ಸಾರಾಂಶ
ಆವರಣ ಕಾದಂಬರಿ ಬರೆಯುವ ಮೊದಲು ಎಸ್.ಎಲ್. ಭೈರಪ್ಪ ಅವರು ಬಾನು ಮುಷ್ತಾಕ್ ಅವರ ಮನೆಯಲ್ಲಿ ಒಂದು ವಾರ ಉಳಿದಿದ್ದರು. ಆ ಘಟನೆಯನ್ನು ಬಾನು ನೆನಪಿಸಿಕೊಂಡಿದ್ದಾರೆ. ಆ ನೆನಪುಗಳ ಆಯ್ದಭಾಗ ಇಲ್ಲಿದೆ.
- ಬಾನು ಮುಷ್ತಾಕ್
ಆವರಣ ಬರೆಯುವುದಕ್ಕೆ ಸ್ವಲ್ಪ ಮುಂಚೆ ಎಸ್ ಎಲ್ ಭೈರಪ್ಪನವರು ಹಾಸನದಲ್ಲಿ ನನ್ನ ಹತ್ತಿರ ಮಾತಾಡುತ್ತಾ ‘ನಾನು ನಿಮ್ಮ ಮನೆಗೆ ಬರಬೇಕೆಂದಿದ್ದೇನೆ’ ಎಂದರು. ನಾನು ‘ಬನ್ನಿ’ ಎಂದು ಕರೆದೆ. ‘ಈಗಲೇ ಬರುವುದಿಲ್ಲ, ಆದರೆ ನಾನು ಒಂದು ವಾರದ ಮಟ್ಟಿಗೆ ಬಂದು ನಿಮ್ಮ ಮನೆಯಲ್ಲಿಯೇ ಉಳಿಯುತ್ತೇನೆ’ ಎಂದರು.
ಸುಮಾರು ಒಂದು ತಿಂಗಳ ನಂತರ ನನ್ನ ಲ್ಯಾಂಡ್ ಲೈನಿಗೆ ಭೈರಪ್ಪನವರು ಫೋನ್ ಮಾಡಿದ್ದರು. ತಾನು ಇಂತಹ ದಿನ ಬರುವುದಾಗಿ ನನಗೆ ಮಾಹಿತಿ ನೀಡಿದರು. ನನಗೆ ಗಾಬರಿಯಾಯಿತು. ಸ್ವಲ್ಪ ಹೊತ್ತಿನ ನಂತರ ನಾನು ಅವರಿಗೆ ಫೋನ್ ಮಾಡಿ ಅವರಿಗಾಗಿ ನಾನು ಏನು ವ್ಯವಸ್ಥೆ ಮಾಡಬೇಕು ಎಂದು ಕೇಳಿದೆ. ತನಗೇನೂ ಬೇಕಿಲ್ಲ, ಆದರೆ ನಾನ್ ವೆಜ್ ಆಹಾರ ಅಭ್ಯಾಸ ಇಲ್ಲ, ಸಸ್ಯಾಹಾರಿ ಏನಿದ್ದರೂ ಆಗಬಹುದು ಎಂದರು. ನಮ್ಮ ಮನೆಯಲ್ಲಿ ನಮ್ಮ ಜೊತೆಯಲ್ಲಿ ನಾವು ಮಾಡಿದ ಅಡುಗೆಯನ್ನೇ ಸೇವಿಸುವುದಾಗಿ ನನಗೆ ಸಮಾಧಾನದಿಂದ ಉತ್ತರಿಸಿದರು.
ಅವರು ಬರುವ ವಾರ ಮುಂಚೆ ನಾನು ನನ್ನ ಪ್ರಿಜ್ ಖಾಲಿ ಮಾಡಿದೆ. ಅಲ್ಲಿದ್ದ ಮೀನು, ಮಟನ್ ಖಾಲಿ ಮಾಡಿ, ನಳನಳಿಸುವ ತರಕಾರಿಗಳನ್ನು ತಂದಿಟ್ಟೆ. ನನ್ನ ಮಗ ತಕರಾರು ತೆಗೆದ. ಹದಿನೈದು ದಿನ ನಾನ್‌ವೆಜ್ ಇಲ್ಲ ಎಂಬುದು ಅವನ ಆತಂಕಕ್ಕೆ ಕಾರಣ. ಅವನ ಕ್ಯಾತೆಗಳನ್ನು ನಾನು ಲೆಕ್ಕಿಸದೇ ಇದ್ದಾಗ ಅವರ ಸಾಹಿತ್ಯದ ಕುರಿತು ಮಾತನಾಡಿದ. ಕೊನೆಗೆ ತನ್ನ ವಿರೋಧ ಮತ್ತು ಬೆದರಿಕೆ ಹಿಂಪಡೆದು ವಿಧೇಯ ಮಗನಂತೆ ಭೈರಪ್ಪನವರ ಆಗಮನವನ್ನು ಎದುರು ನೋಡತೊಡಗಿದ.
ಭೈರಪ್ಪನವರು ನಮ್ಮ ಮನೆಗೆ ಬಂದರು. ಆರಂಭದ ಕೆಲವು ಮುಜುಗರಗಳನ್ನು ಬಿಟ್ಟರೆ ನನಗೆ ಹೆಚ್ಚಿನ ಸಂಕೋಚಗಳೇನೂ ಆಗಲಿಲ್ಲ. ಭೈರಪ್ಪನವರು ತಾವು ಬರೆಯಲಿರುವ ಕಾದಂಬರಿಯೊಂದಕ್ಕೆ ಹಿನ್ನೆಲೆಯಾಗಿ ಮಾಹಿತಿ ಸಂಗ್ರಹಣ ಮಾಡುವ ಸಲುವಾಗಿ ನಮ್ಮ ಮನೆಗೆ ಬಂದಿರುವುದಾಗಿ ಹೇಳಿದರು. ಮುಸ್ಲಿಂ ಸಾಂಸ್ಕೃತಿಕ ಹಿನ್ನೆಲೆಯ ಮನೆಯ ವಾತಾವರಣ ಅಭ್ಯಸಿಸಬೇಕಾಗಿದೆ ಮತ್ತು ಮುಸ್ಲಿಂ ಕುಟುಂಬದ ನಡವಳಿಕೆಗಳನ್ನು ಅವಲೋಕಿಸಬೇಕಾಗಿದೆ. ಆ ಕಾರಣಕ್ಕೆ ನಮ್ಮ ಮನೆಗೆ ಬಂದಿರುವುದಾಗಿ ಅವರು ಹೇಳಿದರು. ನಾನು ನಕ್ಕು, ಅಂತಹ ವಾತಾವರಣ ನಮ್ಮ ಮನೆಯಲ್ಲಿ ಅವರಿಗೆ ಸಿಗುವುದಿಲ್ಲ ಹಾಗೂ ಅಂತಹ ನೈಜ ವಾತಾವರಣ ಇರುವ ಮನೆಗಳಲ್ಲಿ ಭೈರಪ್ಪನವರನ್ನು ಸ್ವಾಗತಿಸುವುದಿಲ್ಲವೆಂದೂ ನಾನು ಅವರಿಗೆ ಹೇಳಿದೆ. ಹೀಗಾಗಿ ಅವರು ನಮ್ಮ ಮನೆಯಲ್ಲಿ ಉಳಿಯುವುದಾಗಿ ನಿರ್ಧರಿಸಿದರು.
