ಸಾರಾಂಶ
ಶಂಕರರು ಹೇಳುವಂತೆ ಜೀವಾತ್ಮನ ಪ್ರತ್ಯೇಕತೆಗೆ ಜಗತ್ತಿನ ಅಸ್ತಿತ್ವದ (ಉಂಟು ಎಂಬ) ಅರಿವಿಗೆ ಮಾಯೆಯು ಕಾರಣ.
-ಡಾ। ಎಂ.ಪ್ರಭಾಕರ ಜೋಶಿ, ಹಿರಿಯ ಸಂಸ್ಕೃತಿ ಚಿಂತಕ.
ಶಂಕರರು ಹೇಳುವಂತೆ ಜೀವಾತ್ಮನ ಪ್ರತ್ಯೇಕತೆಗೆ ಜಗತ್ತಿನ ಅಸ್ತಿತ್ವದ (ಉಂಟು ಎಂಬ) ಅರಿವಿಗೆ ಮಾಯೆಯು ಕಾರಣ. ಹಾಗಾಗಿ, ಸತ್ಯಗಳ ಮೂರು. ಪ್ರಾತಿಭಾಸಿಕ ಸತ್ಯ, (ಸ್ವಪ್ನದ ವಸ್ತು) ಹಾವಾಗಿ ಕಾಣುವ ಹಗ್ಗ, ವ್ಯಾವಹಾರಿಕ ಸತ್ಯ, (ನಿತ್ಯದ ಜಗತ್ತು) ಪಾರಮಾರ್ಭಿಕ ಸತ್ಯ. ಅದೇ ಬ್ರಹ್ಮ, ಕೇವಲ ನಿರ್ಗುಣ, ನಿರಾಕಾರ, ಆನಂದ, ಸತ್-ಚಿತ್-ಆನಂದ.
ಶಂಕರಾಚಾರ್ಯರ ಅದ್ವೈತವೆಂಬ ತತ್ತ್ವ ದರ್ಶನದ ಇನ್ನೊಂದು ಹೆಸರು ಮಾಯಾವಾದ, ಅಥವಾ ಮಾಯಾ ಬ್ರಹ್ಮವಾದ. ಬಹುಶಃ ಇದೇ ಹೆಚ್ಚು ಸರಿಯಾದ ಹೆಸರು. ಅದನ್ನೇ ಏಕತತ್ತ್ವವಾದ, ಏಕತ್ವವಾದ, ಬ್ರಹ್ಮ ಸತ್ಯವಾದ, MONISM ಎಂದೆಲ್ಲ ಕರೆಯಬಹುದು. ಇರಲಿ. ಲೋಕಾಲೋಕವೆಲ್ಲ ಇರುವುದು - ಆಗಿರುವುದು ಒಂದೇ ತತ್ತ್ವದಿಂದ ಅಥವಾ ಒಂದೇ ತತ್ತ್ವ ಅದು ಎಂಬುದು ಇದರ ಒಟ್ಟು ಅರ್ಥ.
ಈ ಜಗತ್ತು, ಜೀವಗಳು, ದೇವತೆಗಳು (ಇದ್ದಾರೆ) ಬ್ರಹ್ಮಾಂಡ - ವಿಶ್ವ - ಏನೆಲ್ಲ ಉಂಟೋ ಅದು ಯಾವುದರಿಂದ ಅಗಿದೆ? ಅದರ ಮೂಲದ್ರವ್ಯ Raw material, Building block ಯಾವುದು, ಒಂದೇ, ಹಲವೇ? ಅವು ಪರಸ್ಪರ ಅಧೀನವೇ? ಸ್ವತಂತ್ರವೇ?
