ಸಾರಾಂಶ
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರೀಮಿಯಂ ಎಫ್‌ಎಆರ್ ಜಾರಿಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಆನ್‌ಲೈನ್ ಮೂಲಕ ಅರ್ಜಿ ಪಡೆಯುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ನಿಗದಿತ ಎತ್ತರಕ್ಕಿಂತ ಹೆಚ್ಚಿನ ಎತ್ತರ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಕ್ಕಾಗಿ ಬಿಬಿಎಂಪಿಯು ಪ್ರೀಮಿಯಂ ಎಫ್‌ಎಆರ್ ಜಾರಿಗೊಳಿಸುವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ ಅಧಿಸೂಚನೆಯಲ್ಲಿ ನಿವೇಶನದ ಮಾರ್ಗಸೂಚಿ ದರದ ಶೇ.50 ರಷ್ಟು ಶುಲ್ಕ ಪಾವತಿಸಿಕೊಂಡು ಶೇ.60ರವರೆಗೂ ಪ್ರೀಮಿಯಂ ಎಫ್ಎಆರ್ ನೀಡಲು ಅವಕಾಶ ಕಲ್ಪಿಸಿದೆ. ಅದರಂತೆ ಬಿಬಿಎಂಪಿಯ ನಗರ ಯೋಜನಾ ವಿಭಾಗದಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಮೂಲಕವೇ ಅನುಮೋದನೆಗೂ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ವಾರ್ಷಿಕ ₹2000 ಕೋಟಿ ಆದಾಯ:
ಪ್ರೀಮಿಯಂ ಎಫ್‌ಎಆರ್‌ನಿಂದ ಬಿಬಿಎಂಪಿಗೆ ವಾರ್ಷಿಕ ಸುಮಾರು ₹2 ಸಾವಿರ ಕೋಟಿ ಆದಾಯ ಬರುವ ಸಾಧ್ಯತೆ ಇದೆ. ಪ್ರೀಮಿಯಂ ಎಫ್‌ಎಆರ್‌ನಿಂದ ಬಿಬಿಎಂಪಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ದೊರೆಯುವುದಿಂದ ಅಪಾರ್ಟ್‌ಮೆಂಟ್‌ನ ಪ್ಲಾಟ್‌ಗಳ ಬೆಲೆ ಕಡಿಮೆಯಾಗಲಿದೆ. ದೇಶದ ಬೇರೆ ಬೇರೆ ನಗರದಲ್ಲಿ ಇದೇ ವ್ಯವಸ್ಥೆ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.
9 ಮೀಟರ್‌ನಿಂದ 12 ಮೀಟರ್‌ವರೆಗಿನ ಅಗಲದ ರಸ್ತೆ ಹೊಂದಿರುವ ಕಟ್ಟಡಗಳ ನಿರ್ಮಿತ ಪ್ರದೇಶಕ್ಕೆ ಅನುಗುಣವಾಗಿ ಶೇ.20ರಷ್ಟು ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಪ್ರೀಮಿಯಂ ಎಫ್ಎಆರ್ ನೀಡಲಾಗುತ್ತದೆ. 12 ಮೀಟರ್‌ನಿಂದ 18 ಮೀಟರ್ ಅಗಲದ ರಸ್ತೆ ಹೊಂದಿರುವ ಕಟ್ಟಡಗಳಿಗೆ ಶೇ.40 ಹಾಗೂ 18 ಮೀಟರ್‌ಗೂ ಹೆಚ್ಚಿನ ಅಗಲದ ರಸ್ತೆ ಹೊಂದಿರುವ ಕಟ್ಟಡಗಳು ಶೇ.60ರಷ್ಟು ಗರಿಷ್ಠ ಪ್ರೀಮಿಯಂ ಎಫ್ಎಆರ್ ಪಡೆಯಬಹುದಾಗಿದೆ.
ಕಟ್ಟಡ ನಕ್ಷೆಯೊಂದಿಗೆ ಎಫ್‌ಎಆರ್‌ಗೂ ಅರ್ಜಿ
ಕಟ್ಟಡ ನಿರ್ಮಾಣಕ್ಕೆ ಬಯಸುವವರು, ಕಟ್ಟಡ ನಕ್ಷೆಗೆ ಅನುಮೋದನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ಪ್ರೀಮಿಯಂ ಎಫ್‌ಎಆರ್‌ಗೂ ಅರ್ಜಿ ಸಲ್ಲಿಸಬಹುದಾಗಿದೆ. ಎರಡೂ ಅರ್ಜಿಯನ್ನು ಜೊತೆಗೆ ಪರಿಶೀಲನೆ ಮಾಡಿ ಅನುಮೋದನೆ ನೀಡಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.