ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಹೊಸ ವರ್ಷನ್‌ ಬಿಡುಗಡೆ

| N/A | Published : Apr 29 2025, 01:46 AM IST / Updated: Apr 30 2025, 11:02 AM IST

ಸಾರಾಂಶ

ಬುಲೆಟ್‌ ಬೈಕ್‌ಗಳಿಗೆ ಹೆಸರುವಾಸಿಯಾಗಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ತನ್ನ ಅತ್ಯಂತ ಜನಪ್ರಿಯ ಮಾದರಿಯ ಬೈಕ್ ಹಂಟರ್ 350 ಹೊಸ ಬದಲಾವಣೆಗಳ ಮೂಲಕ ಮರು ಬಿಡುಗಡೆ ಮಾಡಿದೆ.

ಅನಂತೇಶ ಕಾರಂತ 

ಮುಂಬೈ :  ಸ್ಪೋರ್ಟ್, ರೋಡ್‌, ಕ್ಲಾಸಿ ಲುಕ್‌ಗಳ ಬೈಕ್‌ಗಳಿಗೆ ಹೆಸರುವಾಸಿಯಾಗಿರುವ ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ತನ್ನ ಜನಪ್ರಿಯ ಹಂಟರ್‌ 350 ಮಾದರಿ ಬೈಕ್‌ಗಳನ್ನು ಹೊಸ ಬದಲಾವಣೆಗಳ ಮೂಲಕ ಮರು ಬಿಡುಗಡೆ ಮಾಡಿದೆ. ಹೊಸ 3 ಬಣ್ಣಗಳಲ್ಲಿ ಬೈಕ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಬ್ರೆಜಿಲ್‌ನ ಬಿಳಿ ಮರಳಿನ ಮಾದರಿಯಲ್ಲಿ ರಿಯೋ ವೈಟ್‌, ಲಂಡನ್‌ನ ಕೆಂಪು ಇಟ್ಟಿಗೆಗಳ ಮಾದರಿಯಾಗಿರಿಸಿಕೊಂಡು ಲಂಡನ್‌ ರೆಡ್‌ ಮತ್ತು ಜಪಾನ್‌ ರಾಜಧಾನಿ ಟೋಕಿಯೋದ ಟಾರ್‌ ರಸ್ತೆಯ ಬಣ್ಣವಾಗಿ ಟೋಕಿಯೋ ಬ್ಲ್ಯಾಕ್‌ ಬಣ್ಣಗಳಲ್ಲಿ ಹಂಟರ್‌ 350 ಬಿಡುಗಡೆಯಾಗಿದೆ.

ಮುಂಬೈನ ರಿಚರ್ಡ್‌ಸನ್‌ ಮತ್ತು ಕ್ರುಡಾಸ್‌ನಲ್ಲಿ ನಡೆದ ವಿಭಿನ್ನ ಶೈಲಿಯ ಕಾರ್ಯಕ್ರಮದಲ್ಲಿ ಬೈಕ್‌ಗಳನ್ನು ರೀಲಾಂಚ್‌ ಮಾಡಲಾಯಿತು.

ಈ ವೇಳೆ ರಾಯಲ್‌ ಎನ್‌ಫೀಲ್ಡ್‌ನ ಪ್ರಧಾನ ವಾಣಿಜ್ಯ ಅಧಿಕಾರಿ ಯೋಗ್ವಿಂದರ್‌ ಸಿಂಗ್‌ ಗುಲ್ಲೇರಿಯಾ, ‘2022ರಲ್ಲಿ ನಾವು ಬಿಡುಗಡೆ ಮಾಡಿದ ಹಂಟರ್‌ 350 ಸಾರ್ವಜನಿಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಜಗತ್ತಿನಾದ್ಯಂತ 5 ಲಕ್ಷ ಹಂಟರ್‌ಗಳು ಮಾರಾಟವಾಗಿದೆ. ಈ ಬೈಕ್ ಕಡಿಮೆ ತೂಕವಿರುವ ಕಾರಣ ನಗರದ ಇಕ್ಕೆಲಗಳಲ್ಲಿ ಸುಲಭವಾಗಿ ಓಡಿಸಬಹುದಾಗಿದೆ’ ಎಂದು ಹೇಳಿದರು.

ಬೈಕ್‌ನ ವಿಶೇಷತೆ:

ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 3 ಹೊಸ ಮಾದರಿಯಲ್ಲಿ ಲಭ್ಯವಿದೆ. ಹಳೆ ಮಾದರಿಯಲ್ಲಿನ ಸಸ್ಪೆನ್ಷನ್‌ ಸಮಸ್ಯೆಯನ್ನು ಇದರಲ್ಲಿ ಬಗೆಹರಿಸಲಾಗಿದ್ದು, ಲೀನಿಯರ್‌ ಸಸ್ಪೆನ್ಷನ್‌ ಬದಲಿಗೆ ಪ್ರೊಗ್ರೆಸ್ಸಿವ್‌ ಸಸ್ಪೆನ್ಷನ್‌ ಅಳವಡಿಸಲಾಗಿದೆ. ಇದು ಹೆಚ್ಚು ಆರಾಮದಾಯಕ ಪ್ರಯಾಣ ಸೌಲಭ್ಯ ಒದಗಿಸುತ್ತದೆ. ಇದರ ಜೊತೆಗೆ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಗ್ರೌಂಡ್‌ ಕ್ಲಿಯರೆನ್ಸ್‌ನನ್ನು 10 ಮಿಮೀ ಹೆಚ್ಚಿಸಲಾಗಿದ್ದು, ಕಚ್ಚಾ ರಸ್ತೆಗಳಲ್ಲಿಯೂ ಇದು ಸುಲಭವಾಗಿ ಸಂಚರಿಸಲಿದೆ. ಇದರ ಜೊತೆಗೆ ಓಡೋಮೀಟರ್‌ ಪಕ್ಕದಲ್ಲಿ ನ್ಯಾವಿಗೇಷನ್‌ ಟ್ರಿಪಲ್‌ಪಾಡ್‌ ಅಳವಡಿಸಲಾಗಿದೆ. ರೈಡ್‌ ವೇಳೆ ಫೋನ್‌ ಜಾರ್ಜಿಂಗ್‌ ಮಾಡಬಹುದಾದ ‘ಸೀ-ಟೈಪ್‌’ ಫಾಸ್ಟ್‌ ಜಾರ್ಜಿಂಗ್‌ ಯುಎಸ್‌ಬಿ ಪೋರ್ಟಲ್‌ ಬೈಕ್‌ಗಳಲ್ಲಿವೆ. ನಗರದ ರಸ್ತೆಗಳಲ್ಲಿ ಆರಾಮದಾಯಕ ಪ್ರಯಾಣಕಕ್ಕೆ ಕ್ಲಚ್‌ ಸರಳೀಕರಿಸಲಾಗಿದೆ. ಮಿಕ್ಕಂತೆ ಬೈಕ್‌ನ ಎಂಜಿನ್‌, ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಬೈಕ್‌ ಬೆಲೆ:

ಬೇಸ್‌ ಮಾದರಿಯ ಬೆಲೆ 1,49,900 ರು. (ಎಕ್ಸ್‌ಶೋ ರೂಂ ಚೆನ್ನೈ), ಮಧ್ಯಮ ಮಾದರಿ 1,76,750 ರು., ಹಾಗೆ ಟಾಪ್ ಆವೃತ್ತಿ ಬೆಲೆ ರೂ. 1,81,750 ರು.