ಇದು ತತ್ತ್ವಶಾಸ್ತ್ರ ಮತ್ತು ವಿಜ್ಞಾನ (ಮುಖ್ಯವಾಗಿ ಭೌತಶಾಸ್ತ್ರ)ಗಳ ಮೂಲ ಪ್ರಶ್ನೆಗಳಲ್ಲಿ ಒಂದು. ಇದನ್ನು ಹೊಂದಿ ಏಕ, ಬಹು, ಅದ್ವೈತ, ದ್ವೈತ, ದ್ವೈತಾದ್ವೈತ, ಶೂನ್ಯವಾದ ಮೊದಲಾದ ಹಲವು ಚಿಂತನ ಮಾರ್ಗಗಳು ಇವೆ. ಅಂತಹ ಮೂಲ ಪ್ರಶ್ನೆ ಒಂದು, ಉತ್ತರ ಒಂದು ಮತ್ತು ಹಲವು.ದೇವರು:
ಅದರೊಂದಿಗೇ ಬರುವ ಇನ್ನೊಂದು ಪ್ರಶ್ನೆ - ಆ ಒಂದು ಎಂಬುದು ದೇವರೋ, ತತ್ತ್ವವೋ, ಬ್ರಹ್ಮವೋ, ಬ್ರಹ್ಮನೋ, ದೇವರೋ, ಪರಮಾತ್ಮನೋ, ವಸ್ತುವೋ ಏನು? ಅದು ಜಗತ್ತಾಗಿ ಆಗುವುದೋ? ಅಲ್ಲ ತಾನೇ ಮಾಡುವುದೋ, ಸ್ಪಷ್ಟಿಸುವುದೋ? ಅಲ್ಲ ತಾನೇ ಸರ್ವ ಜೀವವೋ? ಏನೇ ಇರಲಿ. ಒಂದನ್ನು ಹಲವು ಮಾಡುವುದು ಯಾರು?
ಏಕವಾದ:
ಅದೇ ಅದ್ವೈತ ಹಾಗೆ ಯಾಕೆ ಹೇಳಬೇಕು? ಹೌದು, ಯಾಕೆಂದರೆ ಎರಡಲ್ಲ, ಹಲವು ಅಲ್ಲ ಒಂದೇ ಎಂದು ತೋರಿಸುವುದಕ್ಕೆ ಬೇಕು.
ಏಕವಾದವೇ ಹಲವಿದೆ. ಸರಳವಾಗಿ ಹೇಳುವುದಾದರೆ ಆ ಒಂದು ಉಂಟಲ್ಲ, ಅದು ಚೈತನ್ಯ ಎನರ್ಜಿ, ಅಲ್ಲ ಅದು ದ್ರವ್ಯ ಮೇಟರ್ - ಮೆಟಿರಿಯಲ್, ಸಾಮಗ್ರಿ, ಅಲ್ಲ ಎರಡೂ ಒಂದೇ, ಇತ್ಯಾದಿ ವಾದಗಳು.
ಉತ್ತರಗಳು:
ಯಾವುದೇ ಏಕತ್ವ - ಅದ್ವೈತವಾದ ಸಿದ್ಧಾಂತವು ಈ ಪ್ರಶ್ನೆಗೆ ಹೀಗೆ/ ಅಥವಾ ಹೀಗೆಯ ಉತ್ತರ ಹೇಳಬೇಕಾಗುತ್ತದೆ.
೧.ಬದಲಾವಣೆಯ ತತ್ವ ಆ ಒಂದರಲ್ಲೇ ಇದ್ದು ಸತತ ಪ್ರವಾಹವಾಗಿ FLUX ಆಗಿದೆ. ಹಾಗಾಗಿ ಒಂದೇ ಹಲವಾಗಿರುತ್ತದೆ.
