ಸಾರಾಂಶ
ಉತ್ತರ ಭಾರತೀಯರು ಅದರಲ್ಲೂ ವಿಶೇಷವಾಗಿ ಹಿಂದಿವಾಲಾಗಳು ಕನ್ನಡಿಗರ ಮೇಲೆ ದೌರ್ಜನ್ಯ ಎಸೆಗುತ್ತಿರುವುದಷ್ಟೇ ಅಲ್ಲ, ಕನ್ನಡಿಗರನ್ನು ರಾಷ್ಟ್ರಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುವ ಅತ್ಯಂತ ವ್ಯವಸ್ಥಿತ ಷಡ್ಯಂತ್ರದಲ್ಲಿ ತೊಡಗಿಕೊಂಡಿದ್ದಾರೆ.
ಸಂಪತ್ ತರೀಕೆರೆ
ಕರುನಾಡಿನಲ್ಲಿ ಕನ್ನಡಿಗರೇ ಬಲಿಪಶುಗಳಾಗುವ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಉತ್ತರ ಭಾರತೀಯರು ಅದರಲ್ಲೂ ವಿಶೇಷವಾಗಿ ಹಿಂದಿವಾಲಾಗಳು ಕನ್ನಡಿಗರ ಮೇಲೆ ದೌರ್ಜನ್ಯ ಎಸೆಗುತ್ತಿರುವುದಷ್ಟೇ ಅಲ್ಲ, ಕನ್ನಡಿಗರನ್ನು ರಾಷ್ಟ್ರಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುವ ಅತ್ಯಂತ ವ್ಯವಸ್ಥಿತ ಷಡ್ಯಂತ್ರದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡಿಗರನ್ನು ಅತಿರೇಕ ವರ್ತನೆಯ ಜನ ಎಂದು ಬಿಂಬಿಸುವ ದಾರ್ಷ್ಟ್ಯವನ್ನು ಮತ್ತೆ ಮತ್ತೆ ತೋರತೊಡಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂಬ ಪ್ರಶ್ನೆ ಮುಂದುಮಾಡಿ ಅದಕ್ಕೆ ತಾವೇ ಹಿಂದಿ ಎಂದು ಹೇಳುವ ದುರಹಂಕಾರ ತೋರತೊಡಗಿದ್ದಾರೆ. ಇತ್ತೀಚೆಗೆ ಒಬ್ಬ ಡಿಆರ್‌ಡಿಓದ ಹಿಂದಿ ಭಾಷಿಕ ಅಧಿಕಾರಿ ಕನ್ನಡಿಗನ ಮೇಲೆ ನಡೆಸಿದ ಹಲ್ಲೆ. ಅನಂತರ ಅದರಲ್ಲಿ ತಾವೇ ಬಲಿಪಶು ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿ, ಕನ್ನಡಿಗರು ಅತಿರೇಕದಿಂದ ವರ್ತಿಸುತ್ತಾರೆ ಎಂಬ ಸುಳ್ಳು ಆರೋಪ ಮಾಡಿದ ಪ್ರಕರಣ ಇದಕ್ಕೊಂದು ನಿದರ್ಶನವಷ್ಟೇ. ಹೀಗೆ ತನ್ನ ತಾಯಿ ನೆಲದಲ್ಲೇ ಕನ್ನಡಿಗರು ಅನಾಥರಾಗುತ್ತಿರುವುದು ಏಕೆ? ಕರುನಾಡಿನಿಂದಲೇ ಎಲ್ಲವನ್ನೂ ಪಡೆದು ಕಡೆಗೆ ಕನ್ನಡಿಗರನ್ನೇ ದೂರುವ ಧೈರ್ಯ ಈ ಹಿಂದಿವಾಲಾಗಳಿಗೆ ಬಂದಿರುವುದಾದರೇ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ.
*ರಕ್ಷಣಾ ವೇದಿಕೆಯಂತಹ ಪ್ರಭಾವಶಾಲಿಯಾಗಿ ಕಾಣುವ ಸಂಘಟನೆಗಳಿದ್ದರೂ ಹಿಂದಿವಾಲಾಗಳ ಅರ್ಭಟ ಹೆಚ್ಚುತ್ತಿದೆಯಲ್ಲ ಏಕೆ?
