ವಸಂತ ಕಾಲದ ಸಂಭ್ರಮಕ್ಕೆ ಪುಟವಿಟ್ಟಂತೆ ಗಮನ ಸೆಳೆದ ‘ವಸಂತ ಸೇನೆ’

| N/A | Published : May 04 2025, 12:15 PM IST

Mini Theater

ಸಾರಾಂಶ

ನಾಟಕಪ್ರಿಯರ ಮನಸ್ಸಲ್ಲಿ ಹಸಿರಾಗಿರುವ ರಂಗಪ್ರಯೋಗ ಮೃಚ್ಛಕಟಿಕ. ಅದು ‘ವಸಂತಸೇನೆ’ಯಾಗಿ ವಸಂತಮಾಸದಲ್ಲಿ ಪ್ರದರ್ಶನ ಕಂಡು ರಂಗಪ್ರಿಯರ ಮನಸ್ಸು ತಂಪು ಮಾಡಿದೆ. ಆ ಬಗ್ಗೆ ಈ ಬರಹ.

- ಗೋಪಾಲ್‌ ಯಡಗೆರೆ

ಶಿವಮೊಗ್ಗ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏ. 20 ರಂದು ವಿಶಿಷ್ಟ ನಾಟಕ ಪ್ರದರ್ಶನವೊಂದು ನಡೆಯಿತು. ವಸಂತ ಋತುವಿನಲ್ಲಿಯೇ ಪ್ರದರ್ಶನಗೊಂಡ ‘ವಸಂತ ಸೇನೆ’ ನಾಟಕ ಅರ್ಥಪೂರ್ಣ ಪ್ರಯೋಗವಾಗಿ ಮೂಡಿ ಬಂದಿತು.

ರಂಗಮಂದಿರದ ಹೊರಗೆ ಮಿಂಚು, ಗುಡುಗು ಸಹಿತವಾಗಿ ಧೋ ಎಂದು ಮಳೆ ಸುರಿದು ಇಳೆ ತಂಪಾದರೆ, ರಂಗಮಂದಿರದ ಒಳಗೆ ಮನಸ್ಸು ತಂಪಾಗುವಂತೆ ಮಾಡಿದ್ದು ವಸಂತ ಸೇನೆ. ಶೂದ್ರಕ ಮಹಾಕವಿಯ ‘ಮೃಚ್ಛಕಟಿಕ’ ನಾಟಕವನ್ನು ಡಾ.ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರವರು ಕನ್ನಡಕ್ಕೆ ಅನುವಾದಿಸಿದ್ದು, ಇದನ್ನು ವೈದ್ಯನಾಥ್ ಹೆಚ್.ಯು. (ವೈದ್ಯ)ರವರು ರಂಗರೂಪದೊಂದಿಗೆ ವಸಂತಸೇನೆಯಾಗಿ ರೂಪಾಂತರಗೊಳಿಸಿ ನಿರ್ದೇಶಿಸಿದ್ದಾರೆ.

ನಾಟಕದ ಆರಂಭದಲ್ಲಿಯೇ ಸೂತ್ರಧಾರ ಹಾಗೂ ನಟಿಯರು ಬಂದು ಇಡೀ ನಾಟಕದ ಪಾತ್ರಗಳ ಪರಿಚಯ ಮಾಡುವ ರೀತಿಯೇ ನಾಟಕದ ಭಿನ್ನತೆಯನ್ನು ಸ್ಪಷ್ಟಪಡಿಸಿತು.