೨.ಒಂದೇ ಆಗಿರುವ ಬ್ರಹ್ಮವು ಹಲವಾಗಿ, ಜೀವವಾಗಿ ಕಾಣುವುದೆಲ್ಲ ತೋರಿಕೆ ಮಾತ್ರ ಅದು ಆಭಾಸ. ಅದಕ್ಕೆ ಮಾಯೆಯು ಕಾರಣ. ಅದರಿಂದ ಅಜ್ಞಾನ, ಭ್ರಮೆ ಒಂದು ಇನ್ನೊಂದಾಗಿರುವ ದ್ವಿ ಭಾವನೆ, ಅಧ್ಯಾಸ ಎಲ್ಲ ಬರುವುದು ಅಧ್ಯಾಸ (ಅಧ್ಯಾಸ ಎಂದರೆ Confusion ಅಥವಾ Super - Impose) ಎಂಬುದು ಲೋಕದ ಮೂಲ ಸ್ವಭಾವ. ಅದೇ ಅವಿದ್ಯೆ, ತಪ್ಪು, ತಿಳಿವು, ಇಲ್ಲದೆ ಇರುವಿಕೆ. ಅದೇ ಜೀವಾತ್ಮನು, ನಾನು ಬೇರೆ, ಬ್ರಹ್ಮ ಅಲ್ಲ, ಎಂದೆಲ್ಲ ಭಾವಿಸಲು ಕಾರಣ. ಇದು ಶಂಕಕರ ಮಾಯಾವಾದ.
೩. ಮಾಯೆ ಎಂಬುದು ಎಂದೂ ಇಲ್ಲದೆ ಇದ್ದ ‘ಶೂನ್ಯತೆ’ಯನ್ನು ಇರುವಂತೆ ಕಾಣಿಸುವಂತಹದು. ಆತ್ಮವೂ ಇಲ್ಲ! ಆನಾತ್ಮವು ಇಲ್ಲ (ಸರ್ವಂ ಶೂನ್ಯಂ) ಮತ್ತೆ ಜಗತ್ತು ಎಲ್ಲಿದೆ. ಇದು ಪೂರ್ತಿ ಸೃಷ್ಟಿ. ಇಲ್ಲವೇ ಇಲ್ಲ, ಶೂನ್ಯವೇ ಸತ್ಯ, ಇದು ಸುಮಾರಾಗಿ ಬೌದ್ಧದರ್ಶನದ ಮಾಯೆ. ವಾಸ್ತವವಾಗಿ ಸೃಷ್ಟಿ ಇಲ್ಲ. ಸಾಧನೆಯೂ ಇಲ್ಲ. ಬಿಡುಗಡೆಯೂ ಇಲ್ಲ. ಎಲ್ಲ ಸುಳ್ಳು! ಮಾಯಾ ಮಯ ಅಷ್ಟೆ.! ಹೀಗೆ ಈ ಮೂರೇ ರೀತಿ ಏಕ - ಬಹುಗಳ ಸಂಬಂಧವನ್ನು ವಿವರಿಸಲು ಸಾಧ್ಯ.
ಪಾಶ್ಚಾತ್ಯ ದಾರ್ಶನಿಕರಲ್ಲಿ ಕಾಂಟ್, ಶೂಪನ್ ಹಾವರ್, ಬ್ರಾರ್ಡ್, ಬಿರ್ಕ್ಲೀ ಮೊದಲಾದವರು ಸುಮಾರಾಗಿ ಮಾಯಾವಾದಿ ಏಕತ್ವ - ಅದ್ವೈತವಾದಿಗಳು. ಈಗ ಶಂಕರರಿಗೆ ಬರೋಣ.
ಮಾಯಾ ಸ್ವರೂಪ
ಶಂಕರರು ಹೇಳುವಂತೆ ಜೀವಾತ್ಮನ ಪ್ರತ್ಯೇಕತೆಗೆ ಜಗತ್ತಿನ ಅಸ್ತಿತ್ವದ (ಉಂಟು ಎಂಬ) ಅರಿವಿಗೆ ಮಾಯೆಯು ಕಾರಣ. ಹಾಗಾಗಿ, ಸತ್ಯಗಳ ಮೂರು. ಪ್ರಾತಿಭಾಸಿಕ ಸತ್ಯ, (ಸ್ವಪ್ನದ ವಸ್ತು) ಹಾವಾಗಿ ಕಾಣುವ ಹಗ್ಗ, ವ್ಯಾವಹಾರಿಕ ಸತ್ಯ, (ನಿತ್ಯದ ಜಗತ್ತು) ಪಾರಮಾರ್ಭಿಕ ಸತ್ಯ. ಅದೇ ಬ್ರಹ್ಮ, ಕೇವಲ ನಿರ್ಗುಣ, ನಿರಾಕಾರ, ಆನಂದ, ಸತ್-ಚಿತ್-ಆನಂದ.
ಬೌದ್ಧರಿಗೆ ಎರಡೇ ಸತ್ಯಗಳು - ಪರಮಾರ್ಥ ಸತ್ಯ - ಶೂನ್ಯತೆ, ಸಂವೃತಿ ಸತ್ಯ - ಜಗತ್ತೇ ಮಾಯ ಸುಳ್ಳು ಎಂಬ ಭಾವ. ಶಂಕರರ ಪ್ರಕಾರ ಜಗತ್ತು ಚೌದ್ಧರು ಹೇಳುವಷ್ಟು ‘ಬರೇಸುಳ್ಳು’, ‘ಅಸತ್ಯ’ ಇಲ್ಲವೇ ಇಲ್ಲ ಎಂಬಷ್ಟು ಸುಳ್ಳಲ್ಲ. ಅದು ‘ಮಿಥ್ಯೆ’? ಬದಲಾಗುತ್ತ ಹೋಗುವ ವಾಸ್ತವವಾಗಿ ಬ್ರಹ್ಮದ ಕಾಣುವ ರೂಪ, ವಿ-ವರ್ತ, ನಿಜವಲ್ಲದೆ ಪರಿವರ್ತನೆ!
ಜೀವಾತ್ಮನ ಅನುಭವ ಯಾಕೆ ಹೀಗೆ?
ಹಾಗಿದ್ದರೆ ನಮ್ಮ ಅನುಭವ ಏನು? ಜಗತ್ತು ಇದ, ನಾನು ಇದ್ದೇನೆ, ವಸ್ತುಗಳೂ ಇವೆ. ನೋವು ಇದೆ, ನಲಿವು ಇದೆ. ಅವು ಸುಳ್ಳಲ್ಲ, ಸಕ್ಕರೆ ಸಿಹಿ, ಹಾಗಲ ಕಹಿ, ಇದು ಎಲ್ಲ ಆರೋಗ್ಯವಂತ ಮಾನವರ ಅನುಭವ. ಇದು ಸುಳ್ಳೆ?
ಹಾಗಲ್ಲ, ಜಗತ್ತು ಇದ್ದಂತೆ ಕಾಣುವುದು, ಮಾಯೆಯಿಂದ ಇರುವುದೂ ನಿಜ. ಸ್ವಲ್ಪ ಮಟ್ಟಿಗೆ, ಬರೇ ಸುಳ್ಳಲ ಗಗನ ಕುಸುಮ ಅಲ್ಲ ‘ಹದಿನಾಲ್ಕು ಎಂಬ ನಾಲ್ಕು’ ಅಲ್ಲ. ಇದ್ದಂತೆ ಕಾಣುತ್ತದೆ. ಬಿಂಬಿಸುತ್ತದೆ. ಅದು ವ್ಯವಹಾರ ಸತ್ಯ. ಅದಕ್ಕೆ ಕಾರಣ ಮಾಯಾ, ಇಂದ್ರಜಾಲ, ಭ್ರಮೆ, ಭ್ರಾಂತಿ, ಅವಿದ್ಯಾ ಕಲ್ಪಿತ, ಅರಿವಿಲ್ಲದ ತೊಳಲಾಟ.