ಭೈರಪ್ಪನವರಿಗೆ ಖಬರಸ್ಥಾನವನ್ನು ನೋಡಬೇಕಿತ್ತು ಹಾಗೂ ಮಸೀದಿಯನ್ನೂ ನೋಡಬೇಕಿತ್ತು ಎಂದರು. ಒಂದು ದಿನ ಬೆಳಗಿನ ಹೊತ್ತು ಮುಸ್ತಾಕ್ ಭೈರಪ್ಪನವರನ್ನು ಖಬರಸ್ತಾನಿಗೆ ಕರೆದುಕೊಂಡು ಹೋದರು. ಭೈರಪ್ಪನವರು ಹೊರಗಿನಿಂದ ಖಬರಸ್ತಾನವನ್ನು ನೋಡಿದರು. ಒಳಗಡೆ ಕೂಡ ಗೋರಿಗಳ ನಡುವಿನಿಂದ ಹಾದು ಹೋಗಿ ಮೂಲೆ ಮೂಲೆಯಲ್ಲೂ ಸಂಚರಿಸಿ ಬಂದರು. ಆಮೇಲೆ ಅವರು ಮುಸ್ತಾಕ್ ಅನ್ನು ಕೇಳಿದರು, ‘ಇಲ್ಲಿ ಗೋರಿಗಳ ಮೇಲೆ ಗ್ರಾನೈಟಿನ ಕಲ್ಲುಗಳನ್ನು ನಿಲ್ಲಿಸಿದ್ದಾರಲ್ಲ, ಅದರಲ್ಲಿ ಉರ್ದುವಿನಲ್ಲಿ ಏಕೆ ಬರೆದಿದ್ದಾರೆ?’ ಮುಸ್ತಾಕ್ ತಬ್ಬಿಬ್ಬಾಗಿ ಹೋದರು. ಅದಕ್ಕೆ ಏನು ಉತ್ತರಿಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಹೀಗಾಗಿ ಅವರು ಮನೆಗೆ ಮರಳಿ ಬಂದ ನಂತರ ನನಗೆ ಭೈರಪ್ಪನವರ ಪ್ರಶ್ನೆಯನ್ನು ಒಪ್ಪಿಸಿದರು.
ಮುಷ್ತಾಕ್ ಮತ್ತು ಭೈರಪ್ಪನವರು ಒಂದು ಸಾರಿ ನಮಾಜ್ ಟೈಮಲ್ಲಿ ಹಾಸನ-ಹೊಳೆನರಸೀಪುರ ರಸ್ತೆಯಲ್ಲಿದ್ದ ಮಸೀದಿಗೆ ಹೋದರು. ಅಲ್ಲಿ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶವಿತ್ತು. ಅವರಿಗಾಗಿ ಪ್ರತ್ಯೇಕ ಹಾಲಲ್ಲಿ ನಮಾಜ್‌ಗೆ ವ್ಯವಸ್ಥೆ ಮಾಡಿದ್ದರು. ನಾನು ಆಗ ಶುಕ್ರವಾರ ಮಧ್ಯಾಹ್ನ ಮಾತ್ರ ಆ ಮಸೀದಿಯಲ್ಲಿ ನಮಾಜ್ ಸಲುವಾಗಿ ಹೋಗುತ್ತಿದ್ದೆ. ಆದುದರಿಂದ ಮುಷ್ತಾಕ್‌ನವರು ತಮ್ಮ ಜೊತೆಯಲ್ಲಿ ಕರೆದುಕೊಂಡು ಆ ಮಸೀದಿಗೆ ಹೋದರು. ಭೈರಪ್ಪನವರು ಕೈಕಾಲು ತೊಳೆದು ಮಸೀದಿಯೊಳಗೆ ಹೋಗಿ ನಮಾಜ್ ಮಾಡುತ್ತಿದ್ದಾಗ ಮಸೀದಿ ಒಳಗಡೆ ಕುಳಿತಿದ್ದರು. ಸಕಲವನ್ನು ಕೂಡ ತಮ್ಮ ನೋಟ್ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ನಂತರ ಭೈರಪ್ಪನವರು ಮುಸ್ಲಿಮರ ವಿದ್ಯಾಸಂಸ್ಥೆಯನ್ನು ನೋಡಿದರು.