ನಮ್ಮ ರಾಜಕಾರಣಿಗಳು ಓಟ್ ಬ್ಯಾಂಕಿಗೋಸ್ಕರ ಇಲ್ಲಿಗೆ ಬಂದಂತ ಪರಭಾಷಿಕರನ್ನು ಎಷ್ಟು ಓಲೈಸುತ್ತಾರೆ ಎಂದರೆ ಯಾವ ರಾಜ್ಯದಲ್ಲಿ ಸಿಗಲು ಸಾಧ್ಯವಿಲ್ಲದ ಎಲ್ಲ ಸವಲತ್ತುಗಳನ್ನು ಬೇಗ ಇಲ್ಲಿ ಕೊಡುತ್ತಾರೆ. ರೇಷನ್ ಕಾರ್ಡ್‌ನಿಂದ ಓಟಿನ ಹಕ್ಕಿನವರೆಗೆ ಎಲ್ಲ ಸವಲತ್ತುಗಳನ್ನು ಬೇಗ ಕೊಡುತ್ತಾರೆ. ಕೆಎಐಡಿಬಿಗೆ ಭೂಮಿ ಕೊಡುವವರು ನಮ್ಮ ರೈತರು. ಆದರೆ, ಬಹುತೇಕ ಭೂಮಿಯನ್ನು ತೆಗೆದುಕೊಂಡಿರುವವರು ಉತ್ತರ ಭಾರತೀಯರು ಮತ್ತು ಉದ್ಯಮಕ್ಕೆಂದು ಬಂದಿರುವ ಬೇರೆ ಬೇರೆ ರಾಜ್ಯಗಳ ಜನ. ಉತ್ತರ ಭಾರತೀಯರು ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಹಿಂದಿ ಭಾಷಾ ಒಕ್ಕೂಟ ಎಂದು ಸಭೆ ಮಾಡುತ್ತಾರೆ. ಆ ಸಭೆಯಲ್ಲಿ ಕನ್ನಡಿಗರು ಬೆಂಗಳೂರಿನಲ್ಲಿ ಕೇವಲ ಶೇ.26ರಷ್ಟು ಮಾತ್ರ ಇದ್ದಾರೆ. ಅಧಿಕವಾಗಿ ಇರುವವರು ಹೊರ ರಾಜ್ಯಗಳಿಂದ ಬಂದವರು. ಹಾಗಾಗಿ ಬೆಂಗಳೂರನ್ನು ಕೇಂದ್ರ ಆಡಳಿತ ಪ್ರದೇಶದ ಮಾಡಬೇಕೆಂದು ರಾಷ್ಟ್ರಪತಿಯನ್ನ ಭೇಟಿ ಮಾಡುವ ಸಂಚು ಮಾಡುತ್ತಿದ್ದಾರೆ. ರಾಜಕಾರಣಿಗಳ ಬೆಡ್ ರೂಂಗೆ ಹೋಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಈ ಹಿಂದಿಭಾಷಿಕರು. ನಂತರ ಆಂಧ್ರದ ರೆಡ್ಡಿಗಳು. ಈ ಪರಿಸ್ಥಿತಿಗೆ ತಂದವರು ಕರ್ನಾಟಕ ಎಲ್ಲ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು
*ಇದಕ್ಕೆ ಕೊನೆ ಇಲ್ಲವೇ?
ಸದ್ಯದಲ್ಲೇ ಹಿಂದಿವಾಲಾಗಳ ಮತ್ತು ಕನ್ನಡಿಗರ ನಡುವಿನ ಸಂಘರ್ಷದ ಅಂತ್ಯ ಆಗಲಿದೆ. ಏಕೆಂದರೆ ಯಾವುದೇ ಅತಿರೇಕ ಆದಾಗ, ಅಂತ್ಯ ಬೇಗ ಆಗುತ್ತದೆ ಎಂಬುದು ನಮ್ಮ ಹಿರಿಯರ ಮಾತು. ಹಾಗಾಗಿ ಉತ್ತರ ಭಾರತೀಯರ ಅತಿರೇಕತನ ಅಂತ್ಯಕಾಣುತ್ತದೆ. ನಮ್ಮಲ್ಲಿ ಬದುಕಲು ಬಂದ ಜನ, ನ್ಯಾಯವಾಗಿ ಬದುಕಿದ್ದರೆ ನಮ್ಮ ಅಭ್ಯಂತರ ಇಲ್ಲ. ಇಡೀ ಭಾರತವನ್ನು ಕೇವಲ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಾತ್ರ ನೋಡಬಹುದು. ಅಷ್ಟು ಒಳ್ಳೆಯ ಜನ ಕನ್ನಡಿಗರು. ಇಲ್ಲಿಗೆ ಬಂದ ಉತ್ತರ ಭಾರತೀಯರು ಅದನ್ನು ಅರ್ಥಮಾಡಿಕೊಂಡು ಬದುಕುವ ರೀತಿ ನೀತಿಗಳನ್ನು ಕಲಿಯಬೇಕಿತ್ತು. ಆದರೆ ಅವರ ದುರಹಂಕಾರ ವರ್ತನೆಗಳು ನಮ್ಮ ಭಾಷೆಯನ್ನು ಪ್ರಶ್ನೆ ಮಾಡುವುದು. ಕನ್ನಡಿಗರ ಸ್ವಾಭಿಮಾನ ಕೆರಳಿಸುವಂತದ್ದು. ನಮ್ಮವರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡುವಂತದ್ದು ನೋಡಿದಾಗ ಅಂತ್ಯವಾಗುತ್ತದೆ ಎಂದು ಕೊಂಡಿದ್ದೇವೆ.
*ಈ ನಿಮ್ಮ ಮಾತು ನಂಬಿಕೆ ಮೂಡಿಸುವಂತಿಲ್ಲವಲ್ಲ?
ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ತಮಿಳರು ನಡೆದುಕೊಂಡ ರೀತಿಯನ್ನು ಬಹಳ ಹತ್ತಿರವಾಗಿ ನೋಡಿದ್ದೇನೆ. ಉತ್ತರ ಭಾರತೀಯರಿಗಿಂತ ಅತಿರೇಕವಾಗಿತ್ತು. ಶ್ರೀರಾಮಪುರದಲ್ಲಿ ಕನ್ನಡದಲ್ಲಿ ಮಾತನಾಡಿಕೊಂಡು ಹೋಗುವವರಿಗೆ ಮುಖಕ್ಕೆ ಚಾಕು ಇಲ್ಲವೇ ಬ್ಲೇಡ್‌ನಿಂದ ಕುರುಪ್ ಹಾಕುತ್ತಿದ್ದರು. ಯಾಕೆ ಕುರುಪ್ ಹಾಕ್ತಿರಾ ಎಂದು ಕೇಳಿದರೆ, ನೀವು ಕನ್ನಡ ಮಾತನಾಡುತ್ತಿದ್ದೀರಿ ಅದಕ್ಕೆ ಎಂದು ಹೇಳುತ್ತಿದ್ದರು. ಈಗ ಅದು ಉಲ್ಟಾ ಆಗಿದೆ. ಕನ್ನಡ ಮಾತನಾಡದಿದ್ದರೆ ಕುರುಪ್ ಹಾಕುವಂತ ಕಾಲ ಬಂದಿದೆ. ಈಗ ತಮಿಳರು, ತೆಲುಗರು, ಮಲಯಾಳಿಗಳ ದಬ್ಬಾಳಿಕೆ ಇಲ್ಲ. ಹಿಂದಿ ಭಾಷಿಕರ ದಬ್ಬಾಳಿಕೆ ಹೆಚ್ಚಾದಾಗ ನಾವು ಕೂಡ ಕಡಿವಾಣ ಹಾಕಲು ವ್ಯವಸ್ಥಿತವಾಗಿ ಅಂತ್ಯ ಕಾಣಿಸುತ್ತೇವೆ. ಇದನ್ನು ನಮ್ಮ ಕಾಲಕ್ಕೆ ಅಂತ್ಯಗೊಳಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ಇಲ್ಲಿ ಬದುಕುವುದು ತುಂಬಾ ಕಷ್ಟವಾಗುತ್ತದೆ.
*ಅಯ್ಯೋ...ಕನ್ನಡ ಸಂಘಟನೆಗಳಲ್ಲಿ ಒಗ್ಗಟ್ಟೇ ಇಲ್ಲ. ಹೀಗಿರುವಾಗ ಇಂತಹ ಕನಸು ಹೇಗೆ ಕಾಣುವಿರಿ?
ನೋಡಿ, ನಾನು ನಿಸ್ವಾರ್ಥದಿಂದ ಬದ್ಧತೆಯಿಂದ ಕೆಲಸ ಮಾಡುವಂತ ಸಂಘಟನೆಗಳನ್ನು ಸುಮಾರು ಬಾರಿ ಒಗ್ಗೂಡಿಸಿದ್ದೇನೆ. ಆದರೆ, ಕೆಲವರು ಸ್ವಾರ್ಥದ ಉದ್ದೇಶದಿಂದ ಕನ್ನಡ ಸಂಘಟನೆಗಳನ್ನು ರೂಪಿಸಿಕೊಂಡಿದ್ದಾರೆ. ಹೀಗೆ ಬೇರೆ ಉದ್ದೇಶ ಇಟ್ಟುಕೊಂಡು ಸಂಘಟನೆ ಸೃಷ್ಟಿಸಿಕೊಂಡವರನ್ನು ಹೇಗೆ ಒಗ್ಗೂಡಿಸುವುದು. ಆದರೂ, ನಾನು ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ 1999ರಲ್ಲಿ ಕನ್ನಡ ನಾಡು ಮುನ್ನಡೆ ಪಕ್ಷ ಎಂಬ ಪಕ್ಷ ಕಟ್ಟಿದ್ದೆ. ಆದರೆ, ಅವತ್ತು ಇಂತಹ ಸಂಘಟನೆಗಳ ಕೆಲವರ ವ್ಯಕ್ತಿ ಪ್ರತಿಷ್ಠೆ ಮತ್ತು ನಾಯಕರ ಸ್ವಾರ್ಥದಿಂದ ಆ ಪಕ್ಷ ಬೆಳೆಯಲು ಸಾಧ್ಯವಾಗಲಿಲ್ಲ. ಹಾಗಂತ ನಾನು ಎದೆಗುಂದಿಲ್ಲ. ಈಗ ಮತ್ತೊಮ್ಮೆ ನಾನು ಅಂತಹ ಪ್ರಯತ್ನ ಮಾಡಲು ಸಜ್ಜಾಗುತ್ತಿದ್ದೇನೆ. ಸದ್ಯದಲ್ಲೇ ಕರ್ನಾಟಕದಲ್ಲಿ ಮಹಾಸಂಘರ್ಷ ಯಾತ್ರೆ ಮಾಡಿ ಇಡೀ 31 ಜಿಲ್ಲೆಯಲ್ಲಿ ಕನ್ನಡಿಗರನ್ನು ಒಗ್ಗೂಡಿಸುತ್ತೇನೆ. ಚಿಂತಕರು, ಸ್ವಾಮೀಜಿಗಳು, ರೈತ, ದಲಿತ, ಕನ್ನಡಪರ ಸಂಘಟನೆಗಳನ್ನೂ ಒಗ್ಗೂಡಿಸಿ ಸಭೆಗಳನ್ನು ನಡೆಸುತ್ತೇನೆ. ನಂತರ ಬೆಂಗಳೂರಿನಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದೆ ಹೊಸ ಪ್ರಾದೇಶಿಕ ಪಕ್ಷವೊಂದು ಉದಯವಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಪಕ್ಷ ಸ್ಥಾಪನೆಯಾಗಲಿದೆ.
*ಕನ್ನಡಿಗರನ್ನು ಸಾಮಾಜಿಕ ಜಾಲತಾಣ ಹಾಗೂ ಕೆಲ ರಾಷ್ಟ್ರೀಯ ಮಾಧ್ಯಮಗಳೇ ಹೀಗೆಳೆಯುವ ಪ್ರಯತ್ನ ನಡೆಸುತ್ತಿವೆ. ಈ ಬಗ್ಗೆ ಕನ್ನಡ ಸಂಘಟನೆಗಳ ಮೌನವೇಕೆ?