ಆರಂಭದಲ್ಲಿ ಭಕ್ತಿ - ಭಜನೆ ಯೋಗ ಮುಂದೆ ವೇದಾಂತ ಉಪನಿಷತ್ತುಗಳ ಜ್ಞಾನದಿಂದ ಮಾಯೆಯ ಪರದೆ ಸರಿದು ನಾನೇ ಬ್ರಹ್ಮ, ಬ್ರಹ್ಮವೇ ನಾನು, ಜಗತ್ತಿಲ್ಲ ಎಂದು ಗೊತ್ತಾಗುವುದು. ಇದು ಬ್ರಹ್ಮ ಆಗುವುದಲ್ಲ, ಆಗಿಯೇ ಇದೆ. ಅದನ್ನು ಕಾಣುವುದು. ಹೌದಲ್ಲ ಚೆನ್ನಾಗಿದೆ!
ಆದರೆ.... ಅದ್ವೈತದ ಅಡಿಗಲ್ಲಾಗಿರುವ ಮಾಯಾವಾದವು, ಗಂಭೀರ ತಾರ್ಕಿಕ ಆಕ್ಷೇಪಗಳನ್ನು ಇದಿರಿಸಬೇಕಾಗುತ್ತದೆ. ಅಂತಹ ಕೆಲವು ಹೀಗಿವೆ. ಅದ್ವೈತದ ಪ್ರಬಲ ವಿಮರ್ಶಕರಾದ ಆಚಾರ್ಯ ರಾಮಾನುಜರು, ಮಧ್ವರು ಸಹಿತ ಹಲವರು ಎತ್ತಿರುವ ನೂರಾರು ಆಕ್ಷೇಪಗಳಲ್ಲಿ ಕೆಲವನ್ನು ಮುಖ್ಯವಾಗಿ ಗಮನಿಸಬಹುದು.
ಅದ್ವೈತ ಹೇಗೆ?
ಬ್ರಹ್ಮವು ಏಕೈಕ ಅಸ್ತಿತ್ವ ಎನ್ನುತ್ತೀರಿ. ಮಾಯೆಯಿಂದ ಅದು ಬಹು ವಿಧವಾಗುತ್ತದೆ. ಆಗಿ ಕಾಣುತ್ತದೆ - ಅನ್ನುತ್ತೀರಿ. ಹಾಗಿದ್ದರೆ ಬ್ರಹ್ಮದಷ್ಟೇ ಪ್ರಬಲ ಇನ್ನೊಂದು ತತ್ತ್ವ ಮಾಯೆ ಎಂದಾಯಿತು. ತತ್ತ್ವ ಒಂದೇ ಅಲ್ಲ ಎರಡಾಯಿತಲ್ಲ! ಅದ್ವೈತ ಹೇಗೆ?
-ಹಾಗೆಲ್ಲ ಮಾಯೆ ಎಂಬುದ ಬ್ರಹ್ಮಕ್ಕಿಂತ ಬೇರೆಯೆ ಆದ ತತ್ತ್ವ ಅಲ್ಲ. ಅದು ಬ್ರಹ್ಮದ ಶಕ್ತಿ. ಸಹಜ ಸಾಮರ್ಥ್ಯ ಎಂಬ ಅದ್ವೈತಿಗಳ ಉತ್ತರ.
ಬ್ರಹ್ಮವನ್ನೇ ಬಂಧಿಸುವ ಮಾಯೆ!
ಮಾಯೆ ಎಂಬ ನೈಜವಲ್ಲದ ತತ್ವ. ಅದೇ ಬ್ರಹ್ಮವೆಂಬ ಒಂದನ್ನೇ ಹಲವು ಜೀವಗಳಾಗಿ ತೋರುತ್ತದೆ. ಅದು ಜಾಲ ಅನ್ನುವಾಗ, ಹಾಗಿದ್ದರೆ, ನಿರಾಕಾರ, ಸ್ವಭಾವ ರಹಿತ ಏಕೈಕ ಸರ್ವಸ್ವ ಆಗಿರುವ ಬ್ರಹ್ಮವೇ ಜೀವವಾಗಿ ಕಾಣುವಂತೆ ಮಾಯ ಬಂಧಿಸುವುದಾದರೆ ಬ್ರಹ್ಮಕ್ಕಿಂತ ಮಾಯ ಪ್ರಬಲವಾಯಿತು.
