ಸಾರಾಂಶ
ಡಾ.ಕಾರಂತರು ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಆ ವಿಭಾಗವನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಎಂಬತ್ತು ವರ್ಷ ಹಾಗೂ ಐವತ್ತರ ವಿವಾಹದ ಸಂಭ್ರಮ. ಇವೆರಡನ್ನು ಒಟ್ಟಿಗೆ ಆಚರಿಸಿಕೊಳ್ಳುತ್ತಿದ್ದಾರೆ.
ಮೈಸೂರು : ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ ಡಾ.ಆನಂದ ಕಾರಂತ ಅವರಿಗೆ ಮೇ 17ರಂದು 80 ರ ಸಂಭ್ರಮ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಡಾ.ಕಾರಂತರು ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಹುಟ್ಟೂರಿನಲ್ಲಿ, ಕಾಲೇಜು ಶಿಕ್ಷಣವನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದರು ಮಾನಸ ಗಂಗೋತ್ರಿಯಲ್ಲಿ ಸೇರಿದರು.ಎಂ.ಎಸ್ಸಿ ಸಸ್ಯಶಾಸ್ತ್ರ ಪೂರ್ಣಗೊಳಿಸಿದ ನಂತರ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು.
ನಂತರ ಜೊತೆ ಜೊತೆಯಲ್ಲಿಯೇ ಡಾ. ಗೋವಿಂದಪ್ಪ ಅವರ ಮಾರ್ಗದರ್ಶನದಲ್ಲಿ ‘ಆರ್ಕಿಡ್ಸ್’ ಬಗ್ಗೆ ಸಂಶೋಧನೆ ನಡೆಸಿ, ಪಿಎಚ್.ಡಿ ಪದವಿ ಗಳಿಸಿದರು. ಇವರ ಸಂಶೋಧನಾ ಬರಹಗಳು ಸಾಕಷ್ಟು ಮನ್ನಣೆಗೆ ಪಾತ್ರವಾಗಿವೆ ಹಾಗೂ ಪ್ರಾಧ್ಯಾಪಾಕರಾಗಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ ಶಿಷ್ಯಪ್ರಿಯ ಮೇಷ್ಟ್ರು.
1975ರಲ್ಲಿ ಪ್ರೇಮಾ ಅವರೊಂದಿಗೆ ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರು. ಹಿರಿಯ ಮಗಳು ಸುಮಾ (ಎಂ.ಎಸ್ಸಿ), ಡಾ.ಎಂ.ರಾಘವೇಂದ್ರ ಅವರೊಂದಿಗೆ ವಿವಾಹವಾಗಿದ್ದಾರೆ. ಡಾ.ರಾಘವೇಂದ್ರ ಅವರು ಪ್ರಖ್ಯಾತ ಯುರಾಲಾಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್‌ಪಾಲೇಶನ್ ನಲ್ಲಿ ಪರಿಣಿತರು. ಎರಡನೇ ಮಗಳು ಡಾ.ದಿವ್ಯಾ, ಡಾ.ಜಯಪ್ರಕಾಶ್‌ಅವರೊಂದಿಗೆ ವಿವಾಹವಾಗಿದ್ದಾರೆ. ಇಬ್ಬರೂ ಮೈಸೂರಿನಲ್ಲಿಯೇ ಕಟೀಲ್ ಡೆಂಟಲ್ ಕೇರ್ ಕ್ಲಿನಿಕ್ ತೆಗೆದು ಸ್ವತಂತ್ರ ಕಾರ್ಯದಲ್ಲಿ ತೊಡಗಿ ಹೆಸರು ಮಾಡಿದ್ದಾರೆ. ಮೊಮ್ಮಕ್ಕಳಾದ ಡಾ.ಶ್ರೇಯಾ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಮತ್ತಿಬ್ಬರು ಸಮರ್ಥ್ ಮತ್ತು ಧೃತಿ ಇಬ್ಬರೂ ವೈದ್ಯಕೀಯ ಪದವಿ ವಿದ್ಯಾಭ್ಯಾಸದಲ್ಲಿದ್ದಾರೆ.
ಡಾ.ಕಾರಂತರು ಶೈಕ್ಷಣಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಆ ವಿಭಾಗವನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಕನ್ನಡದಲ್ಲಿ ವಿಜ್ಞಾನದ ವಿಷಯವನ್ನು ಬರೆಯುವಲ್ಲಿ ಆಸಕ್ತಿ ತೋರಿ ಗಮನಾರ್ಹ ಸಂಶೋಧನ ಬರಹಗಳನ್ನು ಹೊರ ತಂದಿದ್ದಾರೆ. ಅವರಿಗೆ ಎಂಬತ್ತು ವರ್ಷ ಹಾಗೂ ಐವತ್ತರ ವಿವಾಹದ ಸಂಭ್ರಮ. ಇವೆರಡನ್ನು ಒಟ್ಟಿಗೆ ಆಚರಿಸಿಕೊಳ್ಳುತ್ತಿದ್ದಾರೆ.
(ಮಾಹಿತಿ: ಪ್ರೊ.ಡಿ.ಕೆ.ರಾಜೇಂದ್ರ. ಜಾನಪದ ವಿದ್ವಾಂಸರು, ಮೈಸೂರು)