ನೀವು ಅಮೆರಿಕದಲ್ಲಿ ಬದುಕುತ್ತಿದ್ದೀರಿ, ಆದರೆ ನಿಮ್ಮ ಬರವಣಿಗೆಯೊಳಗೆ ಕರ್ನಾಟಕದ ಮಣ್ಣು, ಜನ, ಭಾಷೆ ಪದೇಪದೇ ಬರುತ್ತದೆ. ದೂರ ಹೋದ ಮೇಲೆ ನಮ್ಮ ನೆಲ ಹೆಚ್ಚು ಅರ್ಥವಾಗುತ್ತದೆಯೇ? ನನ್ನ ಬರವಣಿಗೆಯಲ್ಲಿ ಕರ್ನಾಟಕದ ಮಣ್ಣು, ಜನ, ಭಾಷೆ ಪದೇ ಪದೇ ಬರುತ್ತದಾ?

- ಜೋಗಿ

ನೀವು ಅಮೆರಿಕದಲ್ಲಿ ಬದುಕುತ್ತಿದ್ದೀರಿ, ಆದರೆ ನಿಮ್ಮ ಬರವಣಿಗೆಯೊಳಗೆ ಕರ್ನಾಟಕದ ಮಣ್ಣು, ಜನ, ಭಾಷೆ ಪದೇಪದೇ ಬರುತ್ತದೆ. ದೂರ ಹೋದ ಮೇಲೆ ನಮ್ಮ ನೆಲ ಹೆಚ್ಚು ಅರ್ಥವಾಗುತ್ತದೆಯೇ?

ನನ್ನ ಬರವಣಿಗೆಯಲ್ಲಿ ಕರ್ನಾಟಕದ ಮಣ್ಣು, ಜನ, ಭಾಷೆ ಪದೇ ಪದೇ ಬರುತ್ತದಾ? ಬಂದರೂ ನಾಸ್ಟಾಲ್ಜಿಕ್ ಆಗಿ ಬರುತ್ತದಾ? ಇವನ್ನು ನನ್ನ ಓದುಗರೇ ಹೇಳಬೇಕು. ನನ್ನ ಬರವಣಿಗೆಯಲ್ಲಿ ಮುಖ್ಯವಾಗಿ ವಲಸೆಯ ಬಣ್ಣಗಳನ್ನು- ‘ಸ್ಪೆಕ್ಟ್ರಮ್ ’ ಎಂದು ಏನು ಕರೆಯುತ್ತಾರೋ ಅದನ್ನು ಆದಷ್ಟು ಹಿಡಿದಿಡಿಯಲು ಪ್ರಯತ್ನ ಮಾಡಿದ್ದೇನೆ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎನ್ನುವ ಕನ್ನಡ ಹಾಡು ವಲಸೆಯ ಒಂದು ರೂಪಕವಾಗಿ ನನ್ನನ್ನು ಯಾವತ್ತೂ ಕಾಡುತ್ತದೆ. ‘ಬಿಳಿ’ ಎನ್ನುವುದು ಪಶ್ಚಿಮ ದೇಶದ ಕಡೆಗೆ ಹೋಗುವ ವಲಸಿಗರಿಗೆ ಸಂಪತ್ತು, ಸಿರಿ, ಸುಖ ಇತರೇ ಧನಾತ್ಮಕ ಲೌಕಿಕಕ್ಕೆ ಸಮಾನಾರ್ಥಕ. ಹಾಗಾಗಿ ಜಗತ್ತಿನಲ್ಲಿ ಯಾರು ಬೇರೆ ದೇಶದಿಂದ ಅಮೆರಿಕೆಗೆ ವಲಸೆ ಹೋದರೂ ಈ ’ಬಿಳಿ’ತನದ ಕಡೆಗೇ ಹೋಗುವುದು. ಕಂದು, ಕಪ್ಪು, ಹಳದಿ, ಕೆಂಪು- ಮೈಬಣ್ಣ ಯಾವುದಿದ್ದರೂ ಎಲ್ಲ ಬಿಳಿಯಬಣ್ಣದಲ್ಲಿ ಐಕ್ಯರಾಗಿ ಹೋಗುವುದೇ ಪಶ್ಚಿಮದ ವಲಸೆಯ ಗುಣ.

