ಸಾರಾಂಶ
ಪೊಲೀಸ್ ಪೇದೆ ಮತ್ತು ಪೊಲೀಸ್ ಉಪ ನಿರೀಕ್ಷಕ ಹುದ್ದೆಗಳ ನೇಮಕಾತಿ ಸಂಬಂಧ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಪೇದೆ ಮತ್ತು ಪೊಲೀಸ್ ಉಪ ನಿರೀಕ್ಷಕ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಸಂಬಂಧ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಪೊಲೀಸ್ ಉದ್ಯೋಗದ ಆಸೆಯಲ್ಲಿರುವ ಯುವಕರಿಗೆ ದಸರಾ ಉಡುಗೊರೆ ನೀಡಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಸ್‌ಐ ಮತ್ತು ಪೇದೆ ಹುದ್ದೆಗಳ ನೇರ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಹಲವು ವರ್ಷಗಳಿಂದ ಆಗ್ರಹಿಸಲಾಗುತ್ತಿತ್ತು. ಅದಕ್ಕೆ ಆ ಬೇಡಿಕೆಗೆ ಇದೀಗ ಅಧಿಕೃತವಾಗಿ ಅನುಮೋದನೆ ನೀಡಲಾಗಿದ್ದು, ವಯೋಮಿತಿ ಸಡಿಲಿಕೆ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಅದರಂತೆ ಪಿಎಸ್‌ಐ ಹುದ್ದೆ ನೇಮಕಾತಿಯ ಗರಿಷ್ಠ ವಯೋಮಿತಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30ರಿಂದ 32 ವರ್ಷಕ್ಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯೋಮಿತಿ 28ರಿಂದ 30 ವರ್ಷಕ್ಕೆ ಹೆಚ್ಚಿಸಲಾಗುತ್ತಿದೆ. ಅದೇ ರೀತಿ ಪೇದೆ ಹುದ್ದೆಗಳ ಗರಿಷ್ಠ ವಯೋಮಿತಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 27ರಿಂದ 30 ವರ್ಷಕ್ಕೆ ಹಾಗೂ ಇತರ ವರ್ಗದವರಿಗೆ 25ರಿಂದ 27 ವರ್ಷಕ್ಕೆ ಪರಿಷ್ಕರಿಸಲಾಗುತ್ತಿದೆ. ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಪರಿಷ್ಕರಣೆ ಮಾಡಿದ ನಂತರ ವಯೋಮಿತಿ ಸಡಿಲಿಕೆ ಆದೇಶ ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲದೆ, ಈ ಆದೇಶ ಕೆಎಸ್‌ಆರ್‌ಪಿ, ನಾಗರಿಕ, ಸಶಸ್ತ್ರ ಮೀಸಲುಪಡೆ ಸೇರಿ ಎಲ್ಲ ವಿಭಾಗಕ್ಕೂ ಅನ್ವಯವಾಗಲಿದೆ.
ಒಂದು ಬಾರಿಗೆ ಅನ್ವಯ:
2019ರಲ್ಲಿ 402 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಕೊನೆಯದಾಗಿ ಅರ್ಜಿ ಆಹ್ವಾನ ಮಾಡಲಾಗಿತ್ತು. ಆನಂತರದಿಂದ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಅಲ್ಲದೆ, ಪೇದೆ ಹುದ್ದೆಗಳಿಗೆ 2022-23ರಲ್ಲಿ ಅಂತಿಮವಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಹೀಗೆ ಎರಡೂ ಹುದ್ದೆಗಳಿಗೆ ಧೀರ್ಘ ಕಾಲದಿಂದ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ.
