ಸಾರಾಂಶ
ಬೆಂಗಳೂರು : ಸಚಿವ ಸಂಪುಟ ಸಭೆ ಅನುಮೋದನೆ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ 5 ನಗರಪಾಲಿಕೆ ರಚಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ.
ಬೆಂಗಳೂರು ಆಡಳಿತ ಸುಧಾರಣೆ ದೃಷ್ಟಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯ ಶಿಫಾರಸಿನಂತೆ ರಚಿಸಲಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಣೆಗೆ 5 ಪಾಲಿಕೆಗಳನ್ನು ರಚಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸಲಹೆಗಳನ್ನಾಧರಿಸಿ ಪಾಲಿಕೆ ರಚನೆಯಲ್ಲಿ ಬದಲಾವಣೆ ತಂದು ಅಂತಿಮ ಅಧಿಸೂಚನೆ ಪ್ರಕಟಿಸಲಾಗುತ್ತದೆ.
ಪಶ್ಚಿಮ ದೊಡ್ಡ, ಪೂರ್ವ ಅತಿಚಿಕ್ಕ ಪಾಲಿಕೆ:ನಗರ ಪಾಲಿಕೆಗಳನ್ನು ಆದಾಯವನ್ನಾಧರಿಸಿ ರಚಿಸಲಾಗಿದೆ ಮತ್ತು ಹಾಲಿ ಇರುವ ಬಿಬಿಎಂಪಿ ಗಡಿಯನ್ನೇ ಜಿಬಿಎ ಗಡಿಯನ್ನಾಗಿ ನಿಗದಿ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯು 10 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ಹೊಂದಿದೆ. ಉಳಿದಂತೆ ದಕ್ಷಿಣ ನಗರ ಪಾಲಿಕೆ 9, ಉತ್ತರ ನಗರ ಪಾಲಿಕೆ 7 ಹಾಗೂ ಕೇಂದ್ರ ನಗರ ಪಾಲಿಕೆ 6 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ಹೊಂದಿದೆ. ಅದೇ ಪೂರ್ವ ನಗರ ಪಾಲಿಕೆ ಅತಿ ಕಡಿಮೆ 2 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ಮಾತ್ರ ಹೊಂದಿದ್ದು, ಉಳಿದ ನಾಲ್ಕಕ್ಕಿಂತ ಅತಿಚಿಕ್ಕ ನಗರ ಪಾಲಿಕೆಯಾಗಿ ರಚಿಸಲಾಗಿದೆ.
ರಾಜರಾಜೇಶ್ವರನಗರ 3 ಭಾಗ:
ಕರಡು ಅಧಿಸೂಚನೆಯಲ್ಲಿ 5 ಪಾಲಿಕೆಗಳ ಗಡಿ ಗುರುತಿನ ಜತೆಗೆ, ಯಾವ ಕ್ಷೇತ್ರಗಳು ಯಾವ ಪಾಲಿಕೆಗಳಿಗೆ ಸೇರ್ಪಡೆಯಾಗಲಿವೆ ಎಂಬುದನ್ನು ತಿಳಿಸಲಾಗಿದೆ. ಅದರ ಪ್ರಕಾರ ಬಿಜೆಪಿ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳನ್ನು ಎರಡು ಮತ್ತು ಮೂರು ನಗರ ಪಾಲಿಕೆಗಳ ನಡುವೆ ಹಂಚಿಕೆ ಮಾಡಲಾಗಿದೆ. ಅದರಲ್ಲೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳು ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ನಗರ ಪಾಲಿಕೆಗಳಿಗೆ ವಿಭಜಿಸಲಾಗಿದೆ. ಇನ್ನು, ಪದ್ಮನಾಭ ನಗರ, ಯಶವಂತಪುರ, ಮಹದೇವಪುರ, ದಾಸರಹಳ್ಳಿ ಕ್ಷೇತ್ರಗಳ ವಾರ್ಡ್‌ಗಳು ಎರಡು ಪಾಲಿಕೆಗಳ ನಡುವೆ ವಿಭಜನೆಗೊಂಡಿವೆ.
