ಹೆಚ್ಚಿನ ಆದಾಯ ನಿರೀಕ್ಷೆ ಇರುವುದರಿಂದ ಬಜೆಟ್‌ ಗಾತ್ರವೂ ಹೆಚ್ಚಾಗಲಿದೆ : ತುಷಾರ್‌ ಗಿರಿನಾಥ್‌

| N/A | Published : Mar 29 2025, 01:46 AM IST / Updated: Mar 29 2025, 06:36 AM IST

ಸಾರಾಂಶ

ರಾಜ್ಯ ಸರ್ಕಾರವೂ ಈ ಬಾರಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ನೀಡಿದ್ದು, ಜತೆಗೆ, ವಿಶ್ವ ಬ್ಯಾಂಕ್‌, ಪ್ರೀಮಿಯಂ ಎಫ್‌ಎಆರ್‌, ಜಾಹೀರಾತು ಶುಲ್ಕ ಸೇರಿದಂತೆ ವಿವಿಧ ಆದಾಯ ನಿರೀಕ್ಷೆ ಇರುವುದರಿಂದ ಬಿಬಿಎಂಪಿಯ ಬಜೆಟ್‌ ಗಾತ್ರ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

 ಬೆಂಗಳೂರು :  ರಾಜ್ಯ ಸರ್ಕಾರವೂ ಈ ಬಾರಿ ಹೆಚ್ಚುವರಿಯಾಗಿ ₹4 ಸಾವಿರ ಕೋಟಿ ನೀಡಿದ್ದು, ಜತೆಗೆ, ವಿಶ್ವ ಬ್ಯಾಂಕ್‌, ಪ್ರೀಮಿಯಂ ಎಫ್‌ಎಆರ್‌, ಜಾಹೀರಾತು ಶುಲ್ಕ ಸೇರಿದಂತೆ ವಿವಿಧ ಆದಾಯ ನಿರೀಕ್ಷೆ ಇರುವುದರಿಂದ ಬಿಬಿಎಂಪಿಯ ಬಜೆಟ್‌ ಗಾತ್ರ ಹೆಚ್ಚಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯು ಮುಂಬರುವ ಸಾಲಿನಲ್ಲಿ ಹೆಚ್ಚಿನ ಆದಾಯ ಸಂಗ್ರಹಣೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ವಿಶ್ವಬ್ಯಾಂಕ್‌ ನೆರವು ನೀಡುತ್ತಿದೆ. ಜತೆಗೆ, ಮಾರುಕಟ್ಟೆಗಳು, ಆಸ್ತಿಗಳು ಸೇರಿದಂತೆ ಮೊದಲಾದ ಮೂಲಗಳಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಹಾಗಾಗಿ, ಬಜೆಟ್‌ ಗಾತ್ರವು ಹೆಚ್ಚಾಗಿರಲಿದೆ ಎಂದು ಹೇಳಿದರು.

ಇನ್ನು 2025-26ನೇ ಸಾಲಿನ ಆಯವ್ಯಯ ಸಿದ್ಧಪಡಿಸಿ ಈಗಾಗಲೇ ಬಿಬಿಎಂಪಿಯ ಆಡಳಿತಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಗಿದ್ದು, ಶನಿವಾರ ಬೆಳಗ್ಗೆ 10.30ಕ್ಕೆ ಅನುಮೋದನೆ ನೀಡಲಿದ್ದಾರೆ. ನಂತರ ಪುರಭವನದಲ್ಲಿ ಬೆಳಗ್ಗೆ 11ಕ್ಕೆ ಬಜೆಟ್‌ ಮಂಡಿಸಲಾಗುವುದು. ಕಳೆದ ವರ್ಷ ಮಂಡಿಸಿದ ಬಜೆಟ್‌ನಡಿ ಕೈಗೊಂಡ ಕ್ರಮಗಳ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರು ನಗರ ಹೇಗಿರಬೇಕು ಎಂಬುವ ಕುರಿತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಕನಸನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಅದಕ್ಕಾಗಿ ಈ ಬಾರಿ ಮುಖ್ಯಮಂತ್ರಿ ಸರ್ಕಾರದ ಬಜೆಟ್‌ನಲ್ಲಿ ₹7 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಈ ಹಿಂದೆ ಇಷ್ಟೊಂದು ಪ್ರಮಾಣ ಅನುದಾನವನ್ನು ಸರ್ಕಾರ ನೀಡಿಲ್ಲ. ಮುಂದಿನ ವರ್ಷವೂ ಇದಕ್ಕಿಂತ ಹೆಚ್ಚಿನ ಪ್ರಮಾಣ ಅನುದಾನ ನೀಡಲಿ ಎಂದರು.

ಸುಮಾರು ₹2 ಸಾವಿರ ಕೋಟಿ, ಪ್ರೀಮಿಯಂ ಎಫ್‌ಎಆರ್‌, ಸುಮಾರು ₹650 ಕೋಟಿ ಜಾಹೀರಾತು ಶುಲ್ಕ ಬಂದಿಲ್ಲ. ಆಸ್ತಿ ತೆರಿಗೆ ಸಂಗ್ರಹದಲ್ಲಿ ₹300 ಕೋಟಿ ಕಡಿಮೆ ಸಂಗ್ರಹವಾಗಿದೆ. ಕಳೆದ ವರ್ಷದ ಬಜೆಟ್‌ನ ನಿರೀಕ್ಷೆಯಷ್ಟು ಆದಾಯ ಬಂದಿಲ್ಲ ಎಂದು ಹೇಳಿದರು.