ಸಾರಾಂಶ
ಬೆಂಗಳೂರು : ನಗರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕೃಷ್ಣ ವಿಷ್ಣುವಿನ ದೇವಾಲಯಗಳಲ್ಲಿ ಹಾಗೂ ಶ್ರೀಕೃಷ್ಣ ಮಠಗಳಲ್ಲಿ ವಿಶೇಷ ಪೂಜೆ ನಡೆಯಿತು. ನಸುಕಿನಿಂದಲೆ ಭಕ್ತರು ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು.
ಬಸವನಗುಡಿಯಲ್ಲಿನ ಪುತ್ತಿಗೆ ಮಠದ ಗೋವರ್ಧನಗಿರಿ, ಉಪ್ಪಾರಪೇಟೆಯ ಶ್ರೀಕೃಷ್ಣ ಗುಡಿ, ತುಳಸಿತೋಟದ ಬಳಿಯ ಕೃಷ್ಣ ರಾಮ ಮಂದಿರ, ವಿದ್ಯಾಪೀಠ, ಕೋರಮಂಗಲದ ಶ್ರೀಕೃಷ್ಣ ಮಂದಿರ ಸೇರಿ ವಿವಿಧೆಡೆಯ ದೇವಸ್ಥಾನಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಿತು. ನಸುಕಿನಿಂದಲೆ ದೇವಸ್ಥಾನಗಳಲ್ಲಿ ಅಭಿಷೇಕ, ನೈವೇದ್ಯ, ತೊಟ್ಟಿಲ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತಮ್ಮ ಮನೆಗಳಲ್ಲಿ ಕೃಷ್ಣನ ಹೆಜ್ಜೆ ಗುರುತುಗಳನ್ನು ಬರೆದು, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು. ವಿಧವಿಧವಾದ ಖಾದ್ಯಗಳನ್ನು ಮಾಡಿ ಬೆಣ್ಣೆ ಸಹಿತ ಕೃಷ್ಣನಿಗೆ ನೈವೇದ್ಯ ಅರ್ಪಿಸಲಾಯಿತು. ಮನೆಯಲ್ಲಿನ ಪುಟ್ಟ ಮಕ್ಕಳಿಗೆ ಕೃಷ್ಣ ವೇಷ ಹಾಗೂ ಹೆಣ್ಣುಮಕ್ಕಳಿಗೆ ರಾಧೆಯ ಅಲಂಕಾರ ಮಾಡಿ ಅರತಿ ಬೆಳಗಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಶಾಲೆಗಳಲ್ಲೂ ಮಕ್ಕಳಿಗಾಗಿ ಶ್ರೀಕೃಷ್ಣ ಛದ್ಮವೇಶ ಸ್ಪರ್ಧೆ ಸೇರಿ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು.