ಸಾರಾಂಶ
ಬಿ.ಎಂ.ಶ್ರೀಯವರ ಮೊಮ್ಮಗಳು ಮತ್ತು ವಿಶಿಷ್ಟವಾದ ‘ಸಂಗಮ’ ಎಂಬ ಕಥಾಸಂಕಲನವನ್ನು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ (1954) ತಂದು ಹೆಣ್ಮಕ್ಕಳ ಮನೋಲೋಕ ಬೇರೆಯದೇ ಇರುತ್ತದೆ ಅಂತ ನಿರೂಪಿಸಿದ ಆಧುನಿಕ ಕಥೆಗಾರ್ತಿ ರಾಜಲಕ್ಷ್ಮೀರಾವ್
- ಸಿಂಧು ರಾವ್ ಟಿ.
ಬಿ.ಎಂ.ಶ್ರೀಯವರ ಮೊಮ್ಮಗಳು ಮತ್ತು ವಿಶಿಷ್ಟವಾದ ‘ಸಂಗಮ’ ಎಂಬ ಕಥಾಸಂಕಲನವನ್ನು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ (1954) ತಂದು ಹೆಣ್ಮಕ್ಕಳ ಮನೋಲೋಕ ಬೇರೆಯದೇ ಇರುತ್ತದೆ ಅಂತ ನಿರೂಪಿಸಿದ ಆಧುನಿಕ ಕಥೆಗಾರ್ತಿ ರಾಜಲಕ್ಷ್ಮೀರಾವ್. ಅವರ ಬಗ್ಗೆ ಇತ್ತೀಚೆಗೆ ಅಲ್ಲಲ್ಲಿ ನವ್ಯದ ವಿಶಿಷ್ಟ ಕಥೆಗಾತಿ ಅಂತ ಗುರುತಿಸಿ ಬರಹಗಳು, ಸಂದರ್ಶನಗಳು ಬಂದಿವೆ.
ಆದರೆ 1957ರ ನಂತರ ಈ ವ್ಯಾವಹಾರಿಕ ಲೋಕದ ಪುಟ ತಿರುಗಿಸಿ ಅವರು ಸನ್ಯಾಸದ ಅಂತರ್ಲೋಕವನ್ನ ಹೊಕ್ಕರು. ಆಧುನಿಕ ಯುವ ಲೇಖಕಿ ರಾಜಲಕ್ಷ್ಮೀ ರಾವ್ ಸನ್ಯಾಸಿನಿ ಮೈತ್ರೇಯಿ ಆಗಿ ಬದಲಾದದ್ದೇ ಒಂದು ಮಹಾಕಾದಂಬರಿಯ ಹಾಗಿದೆ. ತನ್ನ ಅಂತರಂಗದ ಕರೆಗೆ ಓಗೊಟ್ಟು, ‘ನಾನು ಯಾರು, ಈ ಬದುಕಿಗೆ ಏನು ಅರ್ಥ’ ಎಂಬ ಪ್ರಶ್ನೆಯನ್ನ ಬೆಂಬತ್ತಿ ತರುಣಿ ರಾಜಲಕ್ಷ್ಮೀ ಸನ್ಯಾಸದ ಕಡೆಗೆ ಮುಖಮಾಡಿಬಿಟ್ಟರು. ಇವರನ್ನೆ ಬಯಸಿ ಮದುವೆಯಾದ ಪತಿ, ಮತ್ತು ಮದುವೆಯಿಂದಾಗಿ ಜನಿಸಿದ ಮಗು ಇಬ್ಬರನ್ನೂ ಬಿಟ್ಟು ಸಂಸಾರದಿಂದ ಹೊರಗೆ ಕಾಲಿಟ್ಟರು. ಯಾವುದು ತನ್ನ ಮನಸ್ಸಿಗೆ ಒಗ್ಗುವುದೇ ಇಲ್ಲವೋ, ಯಾವುದು ನಿಜವಾಗಿ ತನ್ನ ಗುಣವಲ್ಲವೋ ಅದರಲ್ಲಿ ಅವರಿಗೆ ನಿಲ್ಲಲಾಗಲಿಲ್ಲ. ಆಗಿನ ಕಾಲವನ್ನ ಗಮನಿಸಿದರೆ ಈ ತರಹದ ನಿರ್ಧಾರಗಳು ಅಪರೂಪವಾಗಿದ್ದ ಕಾಲ. ಹೊರ ಊರಿನಲ್ಲಿ ಅವರ ತಂದೆಯವರು ನೌಕರಿಯಲ್ಲಿದ್ದ ಕಾರಣ, ಮನೆಯವರು ಇವರ ನಿರ್ಧಾರದ ಉರಿನೆಳಲನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳಲು ಆಯಿತು. ಮೈಸೂರಿನಲ್ಲಿ ನೆಂಟರಿಷ್ಟರಿಗೆ ಸುಲಭವಾಗಿ ಸಿಗುತಿದ್ದ ಅವರ ದೊಡ್ಡಮ್ಮ (ಶ್ರೀಯವರ ಹಿರಿಮಗಳು) ಈ ನಿರ್ಧಾರದ ಕಿರಿಕಿರಿಗಳನ್ನು ಎದುರಿಸಬೇಕಾಯಿತು. ಆದರೂ ಚಿಕ್ಕವಯಸ್ಸಿನ ಮಗಳು ಮದುವೆಯಿಂದ, ಕುಟುಂಬದಿಂದ ಹೊರಬರುವ ನಿರ್ಧಾರ ಅವರ ತಾಯಿಗೆ ಬಹಳ ನೋವು ಕೊಟ್ಟಿತು. ಜೊತೆಯಲ್ಲಿ ದೈಹಿಕ ಅನಾರೋಗ್ಯ. ಮದುವೆಯಿಂದ ಹೊರಬಂದ ರಾಜಲಕ್ಷ್ಮೀಯವರು ತಮ್ಮ ತಾಯಿಯನ್ನು ತಾವೇ ತಾಯಿಯಾಗಿ ನೋಡಿಕೊಂಡರು. ಆ ತಾಯಿಗೆ ಈ ಜೀವದ ಹಂಬಲವೇ ಬೇರೆ, ಈ ಚೈತನ್ಯದ ಹರಿವೇ ಬೇರೆ ಎಂಬುದು ಅರ್ಥವಾಗಿ ಮಗಳ ನಿರ್ಧಾರವನ್ನ ಮನಸಾರೆ ಒಪ್ಪಿಕೊಂಡರು.
ತನ್ನ ಸುತ್ತಲಿನ ಪರಿಸ್ಥಿತಿಯ ಅರಿವಿದ್ದೂ ತನ್ನ ಹುಡುಕಾಟ ಮತ್ತು ದಾರಿಯ ಕುರಿತು ಫೋಕಸ್ ಆಗಿ ಉಳಿಯುವ ರಾಜಲಕ್ಷ್ಮಿ ನನಗೆ ವಿಶೇಷ ಅನಿಸುತ್ತಾರೆ. ತನ್ನ ಸುತ್ತಲಿನ ಘಟನೆಗಳು - ಮದುವೆ, ತಾಯ್ತನ, ಮದುವೆಯಿಂದ ತಾನು ಹೊರಬಂದಿರುವುದರಿಂದ ತನ್ನ ತಾಯ್ತಂದೆಯರು ಎದುರಿಸಬಹುದಾದ ಸಾಮಾಜಿಕ ತರತಮ, ಇವ್ಯಾವುದೂ ಅವರನ್ನು ತನ್ನ ಧ್ಯೇಯದಿಂದ ವಿಚಲಿತಗೊಳಿಸುವುದಿಲ್ಲ. ಅವರು ಹೊರಟ ದಾರಿಯ, ಹುಡುಕಾಟದ ಪ್ರಾಮಾಣಿಕತೆಯ ಅಂದಾಜು ನಮಗೆ ಆದರೂ ಆಗಬಹುದು, ಆಗೇಬಿಟ್ಟೀತು ಎಂದು ಹೇಳಲಾರೆ ನಾನು. ಅವರ ಒಳಗಿನ ಆಳವು ನಮಗೆ ಮೇಲಿನಿಂದ ಕಲಕಿ ಹುಡುಕಾಡಿದರೆ ಸಿಗುವಂತದ್ದಲ್ಲ. ತಮ್ಮ ತಾಯಿಯ ನಿಧನಾನಂತರ ರಾಜಲಕ್ಷ್ಮೀಯವರ, ಈಗಾಗಲೆ ಅಧ್ಯಾತ್ಮ ಸಾಧನೆಯಲ್ಲಿ ಸಾಕಷ್ಟು ಮುಂದುವರೆದಿದ್ದ ತಮ್ಮ ಸೋದರ ಸಂಬಂಧಿ ಆತ್ಮಾನಂದೇಂದ್ರ ಸರಸ್ವತಿಯವರ ಮಾರ್ಗದರ್ಶನದಲ್ಲಿ ಸನ್ಯಾಸ ಸ್ವೀಕರಿಸಿ ಉತ್ತರಕಾಶಿಗೆ ಹೊರಟುಹೋದರು. ಆಗ ಇಪ್ಪತ್ತೊಂದು ಇಪ್ಪತ್ತೆರಡು ವರ್ಷ ಅವರಿಗೆ. ರಾಜಲಕ್ಷ್ಮೀಯವರು ಮೈತ್ರೇಯಿಯಾಗಿ ಬದಲಾಗುತ್ತ ಹೊರಟರು. ‘ನಿಮ್ಮ ಪ್ರಯತ್ನದಲ್ಲಿ ನೀವೆಷ್ಟು ಸಿನ್ಸಿಯರ್ ಇದೀರ ಅನ್ನುವುದರ ಮೇಲೆ ನಿಮಗೆ ಏನು ಸಿಗುತ್ತದೆ ಅಂತ ನಿರ್ಧಾರವಾಗುತ್ತದೆ’ ಎಂಬುದು ಇವರ ನಸುನಗು ಲೇಪಿತ ಬೀಜವಾಕ್ಯ. ಬಹಳ ಸರಳ. ಅದರ ಗಹನತೆಯನ್ನು ಅರಿಯಲು ಇಡೀ ಜೀವವೆ ಬೇಕು.
ಅವರ ಎಪ್ಪತ್ತು ವರ್ಷಗಳ ಸನ್ಯಾಸದ ದೀರ್ಘ ಪಯಣವನ್ನು ನಾವು ಎಂಟು ಹತ್ತು ಪೇಜುಗಳಲ್ಲಿ ಅಥವಾ ಕೆಲವು ಸಂದರ್ಶನಗಳಲ್ಲಿ ಹಿಡಿದಿಡುವುದು ಕಷ್ಟ. ಹರಿಯುತ್ತಿರುವ ನದಿಯೊಂದರ ಬಳಿಗೆ ಹೋದರೆ ಅದರಲ್ಲಿ ಕಾಲಿಟ್ಟು ಮೈಯೊಡ್ಡಿ ನೆನೆದರೆ ನಮಗೆ ಸಿಕ್ಕುವುದು ಆ ಕ್ಷಣ ಅಲ್ಲಿ ಹರಿಯುತ್ತಿರುವ ನೀರು ಮತ್ತು ಶತಮಾನಗಳಿಂದ ಇರುವ ಹರಿವು. ನಾವು ನಮ್ಮ ಬೊಗಸೆಗೆ ಬಂದ ನೀರನ್ನು ಅಥವಾ ನಮ್ಮ ಮೈಗೆ ಒದ್ದೆಯಾಗಿ ಅಂಟಿದ ನೀರನ್ನು ಮಾತ್ರವೆ ನದಿಯೆಂದು ಭಾವಿಸಲಾಗದು ಅಲ್ಲವೆ? ನಮ್ಮ ನಿಲುಕಿಗೆ ಮೀರಿದ ಹರಿವು, ನೀರು ಮತ್ತು ಆ ಹರಿವು ಸೇರುವ ಸಮುದ್ರವೂ ಕೂಡ ಆ ನದಿಯ ಭಾಗವಾಗಿಯೇ ಇದೆ ಎಂಬುದನ್ನು ನಾವು ನಮ್ರತೆಯಿಂದ ನೆನಪಿಡಬೇಕು ಅಲ್ಲವೆ. ರಾಜಲಕ್ಷ್ಮೀ ಮೈತ್ರೇಯಿ ಕೂಡ ಅಂತಹ ಒಂದು ಮಹಾನದಿ.
ಆಧ್ಯಾತ್ಮಿಕ ಸಾಧನೆಗೆ ತನ್ನ ಸಾಹಿತಿ ಎಂಬ ಅಸ್ತಿತ್ವ ತೊಡಕಾಗುತ್ತದೆ ಎಂದು ಅರಿವಾಗಿ ತಮ್ಮ ಸನ್ಯಾಸದ ಮೊದಲ ವರ್ಷದಲ್ಲಿ ಸಾಹಿತ್ಯದ ಓದು ಬರೆಹ ಎರಡನ್ನೂ ಬಿಟ್ಟುಬಿಡುತ್ತಾರೆ. ಬರೆದ ನೋಟ್ಸುಗಳನ್ನು, ಪುಟಗಳನ್ನು ಹರಿದು ಭಾಗೀರಥಿಗೆ ಅರ್ಪಿಸುತ್ತಾರೆ. ಅವರು ಇತ್ತೀಚೆಗೆ ಎರಡ್ಮೂರು ವರುಷಗಳಿಂದ ಸ್ವಲ್ಪ ಸಾಹಿತ್ಯವನ್ನು ಓದಲು ಶುರು ಮಾಡಿದ್ದಾರೆ. 1957 ರಿಂದ 2022ರವರೆಗಿನ ವರ್ಷಗಳ ನಡುವೆ ಅವರು ಕಥೆ, ಕಾದಂಬರಿ, ಕವಿತೆಗಳನ್ನು ಹಿಡಿದು ಓದಿಯೇ ಇಲ್ಲ.
ಒಬ್ಬ ಒಳ್ಳೆಯ ಲೇಖಕಿಯಾಗಿದ್ದವಳು ತನ್ನ ಜೀವಕ್ಕೆ ಪ್ರಿಯವಾದ ಸಾಹಿತ್ಯವನ್ನ ತೊರೆದು ತನ್ನೊಳಸಾಧನೆಗೆ ತೊಡಗಿದ್ದು, ಕೌಟುಂಬಿಕ ಚೌಕಟ್ಟುಗಳಾಚೆ ಸದ್ದುಗದ್ದಲವಿಲ್ಲದೆ ನಡೆದುಹೋಗಿದ್ದು, ಪ್ರಖರ ವೈಚಾರಿಕತೆಯ ನೆಲೆಗಟ್ಟಿನ ವ್ಯಕ್ತಿಯಾದ ಇವರು ತಾನು ಹಿಡಿದ ದಾರಿಯಲ್ಲಿನ ಒಳಸುಳಿಗಳನ್ನು ಗುರುತಿಸಿ ಅದಕ್ಕೆ ಸಿಗದ ಹಾಗೆ ತನ್ನ ದಾರಿಯಲ್ಲೆ ತಾನು ಸಾಗಿದ್ದು, ಆಳದಲ್ಲಿ ಮಗ್ನಳಾಗಿಯೂ ಹೊರಪ್ರಪಂಚದ ಭ್ರಮೆಗಳನ್ನು ಎಚ್ಚರದಿಂದ ಗಮನಿಸುವುದು, ಪ್ರಪಂಚದ ಆಗುಹೋಗುಗಳನ್ನು ಗಮನಿಸುತ್ತಲೇ ತನ್ನೊಳಕ್ಕೆ ತಾನು ಜಾರುವುದು ಇವೆಲ್ಲವೂ ನಮಗೆ ಸುಲಭವಾಗಿ ಕಾಣಸಿಗದ ಅಪರೂಪದ ವ್ಯಕ್ತಿತ್ವ. ಪತ್ನೀ ವಿಯೋಗದಿಂದ ಬೇಸತ್ತಿದ್ದ ಅವರ ತಂದೆಯವರೂ ಸನ್ಯಾಸ ಸ್ವೀಕರಿಸಲು ಬಯಸಿದರಂತೆ. ಆದರೆ ಸನ್ಯಾಸದ ಮುಖ್ಯ ನಿಯಮವಾದ ಅಪರಿಗ್ರಹ (ಅರ್ಥಾತ್ ಬಡತನ - ಕೈಯಲ್ಲಿ ಏನೂ ಇಲ್ಲದೆ ಇರುವುದು ಅಥವಾ ಸಿಕ್ಕಿದ್ದನ್ನ/ಸಿಕ್ಕರೆ ಮಾತ್ರ ತಿನ್ನುವುದು) ಪಾಲನೆ ಮತ್ತು ಇವರು ಇದ್ದ ಉತ್ತರಕಾಶಿಯ ಮೂಳೆ ನಡುಗಿಸುವ ಚಳಿ ಇವುಗಳನ್ನ ನಡೆಸಲಾಗದೆಂದು ಅರಿತು ಅವರು ಮನೆಯಲ್ಲೆ ಉಳಿದುಬಿಟ್ಟರಂತೆ. ಇದು ತಾನು ಹೇಗೆಲ್ಲ ಇದ್ದೆ ಎನ್ನುವುದನ್ನು ರಾಜಲಕ್ಷ್ಮಿಯವರು ಸೂಕ್ಷ್ಮವಾಗಿ ತಿಳಿಸುವ ರೀತಿ. ಈಗ್ಗೆ ಇಪ್ಪತ್ತೆಂಟು ವರ್ಷಗಳ ಹಿಂದೆ ಅವರ ಗುರುಗಳು ಹೆಸರಿಲ್ಲದ, ಒಂದು ಸಂಸ್ಥೆಯಲ್ಲದ, ಆದರೆ ಅಧ್ಯಾತ್ಮ ಸಾಧನೆಗೆ ಪೂರಕವಾದ ಆಶ್ರಮವನ್ನು ಮೈಸೂರಿನಿಂದ ಅನತಿದೂರದ ಹಳ್ಳಿಯಲ್ಲಿ ಮಾಡಿದರು. ಆಗ ಅವರ ಜೊತೆಗೆ ಬಂದ ರಾಜಲಕ್ಷ್ಮೀ ಈಗ ಆ ಹದಿನೆಂಟು ವರುಷದ ವೈಚಾರಿಕತೆ ಚಿಮ್ಮುವ, ಆಧುನಿಕ ಬರವಣಿಗೆಯ ಸಾಹಿತಿಯಾಗಿ ಉಳಿದಿರುವುದಿಲ್ಲ. ಸನ್ಯಾಸದ ಹಾದಿಯಲ್ಲಿ ತನ್ನ ಲಕ್ಷ್ಯವನ್ನು ಸಾಧಿಸಿದ, ಒಳಗಿನ ಹುಡುಕಾಟದ ಕೊನೆಮುಟ್ಟಿದ, ತನ್ನೊಳಗಿನ ತಾನು ಎಂದರೆ ತನ್ನಲ್ಲೂ ಮತ್ತು ಎಲ್ಲರಲ್ಲೂ ಇರುವ ‘ಬರಿ ಅರಿವು’ (ಕೇವಲ ಚೈತನ್ಯ) ಎಂಬುದನ್ನು ಅನುಭವಿಸಿರುವ, ಆನಂದ ಮತ್ತು ಪ್ರೀತಿ ತುಂಬಿ ತುಳುಕುವ ನಿರ್ಗುಣ ಮೈತ್ರೇಯೀ ಆಗಿದ್ದಾರೆ. ತಮ್ಮ ಗುರುಗಳ ನಿಧನಾನಂತರ ಇನ್ನಷ್ಟು ಆಳದಲ್ಲಿ ಹುದುಗಿ, ಲೌಕಿಕವನ್ನು ನಡೆಸಲೇಬೇಕಾದ ಕೆಲವು ಸಮಯದಲ್ಲಿ ಮಾತ್ರ ಮೇಲೆ ತೇಲುವ ರಾಜಹಂಸೆಯಾಗಿದ್ದಾರೆ. ‘ನೇಹ ನಾನಾಸ್ತಿ ಕಿಂಚನ’ (ನಮ್ಮ ಕಣ್ಣಿಗೆ ಕಾಣಿಸುವ) ವೈವಿಧ್ಯತೆಯು ನಿಜವಾಗಿಯೂ ಒಂದೆ ಎಂದು ನಸುನಗುತ್ತಾರೆ. ಈ ವಿಶಿಷ್ಟ ಚೈತನ್ಯದ ಮೊದಮೊದಲ ವರುಷಗಳ ಭಾವಸ್ಫೋಟಗಳ ಅಭಿವ್ಯಕ್ತಿಯಾಗಿ ಅವರ ಸಂಗಮ ಕಥೆಗಳು ನಮ್ಮನ್ನು ಹಿಡಿದಿಡುತ್ತವೆ. ಇಂಗ್ಲಿಷ್, ಮರಾಠಿ, ಮತ್ತು ಸಂಸ್ಕೃತ ಭಾಷೆಗಳ ಅಪಾರ ಓದು, ಹಿಡಿತ ಇವರ ಸಾಹಿತ್ಯವನ್ನು ರೂಪಿಸಿದ್ದವು. ಬರವಣಿಗೆಯ ಮೂಲಕ ತನ್ನ ಒಳಗನ್ನು ಶೋಧಿಸುವ ಹುಡುಕಾಟದ ಮೊದಲ ಮೆಟ್ಟಿಲುಗಳು ಅವು. ನಂತರ ಅವರು ಹಿಡಿದ ಸನ್ಯಾಸದ ಹಾದಿಯಲ್ಲಿ ಅವರೊಳಗಿನ ದಾರಿ ಸ್ಪಷ್ಟವಾಗುತ್ತ ಹೋದಂತೆ, ಬರಿ ಅರಿವನ್ನು ಅನುಭವಿಸುತ್ತ ಹೋದಂತೆ ಮಾತು ಮೂಕವಾಗುವ ಪರಿ ಅವರಿಗೆ ಜೀವದಾಳದಲ್ಲಿ ಅರಿವಾಗಿದೆ. ‘ಈಗ ಬರೆಯಿರಿ’ ಎಂದರೆ ಪುಟ್ಟ ನಗು ಬೀರುತ್ತ, ‘ಇಂಪಲ್ಸ್ ಇಲ್ಲ ಮಗೂ, ಬರೆಯಕ್ಕೆ’ ಎನ್ನುತ್ತಾರೆ ಈ ನೋಡುವ ಹಕ್ಕಿ(ದ್ವಾಸುಪರ್ಣಾ).