ಈ ‘ಐಕ್ಯ’ ಕ್ರಿಯೆಯಲ್ಲಿ ನಾವು ಕಳಕೊಳ್ಳುವುದು, ಗಳಿಸಿಕೊಳ್ಳುವುದು ಎರಡನ್ನೂ ಸಮಚಿತ್ತದಿಂದ ನೋಡುವಾಗ ಕರ್ನಾಟಕವೆಂಬ ಕಳಕೊಳ್ಳುತ್ತಿರುವ ನನ್ನ ಮಣ್ಣು, ಜನ ಎಲ್ಲವನ್ನೂ ಇದುವರೆಗೆ ನೆನಪಾಗಿ, ನೆಲೆಯಾಗಿ ಗ್ರಹಿಸಿದ್ದೆಲ್ಲವೂ ನನ್ನ ‘ಕೋರ್’ ನನ್ನ ಆತ್ಮ ಎಂದು ಅರ್ಥವಾಗುತ್ತಾ ಹೋಗಿದೆ. ಇದು ಭಾವನಾತ್ಮಕ ಮಾತಲ್ಲ. ಕರ್ನಾಟಕ, ಕನ್ನಡವನ್ನು ಕಳಕೊಳ್ಳುತ್ತಾ, ಅಮೆರಿಕೆಯಲ್ಲಿ ಪಡಕೊಂಡದ್ದನ್ನು ಕಾಪಿಟ್ಟುಕೊಳ್ಳುತ್ತಾ ಕನ್ನಡವನ್ನು ಮತ್ತು ಕನ್ನಡದ ಕಣ್ಣುಗಳಲ್ಲಿ ಅಮೆರಿಕೆಯನ್ನು ಇಡಿಯಾಗಿ ಗ್ರಹಿಸುವ ಕ್ರಮ.

ವಿದೇಶದಲ್ಲಿ ಬದುಕುವ ಕನ್ನಡಿಗನಿಗೆ ‘ಕನ್ನಡ’ ಎನ್ನುವುದು ಭಾಷೆಯ ಗುರುತೋ, ನೆನಪಿನ ಗುರುತೋ, ಅಥವಾ ಒಂದು ರೀತಿಯ nostalgiaವೋ?

ಯಾವ ಕನ್ನಡಿಗನಿಗೂ ‘ಕನ್ನಡ’ ಎನ್ನುವುದು ಬರೀ ಭಾಷೆಯ ಗುರುತಾಗಿ ಮಾತ್ರ ಉಳಿಯುವುದಿಲ್ಲ. ನುಡಿ, ನಡಾವಳಿಯಾಗಿರುತ್ತದೆ. ಬದುಕುವ ಶೈಲಿಯಾಗಿರುತ್ತದೆ. ನೀವು ಹೇಳುವ ನೆನಪು, ಖಂಡಿತಾ ಹೌದು. ಭಾಷೆಯ ಕೆಲವು ಬಳಕೆಯಂಶಗಳು ನಾಸ್ಟಾಲ್ಜಿಯಾ ಆಗಬಹುದೇನೋ. ಆದರೆ ವಲಸೆಯ ಮೊದಲ ಪೀಳಿಗೆಗೆ ಇಡೀ ಕನ್ನಡ ಭಾಷೆ ನಾಸ್ಟಾಲ್ಜಿಯಾ ಆಗುವುದಿಲ್ಲ. ಏಕೆಂದರೆ, ಇಲ್ಲಿ ಕನ್ನಡ ಮಾತಾಡುವವರು ಬೆಂಗಳೂರಿನ ಎಷ್ಟೋ ಬಡಾವಣೆಗಳಲ್ಲಿ ಮಾತಾಡುವವರಿಗಿಂತ ಪದಬಳಕೆಯಲ್ಲಿ ‘ಶುದ್ಧ’ ರಾಗಿದ್ದಾರೆ, ‘ಹಳತನ’ ಇನ್ನೂ ಉಳಿದಿದೆ. ಬಳಕೆಯಲ್ಲಿರುವ ಭಾಷೆ ನಾಸ್ಟಾಲ್ಜಿಕ್ ಹೇಗಾಗುತ್ತದೆ? ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಇದ್ದಾಗ ‘ಕನ್ನಡಿಗ’, ‘ಕನ್ನಡತಿ’ ಎಂದು ಗುರುತಿಸಿಕೊಳ್ಳದವರೆಷ್ಟೋ ಜನ ಹೊರಗಿದ್ದಾಗ ವಲಸೆ ಬಂದು ಎಷ್ಟೋ ವರ್ಷಗಳ ನಂತರವೂ ಕನ್ನಡದಿಂದ ಗುರುತಿಸಿಕೊಳ್ಳುತ್ತಾರೆ. ಆ ಮಟ್ಟಿಗೆ ಅದು ಒಂದು ಗುರುತು.

ಬರವಣಿಗೆಯಲ್ಲಿ ವಲಸೆ ಬದುಕು

ನಿಮ್ಮ ಬರವಣಿಗೆಯಲ್ಲಿ ವಲಸೆ ಬದುಕು ಒಂದು ಪ್ರಮುಖ ಅನುಭವ. ವಲಸೆ ಹೋದ ಮನುಷ್ಯನ ದೊಡ್ಡ ಸಮಸ್ಯೆ ಹೊಸ ದೇಶಕ್ಕೆ ಹೊಂದಿಕೊಳ್ಳುವುದೋ, ತನ್ನ ಹಳೆಯತನವನ್ನು ಕಳೆದುಕೊಳ್ಳುವುದೋ?

ಒಂದು ದೇಶವನ್ನು ಬಿಟ್ಟು ಇನ್ನೊಂದು ದೇಶಕ್ಕೆ ಆ ದೇಶದಲ್ಲಿಯೇ ಇರುತ್ತೇನೆ ಎಂದು ಹೋದಾಗ ಹೊಸ ದೇಶಕ್ಕೆ ಹೊಂದಿಕೊಳ್ಳಲೇಬೇಕು. ಇಲ್ಲದಿದ್ದಲ್ಲಿ ಹೋಗಲೇಬಾರದು. ವಲಸೆ ನಮ್ಮ ಆಯ್ಕೆ. ನಾವು ಬೇರೆ ದೇಶದಲ್ಲಿ ಇರುತ್ತೇವೆ ಎಂದು ನಿರ್ಧಾರ ಮಾಡಿ ಹೋಗುತ್ತಿದ್ದೇವೆ. ಆ ದೇಶದ ನಿಯಮಗಳಿಗೆ, ಸಂಸ್ಕೃತಿಗೆ ಹೊಂದಿಕೊಳ್ಳಲೇಬೇಕು. ಇದನ್ನರಿಯದೇ ನಾವು ಮೆಟ್ಟುವ ನೆಲವನ್ನೇ ಕರ್ನಾಟಕ ಮಾಡುವ ಹಂಬಲಗಳಿಂದಲೇ ಈಗ ‘ಮೇಕ್ ಅಮೆರಿಕಾ ಗ್ರೇಟ್ ಅಗೈನ್’ ಎನ್ನುವ ನೆರೇಟಿವ್‍ಗಳು ಹುಟ್ಟಿಕೊಳ್ಳುತ್ತಿರುವುದು.

ಹೊಸದಕ್ಕೆ ಹೊಂದಿಕೊಳ್ಳುವುದೂ ಕಷ್ಟ, ಹಳೆಯದನ್ನು ಬಿಡುವುದೂ ಕಷ್ಟ. ಈ ರೀತಿಯ ಹೊಂದಾಣಿಕೆಗೆ ಪೀಳಿಗೆಗಳೇ ಬೇಕಾಗುತ್ತದೆ.

ಅಮೆರಿಕೆಗೆ ಬೇರೆಲ್ಲ ದೇಶಕ್ಕಿಲ್ಲದ ಒಂದು ವಿಶೇಷ ಗುಣವಿದೆ. ಇದು ವಲಸಿಗರಿಂದಲೇ ಕಟ್ಟಿದ ದೇಶ. ಹಾಗಾಗಿ ಇದು ನನ್ನದು ಎಂದು ಹೇಳುವ ಪಕ್ಕಾ ಅಮೆರಿಕನ್ನನಿಗೂ ಆತ ಹೊರಗಿನವ ಎಂಬ ಪ್ರಜ್ಞೆ ಇದ್ದೇ ಇರುತ್ತದೆ. ಹಾಗಾಗಿ ಈ ದೇಶದಲ್ಲಿ ಈ ಕೊಡ ಕೊಳ್ಳುವ ಕ್ರಿಯೆಗೆ ಮತ್ತು ವಲಸೆಯ ನಿಯಮಗಳಿಗೆ ಬೇರೆಲ್ಲ ದೇಶಗಳಿಗಿಂತ ಕೊಂಚ ಉದಾರವಾದಿ ಧೋರಣೆ ಇದೆ (ಈ ನಡುವೆ ಆಗುವ ವಿದ್ಯಮಾನಗಳನ್ನು ಹೊರತುಪಡಿಸಿ.)

ಅಮೆರಿಕವನ್ನು ಹೊರಗಿನಿಂದ ನೋಡುವ ಕನ್ನಡಿಗನ ಕಲ್ಪನೆಗೂ, ಅಲ್ಲಿ ಹಲವು ವರ್ಷ ಬದುಕಿದ ಮೇಲೆ ಕಾಣುವ ಅಮೆರಿಕಕ್ಕೂ ಎಷ್ಟು ವ್ಯತ್ಯಾಸ ಇದೆ?

ಬಹಳ ವ್ಯತ್ಯಾಸವಿದೆ. ಅಮೆರಿಕೆಯಷ್ಟೇ ಅಲ್ಲ. ಯಾವುದೇ ದೇಶವನ್ನು, ಹೊರಗಿನಿಂದ ನೋಡುವವನಿಗೆ ಎಷ್ಟು ಬಾರಿ ನೋಡಿದರೂ ಬರೇ ಮೇಲ್ಪದರ ಮಾತ್ರ ಕಾಣುತ್ತಿರುತ್ತದೆ, ಭೂಮಿಯಿಂದ ಚಂದ್ರನನ್ನು ನೋಡಿದ ಹಾಗೆ. ಹತ್ತಿರ ಹೋದಮೇಲೇ ಉಬ್ಬು,ತಗ್ಗು, ಹುಳುಕು,ಬಳುಕುಗಳು ಎದ್ದು ಕಾಣುವುದು. ಮನಶಾಸ್ತ್ರದಲ್ಲಿ The Hawthorne Effect ಎಂಬ ಒಂದು ಕಾನ್ಸೆಪ್ಟ್ ಇದೆ. ಒಂದು ವಸ್ತುವನ್ನು ಎಲ್ಲರೂ ನೋಡುತ್ತಿದ್ದರೆ ಆ ವಸ್ತು ತನ್ನ ತೋರ್ಪಡಿಕೆಯನ್ನೂ ಜಾಗ್ರತವಾಗಿ ಬದಲಾಯಿಸಿಕೊಳ್ಳುತ್ತದೆ. ಏಕೆಂದರೆ ಅಮೆರಿಕಾ ಬರೀ ಒಂದು ಭೌಗೋಳಿಕ ಪ್ರದೇಶವಲ್ಲ. ವೇಗವಾಗಿ ಬದಲಾಗುವ ಸಂಸ್ಕೃತಿಯ ಮುಂಚೂಣಿಯಲ್ಲಿ ನಿಂತಿರುವ ಜನಗಳಿಂದ ತುಂಬಿದ ದೇಶ. ಜಗತ್ತಿಗೆ ಹೇಗೆ ಕಾಣಿಸಿಕೊಳ್ಳಬೇಕು ಎಂಬ ಪ್ರಜ್ಞೆಯನ್ನು ಯಾವತ್ತೂ ಜಾಗೃತವಾಗಿಟ್ಟುಕೊಂಡೇ ಇರುತ್ತದೆ. ಈ ಬದಲಾವಣೆಯ ಸೂಕ್ಷ್ಮಗಳನ್ನು ಹೊರಗಿನಿಂದ ನೋಡಿ ಗಿಟ್ಟಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ.

ಕನ್ನಡ ಸಾಹಿತ್ಯದಲ್ಲಿ ಅಮೆರಿಕದಲ್ಲಿರುವ ಕನ್ನಡಿಗರ ಬದುಕು ಸಾಕಷ್ಟು ಬಂದಿದೆಯೇ? ಬಂದಿದ್ದರೆ ಅದು ನಿಜವಾದ ಬದುಕೋ, ಇಲ್ಲವೇ ಕನ್ನಡಿಗನ ಕಲ್ಪನೆಯ ಅಮೆರಿಕವೋ?

ಇಲ್ಲಿ ಕೊಂಚ ಗೆರೆ ಕುಯ್ದು, ಕೂದಲು ಸೀಳಿ ನೋಡಬೇಕು. ಲಿಖಿತ ಸಾಹಿತ್ಯವೋ, ಮೌಖಿಕ ಸಾಹಿತ್ಯವೋ ವಿಡಿಯೋಗಳು, ರೀಲುಗಳು, ವ್ಲಾಗಿಂಗ್ ಇತ್ಯಾದಿಗಳೆಲ್ಲ ಮೌಖಿಕ ಸಾಹಿತ್ಯ ಎಂದೇ ನನ್ನ ಭಾವನೆ. ಬರವಣಿಗೆ ಬರುವ ಮೊದಲಿದ್ದ ಮೌಖಿಕ ಸಾಹಿತ್ಯಕ್ಕೆ ರೆಕಾರ್ಡಿಂಗ್ ಇರಲಿಲ್ಲ ಎನ್ನುವುದು ಬಿಟ್ಟರೆ ಈಗಿನ ವ್ಲಾಗಿಂಗ್ ಇತ್ಯಾದಿಗಳಿಗೂ ನಮ್ಮ ಜನಪದ ಸಾಹಿತ್ಯಕ್ಕೂ ಅಷ್ಟೇನೂ ವ್ಯತ್ಯಾಸವಿಲ್ಲ)ಸಾಹಿತ್ಯ ಎಂದರೆ ಲಿಖಿತ ಸಾಹಿತ್ಯ ಎಂದು ಮಾತ್ರವಾದಲ್ಲಿ ಫಿಕ್ಷನ್, ನಾನ್ ಫಿಕ್ಷನ್ ಇತರೇ ವಿಭಾಗಿಸಿದಲ್ಲಿ ಅಪ್ಪಟ ಫಿಕ್ಷನ್ ಎಂದು ವಿಭಾಗಿಸುವ ಕತೆ, ಕಾದಂಬರಿಗಳನ್ನು ತೆಗೆದುಕೊಂಡರೆ ಆ ಪ್ರಕಾರದ ಕೃಷಿಯೇ ಒಟ್ಟೂ ಸಾಹಿತ್ಯದ ಲೆಕ್ಕದಲ್ಲಿ ತೀರಾ ಕಮ್ಮಿಯೇ.

ಈ ಫಿಕ್ಷನ್ ಎಂಬ ಪ್ರಕಾರದಲ್ಲಿ ಕಾಣುವುದು ಕತೆ, ಕಾದಂಬರಿಕಾರರ ಕಲ್ಪನೆಯ ಅಮೆರಿಕೆಯೇ. ಅದರಲ್ಲಿ ಇರುವ ವಾಸ್ತವ, ಅವಾಸ್ತವಗಳು ಸಾಹಿತಿಗೆ ದಕ್ಕಿದ್ದು, ಕಟ್ಟಿದ್ದು.

ಮೌಖಿಕ ಸಾಹಿತ್ಯ ಎಂಬ ಪ್ರಕಾರದಲ್ಲಿ ನೀವು ನೋಡಿದಲ್ಲಿ ಅಮೆರಿಕೆಯ ಕನ್ನಡಿಗರ ಬದುಕು ನಿಮಗೆ ಸಾಕಷ್ಟು ಕಾಣುತ್ತದೆ. ಪ್ಯೂರಿಸ್ಟ್‌ಗಳಿಗೆ ಇವೆಲ್ಲ ಎಂಥ ಸಾಹಿತ್ಯ ಎಂದನಿಸಬಹುದು. ಆದರೆ ಎಲ್ಲರಿಗೂ ಹಿತವೆನಿಸುವುದು ಸಾಹಿತ್ಯವಾದಲ್ಲಿ ಈ ಘಟ್ಟದಲ್ಲಿ ಇದೇ ಎಲ್ಲರಿಗೂ ಹಿತವಾಗಿರುವುದು.

ಮುಂದೆ ಕ್ಯಾಮೆರಾ ಇಟ್ಟುಕೊಂಡು ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿ, ವಾರಾಂತ್ಯದ ಪಾರ್ಟಿ, ನೃತ್ಯ, ರಜೆ, ಪ್ರವಾಸಗಳನ್ನು ನೋಡಿ ದಕ್ಕಿಸಿಕೊಂಡ ಅಮೆರಿಕಾ ಕನ್ನಡಿಗನ ಕಲ್ಪನೆಯ ಅಮೆರಿಕೆಯೇ? ತೋರಿಸುವ ಕನ್ನಡಿಗನ ಚಾಣಕ್ಷತನ, ನೋಡುವ ಕನ್ನಡಿಗನ ಕಲ್ಪನೆಗೆ ಬಿಟ್ಟಿದ್ದು.

ನೀವು ವೈದ್ಯ ವೃತ್ತಿಯನ್ನೂ ಮಾಡಿದ್ದೀರಿ, ಬರವಣಿಗೆಯನ್ನೂ ಮಾಡಿದ್ದೀರಿ. ಮನುಷ್ಯನ ದೇಹವನ್ನು ನೋಡುವ ವೈದ್ಯ ಮತ್ತು ಮನುಷ್ಯನ ಮನಸ್ಸನ್ನು ನೋಡುವ ಲೇಖಕ -ಇವರಿಬ್ಬರಲ್ಲಿ ಯಾರು ಹೆಚ್ಚು ಕ್ರೂರವಾದ ಸತ್ಯಗಳನ್ನು ನೋಡುತ್ತಾರೆ?

ವೈದ್ಯನಾಗಿ ನೀವು ಮನುಷ್ಯನ ದೇಹದ ಒಳಗಿನ ನೋವನ್ನು ನೋಡುತ್ತೀರಿ. ಲೇಖಕನಾಗಿ ಮನುಷ್ಯನ ಬದುಕಿನ ಒಳಗಿನ ನೋವನ್ನು ನೋಡುತ್ತೀರಿ. ಈ ಎರಡು ಅನುಭವಗಳು ನಿಮ್ಮ ಬರವಣಿಗೆಯನ್ನು ಹೇಗೆ ಬದಲಿಸಿವೆ?