ನಾಟಕದ ನಾಯಕಿ ಮಧುಮಾಸದ ಹೆಣ್ಣು ವಸಂತಸೇನೆ. ಇಲ್ಲಿ ಆಕೆ ನಿಷ್ಕಲ್ಮಷವಾದ ಪ್ರೀತಿ ತುಂಬಿದ ಪ್ರೌಢ ಸ್ತ್ರೀ. ನಿರ್ಮಲ ಪ್ರೀತಿ ಬಯಸುವ ಸ್ನಿಗ್ಧ ಸುಂದರಿ. ನಾಯಕ ಚಾರುದತ್ತನಷ್ಟೇ ಆಕೆಗೆ ಜೀವಾಳ. ಅವನೇ ಬದುಕು. ಜೂಜಾಟದಲ್ಲಿ ಸೋತು ಹಣ ಕೊಡಲಾಗದೆ ಓಡಿ ಬಂದು ಇವಳನ್ನು ಸಂಧಿಸುವ ಜೂಜುಕೋರನ ಪರಿಸ್ಥಿತಿ ನೆನೆದು ಮಿಡಿಯುತ್ತಾಳೆ. ನಾಡಿನಲ್ಲಿ ಕಳ್ಳತನ, ಜೂಜು, ಅರಾಜಕತೆ ತುಂಬಿ ತುಳುಕುತ್ತಿರುವುದನ್ನು ಬಲ್ಲ ಅವಳು, ನಾಯಕನಿಗೆ ಹಣ ನೀಡಿ ಅಟ್ಟಿಸಿಕೊಂಡು ಬಂದವರಿಂದ ಕಾಪಾಡುತ್ತಾಳೆ. ಇಲ್ಲಿ ಆಕೆ ಔದಾರ್ಯದ ಖಣಿಯಾಗಿಯೂ ಕಾಣಿಸಿಕೊಳ್ಳುತ್ತಾಳೆ. ಆ ಜೂಜುಕೋರ

ಪಾಪಪ್ರಜ್ಞೆಯಿಂದ ಪಶ್ಚಾತ್ತಾಪದಿಂದ ಸನ್ಯಾಸ ಸ್ವೀಕರಿಸುವಲ್ಲಿ ವಸಂತೋತ್ಸವ ಗೋಚರಿಸುತ್ತದೆ.

ಉಜ್ಜಯಿನಿಯ ರಾಜನ ಬಾಮೈದ ಇವಳ ಸೌಂದರ್ಯಕ್ಕೆ ಸೋತು, ಇವಳನ್ನು ಬಲವಂತವಾಗಿಯಾದರೂ ಪಡೆಯಬೇಕೆಂಬ ಕೆಟ್ಟ ಆಸೆ ಹೊತ್ತು ಕಾಡುತ್ತಿರುವ ಸಮಯದಲ್ಲಿ ಚಾರುದತ್ತನ ಭೇಟಿ ಇಲ್ಲಿ ವಿಶೇಷ. ಅವನನ್ನು ಮನದಲ್ಲೇ ಆರಾಧಿಸುತ್ತಿದ್ದ ವಸಂತಸೇನೆಯಲ್ಲಿ ಮತ್ತೆ ವಸಂತೋತ್ಸವ ಕಾಣಿಸಿತ್ತು. ಕಳ್ಳತನದಿಂದಾದರೂ ಪ್ರೇಯಸಿ ಮದನಿಕೆಯನ್ನು ದಾಸ್ಯದಿಂದ ಬಿಡಿಸಬೇಕೆಂಬ ಶರ್ಮಿಕಲನ ಮನದಾಸೆ ಅರಿತು ಸಖಿ ಮದನಿಕೆಯನ್ನು ಅವನೊಂದಿಗೆ ಕಳಿಸಿಕೊಟ್ಟು ಪ್ರೇಮಕ್ಕೊಂದು ಹೊಸ ಆಯಾಮವನ್ನೇ ನೀಡುತ್ತಾಳೆ.

ಇವಳು ಚಾರುದತ್ತನ ಬಿಟ್ಟು ತನ್ನ ವರಿಸಲಾರಳೆಂದು ತಿಳಿದು ಶಕಾರ ಅವಳ ಹತ್ಯೆಗೈದು, ಅದನ್ನು ಚಾರುದತ್ತನ ತಲೆಗೆ ಕಟ್ಟಿ, ನ್ಯಾಯಾಲಯದಲ್ಲಿ ಅವನಿಗೆ ಮರಣದಂಡನೆ ವಿಧಿಸುವಲ್ಲಿ ಯಶಸ್ವಿಯಾಗುವುದು ನಾಟಕದ ನಿರ್ಣಾಯಕ ತಿರುವು. ತನ್ನಿಂದ ಸಹಾಯ ಪಡೆದು ಸನ್ಯಾಸಿಯಾದ ಜೂಜುಕೋರನಿಂದ ಇವಳ ರಕ್ಷಣೆಯಾಗುವುದು, ಅಂತ್ಯದಲ್ಲಿ ವಧಾಸ್ಥಾನದಲ್ಲಿ ಚಾರುದತ್ತನನ್ನು ಸೇರಿಕೊಳ್ಳುವುದು ನಿಜವಾದ ವಸಂತೋತ್ಸವವಾಗಿ ಅನಾವರಣಗೊಳ್ಳುತ್ತದೆ.

