ಸಾರಾಂಶ
ಮಕ್ಕಳ ರಂಗಭೂಮಿ ಅಂದಾಗ ನೆನೆಸಿಕೊಳ್ಳಲೇಬೇಕಾದ ಹೆಸರು ಪ್ರೇಮಾ ಕಾರಂತರದ್ದು. ಇವರು ಹುಟ್ಟಿದ್ದು ಆಗಸ್ಟ್ 15ಕ್ಕೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, 1936ರಲ್ಲಿ. ಅನೇಕ ಸಿನಿಮಾಗಳಿಗೆ, ನಾಟಕಗಳಿಗೆ ವಸ್ತ್ರ ವಿನ್ಯಾಸ, ನಿರ್ದೇಶನ ಮಾಡಿದವರು.
ಮಕ್ಕಳ ರಂಗಭೂಮಿ ಅಂದಾಗ ನೆನೆಸಿಕೊಳ್ಳಲೇಬೇಕಾದ ಹೆಸರು ಪ್ರೇಮಾ ಕಾರಂತರದ್ದು. ಇವರು ಹುಟ್ಟಿದ್ದು ಆಗಸ್ಟ್ 15ಕ್ಕೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ, 1936ರಲ್ಲಿ. ಅನೇಕ ಸಿನಿಮಾಗಳಿಗೆ, ನಾಟಕಗಳಿಗೆ ವಸ್ತ್ರ ವಿನ್ಯಾಸ, ನಿರ್ದೇಶನ ಮಾಡಿದವರು. ಇವರ ‘ಫಣಿಯಮ್ಮ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ‘ಸೋಲಿಸಬೇಡ ಗೆಲಿಸಯ್ಯ’ ಪ್ರೇಮಾ ಕಾರಂತರ ಆತ್ಮಕಥೆ. ‘ಬೆನಕ’ ಇವರು ಮಕ್ಕಳ ರಂಗಭೂಮಿಗಾಗಿ ಕಟ್ಟಿದ ರೆಪರ್ಟರಿ.
‘ಮಕ್ಕಳು ಏನು ಮಾಡಿದರೂ ಚಂದವೇ ಅನ್ನುತ್ತಿದ್ದದ್ದನ್ನು ಒಪ್ಪದೇ, ಮಕ್ಕಳೂ ಚೆನ್ನಾಗಿ ಮಾಡಬಲ್ಲರು ಎನ್ನುವ ಸತ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಪ್ರೇಮಾ ಕಾರಂತ್ ಮಾಡುತ್ತಿದ್ದರು’ ಎನ್ನುತ್ತಾರೆ ಸಂಚಾರಿ ಥೇಟರ್‌ನ ಎನ್ ಮಂಗಳಾ.
‘ಪ್ರೇಮಾ ಕಾರಂತರ ಮಕ್ಕಳ ನಾಟಕಗಳು ವರ್ಣರಂಜಿತವಾಗಿ, ವೈಭವೋಪೇತದಿಂದ ಕೂಡಿರುತ್ತಿದ್ದವು. ರಂಗಸಜ್ಜಿಕೆ, ವಸ್ತ್ರವಿನ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯವಿರುತ್ತಿತ್ತು. ಎಲ್ಲ ನಾಟಕಗಳಿಗೂ ಬಿ ವಿ ಕಾರಂತರ ಅದ್ಭುತ ಸಂಗೀತವಿರುತ್ತಿತ್ತು. ಕಾರಂತರು ಸಮಯವಿಲ್ಲವೆಂದರೂ ಬಿಡದೆ ಅವರನ್ನು ಕೋಣೆಯೊಳಗೆ ಕೂಡಿ ಹಾಕಿ ಹಟ ಹಿಡಿದು ತಮ್ಮ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿಸಿಕೊಳ್ಳುತ್ತಿದ್ದರು. ಕಾಗಕ್ಕ, ಗುಬ್ಬಕ್ಕ ಕತೆಗಳಷ್ಟೇ ಮಕ್ಕಳಿಗೆ ಮುಖ್ಯವಲ್ಲ. ಅವರಿಗೆ ಕ್ಲಾಸಿಕ್ ಗಳ ಬಗ್ಗೆಯೂ ಗೊತ್ತಿರಬೇಕು. ಪ್ರಹಸನವೆಂದರೇನು ಎಂಬುದು ತಿಳಿದಿರಬೇಕು, ಗಂಭೀರವಾದದ್ದು ಅರ್ಥವಾಗಬೇಕು ಎಂಬ ಕಾರಣಕ್ಕಾಗಿ ಷೇಕ್ಸ್‌ಪಿಯರ್ ನ ‘ಕಿಂಗ್ ಲಿಯರ್’ ನಾಟಕವನ್ನೂ ಬ್ರೆಕ್ಟ್‌ನ ‘ಕಕೇಶಿಯನ ಚಾಕ್ ಸರ್ಕಲ್’ ನಾಟಕವನ್ನೂ ಮಕ್ಕಳಿಗಾಗಿ ಹೆಚ್.ಎಸ್.ವೆಂಕಟೇಶಮೂರ್ತಿಯವರ ಕೈಯಲ್ಲಿ ಹೊಸದಾಗಿ ಬರೆಸಿದ್ದರು’ ಎನ್ನುವುದು ಮಂಗಳಾ ಅವರ ಮಾತು.
ಮುಂದೆ ಸಂಗೀತ ನಾಟಕ ಅಕಾಡೆಮಿ ಪ್ರೇಮಾಕಾರಂತರಿಗೆ ವಸ್ತ್ರವಿನ್ಯಾಸಕಿ ಪ್ರಶಸ್ತಿ ಘೋಷಿಸಿದಾಗ, ತಾನು ಕೆಲಸ ಮಾಡಿದ್ದು ಮಕ್ಕಳ ರಂಗಭೂಮಿಗಾಗಿ, ಅದಕ್ಕೆ ಅದಕ್ಕಾಗಿ ಪ್ರಶಸ್ತಿ ನೀಡಿದರೆ ತನಗೆ ಹೆಚ್ಚು ಸಂತೋಷವಾಗುತ್ತದೆ ಎಂದಿದ್ದರಂತೆ. ಆದರೆ ಮಕ್ಕಳ ರಂಗಭೂಮಿಗೆಂದು ಯಾವ ಪ್ರಶಸ್ತಿಯೂ ಇಲ್ಲದಿರುವ ಕಾರಣ ತಾವು ಈ ಪ್ರಶಸ್ತಿಯನ್ನೇ ಸ್ವೀಕರಿಸಿ ಎಂದ ಅಕಾಡೆಮಿಯವರ ಮಾತು ಕೇಳಿ ಪ್ರೇಮಾ ಅವರಿಗೆ ನಖಶಿಖಾಂತ ಸಿಟ್ಟು ಬಂದಿತ್ತು. ‘ ಮಕ್ಕಳ ರಂಗಭೂಮಿಗಾಗಿ ಪ್ರಶಸ್ತಿಯೆಂಬುದೇ ಇಲ್ಲವಾದರೆ ನನಗೆ ನೀವು ಕೊಡುವ ಯಾವ ಪ್ರಶಸ್ತಿಯೂ ಬೇಕಿಲ್ಲ’ ಎಂದು ಪ್ರಶಸ್ತಿಯನ್ನೇ ತಿರಸ್ಕರಿಸಿದ ದಿಟ್ಟ ರಂಗಪ್ರೇಮಿ ಪ್ರೇಮಾ ಕಾರಂತ.