ಎರಡೂ ಪ್ರಶ್ನೆಗಳಿಗೆ ಒಟ್ಟಿಗೆ ಉತ್ತರಿಸುವೆ. ಬರೇ ನೋವೊಂದನ್ನಲ್ಲ. ವೈದ್ಯಕೀಯದಲ್ಲಿ ‘The Science of Medicine” ಮತ್ತು ‘The art of Medicine’ ಎಂಬ ಎರಡು ಪರಿಭಾಷೆಯನ್ನು ಬಳಸುತ್ತೇವೆ. ಮೊದಲನೆಯದು ವೈದ್ಯ ವಿಜ್ಞಾನವನ್ನು ಕುರಿತಾಗಿ ಹೇಳಿದರೆ, ಎರಡನೆಯದು ವೈದ್ಯ ಒಬ್ಬ ಮನುಷ್ಯನಾಗಿ ರೋಗಿಯ ಕಾಯಿಲೆಯನ್ನು ಕಾಯಿಲೇತರ ದೃಷ್ಟಿಯಿಂದ ಹೇಗೆ ನೋಡಬಲ್ಲ, ನೋಡಬೇಕು ಎಂಬ ಪರಿಕಲ್ಪನೆ. ಒಂದು ಉದಾಹರಣೆ ಕೊಡುವೆ. ಒಬ್ಬ ವ್ಯಕ್ತಿ ಬೆಳಗಿನ ಜಾವ ಮೂರುಗಂಟೆಗೆ ನಾಲ್ಕು ದಿನದಿಂದ ಕೆಮ್ಮು, ಜ್ವರ ಇದೆ ಎಂದು ತುರ್ತುಚಿಕಿತ್ಸಾ ವಿಭಾಗಕ್ಕೆ ಬಂದು ಒಬ್ಬ ವೈದ್ಯನನ್ನು ನೋಡಲು ನಾಲ್ಕರಿಂದ ಆರು ಗಂಟೆ ಕಾದಾಗ ಆತನ ಜತೆ ಐದೇ ನಿಮಿಷ ಮಾತಾಡಿ ಒಂದು ಪ್ರಿಸ್ಕ್ರಿಪ್ಷನ್ ಕೊಟ್ಟು ಕಳಿಸುವುದನ್ನು ವೈದ್ಯವಿಜ್ಞಾನ ಕಲಿಸುತ್ತದೆ. ಆತನ ಜತೆ ಕೂತು, ತಾಳ್ಮೆಯಿಂದ ಆತನ ಕೈ ಹಿಡಿದು ಒಂದು ಸಣ್ಣ ಜ್ವರಕ್ಕೆ ಆತ ಅಪರಾತ್ರಿಯಲ್ಲಿ ನಾಲ್ಕು ಗಂಟೆ ವೈಟಿಂಗ್ ರೂಮಿನಲ್ಲಿ ಕೂತು, ಕಾದು ವೈದ್ಯನನ್ನು ನೋಡುವ ಅವಶ್ಯಕತೆ ಏನಿತ್ತೆಂದು ವಿಚಾರಿಸುತ್ತಾ ಕೂತು, ಆತನ ಕಾಯಿಲೇತರ ಲೋಕದ ಪರಿಚಯ ಮಾಡಿಕೊಳ್ಳುವುದನ್ನು ನನ್ನಲ್ಲಿನ ಲೇಖಕ ಕಲಿಸಿದ್ದಾನೆ. ನನ್ನಲ್ಲಿನ ವೈದ್ಯನಿಗೆ ಕಾಣದ ಅನೇಕ ಸತ್ಯಗಳು ನನ್ನಲ್ಲಿನ ಲೇಖಕನಿಗೆ ಅರ್ಥವಾಗುತ್ತದೆ. ಹೀಗೆ ಕಂಡುಕೊಂಡ ಹೊಸ ‘ನೋವುಗಳನ್ನು’ ನನ್ನಲ್ಲಿನ ವೈದ್ಯ ಹೊಸನೋಟಗಳಿಂದ ಶುಶ್ರೂಷಿಸಬಹುದು ಎಂದು ನನ್ನಲ್ಲಿನ ಲೇಖಕ ಕಾಯುತ್ತಲೇ ಇರುತ್ತಾನೆ. ನನ್ನ ವೈದ್ಯ ಕೆಲಸ ಮತ್ತು ಬರವಣಿಗೆ ಒಟ್ಟೊಟ್ಟಿಗೆ ನಡಕೊಂಡು ಬಂದಿರುವುದರಿಂದ ಇಬ್ಬರೂ ಪರಸ್ಪರರಿಗೆ ಪೂರಕವಾಗಿ ಇದ್ದೇ ಇರುತ್ತಾರೆ.

ಇವತ್ತು ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ, ಜಾತಿ, ಲಿಂಗ, ರಾಜಕೀಯ ಇತ್ಯಾದಿಗಳ ಬಗ್ಗೆ ಬರೆಯುವುದು ಹೆಚ್ಚಾಗಿದೆ. ಆದರೆ ಮನುಷ್ಯನ ವೈಯಕ್ತಿಕ ದುಗುಡ, ಏಕಾಂತ, ಅಸೂಯೆ, ಭಯ ಇವುಗಳ ಬಗ್ಗೆ ಬರೆಯುವುದು ಕಡಿಮೆಯಾಗಿದೆಯೇ?