ನಗರಪಾಲಿಕೆಗಳ ವ್ಯಾಪ್ತಿ ವಿವರ:
ಬೆಂಗಳೂರು ಕೇಂದ್ರ: ಸಿವಿ ರಾಮನ್‌ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ
ಬೆಂಗಳೂರು ಪೂರ್ವ: ಕೆಆರ್ ಪುರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ)
ಬೆಂಗಳೂರು ಉತ್ತರ: ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ ವಾರ್ಡ್‌ಗಳು), ಹೆಬ್ಬಾಳ, ಪುಲಕೇಶಿನಗರ (ಕುಶಾಲ ನಗರ ವಾರ್ಡ್), ರಾಜರಾಜೇಶ್ವರಿನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ವಾರ್ಡ್‌ಗಳು), ಸರ್ವಜ್ಞನಗರ, ಯಲಹಂಕ
ಬೆಂಗಳೂರು ದಕ್ಷಿಣ: ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಜಯನಗರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಮಾತ್ರ), ಪದ್ಮನಾಭನಗರ (ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ ವಾರ್ಡ್‌ಗಳು), ರಾಜರಾಜೇಶ್ವರಿನಗರ (ರಾಜರಾಜೇಶ್ವರಿನಗರ ವಾರ್ಡ್ ಮಾತ್ರ), ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಮಾತ್ರ)
ಬೆಂಗಳೂರು ಪಶ್ಚಿಮ: ಬಸವನಗುಡಿ, ದಾಸರಹಳ್ಳಿ (ಚಿಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್‌ಗಳು), ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಪದ್ಮನಾಭನಗರ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್‌ಗಳು), ರಾಜಾಜಿನಗರ, ರಾಜರಾಜೇಶ್ವರಿನಗರ (ಎಚ್‌ಎಂಟಿ, ಲಕ್ಷ್ಮೀದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ ವಾರ್ಡ್‌ನ ಕೆಲಭಾಗ), ವಿಜಯನಗರ, ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಹೊರತುಪಡಿಸಿ)
ಆ. 10ರಿಂದ ಜಿಬಿಎ ಅಸ್ತಿತ್ವಕ್ಕೆ:
ಬಿಬಿಎಂಪಿಯ ಕೇಂದ್ರ ಕಚೇರಿಯನ್ನೇ ಜಿಬಿಎ ಕೇಂದ್ರ ಕಚೇರಿಯನ್ನಾಗಿ ಮಾರ್ಪಾಡು ಮಾಡಲು ಸರ್ಕಾರ ನಿರ್ಧರಿಸಿದೆ. ಆ.10ರಿಂದ ಅಧಿಕೃತವಾಗಿ ಜಿಬಿಎ ಕಾರ್ಯನಿರ್ವಹಣೆ ಆರಂಭವಾಗಲಿದೆ. ಆ.11ರಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಗುವ ಸಾಧ್ಯತೆಗಳಿವೆ.
ನಗರಪಾಲಿಕೆಗಳ ರಚನೆಗೆ ಮಾನದಂಡ ಯಾವುವು?:
ನಗರಪಾಲಿಕೆಗಳ ರಚನೆಗೆ ಸಂಬಂಧಿಸಿದಂತೆ ಯಾವೆಲ್ಲ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಜನಸಂಖ್ಯೆ ಪ್ರಮಾಣ, ಉತ್ಪತ್ತಿಯಾಗುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು, ಆರ್ಥಿಕ ಪ್ರಾಮುಖ್ಯತೆ, ಮೂಲ ಸೌಕರ್ಯ ಸೌಲಭ್ಯಗಳನ್ನು ಪರಿಗಣಿಸಿ ನಗರ ಪಾಲಿಕೆಗಳನ್ನು ರಚಿಸಲಾಗಿದೆ ಎಂದು ತಿಳಿಸಲಾಗಿದೆ. ನಗರ ಪಾಲಿಕೆಗಳ ರಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಸಲಹೆಯನ್ನು ನೀಡುವವರು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 560001ಕ್ಕೆ ಕಳುಹಿಸಬೇಕು ಎಂದು ಸರ್ಕಾರ ತಿಳಿಸಿದೆ.