ಸಾರಾಂಶ
ಬೆಂಗಳೂರು : ಹಾಲು, ಕಾಫಿಪುಡಿ ಬೆಲೆ ಹೆಚ್ಚಳದ ಬಳಿಕ ನಿರೀಕ್ಷೆಯಂತೆ ರಾಜಧಾನಿಯ ಬಹುತೇಕ ಹೊಟೆಲ್‌ಗಳಲ್ಲಿ ಕಾಫಿ - ತಿನಿಸುಗಳ ಬೆಲೆ ಏರಿಕೆಯಾಗಿದೆ. ಒಂದು ಕಪ್ ಕಾಫಿ-ಚಹಾ ಬೆಲೆ ₹3 ರಿಂದ ₹5 ಹೆಚ್ಚಳವಾಗಿದೆ.
ಕಳೆದ ಎರಡು ತಿಂಗಳಲ್ಲಿ ಕಾಫಿ ಪುಡಿ ಬೆಲೆ ಕೆಜಿಗೆ ₹150 ರಿಂದ ₹200 ಹೆಚ್ಚಾಗಿದೆ. ಇದೇ ವಾರ ಸರ್ಕಾರ ಸರ್ಕಾರ ಒಂದು ಲೀಟರ್ ಹಾಲಿಗೆ ₹ 4 ಏರಿಕೆ ಮಾಡಿದೆ. ಇದರ ಜೊತೆಗೆ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಿದೆ. ಪರಿಣಾಮ ನಗರದ ಪ್ರತಿಷ್ಠಿತ ಹೊಟೆಲ್‌ಗಳು ಸೇರಿದಂತೆ ದರ್ಶಿನಿ, ಕ್ಯಾಂಟಿನ್, ಕ್ಯಾಂಡಿಮೆಂಟ್ಸ್‌ಗಳಲ್ಲಿ ಚಹಾ- ಕಾಫಿ ದರ ಏರಿಕೆಯಾಗಿದೆ. ಹೋಟೆಲ್‌ಗಳಲ್ಲಿ ₹15 ಇದ್ದ ಕಾಫಿ-ಟಿ ಬೆಲೆ ₹ 18 ರಿಂದ ₹ 20 ಆಗಿದೆ. ಅದೇ ರೀತಿ ₹20 ಇದ್ದಲ್ಲಿ ₹25 ಆಗಿದೆ. ಹಲವು ಹೊಟೆಲ್‌ಗಳಲ್ಲಿ ಮಾಲೀಕರು ಈ ಕುರಿತ ಫಲಕ ಅಳವಡಿಸಿ ದರ ಹೆಚ್ವಳಕ್ಕೆ ಗ್ರಾಹಕರು ಸಹಕರಿಸುವಂತೆ ಕೋರಿವೆ.
ಬೃಹತ್ ಬೆಂಗಳೂರು ಹೊಟೆಲುಗಳ ಸಂಘ, ಕರ್ನಾಟಕ ಹೊಟೆಲುಗಳ ಸಂಘಗಳು ಹಾಲಿನ ದರ ಏರಿಕೆಯಾದಾಗಲೇ ಚಹಾ-ಕಾಫಿ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ತಿಳಿಸಿದ್ದವು. ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ 5 ರಿಂದ 10 ರುಪಾಯಿವರೆಗೆ ಏರಿಕೆ ಮಾಡಲು ತೀರ್ಮಾನಿಸಿರುವುದಾಗಿ ಹೇಳಿದ್ದವು. ಅದರಂತೆ ಈಗಾಗಲೇ ಸಾಕಷ್ಟು ಹೋಟೆಲ್‌ಗಳು ಬೆಲೆ ಏರಿಕೆ ಮಾಡಿವೆ. ಕೆಲ ಹೊಟೆಲ್‌ಗಳಲ್ಲಿ ಗ್ರಾಹಕರ ಕೋರಿಕೆ ಮೇರೆಗೆ ₹ 3 ಮಾತ್ರ ಹೆಚ್ಚಿಸಿವೆ.
ಮಲ್ಲೇಶ್ವರದಲ್ಲಿ ಪ್ರತಿನಿತ್ಯದ ಹೋಟೆಲ್ ಗ್ರಾಹಕರೊಬ್ಬರು ಮಾತನಾಡಿ, 100 ಗ್ರಾಂ ಕಾಫಿ, ಟೀಗೆ ₹ 5 ಏರಿಕೆ ಮಾಡಿರುವುದಾಗಿ ಹೊಟೆಲ್‌ನವರು ಹೇಳುತ್ತಿದ್ದಾರೆ. ಹೆಚ್ಚುವರಿ ದರದಿಂದ ತಿಂಗಳಿಗೆ ₹ 150 - ₹ 200ವರೆಗೆ ಬಜೆಟ್ ಹೆಚ್ಚಾಗುತ್ತಿದೆ. ಇದು ಮದ್ಯಮ ವರ್ಗದ ಗ್ರಾಹಕರಿಗೆ ಹೊರೆಯಾಗಿದೆ. ಹೊಟೆಲ್‌ನವರು ನಮ್ಮ ಜೇಬಿಗೆ ಕತ್ತರಿ ಹಾಕ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಹೊಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ದರ ಹೆಚ್ಚಳ ಮಾಡಲಾಗಿದೆ. ಕಾಫಿಪುಡಿ, ಹಾಲಿನ ಬೆಲೆ ಏರಿಕೆ ಆಗಿರುವುದರಿಂದ ಇದು ಅನಿವಾರ್ಯವಾಗಿದೆ ಎಂದು ಹೇಳಿದರು.
ಮುಂದುವರಿದು ತಿನಿಸುಗಳ ದರವೂ ಶೇ.10-15ರಷ್ಟು ಏರಿಕೆಯಾಗಿದೆ. ಬೆಣ್ಣೆ, ತುಪ್ಪದ ದೋಸೆ , ಗೀ ರೈಸ್, ಹಾಲಿನ ಸಿಹಿ ಖಾದ್ಯಗಳ ಬೆಲೆ ಏರಿಕೆಯಾಗಿದೆ.