ಆಶ್ರಮದ ಸಹಜ ಸೊಗದ ಅಂಗಳದಲ್ಲಿ ರೇಡಿಯೋ ಕೇಳುತ್ತಾರೆ. ಆಗೀಗ ಇತ್ತೀಚಿನ ಹೊಸ ಪುಸ್ತಕಗಳನ್ನು ಓದುತ್ತಾರೆ. ದಿನದ ಕೆಲಸಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಮುಗಿಸಿ (ಊಟ ಕೂಡ ಒಂದೆ ಹೊತ್ತು), ತನ್ನ ಕೆಲಸವನ್ನ ತಾನೆ ಮಾಡಿಕೊಂಡು, ದಿನದ ಬಹುಭಾಗ ತನ್ನೊಳಗೆ ತಾನು ಮುಳುಗಿರುವ ಈ ಮೈತ್ರೇಯಿಯನ್ನ ನೋಡಿದರೆ ಪುಟ್ಟ ಮಗು ಮತ್ತು ಬಹಳ ಮಮತೆಯ ತಾಯಿ ಇಬ್ಬರನ್ನೂ ಒಟ್ಟಿಗೇ ನೋಡಿದ ಹಾಗಿರುತ್ತದೆ. ಅವರ ನಗು ತುಟಿಯಂಚಿನದಲ್ಲ. ಎದೆಯಾಳದ ಪರಮಾತ್ಮನ ನಗು. ಯಾರೆ ಬಂದರೂ ಅವರಿಗೆ ಅಕಾರಣ ಪ್ರೀತಿ ಮತ್ತು ತನ್ನೊಳಗೆ ತುಂಬಿ ತುಳುಕುವ ಆನಂದವನ್ನು ಹಂಚುವ ನಿರ್ವ್ಯಾಜ ಮಮತೆಯ ಸವಿಯನ್ನು ನಾನು ಮಾತಿನಲ್ಲಿ ಹಿಡಿದಿಡಲಾರೆ. ‘ಘನಕ್ಕೆ ಘನ ತಾನೆ ನೋಡಾ’ ಎಂಬ ಅಕ್ಕನ ವಚನದ ಸಾಲಿನ ಮೂರ್ತರೂಪದಂತೆ ಇದ್ದಾರೆ ಎಂದರೆ ಸ್ವಲ್ಪ ಸರಿಯಾಗಬಹುದು.
ಇತ್ತೀಚೆಗೆ ಕಥೆಗಾರ ಅಬ್ದುಲ್ ರಶೀದರು ಇವರ ಕುರಿತು ವಿಡಿಯೋ ಸಂದರ್ಶನ ಮಾಡಿ ಶೇರ್ ಮಾಡಿದ್ದಾರೆ. ಲೇಖಕ ಚಂದನ್ ಗೌಡರು ಇವರ ಸಂದರ್ಶನ ಮಾಡಿ ಯೂಟ್ಯೂಬಿನಲ್ಲಿ ಹಾಕಿದ್ದಾರೆ. ಎಪ್ಪತ್ತು ವರ್ಷಗಳ ಹಿಂದಿನ ಇವರ ಕಥಾ ಸಂಕಲನ ‘ಸಂಗಮ’ವನ್ನು ಇಂಗ್ಲಿಷ್ ಕಥೆಗಳ ಸಂಕಲನ ಪ್ಯಾಸ್ಟೋರಲ್ (Pastoral) ಜೊತೆಗೆ ಸೇರಿಸಿ ಸಂಕಥನ ಪ್ರಕಾಶನದಿಂದ ಪ್ರಕಟಿಸಲಾಗಿದೆ. ಈ ಕಥೆಗಳೆಲ್ಲ ಅಂದಿನ ರಾಜಲಕ್ಷ್ಮಿಯ ಕುರುಹುಗಳು. ‘ಇವೆಲ್ಲದನ್ನು ದಾಟಿದ ಈಗಿನ ಮನಸ್ಥಿತಿಯೇ ಬೇರೆ ಇದೆ’ ಎನ್ನುತ್ತಾರೆ ನಮ್ಮ ಮೈತ್ರೇಯಿ.
ಆ ಇಪ್ಪತ್ತು ವರ್ಷಗಳ ಪ್ರಖರ ವಿಚಾರದ ಯುವತಿಯ ಮೂಲಕವೇ ಬೇರುಬಿಟ್ಟು ವಿಶಾಲವಾಗಿ ಹರಡಿರುವ ಈ ಮಾಗಿದ ಅಶ್ವಥ ಮರದಂತಹ ಜ್ಞಾನವೃದ್ಧೆಯಾದ ತೊಂಬತ್ತರ ಹರೆಯದ ಚೈತನ್ಯಕ್ಕೆ ಪ್ರೀತಿ ತುಂಬಿದ ನಮನಗಳು.