ದಸರಾ ರಜೆಗೆ ಕೆಲವು ಉಪಯುಕ್ತ ಸಲಹೆಗಳು

| N/A | Published : Sep 21 2025, 12:47 PM IST

Dasara, Holidays, dasara holiday,

ಸಾರಾಂಶ

ಸೆ.22ರಂದು ದಸರಾ ಶುರು. ಒಂದೆಡೆ ಬಣ್ಣದ ದಿರಿಸುಗಳ ಸಂಭ್ರಮ ನಡೆದರೆ ಇನ್ನೊಂದೆಡೆ ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸದ ಗೌಜಿ ನಡೆಯುತ್ತಿರುತ್ತದೆ. ಈ ವೇಳೆಯಲ್ಲಿ ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಪ್ರವಾಸ ಮೊದಲೇ ಬುಕ್ ಮಾಡಿ

ಈಗೀಗಂತೂ ಪ್ರವಾಸಗಳೂ ಬಹಳ ಹೆಚ್ಚಾಗಿವೆ. ಮಕ್ಕಳಿಗೆ ರಜೆ ಸಿಕ್ಕ ತಕ್ಷಣ ಪ್ರವಾಸ ಹೊರಡಲಾಗುತ್ತದೆ. ಈ ವೇಳೆಯಲ್ಲಿ ಪಾರಂಪರಿಕ ಸ್ಥಳಗಳನ್ನು ನೋಡುವುದಾದರೆ ಮೈಸೂರು ಅಥವಾ ಹಂಪಿಯಂತಹ ಸಾಂಸ್ಕೃತಿಕ ಕೇಂದ್ರಗಳಿಗೆ ಕಿರು ಪ್ರವಾಸ ಯೋಜಿಸಬಹುದು. ಆದರೆ ತಕ್ಷಣವೇ ಪ್ಲಾನ್‌ ಮಾಡಬೇಕು ಮತ್ತು ಪ್ರಯಾಣ, ವಸತಿ ವ್ಯವಸ್ಥೆ ಬುಕ್‌ ಮಾಡಬೇಕು. ಕೊನೆ ಕ್ಷಣದಲ್ಲಿ ಮಾಡಿದರೆ ಕನಿಷ್ಠ ಶೇ.30ರಷ್ಟು ಬೆಲೆ ಜಾಸ್ತಿ ಆಗಿರುತ್ತದೆ. ಪುಟಾಣಿ ಕುಟುಂಬಕ್ಕೆ ಭಾರವಾಗುತ್ತದೆ.

ತಂತ್ರಜ್ಞಾನವನ್ನು ಬಳಸಿಕೊಳ್ಳಿ

ಬೆಂಗಳೂರಿನಲ್ಲಿ ಈಗ ಬಹುತೇಕ ಕಡೆಗಳಲ್ಲಿ ಗರ್ಬಾ ನೈಟ್ಸ್ ಕಾರ್ಯಕ್ರಮ ನಡೆಯುತ್ತದೆ. ಬಹಳಷ್ಟು ಮಂದಿ ಅಲ್ಲಿಗೆ ಹೋಗುತ್ತಾರೆ. ಕೆಲವರು ವಾರಾಣಸಿಯಲ್ಲಿ ನಡೆಯುವ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ದಸರಾದಲ್ಲಿಯೂ ಸಾಕಷ್ಟು ಜನ ಇರುತ್ತಾರೆ. ಇಂಥಾ ವೇಳೆಯಲ್ಲಿ ಗೂಗಲ್‌ ಮ್ಯಾಪ್ಸ್‌ನ ಆಫ್‌ಲೈನ್‌ ದಾರಿಗಳನ್ನು ಬಳಸಿ. ಜಾಸ್ತಿ ಜನಜಂಗುಳಿಯಲ್ಲಿ ಆನ್‌ಲೈನ್‌ ಮ್ಯಾಪ್‌ ಸಿಗದೇ ಇರಬಹುದು. ಅಲ್ಲದೇ ಮೈಥೋ ವರ್ಸ್‌ನಂತಹ ಎಆರ್‌ ಆ್ಯಪ್‌ಗಳು ರಾಮಾಯಣ ಸ್ಥಳಗಳನ್ನು ವರ್ಚುವಲ್‌ ಆಗಿ ತೋರಿಸುತ್ತವೆ. ಮನೆಯಲ್ಲಿಯೇ ಇರುವವರು ಅದನ್ನು ಬಳಸಬಹುದು. ಪ್ರವಾಸ ಹೋಗುವವರು ಅಕ್ಯೂವೆದರ್‌ ವೆಬ್‌ಸೈಟ್‌ನಲ್ಲಿ ಹವಾಮಾನ ಚೆಕ್‌ ಮಾಡಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಿ.

ಪರಿಸರ ಸ್ನೇಹಿ ಪ್ರವಾಸ

ಮೈಸೂರು ದಸರಾಗೆ ಪ್ರತೀ ವರ್ಷ ಕನಿಷ್ಠ 5 ಲಕ್ಷ ಮಂದಿ ಬರುತ್ತಾರೆ ಎಂಬ ಲೆಕ್ಕಾಚಾರವಿದೆ. ಅದು ಹೆಚ್ಚೂ ಆಗಬಹುದು. ಕಡಿಮೆಯೂ ಆಗಬಹುದು. ಹಾಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ಪ್ಲಾನ್‌ ಮಾಡಿ. ಮಕ್ಕಳಿಗೆ ಪರಿಸರ, ಕಾಡು ತೋರಿಸುವ ಆಸೆ ಇರುವವರು ರಂಗನತಿಟ್ಟು ಪಕ್ಷಿಧಾಮ, ನಾಗರಹೊಳೆ ಇತ್ಯಾದಿ ಸ್ಥಳಗಳನ್ನು ಪರಿಗಣಿಸಬಹುದು. ಸಾಧ್ಯವಾದಷ್ಟೂ ರೈಲು ಪ್ರಯಾಣ ಆರಿಸಿಕೊಳ್ಳಿ. ಅದರಿಂದ ಪರಿಸರಕ್ಕೂ ಒಳ್ಳೆಯದು. ಗುಂಪಿನ ಜೊತೆ ಇದ್ದರೆ ಅದೇ ಒಂದು ಮಜಾ.

ಹಬ್ಬದ ಆಫರ್‌ಗಳ ಕಡೆ ಗಮನ ಇರಲಿ

ಹಬ್ಬದ ಸಂದರ್ಭದಲ್ಲಿ ಎಲ್ಲರೂ ಆಫರ್‌ ಒದಗಿಸುತ್ತಾರೆ. ವಿಮಾನ ಪ್ರಯಾಣದಿಂದ ಹಿಡಿದು, ಹೋಂಸ್ಟೇಗಳವರೆಗೆ ಎಲ್ಲರೂ ಆಫರ್‌ ಘೋಷಿಸಿರುತ್ತಾರೆ. ನಿಮಗೆ ಅವಶ್ಯ ಇರುವ ಆಫರ್‌ಗಳನ್ನು ಬಳಸಿಕೊಳ್ಳುವುದನ್ನು ಮರೆಯದಿರಿ. ಮುಂಗಡ ಬುಕಿಂಗ್‌ ಮಾಡುವುದರಿಂದಲೇ ಸಾಕಷ್ಟು ಉಳಿತಾಯ ಮಾಡಬಹುದಾಗಿದೆ.

Read more Articles on