ರಾತ್ರಿ ಊಟದ ಟೇಬಲ್‌ನಲ್ಲಿ ಮತ್ತು ಊಟದ ನಂತರ ಒಳ್ಳೆಯ ಚರ್ಚೆ ನಡೆಯುತ್ತಿತ್ತು. ಅವರು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು ನಾನು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೆ. ಹೀಗೆ ಒಂದು ವಾರದವರೆಗೂ ನಮ್ಮಗಳ ಬಾಂಧವ್ಯ ಮುಂದುವರೆಯಿತು. ಭೈರಪ್ಪನವರ ಕುತೂಹಲದ ಕಣ್ಣುಗಳಿಗೆ ಮುಸ್ಲಿಂ ಹಿನ್ನೆಲೆಯ ಬದುಕು ಅಗೋಚರವಾಗಿಯೇ ಉಳಿಯಿತು.
ಮುಸ್ಲಿಂ ಸಮುದಾಯದ ಒಳ ಹೊರಗನ್ನು ಒಂದು ವಾರದೊಳಗೆ ತಿಳಿಯುವುದು ಅಸಾಧ್ಯದ ಕೆಲಸ. ಆದರೂ ಕೂಡ ಭೈರಪ್ಪನವರ ತೀವ್ರ ಕುತೂಹಲ ಮತ್ತು ವಿಷಯ ಸಂಗ್ರಹಣೆಯ ದಾಹ ಹಾಗೂ ಅಪರಿಚಿತ ಲೋಕಗಳ ಪರಿಚಯವನ್ನು ಗಳಿಸುವ ತೀವ್ರತೆ ವಿಶಿಷ್ಟವಾಗಿತ್ತು. ಆದರೆ ಅವರು ಹೊರನೋಟದ ತೊಗಟೆಯ ಅರಿವನ್ನು ಮಾತ್ರ ಪಡೆಯುತ್ತಿದ್ದಾರೆ ಅಂತ ನನಗೆ ಅನಿಸುತ್ತಿತ್ತು.
ಮುಸ್ಲಿಂ ಸಮುದಾಯದ ಪರಿಚಯ ಪಡೆದುಕೊಂಡರೂ ಅನುಭವವನ್ನು ಪಡೆಯಲು ಎಲ್ಲೋ ಸೋಲುತ್ತಿದ್ದಾರೆ ಅಂತ ಅನಿಸುತ್ತಿತ್ತು. ಹಾಗೂ ಈ ಎಲ್ಲಾ ಮಾಹಿತಿಯನ್ನು ಅವರು ಹೇಗೆ ಬಳಕೆ ಮಾಡಬಹುದು ಮತ್ತು ಅವರ ಗ್ರಹಿಕೆ ಮತ್ತು ಬರವಣಿಗೆ ಮುಸ್ಲಿಂ ವಿರೋಧಿ ನಿಲುವನ್ನು ವ್ಯಕ್ತಪಡಿಸಿದಾಗ ನನ್ನ ಬಗ್ಗೆ ಸಮುದಾಯದ ನಿಲುವು ಏನಾಗಬಹುದು ಎಂಬುದರ ಬಗ್ಗೆ ಕೂಡ ನನಗೆ ಆಲೋಚನೆ ಉಂಟಾಗುತ್ತಿತ್ತು. ಆದರೆ ನಾನು ಎಲ್ಲಾ ಆಲೋಚನೆಗಳನ್ನು ಕೂಡ ಬದಿಗೊತ್ತಿ ಭೈರಪ್ಪ ನವರ ಜೊತೆಯಲ್ಲಿ ಅತ್ಯಂತ ಸಹಜವಾಗಿ ವರ್ತನೆ ಮಾಡಿದೆ ಮತ್ತು ನನ್ನ ಕುಟುಂಬ ಕೂಡ ಇದಕ್ಕೆ ಪೂರಕವಾಗಿ ಸಂಪೂರ್ಣ ಸಹಕಾರವನ್ನು ನೀಡಿತು.