ನೀವು ಹೇಳಿರುವ ಸಾಮಾಜಿಕ ನ್ಯಾಯ, ಜಾತಿ, ಲಿಂಗ, ರಾಜಕೀಯ ಇತ್ಯಾದಿಗಳು ಒಂದು ಸಮಷ್ಟಿ ಪ್ರಜ್ಞೆಯಿಂದ ಹುಟ್ಟುವ ಸಾಹಿತ್ಯ ಎನಿಸುತ್ತದೆ. ವೈಯಕ್ತಿಕ ದುಗುಡ, ಏಕಾಂತ, ಅಸೂಯೆ, ಭಯ ಇವುಗಳು ‘ವ್ಯಷ್ಟಿ’ ಪ್ರಜ್ಞೆಯಿಂದ ಹುಟ್ಟುವವು. ನವ್ಯರ ಕಾಲದಲ್ಲಿ ಈ ವ್ಯಷ್ಟಿ ಪ್ರಜ್ಞೆ ತೀರ ಜಾಗ್ರತವಾಗಿತ್ತು. ಹಾಗಾಗಿ ‘ಗತಿ-ಸ್ಥಿತಿ’, ’ಸಿಕ್ಕು’, ‘ಬಿರುಕು’ ಕಾದಂಬರಿಗಳು ಬಂದವು. ಯುರೋಪಿಯನ್ ಸಾಹಿತ್ಯದ ನೇರ ಪ್ರಭಾವ ನಮ್ಮ ಸಾಹಿತಿಗಳ ಮೇಲಾಗಿತ್ತು. ಅದು ಓದುಗರ ಅಥವಾ ಸಮಷ್ಟಿಯ ಕಾಳಜಿಯಾಗಿತ್ತೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಈಗ ಹುಟ್ಟುತ್ತಿರುವ ಸಾಹಿತ್ಯ ಹೆಚ್ಚು ಡೆಮಕ್ರಾಟಿಕ್. ಸಮಷ್ಟಿಯ ಕಾಳಜಿಯೂ ಹೌದು ಎನಿಸುತ್ತದೆ.

ಒಬ್ಬ ಲೇಖಕ ತನ್ನ ಕಾಲದ ರಾಜಕೀಯದಿಂದ ಸಂಪೂರ್ಣ ದೂರ ಇರಲು ಸಾಧ್ಯವೇ? ಅಥವಾ ಲೇಖಕನ ಮೌನವೂ ಒಂದು ರಾಜಕೀಯ ನಿಲುವೇ?

ಖಂಡಿತಾ ಸಾಧ್ಯವಿಲ್ಲ. ಇರಲೂ ಕೂಡದು. ಮೌನ ಮಾತು ಜಗಳ ಖುಷಿ ಭಾಷಣ ಎಲ್ಲವೂ ರಾಜಕೀಯವೇ,

ನಮ್ಮ ಕನ್ನಡ ಸಾಹಿತ್ಯದಲ್ಲಿ ‘ಓದಬೇಕು’, ‘ಬರೆಯಬೇಕು’, ‘ಚರ್ಚಿಸಬೇಕು’ ಎನ್ನುವ ಮಾತು ಬಹಳ ಇದೆ. ಆದರೆ ನಿಜವಾಗಿ ಒಬ್ಬ ಲೇಖಕನನ್ನು ಎಷ್ಟು ಜನ ಓದುತ್ತಾರೆ? ಈ ಓದುಗರ ಕೊರತೆ ನಿಮಗೆ ಆತಂಕ ಉಂಟುಮಾಡುತ್ತದೆಯೇ?

ವೈಯಕ್ತಿಕವಾಗಿ ನನ್ನ ಓದುಗರಿಂದ ನಾನು ಭೌತಿಕವಾಗಿ ಯಾವತ್ತೂ ದೂರವಾಗಿಯೇ ಇದ್ದೇನೆ, ಹಾಗಾಗಿ ನನ್ನ ಓದುಗರು ಯಾರು ಎಂದು ನನಗೆ ಬಹಳ ಕಾಲ ಗೊತ್ತೇ ಇರಲಿಲ್ಲ. ಆದರೆ ಈ ಸಾಮಾಜಿಕ ಮಾಧ್ಯಮದ ಕಾರಣ ಎಲ್ಲರೂ ಎಲ್ಲರಿಗೂ ತೀರ ಹತ್ತಿರವಾಗಿದ್ದೇವೆ ಅನಿಸುತ್ತದೆ. ಈ ಹತ್ತಿರ ನನ್ನ ಬರವಣಿಗೆಗೆ ಹೊಸ ಓದುಗರನ್ನು ಸೃಷ್ಟಿಸಿದೆಯೇ? ಪ್ರಾಯಶಃ ಹೌದು. ಆದರೆ ನನ್ನ ಓದುಗರು ಯಾರು ಎಂದು ಗೊತ್ತಿಲ್ಲದೇ ಇರುವ ಕಾರಣ ನನ್ನ ‘ಐಡಿಯಲ್’ ಓದುಗನನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತೇನೆ, ಆ ಓದುಗನಿಗೆ ನಾನು ಪ್ರಸ್ತುತ ಎನಿಸುವಷ್ಟು ಕಾಲ ಬರೆಯುತ್ತಿರುತ್ತೇನೆ ಎನಿಸುತ್ತದೆ.