ರಾಷ್ಟ್ರೀಯ ಮಾಧ್ಯಮಗಳು ಕರ್ನಾಟಕದ ಪಾಲಿಗೆ ಒಂದು ರೀತಿಯ ಕಳಂಕ ತರುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಈ ದೇಶದ ದೊಡ್ಡ ಭಯೋತ್ಪಾದಕರು ಅಂದರೆ ಈ ರಾಷ್ಟ್ರೀಯ ಮಾಧ್ಯಮಗಳೇ. ಬೆಂಗಳೂರಿನ ರಸ್ತೆ ಗಲಾಟೆಯೊಂದನ್ನು ಸತ್ಯಾಸತ್ಯತೆ ಅರಿಯದೆ ವಿಚಿತ್ರವಾಗಿ ಕನ್ನಡಿಗರನ್ನು ಗೂಂಡಾಗಳು, ರೌಡಿಗಳು ಎಂದು ಬಿಂಬಿಸುತ್ತಾ ಹೋದರು. ಸತ್ಯ ಗೊತ್ತಾದ ಮೇಲೆ ತೆಪ್ಪಗಾದವು. ಕರ್ನಾಟಕವನ್ನು ಎಲ್ಲ ಸಂದರ್ಭದಲ್ಲಿ ಟಾರ್ಗೆಟ್ ಮಾಡುವುದು. ಏಕೆಂದರೆ ಉತ್ತರ ಭಾರತದಿಂದ ಬಹುತೇಕರು ಇಲ್ಲಿಗೆ ಬಂದಿದ್ದು, ಅವರು ಏನೇ ಮಾಡಿದರು ಕನ್ನಡಿಗರ ಸಹಿಸಿಕೊಳ್ಳಬೇಕು ಎಂಬ ಮನಸ್ಥಿತಿ ಇದೆ. ಆದರೆ ಅತಿರೇಕವಾದಾಗ ಕರ್ನಾಟಕದಲ್ಲಿರುವ ರಾಷ್ಟ್ರೀಯ ಮಾಧ್ಯಮಗಳನ್ನು ಬೀದಿಯಲ್ಲಿ ವಿಚಾರಿಸಿಕೊಳ್ಳುತ್ತೇವೆ. ಅದಕ್ಕೆ ಕೈ ಹಾಕಬಾರದು ಅಂತ ಇದುವರೆಗೂ ಸುಮ್ಮನಿದ್ದೇವೆ. ಹೀಗೆ ಮುಂದುವರೆದರೆ ಆ ರಾಷ್ಟ್ರೀಯ ಮಾಧ್ಯಮಗಳನ್ನು ಕರ್ನಾಟಕದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ.
*ಆದರೆ, ಇತ್ತೀಚೆಗೆ ಕನ್ನಡ ಸಂಘಟನೆಗಳ ಹೋರಾಟ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತಲೇ ಇಲ್ಲವಲ್ಲ?
ಇತ್ತೀಚಿನ ದಿನಗಳಲ್ಲಿ ಕರವೇ ಹೋರಾಟ ಗಮನಿಸಿದರೆ ಡಿ.27ರಂದು ನಡೆದ ನಾಮಫಲಕದಲ್ಲಿ ಶೇ.60ರಷ್ಟು ಇರಬೇಕೆನ್ನುವ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ನಾಮಫಲಕಗಳ ವಿಚಾರವನ್ನೇ ತೆಗೆದುಕೊಳ್ಳಿ ಕಳೆದ 20-30 ವರ್ಷದಿಂದ ನಡೆಯುತ್ತಿದ್ದ ಈ ಹೋರಾಟಕ್ಕೆ ಒಂದು ಅಂತ್ಯ ಕಾಣಿಸಿದ್ದು ಕರವೇ. ಈ ಬಗ್ಗೆ ಯಾವ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದಿರಲಿಲ್ಲ. ರಕ್ಷಣಾ ವೇದಿಕೆ ಮಾತ್ರ ಬೀದಿಗೆ ಇಳಿದಿದ್ದು. ಇದರಿಂದ ಇಡೀ ಬೆಂಗಳೂರಿನ ನಾಮಫಲಕಗಳು ಪುಡಿಪುಡಿಯಾದವು ಇವತ್ತು ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಮುತ್ತು ಮುತ್ತಿನಂತ ಕನ್ನಡ ಅಕ್ಷರದ ನಾಮಫಲಕಗಳು ಕಾಣುತ್ತಿದ್ದರೆ ಅದು ಕರವೇ ನಡೆಸಿದಂತ ಹೋರಾಟ. ಅದರ ತೀವ್ರತೆ ತಿಳಿದುಕೊಂಡ ರಾಜ್ಯ ಸರ್ಕಾರ ಎರಡು ಸದನಗಳಲ್ಲಿ ಚರ್ಚೆ ಮಾಡಿ ಶೇ.60 ಕಾಯ್ದೆ ತಂದಿತು. ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿ ಬಾಷಿಕರು ಹಲ್ಲೆ ಮಾಡಿ, ಕೇಸು ಹಾಕಿಸಿದ್ದ ಪ್ರಕರಣದಲ್ಲೂ ಕನ್ನಡಿಗರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ.