ಅದರ ನಡುವೆಯೇ ಒಳಮೀಸಲಾತಿ ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿ ಕುರಿತ ಗೊಂದಲಗಳಿಂದಾಗಿ ಹೊಸ ನೇಮಕಾತಿಗಳು ನಡೆದಿರಲಿಲ್ಲ. ಇದು ಪೊಲೀಸ್ ಸೇವೆಗೆ ಸೇರ್ಪಡೆಯಾಗುವ ಆಸೆಯಿಂದಿರುವ ಯುವಕರಿಗೆ ನಿರಾಸೆಯನ್ನುಂಟು ಮಾಡಿತ್ತು. ಈ ಕಾರಣಗಳಿಂದಾಗಿ ಒಂದು ಬಾರಿಗೆ ವಯೋಮಿತಿ ಸಡಿಲಿಕೆ ಮಾಡಲಾಗುತ್ತಿದೆ. ಮುಂದಿನ ನೇಮಕಾತಿ ವೇಳೆ ಈ ವಯೋಮಿತಿ ಸಡಿಲಿಕೆಯನ್ವಯ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ
ಗರಿಷ್ಠ ವಯೋಮಿತಿ ಸಡಿಲಿಕೆಯ ಜತೆಗೆ ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ. ಸದ್ಯ ರಾಜ್ಯದಲ್ಲಿ ಕೆಎಸ್‌ಆರ್‌ಪಿ, ನಾಗರಿಕ, ಸಶಸ್ತ್ರ ಮೀಸಲು ಪಡೆ ಸೇರಿ ಮತ್ತಿತರ ವಿಭಾಗದಲ್ಲಿ 10,000ಕ್ಕೂ ಹೆಚ್ಚಿನ ಪೇದೆ ಹುದ್ದೆ ಖಾಲಿಯಿದೆ. ಅದರಲ್ಲಿ ಆರ್ಥಿಕ ಪರಿಸ್ಥಿತಿ ಸೇರಿ ಇನ್ನಿತರ ಅಂಶಗಳನ್ನು ಗಮನಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅದರ ಜತೆಗೆ ಈಗಾಗಲೇ ನಿರ್ಧರಿಸಿರುವಂತೆ 600 ಪಿಎಸ್‌ಐ ಹುದ್ದೆಗಳನ್ನು ಎರಡು ಭಾಗಗಳಾಗಿ ನೇಮಿಸುವ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡುವಂತೆಯೂ ಗೃಹ ಸಚಿವರು ನಿರ್ದೇಶಿಸಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
26 ಸಾವಿರ ಹುದ್ದೆಗಳು ಖಾಲಿ
ಗೃಹ ಇಲಾಖೆಯಲ್ಲಿ ಎ ದರ್ಜೆಯ 4,090 ಹುದ್ದೆಗಳು, ಬಿ ದರ್ಜೆಯ 128, ಸಿ ದರ್ಜೆಯ 23,076 ಮತ್ತು ಡಿ ದರ್ಜೆಯ 1,896 ಸೇರಿದಂತೆ 26,168 ಹುದ್ದೆಗಳು ಖಾಲಿ ಇವೆ. ವಯೋಮಿತಿ ಸಡಿಲಿಕೆ ಮತ್ತು ಒಳಮೀಸಲಾತಿ ಗೊಂದಲ ಬಗೆಹರಿದಿರುವ ಹಿನ್ನೆಲೆ ನೇಮಕಾತಿ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆಗಳಿವೆ.
ಪೇದೆ ಮತ್ತು ಪಿಎಸ್‌ಐ ಹುದ್ದೆಗಳ ನೇಮಕಾತಿ ಗರಿಷ್ಠ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿ ಈ ಹಿಂದೆ ನೀಡಲಾಗಿದ್ದ ಭರವಸೆ ಈಡೇರಿಸಲಾಗುತ್ತಿದೆ. ವಯೋಮಿತಿ ಸಡಿಲಿಕೆ ಅಧಿಕೃತ ಆದೇಶದಿಂದಾಗಿ ಸಾವಿರಾರು ಯುವಕರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆಯಲಿದೆ. ಅಲ್ಲದೆ, ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನೂ ಆರಂಭಿಸಲಾಗುವುದು.
। ಡಾ. ಜಿ.ಪರಮೇಶ್ವರ , ಗೃಹ ಸಚಿವ
ಸೆ.12ರಂದೇ ವಿಶೇಷ ವರದಿ ಪ್ರಕಟಿಸಿದ್ದ ಕನ್ನಡಪ್ರಭ
ಪೊಲೀಸ್ ಪೇದೆ ಮತ್ತು ಎಸ್‌ಐ ಹುದ್ದೆಗಳ ವಯೋಮಿತಿಯಲ್ಲಿ ಸಡಿಲಿಕೆ ಕುರಿತು ಕನ್ನಡಪ್ರಭದಲ್ಲಿ ಸೆ. 12ರಂದೇ ವಿಶೇಷ ವರದಿ ಪ್ರಕಟಿಸಲಾಗಿತ್ತು.