ನಂತರ ಆವರಣ ಪ್ರಕಟವಾಯಿತು. ಆವರಣದಲ್ಲಿ ಭೈರಪ್ಪನವರು ರಿಸರ್ಚ್ ಮಾಡಿದಂತೆಯೇ ತಮ್ಮ ಕೆಲವು ಪೂರ್ವ ನಿರ್ಧರಿತ ಪ್ರಮೇಯಗಳಿಗೆ ಅನುಕೂಲವಾಗುವಂತಹ ಮತ್ತು ತಕ್ಕದಾದ ನಿದರ್ಶನಗಳನ್ನೇ ಕೊಟ್ಟು ಮುಸ್ಲಿಂ ಸಮುದಾಯದ ರಾಕ್ಷಸೀಕರಣದ ಬಿಂಬಕ್ಕೆ ಪೂರಕವಾದ ಬರವಣಿಗೆಯನ್ನು ಕೊಟ್ಟರು. ಆದರೆ ಅವರು ಸದರಿ ಕಾದಂಬರಿಯ ಪೀಠಿಕೆಯಲ್ಲಿ ಒಬ್ಬ ಸಹೋದರಿಯ ಮನೆಯಲ್ಲಿ ಉಳಿದುದಾಗಿ ತಿಳಿಸಿದರು ಮತ್ತು ಹೆಸರನ್ನು ಬರೆಯಲಿಲ್ಲ. ಹೀಗಾಗಿ ಆ ಸಹೋದರಿ ಯಾರು ಎಂಬುದು ತಿಳಿಯದೆ ಊಹಾಪೋಹದ ಮಟ್ಟದಲ್ಲಿಯೇ ಉಳಿಯಿತು.
ನನ್ನ ಬಾಲ್ಯಕಾಲದಿಂದಲೂ ನನಗೆ ಓದಿನ ರುಚಿ ಹತ್ತಿದ್ದು ಭೈರಪ್ಪನವರ ಬರವಣಿಗೆಯ ಮೂಲಕವೇ. ಆದರೆ ಅವರ ಧೋರಣೆ ಬದ್ಧತೆ ಮತ್ತು ಪೂರ್ವಗ್ರಹ ಪೀಡಿತ ಆಲೋಚನಾ ಸರಣಿಯ ಪ್ರತಿಪಾದನೆಯ ನಂತರ ನಾನು ಅವರಿಗೆ ಪ್ರಿಯ ಓದುಗಳಾಗಿ ಉಳಿಯಲಿಲ್ಲ. ಆವರ ಕಾದಂಬರಿಗಳು ಒಬ್ಬ ನುರಿತ ಲಾಯರ್‌ನಂತೆ ಕೆಲ ವಿಷಯಗಳನ್ನು ರೂಪಿಸಿಕೊಂಡು ಅದನ್ನು ಸಂಶೋಧನೆಯ ಮೂಲಕ ಅಗೆದು ತೆಗೆದ ಮಾಹಿತಿಯನ್ನು ಬಳಸಿ ಪ್ರಬುದ್ಧವಾಗಿ ನಿರೂಪಿಸುತ್ತಿದ್ದ ವಾದದ ಶೈಲಿಯಂತೆ ಕಂಡು ಬರುತ್ತಿದ್ದವು. ಅವರ ಸೃಜನಶೀಲತೆಯನ್ನು ಅಪಹರಿಸಿದವರು ಯಾರು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ.
ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೂಡ, ಅವರನ್ನು ಕಂಡು ಮಾತನಾಡಿ ಚರ್ಚಿಸಿ ಅವರ ನೆನಪುಗಳು ನನ್ನ ಮನಃ ಪಟಲದಲ್ಲಿ ಉಳಿದು, ಅವರು ಸ್ವರ್ಗಸ್ಥರಾದರು ಎಂಬ ವಿಷಯದಿಂದ ಒಂದು ಭಾವತಂತು ತುಂಡಾದಂತೆ ಭಾಸವಾಗುತ್ತಿದೆ. ನನಗೆ ಏನೋ ಖಾಸಗಿ ನಷ್ಟವಾದಂತೆ ಅನಿಸುತ್ತಿದೆ.