ಸಾರಾಂಶ
ಬೆಂಗಳೂರು : ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಕಡಿಮೆ ಬೆಲೆಯ 4 ಚಕ್ರದ ಮಿನಿ ಟ್ರಕ್ ಏಸ್ ಪ್ರೋ ಅನ್ನು ಬಿಡುಗಡೆ ಮಾಡಿದೆ.
ಕೇವಲ ₹3.99 ಲಕ್ಷ ಬೆಲೆಯಿಂದ ಆರಂಭವಾಗುವ ಟಾಟಾ ಏಸ್ ಪ್ರೋ ಪೆಟ್ರೋಲ್, ಬೈ-ಫ್ಯೂಯಲ್ (ಸಿ ಎನ್ ಜಿ + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಲಭ್ಯವಿದೆ.
ಈ ಕುರಿತು ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಗಿರೀಶ್ ವಾಘ್ ಅವರು, “ಟಾಟಾ ಏಸ್‌ನ ಬಿಡುಗಡೆಯು ಭಾರತದಲ್ಲಿ ಸರಕು ಸಾಗಣೆ ವಿಭಾಗದಲ್ಲಿ ಕ್ರಾಂತಿಯನ್ನು ತಂದಿತು. ಕಳೆದ ಎರಡು ದಶಕಗಳಲ್ಲಿ, ಇದು 25 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಶಕ್ತಿಕರಣಗೊಳಿಸಿದೆ.
ಟಾಟಾ ಏಸ್ ಪ್ರೋ ಹೆಚ್ಚು ಗಳಿಕೆ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ” ಎಂದು ಹೇಳಿದರು.ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವಿಭಾಗದ ಉಪಾಧ್ಯಕ್ಷ ಮತ್ತು ವ್ಯಾಪಾರ ಮುಖ್ಯಸ್ಥ ಶ್ರೀ ಪಿನಾಕಿ ಹಲ್ದಾರ್, ‘ಟಾಟಾ ಏಸ್ ಪ್ರೋವನ್ನು ಗ್ರಾಹಕರ ಒಳನೋಟಗಳನ್ನು ಪಡೆದು ಅಭಿವೃದ್ಧಿಪಡಿಸಲಾಗಿದೆ ಮತ್ತು ವಿವಿಧ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದರು.
ಟಾಟಾ ಏಸ್ ಪ್ರೋ 750 ಕೆಜಿ ಲೋಡ್ ಸಾಮರ್ಥ್ಯ ಮತ್ತು 6.5 ಅಡಿ (1.98 ಮೀ) ಡೆಕ್ ಹೊಂದಿದೆ. ಪೆಟ್ರೋಲ್ ವಿಭಾಗದಲ್ಲಿ 694 ಸಿಸಿ ಎಂಜಿನ್ ಹೊಂದಿದೆ. ಎಲೆಕ್ಟ್ರಿಕ್ ವೆಹಿಕಲ್ ಒಂದೇ ಚಾರ್ಜ್‌ನಲ್ಲಿ 155 ಕಿಮೀ ರೇಂಜ್ ಅನ್ನು ನೀಡುತ್ತದೆ. ಬೈ-ಫ್ಯೂಯಲ್ ವಿಭಾಗದಲ್ಲಿ ಸಿ ಎನ್ ಜಿಯ ವೆಚ್ಚ-ದಕ್ಷತೆಯನ್ನು 5-ಲೀಟರ್ ಪೆಟ್ರೋಲ್ ಬ್ಯಾಕಪ್ ಟ್ಯಾಂಕ್‌ನ ಸೌಲಭ್ಯದೊಂದಿಗೆ ಸಂಯೋಜಿಸುತ್ತದೆ.