆ ವಿಜಯಪುರ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಫಲಿತಾಂಶದಂದು ಜಿಲ್ಲಾ ಬಿಜೆಪಿಯಲ್ಲಿರುವವರೆಲ್ಲೂ ನಕಲಿ, ಇಲ್ಲಿರುವ ನಾವೇ ಅಸಲಿಯೆಂದು ಯತ್ನಾಳ ಎಂದಿದ್ದಾರೆ. ಅಲ್ಲಿರುವವರು ಸೋತವರಾಗಿದ್ದಾರೆ, ಇಲ್ಲಿರುವ ನಾವೆಲ್ಲ ಗೆದ್ದವರಾಗಿದ್ದೇವೆ ಎಂಬುದು ಯತ್ನಾಳರ ಒಳಮಾತಾಗಿತ್ತು. ತಮ್ಮನ್ನು ಹೊರಹಾಕಿದ ಇಡಿ ಜಿಲ್ಲಾ ಬಿಜೆಪಿಯಲ್ಲಿರುವವರೆಲ್ಲ ನಕಲಿ ಎಂಬ ಧಾಟಿಯಲ್ಲಿ ಯತ್ನಾಳ ನೀಡಿದ ಹೇಳಿಕೆ ಇದೀಗ ಪಕ್ಷಕ್ಕೆ ಮುಜುಗುರ ಉಂಟು ಮಾಡಿದೆ.
ಹೀಗಾಗಿ ಜಿಲ್ಲೆಯಲ್ಲಿ ಯಾರು ಅಸಲಿ? ಯಾರು ನಕಲಿ ಎಂಬ ಚರ್ಚೆ ಶುರುವಾಗಿದೆ. ಆದರೆ, ಈ ಹೇಳಿಕೆಯಿಂದ ರೋಸಿಹೋದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿಯವರು ನಾನು ಇನ್ನೂ ಬಿಜೆಪಿಯಲ್ಲಿದ್ದೇನೆ. ನಕಲಿ ಆಗಲು ಪಕ್ಷದಿಂದ ಉಚ್ಚಾಟಿತನಾಗಿಲ್ಲ ಎನ್ನುವ ಮೂಲಕ ಯತ್ನಾಳಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಎಲ್ಲಿ ಹೋದಲ್ಲೆಲ್ಲ ಇದೇ ಮಾತುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್ಸಿಗರಿಗೆ ಇದೊಂದು ಅಸ್ತ್ರವಾಗಿದೆ. ಯತ್ನಾಳ ಪಕ್ಷ ಕಟ್ಟಿದರೆ ಬಿಜೆಪಿ ನೆಲಕಚ್ಚುತ್ತೆ. ನಮಗೆ ಲಾಭವಾಗುತ್ತದೆ ಎಂದು ಕಾಂಗ್ರೆಸ್ಸಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನೊಂದೆಡೆ ನಾನು ಹಿಂದುತ್ವದ ಪಕ್ಷ ಕಟ್ಟಿದರೆ ಬಿಜೆಪಿ ಹಾಳಾಗುತ್ತದೆ ಎಂಬ ವಿಚಾರದಿಂದಲೇ ನಾನು ಪಕ್ಷ ಕಟ್ಟುತ್ತಿಲ್ಲ ಎಂದು ಯತ್ನಾಳ ಹೇಳುತ್ತಿದ್ದಾರೆ.
-ಸಂಪತ್ ತರೀಕೆರೆ
-ಶಶಿಕಾಂತ ಮೆಂಡೆಗಾರ