*ಬೆಂಗಳೂರಿನಲ್ಲಿ ಓಕೆ. ಆದರೆ, ರಾಜ್ಯದ ಉಳಿದೆಡೆ ಕನ್ನಡಪರ ಹೋರಾಟಗಳು ಏಕೆ ವಿಫಲವಾಗುತ್ತಿವೆ?
ಇಡೀ ರಾಜ್ಯದಲ್ಲಿ ಏನೇ ಕನ್ನಡದ ಸಮಸ್ಯೆಗಳು ಎದುರಾದಾಗ ಯಾವ ಸರ್ಕಾರ, ರಾಜಕಾರಣಿಗಳು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ. ಬೆಳಗಾವಿಯಿಂದ ಚಾಮರಾಜನಗರ, ಬೀದರ್‌ನಿಂದ ಚಾಮರಾಜನಗರದವರೆಗೂ, ಮಂಗಳೂರಿನಿಂದ ಮುಳಬಾಗಿಲಿನವರೆಗೆ ಕನ್ನಡ, ಕನ್ನಡಿಗರ ಮೇಲೆ ಸಮಸ್ಯೆಗಳು ಆದಾಗ ಬೀದಿಗೆ ಇಳಿದು ಪ್ರತಿಭಟಿಸುವುದು ಕರವೇ ಇಲ್ಲವೇ ಯಾವುದೋ ಕನ್ನಡಪರ ಸಂಘಟನೆಗಳಾಗಿರುತ್ತವೆ. ಹಾಗಾಗಿ ಅಖಂಡ ಕರ್ನಾಟಕವನ್ನು ಸಮೃದ್ಧವಾಗಿ ಕಟ್ಟಬೇಕು ಎಂದು ಬಹಳ ದೊಡ್ಡ ಕಲ್ಪನೆ ಇಟ್ಟುಕೊಂಡು ಕರವೇ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಚಳವಳಿಗಾರರ ಮೇಲೆ ಹೊರಗಿನಿಂದ ಬಂದಂತ ಅಧಿಕಾರಿಗಳು ಟಾರ್ಗೆಟ್ ಮಾಡುತ್ತಾರೆ. ಹೋರಾಟಗಾರರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದು, ಪ್ರತಿಭಟನೆ ಆಗಿದ್ದೇ ಬೇರೆ ಇದ್ದರೆ, ದಾಖಲು ಮಾಡುವ ಕೇಸುಗಳೇ ಬೇರೆಯಾಗಿರುತ್ತವೆ. ಒಟ್ಟಾರೆ ಕನ್ನಡದ ಚಳವಳಿಗಳನ್ನು ಹತ್ತಿಕ್ಕುವ ಕೃತ್ಯ ಕೆಲವು ಪೊಲೀಸ್ ಹಿರಿಯ ಅಧಿಕಾರಿಗಳಿಂದಲೂ ಆಗುತ್ತೆ. ಸ್ವಾರ್ಥ ರಾಜಕಾರಣಿಗಳಿಂದಲೂ ನಡೆಯುತ್ತಿದೆ.
*ಕನ್ನಡಕ್ಕೆ ರಾಜಕೀಯ ಶಕ್ತಿ ತುಂಬುವಂತಹ ಶಕ್ತಿ ಕನ್ನಡ ಹೋರಾಟದ ನೇತೃತ್ವ ವಹಿಸಿದ ನಾಯಕರಿಗೆ ಇಲ್ಲ ಎಂಬ ಮಾತಿದೆ?