ನಾಟಕದಲ್ಲಿ ವಸಂತ ಸೇನೆಯಾಗಿ ಎಸ್. ಲಕ್ಷ್ಮಿ, ಭದ್ರಾವತಿ, ಚಾರುದತ್ತನಾಗಿ ನಾಗರಾಜ ನೀಲ್, ಶಕಾರನಾಗಿ ಡಾ. ಹೆಚ್. ಎಸ್. ನಾಗಭೂಷಣ, ಆರ್ಯಕ/ರಾಜ ಆರ್ಯಕನಾಗಿ ವಿಜಯ್‍ಕುಮಾರ್, ಶಕಾರನ ಬಂಟ/ನಗಾರಿ ಬಾರಿಸುವವನಾಗಿ ನಿಖಿಲ್, ಜೂಜುಕಾರ/ಬೌದ್ಧ ಭಿಕ್ಷುವಾಗಿ ಅರ್ಜುನ್, ಸೂತ್ರಧಾರನಾಗಿ ಎನ್. ಕೆ. ಹಾಲೇಶ್, ನಟಿ/ಗಾಯಕಿಯಾಗಿ ಕೀರ್ತನಾ ವ್ಯಾಸ್, ಮೈತ್ರೇಯನಾಗಿ ಲೋಕೇಶ್ ನ್ಯಾಮತಿ, ಶರ್ಮಿಳಕ (ಕಳ್ಳ)ನಾಗಿ ವಿಜಯ್ ನೀನಾಸಂ, ವಸಂತ ಸೇನೆಯ ಸಖಿ (ಮದನಿಕೆ)ಯಾಗಿ ನಂದಿನಿ ಸಾಗರ ಗಮನ ಸೆಳೆಯುತ್ತಾರೆ. ನಂತರ ಬರುವ ಸಖಿಯರಾಗಿ ಸಂಧ್ಯಾ, ಹನಿ ಕುರುವರಿ, ರದನಿಕೆಯಾಗಿ ಹರ್ಷಿತಾ ಶಣೈ ಹಾಗೂ ನ್ಯಾಯಾಧೀಶನಾಗಿ ಹೆಚ್. ವಿ. ಶ್ರೀನಿಧಿ ದೇಶಪಾಂಡೆಯವರದ್ದು ಸಂದರ್ಭೋಚಿತ ಅಭಿನಯ.

ಸಂಗೀತ ಸಂಯೋಜನೆ (ಶ್ರೀಕಾಂತ ಕಾಳಮಂಜಿ) ಉತ್ತಮವಾಗಿದೆ. ರಂಗ ವಿನ್ಯಾಸದ ಕಲ್ಪನೆ, ಪೂರಕವಾದ ವಸ್ತ್ರ ವಿನ್ಯಾಸ (ಗುರುಮೂರ್ತಿ ವರದಾಮೂಲ, ಗಜಾನನ ಶರ್ಮಾ) ಗಮನ ಸೆಳೆಯಿತು. ಬೆಳಕಿನ ವಿನ್ಯಾಸ (ಚಂದನ್ ನೀನಾಸಂ), ನೃತ್ಯ ಸಂಯೋಜನೆ (ವಾಸುಕಿ ಕುಲಕರ್ಣಿ)ಯು ಕೂಡ ಗಮನ ಸೆಳೆಯುವಂತಿತ್ತು.

ನಿರ್ದೇಶಕ ವೈದ್ಯನಾಥ್‍ರವರ ಸಾಹಿತ್ಯ ನಾಟಕದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.