ಕನ್ನಡದಲ್ಲಿ ಬರೆಯುವ ಲೇಖಕನಿಗೆ ಜಗತ್ತಿನ ಸಾಹಿತ್ಯದ ಜೊತೆ ಸಂವಾದ ನಡೆಸುವುದು ಇವತ್ತು ಸುಲಭವಾಗಿದೆ. ಆದರೆ ಅದೇ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಸಾಹಿತ್ಯದ ಗಾಢತೆಯನ್ನು ಕಡಿಮೆ ಮಾಡುತ್ತಿದೆಯೇ?

ಗಾಢತೆ ಕಮ್ಮಿ ಮಾಡುತ್ತದೆಯೋ ಇಲ್ಲವೋ, ಹ್ರಸ್ವವಾಗಿದೆ. ಅಷ್ಟೇ ಅಲ್ಲ, ಲೇಖನಗಳು ಪೋಸ್ಟ್‌ಗಳಾಗುತ್ತಿವೆ. ಪೋಸ್ಟ್‌ಗಳು ಲೈಕುಗಳನ್ನು ಕಮೆಂಟುಗಳನ್ನು ಗಮನದಲ್ಲಿಟ್ಟುಕೊಂಡೇ ಬರೆಯಲ್ಪಡುತ್ತವೆ. ಹಾಗಾಗಿ ಹೆಚ್ಚು ಹೆಚ್ಚು ಓದುಗರು ಸಿಗಲಿ ಎಂದು ಹ್ಯಾಶ್‍ಟ್ಯಾಗುಗಳು ಲಗತ್ತಿಸಲ್ಪಡುತ್ತವೆ. ಇದು ಬರಹಕ್ಕೆ ಅಂತರ್ಗತವಾಗಿ ಜಾಹೀರಾತಿನ ಗುಣವನ್ನು ಕೊಡುತ್ತದೆ. ಹಾಗಾಗಿ ಘಾಡತೆಯನ್ನು ಕಳಕೊಳ್ಳುವ ಅಪಾಯವಿದೆ. ಎಲ್ಲರೂ ಹಾಗೆ ಬರೆಯುತ್ತಿದ್ದಾರೆ ಎಂದು ನಾ ಹೇಳುತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಬರೆದದ್ದೆಲ್ಲವನ್ನೂ ಸಾಹಿತ್ಯವೆಂದು ನಾವು ಪರಿಗಣಿಸಿ ಈ ಗುಣಗಳನ್ನು ಆರೋಪಿಸುತ್ತಿದ್ದೀವೇನೋ. ಅದನ್ನು ಕೂಡ ನಾವು ಗಮನಿಸಬೇಕು.

ಇಷ್ಟು ವರ್ಷ ಬರೆದ ನಂತರ ಹಿಂದಿರುಗಿ ನಿಮ್ಮದೇ ಬರವಣಿಗೆಯನ್ನು ನೋಡಿದಾಗ- ‘ಇದನ್ನು ಇನ್ನೂ ಚೆನ್ನಾಗಿ ಬರೆಯಬಹುದಿತ್ತು’ ಎಂದು ಅನಿಸುವ ಪುಸ್ತಕ ಅಥವಾ ಕಥೆ ಯಾವುದು? ಏಕೆ?

ನಾನು ಬಹಳ ಎಡಿಟ್ ಮಾಡುತ್ತೇನೆ. ಲೆಗೊ ಆಟಿಕೆಯ ಸಣ್ಣ ತುಂಡುಗಳಿಂದ ಮಕ್ಕಳು ಮನೆ ಕಟ್ಟುತ್ತಾವಲ್ಲ, ಆ ಮಾದರಿ ನನ್ನ ಬರವಣಿಗೆ. ಪ್ರತಿ ಬಾರಿ ಅದೇ ತುಂಡುಗಳಿಂದ ಮನೆ ಕಟ್ಟಿದರೂ ಮನೆಯ ರೂಪ, ಬಣ್ಣ, ಕಟ್ಟುವುದಕ್ಕೆ ತೆಗೆದುಕೊಂಡ ಸಮಯ ಎಲ್ಲ ಬೇರೆಯಾಗುತ್ತದಲ್ಲ ಹಾಗೆ. ಯಾವುದನ್ನು ಈಗ ಮತ್ತೆ ಬರೆದರೂ ಇನ್ನೂ ಬೇರೆ ರೀತಿ ಬರೆಯಬಹುದಾಗಿತ್ತು, ಇನ್ನೂ ಚೆನ್ನಾಗಿ ಬರೆಯಬಹುದಾಗಿತ್ತು ಎಂದು ಅನ್ನಿಸುತ್ತದೆ. ಆದರೆ ಆಗುತ್ತದಾ ಅದು ಗೊತ್ತಿಲ್ಲ. ಒಂದು ನಿರ್ದಿಷ್ಟ ಕಥೆ ಅಥವಾ ಕಾದಂಬರಿಯನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ ಅದರ ಸಾಧ್ಯತೆಯ ಬಗ್ಗೆ ಅನುಮಾನವಾಗುತ್ತದೆ.