ಹಾಗೇನೂ ಇಲ್ಲ. ನೋಡಿ, ಮಹಾರಾಷ್ಟ್ರದ ಶಿವಸೇನೆಯ ಬಾಳಾಠಾಕ್ರೆ ಹೋರಾಟಕ್ಕೆ ಮಾದರಿ ಯಾವುದೆಂದರೆ ಕನ್ನಡ ಚಳವಳಿ ಹಾಗೂ ತಮಿಳುನಾಡಿನ ಚಳವಳಿ ಮಾದರಿ. ನನ್ನ ಸಂಪರ್ಕದಲ್ಲಿರುವ ರಾಜ್ ಠಾಕ್ರೆ ಅವರು ನಿಮ್ಮ ಹೋರಾಟಗಳಿಂದ ನಾವು ಪ್ರೇರಣೆ ಪಡೆದಿದ್ದೇವೆ ಎಂದು ನನಗೆ ಹೇಳಿದ್ದಾರೆ. ತಮಿಳುನಾಡಿನ ಪೆರಿಯಾರ್ ಚಳವಳಿ, ಕರ್ನಾಟಕದ ಕನ್ನಡ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳು ಒಂದು ಕಾಲಕ್ಕೆ ಮಹಾರಾಷ್ಟ್ರದ ಶಿವಸೇನೆಯಂತವುಗಳಿಗೆ ಮಾದರಿ ಚಳವಳಿಯಾಗಿದ್ದವು. ಈಗ ಸಂಘಟನೆಗಳ ಸಂಖ್ಯೆ ಜಾಸ್ತಿಯಾಗಿವೆ. ಆದರೆ, ಹೋರಾಟಕ್ಕೆ ಬರುವವರ ಕಾಳಜಿ ಪ್ರಾಮಾಣಿಕವಾಗಿ ಇಲ್ಲದ ಕಾರಣ ಆಗಾಗ ಚಳವಳಿಗಳು ಕುಗ್ಗುತ್ತವೆ.
*ಕರವೇ ನಾರಾಯಣಗೌಡರಿಗೆ ಚಿಕ್ಕಪೇಟೆಯ ಮಾರ್ವಾಡಿಗಳ ಬಗ್ಗೆ ಸಾಫ್ಟ್ ಕಾರ್ನರ್ ಇದೆಯಂತೆ ಹೌದ?
ಯಾವ ಮಾರ್ವಾಡಿಯೂ ಅಲ್ಲ, ಯಾವ ಬೇರೆ ಭಾಷಿಕರ ಮೇಲೆ ನಾರಾಯಣಗೌಡ ಸಾಫ್ಟ್ ಕಾರ್ನರ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಇದೇ ಮಾರ್ವಾಡಿ, ಸಿಂಧಿ, ಗುಜರಾತಿಗಳು ಡಿ.27ರಂದು ಜೈಲಿಗೆ ಹೋಗಬೇಕಾದರೆ, ಅವರು ಒಂದಷ್ಟು ಫಂಡ್ ಕಲೆಕ್ಟ್ ಮಾಡಿ ನಾರಾಯಣಗೌಡ ಮೂರು ತಿಂಗಳು ಆಚೆ ಬರದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು ಎನ್ನುವುದು ನನಗೆ ಗೊತ್ತು. ನಾರಾಯಣಗೌಡ ಕನ್ನಡಿಗರನ್ನು ನಂಬಿಕೊಂಡಿದ್ದಾರೆ ಹೊರತು ಯಾವುದೇ ಭಾಷಿಕರನ್ನು ನಂಬಿಕೊಂಡಿಲ್ಲ. ಕನ್ನಡಿಗರ ಧ್ವನಿಯಾಗಿ ಸಾಯುವವರೆಗೂ ಇರುತ್ತೇನೆ ಹೊರತು ಇಲ್ಲಿ ಬಂದಂತ ಯಾವ ಭಾಷಿಕರ ನಡುವೆಯೂ ನಿಲ್ಲುವುದಿಲ್ಲ.