ಎಂತಹ ಆಭಾಸ! ಇಲ್ಲದ ಮಾಯೆ, ಪರಮ ಶಕ್ತಿಶಾಲಿ ಬ್ರಹ್ಮನಿಗೇ ಬಂಧಕ. ಅದಕ್ಕಾಗಿ ನಿಜವಾಗಿ ಇಲ್ಲದ ಜೀವರು ನಿಜವಾಗಿ ಇಲ್ಲದ (ಮಾಯಾಕಲ್ಪಿತ) ಕಷ್ಟಗಳ, ಕರ್ಮ, ಪಾಪಪುಣ್ಯ ಕರ್ಮಧರ್ಮ ಜನ್ಮಗಳಲ್ಲಿ ಒದ್ದಾಡಬೇಕು. ಜೀವ ಅನುಭವ ಸುಳ್ಳಲ್ಲ ಎಂದು ಹೇಳುವಂತಿಲ್ಲವಷ್ಟೇ? ಬ್ರಹ್ಮಕ್ಕೆ ಕರ್ಮವೆ, ಬಂಧಸವೇ?
ಇದ್ಯಾವ ಕರ್ಮವಪ್ಪ? ಹಾಗಲ್ಲ ಸ್ವಾಮೀ, ಶುದ್ಧ ಬ್ರಹ್ಮ ದೃಷ್ಟಿಯಿಂದ ಮಾಯಾ ಬಂಧನ ಇಲ್ಲ. ಜೀವ ದೃಷ್ಟಿಯಿಂದ ಇದೆ, ಅಲ್ಲ ಇದ್ದಂತೆ ಕಾಣುತ್ತದೆ. ಅಷ್ಟೇ!
ವ್ಯಾಖ್ಯೆಯಲ್ಲಿ ಅವ್ಯವಸ್ಥೆ ಮಾಯೆ ನಿಜವಲ್ಲ ಅನ್ನುತ್ತೀರಿ, ಅದೇ ಅಜ್ಞಾನಕ್ಕೆ ಜೀವನ ಇರುವೆನೆಂಬ ಭ್ರಮೆಗೆ ಕಾರಣ ಎನ್ನುತ್ತೀರಿ. ಅದು ಇದ್ದುದೂ ಅಲ್ಲ, ಇಲ್ಲದ್ದೂ ಅಲ್ಲ, ಅನಿರ್ವಚನೀಯ, ವ್ಯಾಖ್ಯೆಗೆ ಸಿಗಲಾರದ್ದು. (INDEFINABLE) ಎಂದೂ ಹೇಳುತ್ತೀರಿ! ಇದೆಂತಹ ವಿಧಾನ! ನಿಮ್ಮ ಅತೀ ಮುಖ್ಯವಾದ, ಬ್ರಹ್ಮನ ವಿವಿಧತೆಗೆ ಕಾರಣವಾದ ತತ್ತ್ವವೇ ಸುಳ್ಳು. ಬುಡವೇ ಕುಸಿಯ, ನೆಲವಿಹುದೆ, ನೆಲೆಇಹುದೆ? ಇಲ್ಲ, ಮಾನವ ಮತಿಯ ಮಿತಿಯನ್ನು ಮೀರಿ ಮಾಯೆ ಇದೆ. ಶಬ್ದ, ವ್ಯಾಖ್ಯೆ, ತೀರ್ಮಾನವಲ್ಲ ಮಾತಿನ ಮಂಟಪ, ಮಾಯೆ ಎಂಬುದು ವಸ್ತುವಲ್ಲ Category ಅಲ್ಲ, ತತ್ತ್ವ ಅಲ್ಲ. ತೆರೆ, ಪರದೆ, ಜಾದು, ಕಲ್ಪ, ಸತ್ಯವಾಗಿರುವ ಸುಳ್ಳು, ಅದೇ ಮಾಯೆ.